ಎಚ್ಚರಿಕೆಯ ಗಂಟೆ ಮೊಳಗಿಸಿದ ಬೆಂಗಳೂರು ರಾಮೇಶ್ವರಂ ಕೆಫೆ ಐಇಡಿ ಸ್ಫೋಟ; ಲೇಖಕ ಗಿರೀಶ್ ಲಿಂಗಣ್ಣ ಬರಹ-girish linganna explaing about improvised explosive devices bengaluru rameswaram cafe case ied blast ied attack prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಎಚ್ಚರಿಕೆಯ ಗಂಟೆ ಮೊಳಗಿಸಿದ ಬೆಂಗಳೂರು ರಾಮೇಶ್ವರಂ ಕೆಫೆ ಐಇಡಿ ಸ್ಫೋಟ; ಲೇಖಕ ಗಿರೀಶ್ ಲಿಂಗಣ್ಣ ಬರಹ

ಎಚ್ಚರಿಕೆಯ ಗಂಟೆ ಮೊಳಗಿಸಿದ ಬೆಂಗಳೂರು ರಾಮೇಶ್ವರಂ ಕೆಫೆ ಐಇಡಿ ಸ್ಫೋಟ; ಲೇಖಕ ಗಿರೀಶ್ ಲಿಂಗಣ್ಣ ಬರಹ

Rameshwaram Cafe Blast: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವು ಇಂಪ್ರೂವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್ (ಐಇಡಿ) ಮೂಲಕ ನೆರವೇರಿದೆ ಎನ್ನಲಾಗಿದೆ. ಐಇಡಿಗಳು 5 ಮೂಲಭೂತ ಬಿಡಿಭಾಗಗಳನ್ನು ಹೊಂದಿರುವ, ಮನೆಯಲ್ಲೇ ನಿರ್ಮಿಸುವ ಆಯುಧಗಳಾಗಿವೆ. ಈ ಕುರಿತು ಸಂಪೂರ್ಣ ವಿವರಿಸಿದ್ದಾರೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ, ಲೇಖಕರಾದ ಗಿರೀಶ್ ಲಿಂಗಣ್ಣ.

ಎಚ್ಚರಿಕೆಯ ಗಂಟೆ ಮೊಳಗಿಸಿದ ಬೆಂಗಳೂರು ರಾಮೇಶ್ವರಂ ಕೆಫೆ ಐಇಡಿ ಸ್ಫೋಟ; ಲೇಖಕ ಗಿರೀಶ್ ಲಿಂಗಣ್ಣ ಬರಹ
ಎಚ್ಚರಿಕೆಯ ಗಂಟೆ ಮೊಳಗಿಸಿದ ಬೆಂಗಳೂರು ರಾಮೇಶ್ವರಂ ಕೆಫೆ ಐಇಡಿ ಸ್ಫೋಟ; ಲೇಖಕ ಗಿರೀಶ್ ಲಿಂಗಣ್ಣ ಬರಹ

ಬೆಂಗಳೂರಿನ ಜನಭರಿತ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾರ್ಚ್ 1) ಮಧ್ಯಾಹ್ನದ ವೇಳೆ ಒಂದು ಸ್ಫೋಟ ಸಂಭವಿಸಿ, ಕನಿಷ್ಠ ಹತ್ತು ಜನ ನಾಗರಿಕರು ಗಾಯಗೊಂಡರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸ್ಫೋಟ ಒಂದು ಇಂಪ್ರೂವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್ (ಐಇಡಿ) ಮೂಲಕ ನೆರವೇರಿದೆ ಎಂದಿದ್ದು, ಓರ್ವ ವ್ಯಕ್ತಿ ಸ್ಫೋಟಕ ಹೊಂದಿದ್ದ ಚೀಲವನ್ನು ಹೋಟೆಲ್‌ನಲ್ಲಿ ಇಟ್ಟಿದ್ದ ಎಂದು ಮಾಹಿತಿ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಂಕಿತ ವ್ಯಕ್ತಿಯನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಹಿಡಿಯಲಾಗಿದೆ ಎಂದಿದ್ದಾರೆ. ಶಂಕಿತ ವ್ಯಕ್ತಿ ಅಂದಾಜು 28ರಿಂದ 30 ವರ್ಷ ವಯಸ್ಸಿನವ ಎನ್ನಲಾಗಿದ್ದು, ಆತ ಕೆಫೆಯಲ್ಲಿ ರವಾ ಇಡ್ಲಿ ಖರೀದಿಸಿದ್ದ ಎನ್ನಲಾಗಿದೆ. ಆದರೆ, ಶಂಕಿತ ವ್ಯಕ್ತಿ ತಾನು ಖರೀದಿಸಿದ ಆಹಾರವನ್ನು ಸೇವಿಸದೆ, ತನ್ನ ಬಳಿ ಇದ್ದ ಸ್ಪೋಟಕ ಉಪಕರಣ ಹೊಂದಿದ್ದ ಚೀಲವನ್ನು ಅಲ್ಲೇ ಇಟ್ಟು ತೆರಳಿದ್ದ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಆ ಚೀಲದ ಒಳಗಿದ್ದ ಐಇಡಿ ಹೊರತುಪಡಿಸಿ, ಆ ಪರಿಸರದಲ್ಲಿ ಹೆಚ್ಚುವರಿ ಐಇಡಿಗಳು ಲಭಿಸಿವೆ ಎಂದು ಪೊಲೀಸರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಕೆಫೆಯಲ್ಲಿ ಚೀಲ ಇಟ್ಟು ತೆರಳಿದ್ದ ಶಂಕಿತ ವ್ಯಕ್ತಿ ಕೌಂಟರ್​ನಲ್ಲಿ ಟೋಕನ್ ಒಂದನ್ನು ಕ್ಯಾಷಿಯರ್​ನಿಂದ ಪಡೆದುಕೊಂಡಿದ್ದು, ಆ ಕ್ಯಾಶಿಯರ್​ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಘಟನೆಯ ಹಿಂದೆ ಉಗ್ರಗಾಮಿ ಉದ್ದೇಶವಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಕುರಿತು ವಿಚಾರಣೆಗಳು ಮುಂದುವರಿದಿವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಸ್ಫೋಟ ದೊಡ್ಡ ಪ್ರಮಾಣದ ಸ್ಪೋಟವಲ್ಲ ಎಂದಿರುವ ಮುಖ್ಯಮಂತ್ರಿಗಳು, ಇದರ ಹಿಂದೆ ಇಂಪ್ರೊವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್ ಇದೆ ಎಂದಿದ್ದಾರೆ. ಇಂತಹ ಘಟನೆಗಳು ಈ ಹಿಂದೆಯೂ ನಡೆದಿದೆ. ಇದು ಮರುಕಳಿಸಬಾರದು ಎಂದಿದ್ದಾರೆ. ಈ ಘಟನೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಗಳೂರಿನಲ್ಲಿ ನಡೆದ ಘಟನೆಗೆ ಹೋಲಿಸಿದ್ದು, ಇಂತಹ ಘಟನೆ ಕೇವಲ ನನ್ನ ಅಧಿಕಾರಾವಧಿಯಲ್ಲಿ ಮಾತ್ರ ನಡೆದಿಲ್ಲ ಎಂದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಯುಎಪಿಎ ಕಾಯ್ದೆ ಹಾಗೂ ಸ್ಪೋಟಕ ವಸ್ತುಗಳ ನಿರ್ಬಂಧ ಕಾಯಿದೆಯಡಿ ಪ್ರಕರಣದ ದಾಖಲಿಸಲಾಗಿದೆ. ರಾಮೇಶ್ವರಂ ಕೆಫೆಯ ಸಿಸಿಟಿವಿಯಲ್ಲಿ ಸ್ಫೋಟದ ಸಂದರ್ಭವೂ ದಾಖಲಾಗಿದೆ. ಸ್ಫೋಟ ಸಂಭವಿಸುವ ಕೆಲವು ಸಮಯದ ಮೊದಲು ಅಲ್ಲಿನ ಉದ್ಯೋಗಿಗಳು ಕೌಂಟರ್ ಬಳಿ ನೆರೆದಿದ್ದರು. ಸ್ಫೋಟ ನಡೆದಾಗ ಕ್ಯಾಮೆರಾದ ನೋಟ ಬೆಳ್ಳಗಾಗಿ, ಹೊಗೆಯ ಮೋಡಗಳು ಮೇಲೇರುವುದು ಕಂಡುಬಂದಿದೆ.

ಸ್ಫೋಟದ ಬೆನ್ನಲ್ಲೇ ಸೆರೆಯಾದ ದೃಶ್ಯಾವಳಿಗಳಲ್ಲಿ ಕೆಫೆಯಿಂದ ಜನರು ಓಡಿ ಹೋಗುವುದು ಕಂಡುಬರುತ್ತದೆ. ಸ್ಪೋಟದ ರಭಸಕ್ಕೆ ಅವರ ಬಟ್ಟೆಗಳು ಹರಿದಿದ್ದು, ಬಹಳ ಜನರು ಗಾಯಗೊಂಡಿದ್ದರು. ಸ್ಫೋಟ ಸಂಭವಿಸಿದ ಕೆಲಸ ಸಮಯದ ಬಳಿಕ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳದವರು, ಫಾರೆನ್ಸಿಕ್ ತಜ್ಞರು, ಬಾಂಬ್ ನಿಷ್ಕ್ರಿಯ ದಳದವರು ಬಂದಿದ್ದರು.

ಐಇಡಿ: ಭಾಗಗಳು ಮತ್ತು ರಕ್ಷಣಾ ತಂತ್ರಗಳು

ದಂಗೆಕೋರರು ಮತ್ತು ಭಯೋತ್ಪಾದಕರು ಸಾಮಾನ್ಯವಾಗಿ ಮನೆಯಲ್ಲೇ ತಯಾರಿಸಿದಂತಹ ಬಾಂಬ್‌ಗಳನ್ನೇ ತಮ್ಮ ಆಯುಧಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವುಗಳನ್ನು ಐಇಡಿ ಅಥವಾ ಬೂಬಿ ಟ್ರಾಪ್‌ಗಳೆಂದು ಕರೆಯಲಾಗುತ್ತದೆ. ಈ ಬಾಂಬ್‌ಗಳನ್ನು ನಿರ್ಮಿಸುವುದು ಸುಲಭವಾಗಿದ್ದು, ಇವುಗಳನ್ನು ಸುಲಭವಾಗಿ ಬಚ್ಚಿಡಲೂ ಸಾಧ್ಯವಿದೆ. ಇವುಗಳು ಉಂಟುಮಾಡುವ ಹಾನಿಯೂ ಅಷ್ಟೇ ಅಪಾರ ಪ್ರಮಾಣದ್ದಾಗಿರುತ್ತದೆ.

ಬೂಬಿ ಟ್ರ್ಯಾಪ್‌ಗಳು ಅವುಗಳನ್ನು ಸ್ಫೋಟಿಸಿದಾಗ ಯಾರನ್ನಾದರೂ ಆಶ್ಚರ್ಯ ಚಕಿತರನ್ನಾಗಿಸುವ ಅಥವಾ ಹಾನಿ ಉಂಟುಮಾಡುವ ವ್ಯವಸ್ಥೆಯಾಗಿದೆ. ಇವು ಸಾಮಾನ್ಯವಾಗಿ ದೈನಂದಿನ ಜೀವನದಲ್ಲಿ ಬಳಸುವ ಕುಕ್ಕರ್, ಊಟದ ಡಬ್ಬಿಗಳಂತೆ ಕಂಡುಬರುತ್ತವೆ. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ, ವಿಯೆಟ್ ಕಾಂಗ್ (ದಕ್ಷಿಣ ವಿಯೆಟ್ನಾಂನ ರಾಜಕೀಯ ಮತ್ತು ಮಿಲಿಟರಿ ಸಂಸ್ಥೆ) ಸಂಘಟನೆ ಅಮೆರಿಕಾದ ಯೋಧರು ರಸ್ತೆ ಬದಿಗಳಲ್ಲಿದ್ದ ಖಾಲಿ ಸೋಡಾ ಬಾಟಲಿಗಳನ್ನು ಒದೆಯುವ ಅಭ್ಯಾಸ ಇಟ್ಟುಕೊಂಡಿದ್ದನ್ನು ಗಮನಿಸಿತ್ತು. ಆದ್ದರಿಂದ ಅದು ತನ್ನ ಬಚ್ಚಿಡುವ ಬಾಂಬ್‌ಗಳನ್ನು (ಐಇಡಿ) ಸೋಡಾ ಬಾಟಲಿಗಳ ಒಳಗಿಟ್ಟು, ಅವುಗಳನ್ನು ಒದ್ದಾಗ ಅಮೆರಿಕಾದ ಯೋಧರು ಸಾವಿಗೀಡಾಗುವಂತೆ ತಂತ್ರ ರೂಪಿಸಿತ್ತು.

ಐಇಡಿಗಳು ಐದು ಮೂಲಭೂತ ಬಿಡಿಭಾಗಗಳನ್ನು ಹೊಂದಿರುವ, ಮನೆಯಲ್ಲೇ ನಿರ್ಮಿಸುವ ಆಯುಧಗಳಾಗಿವೆ. ಅವುಗಳ ಪ್ರಮುಖ ಭಾಗಗಳು:

1. ವಿದ್ಯುತ್ ಪೂರೈಕೆ: ಸಾಮಾನ್ಯವಾಗಿ ಕಾರ್ ಬ್ಯಾಟರಿಗಳು ಅಥವಾ ಫ್ಲಾಶ್ ಲೈಟ್ ಅಥವಾ ಟಾರ್ಚ್‌ಗಳಲ್ಲಿ ಬಳಸುವ ಆಲ್ಕಲೈನ್ ಬ್ಯಾಟರಿಗಳ ಮೂಲಕ ವಿದ್ಯುತ್ ಒದಗಿಸಲಾಗುತ್ತದೆ.

2. ರಿಮೋಟ್ ಟ್ರಿಗರ್‌: ಐಇಡಿ ಸ್ಫೋಟಕ ಉಪಕರಣವನ್ನು ಟ್ರಿಪ್ ವೈರ್‌ಗಳಂತಹ ವಸ್ತುಗಳು, ಟೈಮರ್‌ಗಳು, ಅಥವಾ ಬಟನ್‌ಗಳನ್ನು ಬಳಸಿ ನೇರವಾಗಿ ಅಥವಾ ಪರೋಕ್ಷವಾಗಿ ಚಾಲನೆಗೊಳಿಸಲಾಗುತ್ತದೆ. ಸೆಲ್ ಫೋನ್‌ಗಳು ಅಥವಾ ಗ್ಯಾರೇಜ್ ಬಾಗಿಲು ತೆಗೆಯುವಂತಹ ರಿಮೋಟ್ ಟ್ರಿಗರ್‌ಗಳನ್ನು ಬಳಸಿಕೊಂಡು, ದೂರದಿಂದ ಅವುಗಳನ್ನು ಗಮನಿಸುವಂತಹ ವ್ಯಕ್ತಿ ಸಕ್ರಿಯಗೊಳಿಸುತ್ತಾನೆ.

ಟ್ರಿಪ್ ವೈರ್: ಒಂದು ತೆಳ್ಳನೆಯ ವೈರ್ ಆಗಿದ್ದು, ಇವುಗಳನ್ನು ಅಲುಗಾಡಿಸಿದಾಗ ಅಥವಾ ಮುರಿದಾಗ ಸ್ಫೋಟಕ ಅಥವಾ ಅಲಾರಂ ಅನ್ನು ಚಾಲ್ತಿಗೊಳಿಸುತ್ತವೆ.

ಬಟನ್ಸ್: ಬಟನ್‌ಗಳು ಸಣ್ಣದಾದ ನಿಯಂತ್ರಣ ಗುಂಡಿಗಳಾಗಿದ್ದು, ಯಾವುದಾದರೂ ಉಪಕರಣ ಅಥವಾ ಯಂತ್ರಗಳನ್ನು ಆರಂಭಿಸಲು ಅಥವಾ ಕಾರ್ಯಾಚರಿಸಲು ಬಳಕೆಯಾಗುತ್ತವೆ.

ಗ್ಯಾರೇಜ್ ಡೋರ್ ಓಪನರ್: ಇವುಗಳು ಗ್ಯಾರೇಜ್ ಬಾಗಿಲುಗಳು ಅಥವಾ ಗೇಟುಗಳನ್ನು ಸ್ವಯಂಚಾಲಿತವಾಗಿ ತೆರೆಯಲು ಅಥವಾ ಮುಚ್ಚಲು ಬಳಸುವ ಉಪಕರಣಗಳಾಗಿವೆ. ಇವುಗಳನ್ನು ಸಾಮಾನ್ಯವಾಗಿ ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ.

3. ವಿದ್ಯುತ್ ಚಾಲಿತ: ಡಿಟೊನೇಟರ್ ಎನ್ನುವುದು ಒಂದು ಸಣ್ಣ ಸ್ಫೋಟಕ ವಸ್ತುವಾಗಿದ್ದು, ಮುಖ್ಯ ಸ್ಫೋಟವನ್ನು ಚಾಲ್ತಿಗೊಳಿಸುತ್ತದೆ. ಇವುಗಳು ಸಾಮಾನ್ಯವಾಗಿ ವಿದ್ಯುತ್ ಚಾಲಿತವಾಗಿವೆ.

ಡಿಟೊನೇಟರ್ ಅನ್ನು ಸಾಮಾನ್ಯವಾಗಿ ಕಾರಿನಲ್ಲಿರುವ ಒಂದು ಸ್ಪಾರ್ಕ್ ಪ್ಲಗ್‌ಗೆ ಹೋಲಿಸಬಹುದಾಗಿದೆ. ಸ್ಪಾರ್ಕ್ ಪ್ಲಗ್ ಸಣ್ಣ ಕಿಡಿಯನ್ನು ಉಂಟುಮಾಡಿ, ಇಂಜಿನ್ ಅನ್ನು ಆರಂಭಿಸುತ್ತದೆ. ಇದೇ ರೀತಿ ಡಿಟೊನೇಟರ್ ಸಣ್ಣ ಸ್ಫೋಟವನ್ನು ನಡೆಸಿ, ದೊಡ್ಡದಾದ ಸ್ಫೋಟಕವನ್ನು ಚಾಲ್ತಿಗೊಳಿಸುತ್ತದೆ.

4. ಮುಖ್ಯ ಸ್ಫೋಟಕ ಅಥವಾ ಮೇನ್ ಚಾರ್ಜ್ ಎನ್ನುವುದು ಬೃಹತ್ ಸ್ಫೋಟ ನಡೆಯಲು ಕಾರಣವಾಗಿದೆ. ಇದಕ್ಕೆ ಸ್ಫೋಟಗೊಂಡಿರದ ಲ್ಯಾಂಡ್ ಮೈನ್‌ಗಳು ಉದಾಹರಣೆಯಾಗಿದೆ.

5. ಇದರೊಡನೆ, ಈ ಎಲ್ಲ ಬಿಡಿಭಾಗಗಳನ್ನು ಜೊತೆಯಾಗಿ ಇಡಲು ಒಂದು ಸಂಗ್ರಾಹಕವನ್ನು ಬಳಸಲಾಗುತ್ತದೆ. ಇದನ್ನು ಬಳಸಿ, ಸ್ಫೋಟ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ನಡೆಯುವಂತೆ ಮಾಡಲಾಗುತ್ತದೆ.

ಬಾಂಬ್‌ಗೆ ಹೆಚ್ಚುವರಿ ವಸ್ತುಗಳಾದ ಲೋಹದ ತುಣುಕುಗಳು, ಮೊಳೆಗಳು, ಅಥವಾ ಕಲ್ಲುಗಳನ್ನು ಚೂಪಾದ ಆಯುಧಗಳಾಗಿ ಬಳಸಲಾಗುತ್ತದೆ.

ಚೂಪಾದ ಆಯುಧಗಳೆಂದರೆ, ಸ್ಫೋಟ ನಡೆದಾಗ ಸುತ್ತಮುತ್ತಲಿನ ಪ್ರದೇಶಗಳಿಗೆ ಸಿಡಿದು ಚದುರುವ ವಸ್ತುಗಳಾಗಿದ್ದು, ಸುತ್ತಲಿನ ವ್ಯಕ್ತಿಗಳಿಗೆ, ವಾಹನಗಳಿಗೆ ಅಥವಾ ಕಟ್ಟಡಗಳಿಗೆ ಹಾನಿ ಉಂಟುಮಾಡುತ್ತವೆ. ಐಇಡಿಗಳನ್ನು 'ಡರ್ಟಿ ಬಾಂಬ್' ಭಾಗವಾಗಿಸಬಹುದಾಗಿದ್ದು, ಡರ್ಟಿ ಬಾಂಬ್‌ಗಳು ಅಪಾಯಕಾರಿಯಾದ ಜೈವಿಕ ಅಥವಾ ವಿಕಿರಣಕಾರಕ ವಸ್ತುಗಳನ್ನು ಪ್ರಸರಿಸುತ್ತವೆ.

ಈ ಭಾಗಗಳೆಲ್ಲ ಒಂದಾಗಿ ಹೇಗೆ ಕಾರ್ಯಾಚರಿಸುತ್ತವೆ?

1. ವಿದ್ಯುತ್ ಶಕ್ತಿಯ ಮೂಲ ಟ್ರಿಗರ್ ಅಥವಾ ಸ್ವಿಚ್ ಮತ್ತು ಡಿಟೊನೇಟರ್ ಗಳನ್ನು ಸಂಪರ್ಕಿಸುತ್ತವೆ.

2. ಟ್ರಿಗರ್ ಎನ್ನುವುದು ಒಂದು ಸ್ವಿಚ್ ರೀತಿಯದಾಗಿದ್ದು, ಸ್ಫೋಟಕ್ಕೆ ಚಾಲನೆ ನೀಡುತ್ತದೆ. ಇದು ವಿವಿಧ ರೀತಿಯಲ್ಲಿ ಕಾರ್ಯಾಚರಿಸುತ್ತದೆ:

i. ಸೆನ್ಸಿಂಗ್: ಇದು ಗುರಿ ತನ್ನ ದಾಳಿಯ ವ್ಯಾಪ್ತಿಗೆ ಸನಿಹದಲ್ಲಿರುವುದನ್ನು ಗುರುತಿಸಬಲ್ಲದು.

ii. ಚಾಲನೆಯನ್ನು ಗುರುತಿಸುವುದು: ಕೆಲವೊಂದು ಬಾರಿ ದಾಳಿಯ ಗುರಿಯೇ ಟ್ರಿಗರ್ ಅನ್ನು ಚಾಲ್ತಿಗೊಳಿಸುವ ರೀತಿಯಲ್ಲಿ ಏನಾದರೂ ಕೆಲಸ ಮಾಡಿಬಿಡುವ (ಪ್ರೆಷರ್ ಪ್ಲೇಟ್ ತುಳಿಯುವಂತೆ) ಸಾಧ್ಯತೆಗಳಿವೆ.

iii. ಟೈಮರ್: ಇದನ್ನು ಅಲಾರಂ ಕ್ಲಾಕ್ ರೀತಿಯ ವಸ್ತುವನ್ನು ಬಳಸಿಕೊಂಡು, ನಿರ್ದಿಷ್ಟ ಸಮಯದಲ್ಲಿ ಸ್ಫೋಟಗೊಳ್ಳುವಂತೆ ಮಾಡುತ್ತದೆ.

iv. ರಿಮೋಟ್ ಕಂಟ್ರೋಲ್: ರಿಮೋಟ್ ಕಂಟ್ರೋಲ್ ರೀತಿಯ ವಸ್ತುವನ್ನು ಬಳಸಿಕೊಂಡು, ಯಾರಾದರೂ ದೂರದಿಂದಲೇ ಸ್ಫೋಟಕವನ್ನು ಚಾಲ್ತಿಗೊಳಿಸಬಹುದು.

ಒಂದು ಬಾರಿ ಟ್ರಿಗರ್ ಚಾಲ್ತಿಗೊಂಡರೆ, ಇದು ಡಿಟೊನೇಟರ್‌ಗೆ ಸಂಕೇತ ನೀಡುತ್ತದೆ. ಡಿಟೊನೇಟರ್ ಬಳಿಕ ಒಂದು ಸಣ್ಣ ಸ್ಫೋಟವನ್ನು ಉಂಟುಮಾಡಿ, ದೊಡ್ಡ ಸ್ಫೋಟ ನಡೆಯುವಂತೆ ಮಾಡುತ್ತದೆ. ಈ ರೀತಿ ಒಂದು ಸ್ಫೋಟಕ ಉಪಕರಣವನ್ನು ಚಾಲ್ತಿಗೊಳಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ.

3. ಡಿಟೊನೇಟರ್ ಸ್ಫೋಟಗೊಂಡು, ಪ್ರಮುಖ ಸ್ಫೋಟಕವನ್ನು ಚಾಲ್ತಿಗೊಳಿಸಲು ಬೇಕಾದ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ.

4. ಬಳಿಕ ಪ್ರಮುಖ ಸ್ಫೋಟಕ ಚಾಲ್ತಿಗೊಂಡು, ಬೃಹತ್ ಸ್ಫೋಟವನ್ನು ಉಂಟುಮಾಡುತ್ತದೆ. ಈ ಸ್ಫೋಟಕದ ಪರಿಣಾಮವಾಗಿ, ಚೂಪಾದ ವಸ್ತುಗಳು ಹಾರಾಡುತ್ತವೆ, ವಿಷಕಾರಿ ರಾಸಾಯನಿಕಗಳು ಬಿಡುಗಡೆಗೊಳ್ಳುತ್ತವೆ ಅಥವಾ ಬೆಂಕಿ ಉಂಟಾಗುತ್ತದೆ.

ಯಾವುದೇ ಬಾಂಬ್ ರೀತಿಯಲ್ಲಿ, ಒಂದು ಐಇಡಿ ಸಹ ಸ್ಫೋಟಗೊಳ್ಳುತ್ತದೆ. ಐಇಡಿ ನೈಜವಾಗಿಯೂ ಏನು ಮಾಡುತ್ತದೆ ಎನ್ನುವುದನ್ನು ತಿಳಿಯಲು, ಇದು ಸ್ಫೋಟಗೊಂಡಾಗ ಏನಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

1. ಮುಖ್ಯ ಸ್ಫೋಟಕ ಚಾಲನೆಗೊಂಡಾಗ, ಅದರಲ್ಲಿನ ಅನಿಲಗಳು ಕ್ಷಿಪ್ರವಾಗಿ ಬಿಸಿಯಾಗಿ, ಬಲವಂತವಾಗಿ ಚದುರಿ ಹೋಗುತ್ತವೆ.

2. ಈ ರೀತಿಯ ಚದುರುವಿಕೆ ಪ್ರತಿ ಸೆಕೆಂಡಿಗೆ 488 ಮೀಟರ್‌ಗಳಷ್ಟು ದೂರದಲ್ಲಿ ಚಲಿಸುವ ಸ್ಫೋಟದ ಅಲೆಗಳನ್ನು ಸೃಷ್ಟಿಸುತ್ತದೆ. ಇದರ ವ್ತಾಪ್ತಿ ಹಲವು ನೂರು ಮೀಟರ್‌ಗಳಷ್ಟಿದ್ದು, ಅದು ಸ್ಫೋಟಕದ ಗಾತ್ರವನ್ನು ಅವಲಂಬಿಸಿರುತ್ತದೆ.

3. ಈ ಸ್ಫೋಟ ಸಂಗ್ರಾಹಕವನ್ನು ಛಿದ್ರಗೊಳಿಸಿ, ಅತ್ಯಂತ ವೇಗವಾಗಿ ಚೂಪಾದ ವಸ್ತುಗಳನ್ನು ಎಸೆಯುವಂತೆ ಮಾಡುತ್ತದೆ. ಒಂದು ವೇಳೆ ಐಇಡಿ ಏನಾದರೂ ಬಾಲ್ ಬೇರಿಂಗ್‌ಗಳು, ನಟ್ - ಬೋಲ್ಟ್‌ಗಳು, ಗೋಲಿಗಳಂತಹ ವಸ್ತುಗಳನ್ನು ಹೊಂದಿದ್ದರೆ, ಅವುಗಳೂ ಹೊರಕ್ಕೆ ಚಿಮ್ಮುತ್ತವೆ.

4. ಸ್ಫೋಟದ ತೀವ್ರ ಬಿಸಿ ಬೆಂಕಿ ಕಾಣಿಸಿಕೊಳ್ಳುವಂತೆ ಮಾಡಬಲ್ಲದು.

5. ಈ ಉಷ್ಣತೆ ಮತ್ತು ಆರಂಭಿಕ ಬೆಂಕಿ ಇನ್ನಷ್ಟು ಹೆಚ್ಚು ಬೆಂಕಿ ವ್ಯಾಪಿಸುವಂತೆ ಮಾಡುತ್ತದೆ.

6. ಈ ರೀತಿಯ ಸ್ಫೋಟ ಒಂದು ಬಗೆಯ ಖಾಲಿ ಜಾಗವನ್ನು ಸೃಷ್ಟಿಸಿ, ಗಾಳಿ ವೇಗವಾಗಿ ಅಲ್ಲಿಗೆ ನುಗ್ಗುವಂತೆ ಮಾಡುತ್ತದೆ. ಹೀಗೆ ಒಳಬರುವ ಗಾಳಿ ತನ್ನೊಡನೆ ಅವಶೇಷಗಳು ಮತ್ತು ಚೂಪಾದ ವಸ್ತುಗಳನ್ನು ತರುತ್ತವೆ.

ಐಇಡಿಯಿಂದ ವಾಹನಗಳು ಮತ್ತು ಕಟ್ಟಡಗಳಿಗೆ ಉಂಟಾಗುವ ಹಾನಿ ಪ್ರಮುಖವಾಗಿ ಈ ಶಾಕ್ ವೇವ್, ಉಷ್ಣತೆ ಮತ್ತು ಬೆಂಕಿಯಿಂದ ಸಂಭವಿಸುತ್ತದೆ.

ಇನ್ನೊಂದೆಡೆ, ಸ್ಫೋಟದಿಂದ ಮಾನವರು ವಿವಿಧ ರೀತಿಯಲ್ಲಿ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಸ್ಫೋಟ ಅತ್ಯಂತ ಚೂಪಾದ ವಸ್ತುಗಳನ್ನು ಹೊರಸೂಸಬಲ್ಲದು ಮತ್ತು ಕಿಟಕಿಯ ಗಾಜುಗಳನ್ನು ಹಾರಾಡುವ ಅಪಾಯಕಾರಿ ವಸ್ತುಗಳಾಗಿ ಪರಿವರ್ತಿಸಬಲ್ಲದು. ಇವುಗಳು ದೇಹದ ವಿವಿಧ ಭಾಗಗಳಲ್ಲಿ ಕತ್ತರಿಸಿದ ಗಾಯಗಳು, ರಕ್ತಸ್ರಾವ, ಮೂಳೆ ಮುರಿತಗಳು, ಬೆರಳುಗಳು ಕತ್ತರಿಸುವಿಕೆಯ ಅಪಾಯಗಳನ್ನು ಉಂಟುಮಾಡಬಲ್ಲವು.

ಬಳಿಕ, ಸ್ಫೋಟದಿಂದ ಬರುವ ಉಷ್ಣತೆ ಬೆಂಕಿಗೆ ಹಾದಿ ಮಾಡಿಕೊಡಬಹುದು. ಉಷ್ಣತೆ ಮತ್ತು ಬೆಂಕಿ ಎರಡೂ ಸೇರಿ, ಗಂಭೀರ ಸುಟ್ಟ ಗಾಯಗಳಿಗೆ ಕಾರಣವಾಗಬಲ್ಲವು. ಸ್ಫೋಟದಿಂದ ಉಂಟಾಗುವ ಒತ್ತಡ ಸಾಮಾನ್ಯ ಗಾಳಿಯ ಒತ್ತಡದಿಂದ ಸಾವಿರ ಪಟ್ಟು ಹೆಚ್ಚಾಗಿರುತ್ತದೆ. ಈ ಒತ್ತಡ ಕಿವಿಯ ತಮಟೆಗಳನ್ನು ಹಾನಿಗೊಳಿಸಿ, ಮೆದುಳನ್ನು ತಲೆ ಬುರುಡೆಗೆ ಒತ್ತುತ್ತದೆ. ಇದರ ಪರಿಣಾಮವಾಗಿ ಕನ್ಕಷನ್, ಕುರುಡಾಗುವುದು, ಕಿವಿ ಕೇಳದಾಗುವುದು, ಮೆದುಳು ದಪ್ಪಗಾಗುವುದು ಉಂಟಾಗುತ್ತದೆ.

ಕನ್ಕಷನ್ ಎನ್ನುವುದು ಒಂದು ರೀತಿಯ ಮೆದುಳಿನ ಗಾಯವಾಗಿದ್ದು, ಇದ್ದಕ್ಕಿದ್ದ ಹಾಗೆ ಮೆದುಳಿನ ಅಲುಗಾಟದಿಂದ ಸಂಭವಿಸುತ್ತದೆ. ಇದರಿಂದಾಗಿ ತಲೆನೋವು, ಗೊಂದಲ, ತಲೆ ಸುತ್ತುವಿಕೆ, ಹಾಗೂ ಕೆಲವೊಂದು ಬಾರಿ ಮರೆವು ಅಥವಾ ಪ್ರಜ್ಞೆ ತಪ್ಪುವಿಕೆ ಉಂಟಾಗುತ್ತದೆ. ಅದರೊಡನೆ, ಒತ್ತಡದಲ್ಲಿನ ಬದಲಾವಣೆ ಶ್ವಾಸಕೋಶ ಮತ್ತು ಕರುಳಿನಂತಹ ಗಾಳಿ ತುಂಬಿರುವ ಅಂಗಗಳನ್ನು ತೂತು ಮಾಡಬಲ್ಲದು.

ಇಂಪ್ರೊವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್‌ಗಳನ್ನು (ಐಇಡಿ) ಎದುರಿಸುವ ಕಾರ್ಯತಂತ್ರ ವಿವಿಧ ಕ್ರಮಗಳನ್ನು ಒಳಗೊಂಡಿದೆ. ದುಷ್ಕರ್ಮಿಗಳ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆಹಾಕುವುದರಿಂದ, ಅವರು ಬಾಂಬ್ ಸ್ಫೋಟಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಅಂದರೆ, ಸಾಮಾನ್ಯವಾಗಿ ಚಕಮಕಿಗಳು ಏರ್ಪಡುವ ಪ್ರದೇಶಗಳಲ್ಲಿ ಅವುಗಳನ್ನು ಸ್ಥಗಿತಗೊಳಿಸುವುದರಿಂದ, ದುಷ್ಕರ್ಮಿಗಳಿಗೆ ಅವಶ್ಯಕವಾದ ಹಣ ಮತ್ತು ವಸ್ತುಗಳು ಲಭಿಸದಂತೆ ಮಾಡಬಹುದು.

ಬಾಂಬ್‌ಗಳು ಸ್ಫೋಟಗೊಳ್ಳುವ ಮೊದಲೇ ಅವುಗಳನ್ನು ಪತ್ತೆಹಚ್ಚುವುದು ಅಥವಾ ಪತ್ತೆಯಾದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವುದು, ಹಾಗೂ ಯೋಧರು ಮತ್ತು ಸಾಮಾನ್ಯ ನಾಗರಿಕರನ್ನು ಪತ್ತೆಯಾದ ಬಾಂಬ್‌ಗಳಿಂದ ಸುರಕ್ಷಿತವಾಗಿಡುವುದು.

ಐಇಡಿಗಳನ್ನು ಪತ್ತೆಹಚ್ಚುವ, ತಡೆಯುವ, ಅಥವಾ ನಿಷ್ಕ್ರಿಯಗೊಳಿಸುವ ನೂತನ ತಂತ್ರಜ್ಞಾನಗಳನ್ನು ನಿರ್ಮಿಸಿ, ಯುದ್ಧ ಭೂಮಿಯಲ್ಲಿ ಯೋಧರನ್ನು ಸುರಕ್ಷಿತವಾಗಿಸುವುದು. ಉದಾಹರಣೆಗೆ, ವಿವಿಧ ಮಿಲಿಟರಿ ವಾಹನಗಳಲ್ಲಿ ರೇಡಿಯೋ ತರಂಗಗಳನ್ನು ತಡೆಗಟ್ಟುವ ಉಪಕರಣಗಳನ್ನು ಅಳವಡಿಸಲಾಗುತ್ತದೆ. ಇವುಗಳು ಸೆಲ್ ಫೋನ್ ಸಂಕೇತಗಳನ್ನು ತಡೆದು, ಅವುಗಳಿಂದ ಐಇಡಿಗಳನ್ನು ಸ್ಫೋಟಿಸಲು ಸಾಧ್ಯವಾಗದಂತೆ ತಡೆಯುತ್ತದೆ.

ಎನ್ಐಆರ್‌ಎಫ್ ಎಂಬ ಉಪಕರಣ ನ್ಯೂಟ್ರಲೈಸಿಂಗ್ ಇಂಪ್ರುವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸಸ್ ವಿದ್ ರೇಡಿಯೋ ಫ್ರೀಕ್ವೆನ್ಸಿ ಎಂಬುದರ ಹೃಸ್ವರೂಪವಾಗಿದ್ದು, ಹೆಚ್ಚಿನ ತರಂಗಾಂತರದ ರೇಡಿಯೋ ತರಂಗಗಳನ್ನು ಬಿಡುಗಡೆಗೊಳಿಸಿ, ಸನಿಹದ ವ್ಯಾಪ್ತಿಯಲ್ಲಿರುವ ಐಇಡಿಯಲ್ಲಿರುವ ಇಲೆಕ್ಟ್ರಾನಿಕ್‌ಗಳನ್ನು ಸ್ಥಗಿತಗೊಳಿಸುತ್ತದೆ.

ಮೈಕ್ರೋವೇವ್ ಅನ್ನು ಹೊರಸೂಸುವ ವಸ್ತುಗಳನ್ನು ಬಳಸಿಕೊಂಡು, ಐಇಡಿಯಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೊಪಿ (ಎಲ್ಐಬಿಎಸ್) ಎಂಬ ತಂತ್ರಜ್ಞಾನ ಲೇಸರ್‌ಗಳನ್ನು ಬಳಸಿಕೊಂಡು, ನೂರು ಅಡಿಗಳ ವ್ಯಾಪ್ತಿಯಲ್ಲಿ ಐಇಡಿ ಸ್ಫೋಟಕಗಳನ್ನು ಗುರುತಿಸುತ್ತದೆ.

ಸೇನೆಯೂ ಸಹ ರೋಬೋಟ್‌ಗಳು, ಡ್ರೋನ್‌ಗಳನ್ನು ಬಳಸಿಕೊಂಡು ಐಇಡಿಗಳಿಂದ ಜನರನ್ನು ರಕ್ಷಿಸುವ ಆಯ್ಕೆಯನ್ನು ಗಮನಿಸುತ್ತಿದೆ. ಎತ್ತರದಲ್ಲಿ ಹಾರಾಡುವ ಡ್ರೋನ್‌ಗಳು ಯೋಧರನ್ನು ಅಪಾಯಕ್ಕೆ ಸಿಲುಕಿಸದೆ, ಐಇಡಿಗಳನ್ನು ಅಥವಾ ಅಸಹಜ ಚಟುವಟಿಕೆಗಳನ್ನು ಗಮನಿಸಬಹುದು. ರೋಬೋಟ್‌ಗಳು ಸಂಭಾವ್ಯ ಸ್ಫೋಟಕಗಳನ್ನು ಹೊಂದಿರುವ ಪ್ರದೇಶವನ್ನು ಗಮನಿಸಲು, ಅಥವಾ ಅನುಮಾನಾಸ್ಪದ ವಸ್ತುಗಳನ್ನು ಪರಿಶೀಲಿಸಲು ನೆರವಾಗುತ್ತವೆ. ಆ ಮೂಲಕ ಯೋಧರು ನೇರವಾಗಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗುವ ಅವಶ್ಯಕತೆಯನ್ನು ತಗ್ಗಿಸುತ್ತದೆ.

ಐಇಡಿಗಳ ಪತ್ತೆ ಕಾರ್ಯ ಯಶಸ್ವಿಯಾಗದಿದ್ದರೆ, ಕೆವ್ಲಾರ್ ಬಾಡಿ ಆರ್ಮರ್ ರೀತಿಯ ರಕ್ಷಣಾ ಉಪಾಯಗಳು ಯೋಧರನ್ನು ಐಇಡಿ ಸ್ಫೋಟದಿಂದ ಹೊರಸೂಸುವ ಚೂಪಾದ ವಸ್ತುಗಳಿಂದ ಹಾನಿಗೊಳಗಾಗದಂತೆ ರಕ್ಷಿಸುತ್ತವೆ. ಅದರೊಡನೆ, ಮಿಲಿಟರಿ ವಾಹನಗಳನ್ನು ಐಇಡಿ ಸ್ಫೋಟದಿಂದ ಹಾನಿಗೊಳಗಾಗದ ರೀತಿಯಲ್ಲಿ ಬಲಪಡಿಸುವುದರಿಂದಲೂ ಅದರೊಳಗಿರುವವರ ಭದ್ರತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

mysore-dasara_Entry_Point