Kannappa Teaser: ವಿಷ್ಣು ಮಂಚು ನಾಯಕನಾಗಿ ನಟಿಸಿರುವ ಪ್ಯಾನ್ ಇಂಡಿಯಾ ಕಣ್ಣಪ್ಪ ಚಿತ್ರದ ಟೀಸರ್ ಬಿಡುಗಡೆ; ಶಿವನಾದ ಅಕ್ಷಯ್ ಕುಮಾರ್
ವಿಷ್ಣು ಮಂಚು ನಾಯಕನಾಗಿ ನಟಿಸಿರುವ ಕಣ್ಣಪ್ಪ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸ್ಟಾರ್ ನಟರ ದಂಡೇ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕ ವಲಯದಲ್ಲೂ ಕುತೂಹಲ ಮೂಡಿಸಿದೆ.
Kannappa Teaser: ವಿಷ್ಣು ಮಂಚು ಅವರ ಕನಸಿನ ಯೋಜನೆಯಾದ 'ಕಣ್ಣಪ್ಪ' ಎವಿಎ ಎಂಟರ್‌ಟೈನ್‌ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಳ್ಳುತ್ತಿದೆ. ಈ ಚಿತ್ರವನ್ನು ಡಾ.ಮೋಹನ್ ಬಾಬು ನಿರ್ಮಿಸಿದ್ದಾರೆ ಮತ್ತು ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ. ಶುಕ್ರವಾರ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಲಾಂಚ್ ಕಾರ್ಯಕ್ರಮವನ್ನು ಅಷ್ಟೇ ಅದ್ಧೂರಿಯಾಗಿ ಚಿತ್ರತಂಡ ಆಯೋಜಿಸಲಾಗಿತ್ತು.
ಟೀಸರ್ ಲಾಂಚ್ ವೇಳೆ ಮಾತನಾಡಿದ ಮೋಹನ್ ಬಾಬು, ಪರಮೇಶ್ವರನ ಒಪ್ಪಿಗೆಯ ಮೇರೆಗೆ ನಾವು ಈ ಕಣ್ಣಪ್ಪ ಸಿನಿಮಾ ಮಾಡಿದ್ದೇವೆ. ಅಚ್ಚು ಕಟ್ಟಾಗಿ ಸಿನಿಮಾ ಮೂಡಿ ಬಂದಿದೆ. ಬಹುಭಾಷೆಯ ತಾರೆಯರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ. ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದರು.
ವಿಷ್ಣು ಮಂಚು ಹೇಳಿದ್ದೇನು?
"ಮೊದಲ ದಿನದಿಂದ ಇಲ್ಲಿಯವರೆಗೆ 'ಕಣ್ಣಪ್ಪ' ಚಿತ್ರವನ್ನು ಪ್ರತಿಯೊಬ್ಬ ಪ್ರೇಕ್ಷಕ ಕುತೂಹಲದಿಂದಲೇ ನೋಡುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಕ್ಕೆ ಸಿಗುತ್ತಿರುವ ಬೆಂಬಲ ನೋಡಿದ್ದೇನೆ. ಇದೀಗ ಆ ಕನಸು ನಿಮ್ಮೆಲ್ಲರ ಮುಂದೆ ತೆರೆದಿಡುವ ಹಂತಕ್ಕೆ ಬಂದಿದೆ. ಕಣ್ಣಪ್ಪ ಸಿನಿಮಾ ಪಯಣ 2014 -15ರಲ್ಲಿ ಶುರುವಾಗಿತ್ತು. ತಂದೆ ಮೋಹನ್ ಬಾಬು, ವಿನ್ನಿ ಮತ್ತು ಸಹೋದರ ವಿನಯ್ ಅವರ ಪ್ರೋತ್ಸಾಹದಿಂದಾಗಿ ಇದೀಗ ಅದು ಸಿದ್ಧವಾಗುತ್ತಿದೆ"
"ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14 ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್‌ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಿದ್ದೇವೆ. ಅಷ್ಟೇ ಎಚ್ಚರಿಕೆಯಿಂದ ಈ ಸಿನಿಮಾ ಮಾಡಿದ್ದೇವೆ" ಎಂದರು ವಿಷ್ಣು ಮಂಚು.
ಚಿತ್ರದ ಬಗ್ಗೆ ನಿರ್ದೇಶಕರ ಮಾತೇನು?
ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಮಾತನಾಡಿ, ಕಣ್ಣಪ್ಪ ಚಿತ್ರದ ನನ್ನ ಶಕ್ತಿಯೇ ನನ್ನ ಕಲಾವಿದರು. ವಿಷ್ಣು ಅವರ ನಟನೆ ಮತ್ತು ಅವರು ಎದುರಿಸಿದ ಕಷ್ಟಗಳ ಬಗ್ಗೆ ನಾನು ಹೇಳಲಾರೆ. ಕೊರೆಯುವ ಚಳಿಯಲ್ಲೂ ಇಡೀ ತಂಡ ಶ್ರಮಿಸಿದೆ. ವಿಷ್ಣು, ಶರತ್ ಕುಮಾರ್, ಮೋಹನ್ ಬಾಬು ನನ್ನ ನಿರೀಕ್ಷೆಗೂ ಮೀರಿದ ಬೆಂಬಲ ನೀಡಿದ್ದಾರೆ ಎಂದರು.
ಶರತ್ ಕುಮಾರ್, ಕಣ್ಣಪ್ಪ ಕೇವಲ ಸಿನಿಮಾ ಅಲ್ಲ; ಇದು ನಮ್ಮ ಇತಿಹಾಸ. ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ಈಗಲೂ ನಾವು ಆ ಪಾತ್ರಗಳಲ್ಲಿ ಉಳಿದಿದ್ದೇವೆ. ಅಷ್ಟೊಂದು ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಎಲ್ಲರೂ ಇತಿಹಾಸವನ್ನು ಮರೆಯುತ್ತಿದ್ದಾರೆ. ನಾವು ನಮ್ಮ ಇತಿಹಾಸವನ್ನು ಹೇಳಬೇಕು. ಎಲ್ಲರೂ ಕಣ್ಣಪ್ಪನನ್ನು ನೋಡಬೇಕು" ಎಂದು ಹೇಳಿದರು.
ದೊಡ್ಡ ಯಜ್ಞದಲ್ಲಿ ಭಾಗಿಯಾದ ಅನುಭವ
ಮಧುಬಾಲಾ ಮಾತನಾಡಿ, "ಕಣ್ಣಪ್ಪನಂಥ ಪ್ರಾಜೆಕ್ಟ್‌ನಲ್ಲಿ ನಟಿಸಲು ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ನನಗೆ ಇಂತಹ ಒಳ್ಳೆಯ ಅವಕಾಶ ನೀಡಿದ ಮೋಹನ್ ಬಾಬು ಮತ್ತು ವಿಷ್ಣು ಅವರಿಗೆ ಧನ್ಯವಾದಗಳು. ವಿಷ್ಣು ಮಂಚು ಅವರಿಗೆ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಜ್ಞಾನವಿದೆ. ವಿಷ್ಣು ಅವರಂತಹವರು ಈ ಸಿನಿಮಾ ಮೂಲಕ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. ಒಂದು ದೊಡ್ಡ ಯಜ್ಞದಲ್ಲಿ ಪಾಲ್ಗೊಂಡಂತೆ ಭಾಸವಾಯಿತು" ಎಂದಿದ್ದಾರೆ.
ಕಣ್ಣಪ್ಪ ಚಿತ್ರದಲ್ಲಿ ಅವಕಾಶ ನೀಡಿದ ಮೋಹನ್ ಬಾಬು, ವಿಷ್ಣು, ಮತ್ತು ಮುಖೇಶ್ ಸಿಂಗ್ ಅವರಿಗೆ ಧನ್ಯವಾದ. ಎಲ್ಲರೂ ಈ ಚಿತ್ರಕ್ಕೆ ತಮ್ಮ ಕೈಲಾದಷ್ಟು ಕೊಟ್ಟಿದ್ದಾರೆ. ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ ಎಂದರು ಪ್ರೀತಿ ಮುಖುಂದನ್.