ತಂಗಲಾನ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗದಿರಲು ಪಿಐಎಲ್ ಕಾರಣ; ವೈಷ್ಣವ ಧರ್ಮದ ಹಾಸ್ಯಮಯ ಚಿತ್ರಣದ ಕುರಿತು ಕಳವಳ
Why 'Thangalaan OTT delayed?: ಮದ್ರಾಸ್ ಹೈಕೋರ್ಟ್‌ಗೆ ತಂಗಲಾನ್ ಸಿನಿಮಾದ ವಿರುದ್ಧ ಪಿಐಎಲ್ ಸಲ್ಲಿಕೆ ಮಾಡಲಾಗಿದ್ದು, ಇದರ ತೀರ್ಪು ಹೊರಬೀಳುವವರೆಗೆ ಚಿಯಾನ್ ವಿಕ್ರಮ್ ನಟನೆಯ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗುವ ಸೂಚನೆಯಿಲ್ಲ. ವೈಷ್ಣವ ಧರ್ಮವನ್ನು ಹಾಸ್ಯಮಯವಾಗಿ ತೋರಿಸಿರುವ ದೃಶ್ಯಗಳ ಕುರಿತು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿಯಾನ್ ವಿಕ್ರಮ್ ನಿರ್ದೇಶನದ ತಂಗಲಾನ್ ಸಿನಿಮಾವನ್ನು ಓಟಿಟಿಯಲ್ಲಿ ನೋಡಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಸಮಯವಾಗಿದ್ದರೂ ಆನ್‌ಲೈನ್‌ಗೆ ಇನ್ನೂ ಯಾಕೆ ಬಂದಿಲ್ಲ ಎಂದು ಯೋಚಿಸುತ್ತಿದ್ದಾರೆ. ಕೆಲವು ವಾರಗಳ ಹಿಂದೆ ಒಟಿಟಿಯಲ್ಲಿ ತಂಗಲಾನ್ ಬಿಡುಗಡೆ ಸುದ್ದಿ ದೊಡ್ಡಮಟ್ಟಿನಲ್ಲಿ ಸದ್ದು ಮಾಡಿದ್ದರೂ ರಿಲೀಸ ಆಗಿರಲಿಲ್ಲ. ಇಂಡಿಯಲಿಟ್ಸ್ ತಮಿಳು ಪ್ರಕಾರ ತಂಗಲಾನ್ ಒಟಿಟಿ ಬಿಡುಗಡೆ ತಡವಾಗಲು ಬೇರೆಯದ್ದೇ ಕಾರಣಗಳು ಇವೆ.
ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
ತಂಗಲಾನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ತಿರುವಲ್ಲೂರ್‌ನ ಪೊರ್ಕೊಡಿ ಎಂಬವರು ಪಿಐಎಲ್ ದಾವೆ ಹೂಡಿದ್ದಾರೆ. ಅವರ ಪ್ರಕಾರ ತಂಗಲಾನ್ ಸಿನಿಮಾವು ಬೌದ್ಧ ಧರ್ಮವನ್ನು ಪವಿತ್ರವೆಂಬಂತೆ ಚಿತ್ರಿಸುವ ಸಮಯದಲ್ಲಿ ವೈಷ್ಣವ ಧರ್ಮವನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ. ಇಂತಹ ದೃಶ್ಯಗಳು ಇರುವ ತಂಗಲಾನ್ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದರಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಬಹುದು ಎಂದು ಪಿಐಎಲ್ ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪಿಐಎಲ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶೀಘ್ರದಲ್ಲಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಓಟಿಟಿಯಲ್ಲಿ ಬಿಡುಗಡೆಯಾಗುವ ಸೂಚನೆಯಿದೆ.
ತಂಗಲಾನ್ ಸಿನಿಮಾವನ್ನು ಸೆಪ್ಟೆಂಬರ್ 20ರಂದು ಬಿಡುಗಡೆ ಮಾಡಲು ಆರಂಭದಲ್ಲಿ ಯೋಜಿಸಲಾಗಿತ್ತು. ಪಾ ರಂಜಿತ್ ನಿರ್ದೇಶನದ, ಚಿಯಾನ್ ವಿಕ್ರಮ್ ನಟನೆಯ ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಅಭಿನಯಕ್ಕೆ ಅಭಿಮಾನಿಗಳು ಮಾರು ಹೋಗಿದ್ದರು. ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ, ಹರಿ ಕೃಷ್ಣನ್ ಮತ್ತು ಡೇನಿಯಲ್ ಕ್ಯಾಲ್ಟಗಿರೋನ್ ನಟನೆಯೂ ಎಲ್ಲರ ಗಮನ ಸೆಳೆದಿದೆ.
ಈ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದರೆ. ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಆಪ್ತವಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಮಿಳು, ತೆಲುಗಿನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ಬಳಿಕ ತಂಗಲಾನ್ ಚಿತ್ರವು ಹಿಂದಿಯಲ್ಲೂ ಬಿಡುಗಡೆಯಾಗಿ ಹಿಟ್ ಆಗಿತ್ತು.
ತಂಗಲಾನ್ ಸಿನಿಮಾವು ಕನ್ನಡಿಗರಿಗೂ ಪ್ರಮುಖವಾಗಿದೆ. ಏಕೆಂದರೆ, ಕರ್ನಾಟಕದ ಕೆಜಿಎಫ್‌ನ ಪೂರ್ವಿಕರ ಕಥೆಯನ್ನು ಇದು ಹೊಂದಿದೆ. ಕೆಜಿಎಫ್‌ನಲ್ಲಿ ಚಿನ್ನದ ಹುಡುಕಾಟದ ಆರಂಭದ ಕಾಲದ ಕಥೆ ಇದಾಗಿದೆ. ಟಿಷ್ ಆಳ್ವಿಕೆಯ ಕಾಲದಲ್ಲಿ ಕೆಜಿಎಫ್‌ನ ಹಳ್ಳಿಯಲ್ಲಿ ಚಿನ್ನವನ್ನು ಪತ್ತೆಹಚ್ಚಲು ಬ್ರಿಟಿಷ್ ಜನರಲ್‌ಗೆ ಸಹಾಯ ಮಾಡುವ ಬುಡಕಟ್ಟು ನಾಯಕ, ಇದಕ್ಕೆ ಅಡ್ಡಿಯಾಗುವ ಮಾಯಾ ಹೆಣ್ಣು... ಹೀಗೆ ವಿಭಿನ್ನ ಕಥೆಯನ್ನು ಹೊಂದಿರುವ ತಂಗಲಾನ್ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿತ್ತು. ಆದರೆ, ಸಾಕಷ್ಟು ಜನರು ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದು, ಒಟಿಟಿಯಲ್ಲಿ ನೋಡೋಣ ಎಂದು ಕಾದುಕುಳಿತಿದ್ದಾರೆ.