Bangalore Blast: ರಾಮೇಶ್ವರಂ ಕೆಫೆ ಸ್ಫೋಟ, ದೃಷ್ಠಿ ಹೀನರಾದ ಮಹಿಳೆ, ಮೂವರು ಗಾಯಾಳುಗಳು ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರಿನಲ್ಲಿ ನಡೆದ ಸ್ಪೋಟ ಪ್ರಕರಣದಲ್ಲಿ ಒಬ್ಬರ ಕಣ್ಣಿಗೆ ಬಲವಾದ ಏಟು ಬಿದ್ದು ದೃಷ್ಟಿಯೇ ಹೋಗಿದೆ. ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ನಡೆದಿದ್ದ ಸ್ಫೋಟದಲ್ಲಿ ಗಾಯಗೊಂಡ 9 ಮಂದಿಯಲ್ಲಿ ಒಬ್ಬರಿಗೆ ದೃಷ್ಠಿ ಮರಳುವ ಸಾಧ್ಯತೆಗಳು ಕಡಿಮೆ ಎಂದು ಹೇಳಿರುವ ವೈದ್ಯರು ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇವರು ವೈದೇಹಿ ಆಸ್ಪತ್ರೆ ಹಾಗೂ ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ದುರಂತದಲ್ಲಿ ಗಾಯಗೊಂಡ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣದ ಕುರಿತು ತನಿಖೆ ಚುರುಕುಗೊಂಡಿದೆ.
ನಾಗಶ್ರೀ ಎಂಬುವರ ಅಕ್ಷಿಪಟಕ್ಕೆ ಗಾಯಗಳಾಗಿದ್ದು, ಇವರಿಗೆ ದೃಷ್ಟಿ ಮರಳುವ ಸಾಧ್ಯತೆಗಳು ಕಡಿಮೆ ಎಂದು ವೈದೇಹಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಕಲ್ಪನಾ ತಿಳಿಸಿದ್ದಾರೆ. ಇವರ ಆಕ್ಷಿಪಟಕ್ಕೆ ಭಾರಿ ಪ್ರಮಾಣದ ಹಾನಿಯಾಗಿದ್ದು, ಕಣ್ಣನ್ನು ಸರಿಪಡಿಸಲು ವೈದ್ಯರು ಶ್ರಮಪಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸುಟ್ಟ ಗಾಯಗಳಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀನಿವಾಸ್ ಮತ್ತು ಮೋಹನ್ ಮನೆಗೆ ಮರಳಿದ್ದಾರೆ. ಇನ್ನೂ ಇಬ್ಬರನ್ನು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.
ಗಾಯಗೊಂಡವರು ಹೇಳಿದ್ದೇನು?
ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ದೀಪಾಂಶು ಅವರು ಶನಿವಾರ ಚೇತರಿಸಿಗೊಂಡು, ಮನೆಗೆ ತೆರಳಿದ್ದಾರೆ. ಅವರ ಕಿವಿಗೆ ಹಾನಿಯಾಗಿತ್ತು. ನಂತರ ಅವರು ಮಾತನಾಡಿ ಸ್ಫೋಟಗೊಂಡ ಸ್ಥ್ಲದ ಸಮೀಪ ನನ್ನ ಲ್ಯಾಪ್ ಟಾಪ್ ಇಟ್ಟು ಊಟ ಮಾಡಿದೆ. ನಂತರ ಬ್ಯಾಗ್ ತೆಗೆದುಕೊಳ್ಳಲು ಹೋದಾಗ ಭಾರಿ ಸ್ಫೋಟ ಕೇಳಿ ಬಂತು. ಆಗ ನನಗೆ ಪ್ರಜ್ಞೆ ತಪ್ಪಿತ್ತು. ಎಚ್ಚರಗೊಂಡಾಗ ನಾನು ಆಸ್ಪತ್ರೆಯಲ್ಲಿದ್ದೆ ಎಂದು ತಿಳಿಸಿದರು.
ಬ್ರೂಕ್ ಫೀಲ್ಡ್ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ ದೀಪಾಂಶು ಅವರ ಕಿವಿ ತಮಟೆಗೆ ಹಾನಿ ಉಂಟಾಗಿತ್ತು ಮತ್ತು ರಕ್ತ ಹೆಪ್ಪುಗಟ್ಟಿತ್ತು. ಜೊತೆಗೆ ಅವರು ಒತ್ತಡಕ್ಕೂ ಒಳಗಾಗಿದ್ದರು. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದರು.
ಸ್ವರ್ಣಾಂಬಾ ಹಾಗೂ ಫಾರೂಕ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಶುಕ್ರವಾರವೇ ಸ್ವರ್ಣಾಂಬಾ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕಿವಿಯ ಕೆಳಗಿನ ಭಾಗಕ್ಕೆ ಗಾಜಿನ ತುಂಡುಗಳು ತೂರಿ ಹಾನಿ ಉಂಟು ಮಾಡಿದ್ದವು. ಅವರಿಗೆ ಮಧುಮೇಹ ಇರುವುದರಿಂದ ಗಾಯಗಳು ಒಣಗಲು ಕೆಲವು ಸಮಯ ಬೇಕಾಗುತ್ತದೆ. ಉಳಿದವರು ಚೇತರಿಸಿಕೊಂಡಿದ್ದಾರೆ ಎಂದು ಡಾ. ಪ್ರದೀಪ್ ತಿಳಿಸಿದ್ದಾರೆ.
ಸ್ವರ್ಣಾಂಬಾ ಅವರ ಪತಿ ಶ್ಯಾಮ ಸುಂದರ ಪ್ರತಿಕ್ರಿಯಿಸಿ ಸರ್ಕಾರ ಪರಿಹಾರ ನೀಡಬೇಕು. ನಮ್ಮದಲ್ಲದ ತಪ್ಪಿಗೆ ನಾವು ನೋವು ಅನುಭವಿಸಿದ್ದೇವೆ ಎಂದರು.
ಭದ್ರತೆ ಹೆಚ್ಚಿಸಲು ಚಿಂತನ–ಮಂಥನ ಸಭೆ
ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಎಲ್ಲ ಹೋಟೆಲ್‌ಗಳಲ್ಲಿ ಭದ್ರತೆ ಹೆಚ್ಚಿಸಲು ಚಿಂತನ–ಮಂಥನ ಸಭೆ ನಡೆಸಲು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ನಿರ್ಧರಿಸಿದೆ.
ಬೆಂಗಳೂರು ನಗರದಲ್ಲಿರುವ ಎಲ್ಲ ಹೋಟೆಲ್‌ಗಳ ಒಳಗೆ ಮತ್ತು ಹೊರಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದೇವೆಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
ಹೋಟೆಲ್ ಗಳಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಭದ್ರತಾ ಪರಿಣಿತರೊಂದಿಗೆ ಸಭೆ ನಡೆಸಲು ಸಂಘದ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ.
ಹೋಟೆಲ್‌ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮತ್ತು ಗ್ರಾಹಕರ ಭದ್ರತೆಗೆ ಹೆಚ್ಚು ಆದ್ಯತೆ ನೀಡುವ ಬಗ್ಗೆಯೂ ಸಮಾಲೋಚನೆ ನಡೆಸುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಗರದ ಎಲ್ಲ ಹೋಟೆಲ್‌ಗಳಲ್ಲಿ ಪ್ರಮಾಣಿತ ಕಾರ್ಯಚರಣೆ ವಿಧಾನವನ್ನು (ಎಸ್‌ಒಪಿ) ಅಳವಡಿಸಿಕೊಳ್ಳಲು ಹೋಟೆಲ್ ಮಾಲೀಕರಿಗೆ ಅರಿವು ಮೂಡಿಸುತ್ತೇವೆ. ಆ ನಿಟ್ಟಿನಲ್ಲಿ ಹೋಟೆಲ್‌ಗಳಲ್ಲಿ ಪ್ರಾಥಮಿಕ ಹಂತದ ಭದ್ರತೆ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗುವುದು. ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು
ವಿಭಾಗ