ಪುಷ್ಪ 2 ಸಿನಿಮಾ ಟಿಕೆಟ್ ದರ 200ರೂ ಮೀರುವಂತಿಲ್ಲ; ಹೆಚ್ಚಾದ್ರೆ ಕರ್ನಾಟಕದಲ್ಲಿ ಬಿಡುಗಡೆಗೆ ತಡೆಯೊಡ್ಡುವ ಎಚ್ಚರಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಪುಷ್ಪ 2 ಸಿನಿಮಾ ಟಿಕೆಟ್ ದರ 200ರೂ ಮೀರುವಂತಿಲ್ಲ; ಹೆಚ್ಚಾದ್ರೆ ಕರ್ನಾಟಕದಲ್ಲಿ ಬಿಡುಗಡೆಗೆ ತಡೆಯೊಡ್ಡುವ ಎಚ್ಚರಿಕೆ

ಪುಷ್ಪ 2 ಸಿನಿಮಾ ಟಿಕೆಟ್ ದರ 200ರೂ ಮೀರುವಂತಿಲ್ಲ; ಹೆಚ್ಚಾದ್ರೆ ಕರ್ನಾಟಕದಲ್ಲಿ ಬಿಡುಗಡೆಗೆ ತಡೆಯೊಡ್ಡುವ ಎಚ್ಚರಿಕೆ

ಕನ್ನಡದ ಸಿನಿಮಾಗಳಿಗಿಂತ ಪರಭಾಷೆಯ ಸಿನಿಮಾಗಳೇ ಕರ್ನಾಟಕದ ಥಿಯೇಟರ್‌ಗಳ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿದ ಸಾಕಷ್ಟು ಉದಾಹರಣೆ ಇದೆ. ಆದರೆ ಈಗ ಪುಷ್ಪ 2 ಸಿನಿಮಾ ಟಿಕೆಟ್ ದರ 200 ಮೀರುವಂತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಪುಷ್ಪ 2 ಸಿನಿಮಾ ಟಿಕೆಟ್ ದರ 200 ಮೀರುವಂತಿಲ್ಲ
ಪುಷ್ಪ 2 ಸಿನಿಮಾ ಟಿಕೆಟ್ ದರ 200 ಮೀರುವಂತಿಲ್ಲ

‘ಪುಷ್ಪ 2’ ಸಿನಿಮಾ ರಿಲೀಸ್‌ಗೆ ಇನ್ನು ಕೆಲವೇ ವಾರವಷ್ಟೇ ಬಾಕಿ ಇದೆ. ಪುಷ್ಪ 2 ಸಿನಿಮಾ ಕನ್ನಡದ ಹಲವು ಸಿನಿಮಾಗಳ ಬಿಡುಗಡೆಯ ಮೇಲೆ ಪ್ರಬಾವ ಬೀರುವ ಸಾಧ್ಯತೆಯೂ ಆರಂಭವಾಗಿದೆ. ಕನ್ನಡದ ಸಿನಿಮಾಗಳಿಗಿಂತ ಪರಭಾಷೆಯ ಸಿನಿಮಾಗಳೇ ಕರ್ನಾಟಕದ ಥಿಯೇಟರ್‌ಗಳ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿದ ಸಾಕಷ್ಟು ಉದಾಹರಣೆಗಳು ನಮ್ಮ ಎದುರಿಗಿವೆ. ಕೇವಲ ವ್ಯವಹಾರಕ್ಕೆ ಮಾತ್ರ ಕನ್ನಡ, ಕರ್ನಾಟಕವಷ್ಟೇ ಹೊರತು, ಕನ್ನಡಿಗರ ಬಗ್ಗೆ ಲವಲೇಷ ಮಾತ್ರವೂ ಪ್ರೇಮ ಹೊಂದಿರದ ಪರಭಾಷಾ ಸಿನಿಮಾಗಳ ಬಗ್ಗೆ ಆಕ್ರೋಶ ಭುಗಿಲೇಳುತ್ತಲೇ ಇರುತ್ತದೆ.

ಜೊತೆಗೆ ಈ ಹಿಂದೆ ಪರಭಾಷೆಗಳ ಸಿನಿಮಾಗಳು ಕರ್ನಾಟಕದಲ್ಲಿ ಗಳಿಸಿದ ಹಣವೆಷ್ಟು ಎಂಬುದರ ಕುರಿತು ಹೊಸ ಪರಭಾಷಾ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವ ಸಂದರ್ಭಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಸದ್ಯ ಪುಷ್ಪ 2 ಸಿನಿಮಾ ಬಿಡುಗಡೆಯ ಹೊತ್ತಲ್ಲೇ ಈ ಚರ್ಚೆಗಳು ಮತ್ತೆ ಬಿಸಿ ಪಡೆಯಲಾರಂಭಿಸಿವೆ. ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಈ ಕುರಿತು ಮಾತನಾಡಿ, ಈ ಬಾರಿ ಪರಭಾಷಾ ಸಿನಿಮಾಗಳಿಗೆ ಟಿಕೆಟ್ ದರಕ್ಕೆ ಮೂಗುದಾರ ಹಾಕಬೇಕು. ಟಿಕೆಟ್ ದರವನ್ನು ಬೇಕಾಬಿಟ್ಟಿ ಏರಿಸುವುದನ್ನು ಮಟ್ಟಹಾಕಲು ಕಡ್ಡಾಯವಾಗಿ ಟಿಕೆಟ್ ದರ ನಿಗದಿ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ‘ಪುಷ್ಪ 2’ ಸಿನಿಮಾ ಈವೆಂಟ್ ಒಂದರಲ್ಲಿ ಸಿನಿಮಾದ ಕರ್ನಾಟಕ ಹಂಚಿಕೆದಾರ ಲಕ್ಷ್ಮೀಕಾಂತ್ ರೆಡ್ಡಿ ಅವರು ಪುಷ್ಪ 2 ಸಿನಿಮಾ ಕರ್ನಾಟಕ ಮಾರುಕಟ್ಟೆಯಲ್ಲೂ ಭಾರಿ ಹಣ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆ ಹೇಳಿಕೆ ಸಾಕಷ್ಟು ವೈರಲ್ ಕೂಡ ಆಗಿತ್ತು. ಪುಷ್ಪ 2 ಸಿನಿಮಾ ಡಿಸೆಂಬರ್ 5ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದ್ದು, ಪುಷ್ಕಳ ಮನರಂಜನೆಯ ಜೊತೆಗೆ ಭರ್ಜರಿ ಬ್ಯುಸಿನೆಸ್ ನಡೆಸುವ ಸೂಚನೆಯನ್ನು ಸಹ ನೀಡುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಪುಷ್ಪ 2 ಸಿನಿಮಾ ವ್ಯವಹಾರ ಕಳೆಗುಂದುವ ಸೂಚನೆ ದೊರೆಯುತ್ತಿದೆ.

‘ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿವೆ ಸ್ಕ್ರೀನ್ ಸಿಗುತ್ತಿಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲಿ ರಜಿನಿಕಾಂತ್ ಅವರ ಸಿನಿಮಾಗಳಿಗೆ 6 ಸ್ಕ್ರೀನ್ ಕೊಟ್ಟರೆ ಕನ್ನಡ ಸಿನಿಮಾಗಳಿಗೆ 2 ಸ್ಕ್ರೀನ್ ಕೊಡಲಾಗಿತ್ತು. ಟಿಕೆಟ್ ಬೆಲೆ 1500 ರೂಪಾಯಿ ನಿಗದಿ ಮಾಡಲಾಗಿತ್ತು. ಇದರಿಂದ ನಮ್ಮ ಬೇರೆ ಭಾಷೆ ಅವರು ಇಲ್ಲಿಂದ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. 2017ರಲ್ಲಿ ಅಂದಿನ ಸಿಎಂ ಬಳಿ ಮಾತನಾಡಿದಾಗ ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಆದರೆ ದುರದೃಷ್ಟವಷಾತ್ ಮಲ್ಟಿಪ್ಲೆಕ್ಸ್ ಕಡೆಯಿಂದ ಈ ಆದೇಶಕ್ಕೆ ತಡೆ ತರಲಾಗಿತ್ತು ಎಂದು ಅವರು ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇರೆ ಭಾಷೆ ಸಿನಿಮಾಗೆ ಹೆಚ್ಚು ದುಡ್ಡು ಕೊಟ್ಟು ತರಬೇಡಿ ಎಂದು ನಾನು ಸಿನಿಮಾ ವಿತರಣೆ ಮಾಡುವವರಲ್ಲಿ ಮನವಿ ಮಾಡುತ್ತೇನೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಆಯಾ ಭಾಷೆಯ ಸಿನಿಮಾ ಟಿಕೆಟ್ ದರ 180 ರೂ. ಅಥವಾ 150 ರೂ. ಇದ್ದರೆ ನಮ್ಮಲ್ಲಿ 1200 ರೂ. ಇರುತ್ತದೆ. ವಾಣಿಜ್ಯ ಮಂಡಳಿ ತುಂಬಾ ಗಂಭೀರವಾಗಿ ಇದನ್ನು ಪರಿಗಣಿಸಿದೆ. ಟಿಕೆಟ್‌ ಹಣ ನಿಗದಿ ಮಾಡಲು ಕರ್ನಾಟಕದಲ್ಲಿ ಯಾವುದೇ ಮಿತಿ ಇರುವುದಿಲ್ಲ. ಆದರೆ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು. ಮುಂಬರುವ ಪುಷ್ಪ 2 ಸಿನಿಮಾ ಟಿಕೆಟ್ ದರ ಕರ್ನಾಟಕದಲ್ಲಿ 200 ರೂ.ಗಿಂತ ಹೆಚ್ಚಿದ್ದರೆ ಸಿನಿಮಾ ಬಿಡುಗಡೆ ಮಾಡಲು ನಾವು ನೀಡುವುದಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟಿವಿ9 ಡಿಜಿಟಲ್ ವರದಿ ಮಾಡಿದೆ.

 

 

Whats_app_banner