Salaar: ಪ್ರಭಾಸ್ ಸಲಾರ್ ಚಿತ್ರವು ಕನ್ನಡದ ಉಗ್ರಂ ಸಿನಿಮಾದ ರಿಮೇಕೇ; ಪ್ರಶಾಂತ್ ನೀಲ್ ಸಿನಿಮಾದ ಕುರಿತು ಹೀಗೊಂದು ಡೌಟ್, ಇಲ್ಲಿದೆ ವಿವರ
Prabhas Salaar Movie Update: ಸಲಾರ್ ಚಿತ್ರವು ಶ್ರೀಮುರಳಿ ನಟನೆಯ ಕನ್ನಡದ ಉಗ್ರಂ ಸಿನಿಮಾದ ರಿಮೇಕ್ ಆಗಿರಬಹುದೇ ಎಂಬ ವದಂತಿಗಳು ಕೇಳಿಬರುತ್ತಿವೆ. ರವಿ ಬಸ್ರೂರು ಅವರು ಸಂದರ್ಶನವೊಂದರಲ್ಲಿ ಹೇಳಿರುವ ವಿಡಿಯೋದ ತುಣುಕೊಂದು ಇಂತಹ ಪ್ರಶ್ನೆಗಳಿಗೆ ಕಾರಣವಾಗಿದೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಶಾಂತ್ ನೀಲ್ ನಿರ್ದೇಶನದ ಟಾಲಿವುಡ್‌ನ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಕುರಿತು ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದು, ಇದೇ ಸಮಯದಲ್ಲಿ ಇದು ಕನ್ನಡದ ಉಗ್ರಂ ಸಿನಿಮಾದ ರಿಮೇಕ್ ಆಗಿರಬಹುದೇ ಎಂಬ ಸಂದೇಹ ಮೂಡಿದೆ. ರವಿ ಬಸ್ರೂರು ಅವರು ಸಂದರ್ಶನವೊಂದರಲ್ಲಿ ಹೇಳಿರುವ ವಿಡಿಯೋದ ತುಣುಕೊಂದು ಇಂತಹ ಪ್ರಶ್ನೆಗಳಿಗೆ ಕಾರಣವಾಗಿದೆ. "ನನ್ನ ಎಲ್ಲಾ ಸಿನಿಮಾಗಳಲ್ಲಿ ಉಗ್ರಂ ಶೇಡ್ ಇರಬಹುದು, ಅದು ನನ್ನ ಸ್ಟೈಲ್, ಪ್ರಭಾಸ್ ನಟನೆಯ ಸಲಾರ್ ಹೊಸ ಕಥೆ" ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.
ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಸಲಾರ್ ಚಿತ್ರವು ಡಿಸೆಂಬರ್ 22ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಶಾರೂಖ್ ಖಾನ್ ಡಂಕಿ ಚಿತ್ರದ ಜತೆ ಪೈಪೋಟಿ ನಡೆಸಲಿದೆ. ಸಲಾರ್ ಚಿತ್ರವು ಬಿಡುಗಡೆಗೆ ಹತ್ತಿರದಲ್ಲಿರುವುದರಿಂದ ಆ ಸಿನಿಮಾದ ಕುರಿತು ಹಲವು ವದಂತಿಗಳು ಹರಿದಾಡುತ್ತಿವೆ. ಇದು ಕನ್ನಡದ ಶ್ರೀಮುರಳಿ ನಟನೆಯ ಉಗ್ರಂ ಸಿನಿಮಾದ ರಿಮೇಕ್ ಆಗಿರಬಹುದೇ ಎಂಬ ವದಂತಿ ಹೆಚ್ಚಾಗಿದೆ. ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾವನ್ನು 2014ರಲ್ಲಿ ನಿರ್ದೇಶಿಸಿದ್ದರು. ಇದನ್ನು ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಪಡೆದಿತ್ತು. ಒಡಿಯಾ ಮತ್ತು ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಮರುನಿರ್ಮಿಸಲಾಗಿತ್ತು.
ಸಲಾರ್ ಚಿತ್ರವು ಉಗ್ರಂ ರಿಮೇಕ್ ಆಗಿರಬಹುದೇ?
ಸಲಾರ್ ಚಿತ್ರವನ್ನು ಈ ಹಿಂದೆ ಸೆಪ್ಟೆಂಬರ್ 28ರಂದು ಬಿಡುಗಡೆ ಮಾಡಲು ನಿರ್ದೇಶಿಸಲಾಗಿತ್ತು. ಇದನ್ನು ಬಳಿಕ ಮುಂದೂಡಲಾಗಿತ್ತು. ಸಿನಿಮಾದ ಗುಣಮಟ್ಟವನ್ನು ಇನ್ನಷ್ಟು ಉತ್ತಮಪಡಿಸುವ ಸಲುವಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಲಾಗಿತ್ತು. ಇತ್ತೀಚೆಗೆ ಉಗ್ರಂ ಸಿನಿಮಾವು ಸಲಾರ್ ಚಿತ್ರದ ರಿಮೇಕ್ ಹೌದೋ, ಅಲ್ವೋ ಎಂಬ ರೂಮರ್ ಹೆಚ್ಚಾಗಿದೆ. ಶ್ರೀಮುರಳಿ, ಹರಿಪ್ರಿಯಾ, ತಿಲಕ್ ಶೇಖರ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಥ್ರಿಲ್ಲರ್, ಆಕ್ಷನ್ ಚಿತ್ರವು ಸಖತ್ ಹಿಟ್ ಆಗಿತ್ತು.
ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಅವರು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಇಂತಹ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ "ಸಲಾರ್ ಚಿತ್ರವು ಉಗ್ರಂ ಸಿನಿಮಾದ ರಿಮೇಕಾ" ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದರು. "ಇದು ಎಲ್ಲರಿಗೂ ಗೊತ್ತಿರುವಂತದ್ದು, ರಿಮೇಕ್ ಆಗಿದ್ದರೂ ಇವರು ಅದನ್ನು ಹೇಗೆ ಮಾಡುತ್ತಾರೆ ಎಂದೂ ನಿಮಗೆ ಗೊತ್ತಿದೆ" ಎಂದು ಅವರು ಉತ್ತರಿಸಿದ್ದರು.
ಪ್ರಶಾಂತ್ ನೀಲ್ ಪ್ರತಿಕ್ರಿಯೆ
ಕಳೆದ ಹಲವು ತಿಂಗಳಿನಿಂದ ಸಲಾರ್ ಕುರಿತು ಹರಿದಾಡುತ್ತಿರುವ ವದಂತಿಗಳ ಕುರಿತು ಪ್ರಶಾಂತ್ ನೀಲ್ ಸದ್ಯ ಏನೂ ಹೇಳಿಲ್ಲ. ಆದರೆ, ಈ ಹಿಂದೆಯೇ ಈ ಕುರಿತು ಅವರನ್ನು ಪ್ರಶ್ನಿಸಲಾಗಿತ್ತು. ಅದಕ್ಕೆ ಕೆಜಿಎಫ್ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಉತ್ತರಿಸಿದ್ದರು. ನಾನು ತಯಾರಿಸಿದ ಎಲ್ಲಾ ಸಿನಿಮಾಗಳಲ್ಲಿ ಉಗ್ರಂ ಛಾಯೆ ಇದೆ. ಅದು ನನ್ನ ಸ್ಟೈಲ್. ಆದರೆ, ಸಲಾರ್‌ನಲ್ಲಿ ಹೊಸ ಕಥೆಯಿದೆ. ಇದು ಉಗ್ರಂನ ರಿಮೇಕ್ ಅಲ್ಲ ಎಂದು ಅವರು ಉತ್ತರಿಸಿದ್ದರು.
ಯೂಟ್ಯೂಬ್‌ನಲ್ಲಿ ಉಗ್ರಂ ಸಿನಿಮಾ
ಯೂಟ್ಯೂಬ್ ಚಾನೆಲ್‌ನಿಂದ ಉಗ್ರಂ ಸಿನಿಮಾಗಳನ್ನು ತೆಗೆಯಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ನಾವು ಹುಡುಕಿ ನೋಡಿದಾಗ ಉಗ್ರಮ ಈಗಲೂ ಯೂಟ್ಯೂಬ್‌ನಲ್ಲಿದೆ. ಝೀ5 ಒಟಿಟಿಯಲ್ಲೂ ಉಗ್ರಂ ಸ್ಟ್ರೀಮ್ ಆಗುತ್ತಿದೆ. ಸಲಾರ್ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾದ ಸಂದರ್ಭದಲ್ಲಿ ಉಗ್ರಂ, ಕೆಜಿಎಫ್ ಸಿನಿಮಾಗಳ ಛಾಯೆ ಸಲಾರ್‌ನಲ್ಲಿ ಕಾಣಿಸಿತ್ತು.