Google Office in Bangalore: ಭಾರತದಲ್ಲಿ ಕಾರ್ಯಕ್ಷೇತ್ರ ವಿಸ್ತರಿಸಿದ ಗೂಗಲ್‌; ಬೆಂಗಳೂರಲ್ಲಿ 6 ಲಕ್ಷ ಚ.ಅಡಿಬಾಡಿಗೆಗೆ ಪಡೆದ ಕಂಪೆನಿ
ಕನ್ನಡ ಸುದ್ದಿ  /  ಕರ್ನಾಟಕ  /  Google Office In Bangalore: ಭಾರತದಲ್ಲಿ ಕಾರ್ಯಕ್ಷೇತ್ರ ವಿಸ್ತರಿಸಿದ ಗೂಗಲ್‌; ಬೆಂಗಳೂರಲ್ಲಿ 6 ಲಕ್ಷ ಚ.ಅಡಿಬಾಡಿಗೆಗೆ ಪಡೆದ ಕಂಪೆನಿ

Google Office in Bangalore: ಭಾರತದಲ್ಲಿ ಕಾರ್ಯಕ್ಷೇತ್ರ ವಿಸ್ತರಿಸಿದ ಗೂಗಲ್‌; ಬೆಂಗಳೂರಲ್ಲಿ 6 ಲಕ್ಷ ಚ.ಅಡಿಬಾಡಿಗೆಗೆ ಪಡೆದ ಕಂಪೆನಿ

Bangalore News ಗೂಗಲ್‌ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಆರಂಭಿಸುವ ಮೂಲಕ ಭಾರತದಲ್ಲಿ ವಹಿವಾಟು ವಿಸ್ತರಿಸುತ್ತಿದೆ.

ಬೆಂಗಳೂರಲ್ಲೂ ವಿಶಾಲ ಕಚೇರಿ ತೆರೆಯಲು ಗೂಗಲ್‌ ಮುಂದಾಗಿದೆ.
ಬೆಂಗಳೂರಲ್ಲೂ ವಿಶಾಲ ಕಚೇರಿ ತೆರೆಯಲು ಗೂಗಲ್‌ ಮುಂದಾಗಿದೆ.

ಬೆಂಗಳೂರು: ಅತ್ತ ಅಮೆರಿಕದಲ್ಲಿ ಪ್ರಮುಖ ಉದ್ಯೋಗಿಗಳನ್ನು ಕೈ ಬಿಡುವ ನಿರ್ಧಾರ ಪ್ರಕಟಿಸಿದ್ದ ಗೂಗಲ್‌ ಭಾರತದಲ್ಲಿ ಗೂಗಲ್‌ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದೆಯೇ? ಇತ್ತೀಚಿನ ಗೂಗಲ್‌ ಕೈಗೊಂಡ ತೀರ್ಮಾನಗಳು ಈ ಅನುಮಾನವನ್ನು ಪುಷ್ಠೀಕರಿಸುತ್ತವೆ. ಅದರಲ್ಲೂ ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಕಚೇರಿ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಗೂಗಲ್‌ ಬೆಂಗಳೂರಿನಲ್ಲಿ ಸುಮಾರು 6,49,000 ಅಡಿಗಳಷ್ಟು ಜಾಗವನ್ನು ಬಾಡಿಗೆಗೆ ಪಡೆದಿದೆ. ಇದಕ್ಕಾಗಿ ಮಾಸಿಕ 4 ಕೋಟಿ ರೂಪಾಯಿ ಬಾಡಿಗೆ ಪಾವತಿಸಲಿದೆ. ಇದಕ್ಕಾಗಿ ವಿಶಾಲ ಕಟ್ಟಡವನ್ನು ನೋಡಿದ್ದು ಗುತ್ತಿಗೆ ಪ್ರಕ್ರಿಯೆಯೂ ಮುಗಿದಿದೆ. ಸಾಕಷ್ಟು ಹೊಸ ಉದ್ಯೋಗಗಳು ಗೂಗಲ್‌ನಲ್ಲಿ ಸೃಷ್ಟಿಯಾಗಲಿವೆ. ಅದರಲ್ಲೂ ಕೃತಕ ಬುದ್ದಿಮತ್ತೆ( Artificial Intelligence)ಗೆ ಸಂಬಂಧಿಸಿದ ಹುದ್ದೆಗಳು ನಮ್ಮ ಭಾಗದ ಪ್ರತಿಭಾವಂತರಿಗೆ ಲಭ್ಯವಾಗಲಿವೆ.

ಗೂಗಲ್‌ ಮೂಲಗಳ ಪ್ರಕಾರ ವೈಟ್‌ ಫೀಲ್ಡ್‌ ನ ಅಲೆಂಬಿಕ್‌ ಸಿಟಿಯಲ್ಲಿ ಈ ಸ್ಥಳವನ್ನು ಗುತ್ತಿಗೆಗೆ ಪಡೆದುಕೊಂಡಿದೆ. ಮೂರು ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದಿದ್ದು, ಪ್ರತಿ ಚದುರ ಅಡಿಗೆ 62 ರೂ. ಬಾಡಿಗೆ ನಿಗಧಿಯಾಗಿದೆ. ಅಂದರೆ ಪ್ರತಿ ತಿಂಗಳು 4,02,38,000 ರೂಪಾಯಿ ಬಾಡಿಗೆ ಪಾವತಿಸಲಿದೆ.

ಅಮೆರಿಕದ ತನ್ನ ಕೇಂದ್ರ ಕಚೇರಿಯಲ್ಲಿನ ಕೆಲವು ಉದ್ಯೋಗಿಗಳನ್ನು ಕೈಬಿಡುವ ನಿರ್ಧಾರವನ್ನು ಗೂಗಲ್‌ ಕೈಗೊಂಡಿದ್ದು ಇದರ ಬೆನ್ನಲ್ಲೇ ಭಾರತದಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ ಭಾರತದ ಕೆಲವು ಉದ್ಯೋಗಿಗಳ ಸ್ಥಾನಗಳಲ್ಲಿ ಬದಲಾವಣೆಯಾಗಲಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.

2022 ರಲ್ಲಿ ಗೂಗಲ್‌ ಕನೆಕ್ಟ್‌ ಸರ್ವೀಸಸ್‌ ಇಂಡಿಯಾ ಪ್ರೈ.ಲಿ ಹೈದರಾಬಾದ್‌ ನಲ್ಲಿ 6 ಲಕ್ಷ ಚದುರ ಅಡಿ ಸ್ಥಳವನ್ನು ಬಾಡಿಗೆಗೆ ಪಡೆದಿತ್ತು. ಇದೇ ಅವಧಿಯಲ್ಲಿ ಗೂಗಲ್‌ ಬೆಂಗಳೂರಿನ ಬಾಗ್ಮನೆ ಡೆವಲಪರ್ಸ್‌ ನಲ್ಲಿ 1.3 ಮಿಲಿಯನ್‌ ಚದುರ ಅಡಿ ಜಾಗವನ್ನು ಬಾಡಿಗೆಗೆ ಪಡೆದಿತ್ತು. ಒಟ್ಟಾರೆ 2020 ರಿಂದ ಇದುವರೆಗೂ ಗೂಗಲ್‌ ಭಾರತದಲ್ಲಿ 3.5 ಮಿಲಿಯನ್‌ ಅಡಿಗಳಷ್ಟು ಪ್ರದೇಶದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ.

ಪ್ರಸ್ತುತ ಗೂಗಲ್‌ ಕಂಪನಿ ಭಾರತದ 5 ಪ್ರಮುಖ ನಗರಗಳಲ್ಲಿ 9.3 ಮಿಲಿಯನ್‌ ಚದುರ ಅಡಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಷ್ಟೇ ಅಲ್ಲದೆ ಗೂಗಲ್‌ ಉತ್ಪಾದನಾ ಕ್ಷೇತ್ರಕ್ಕೂ ಲಗ್ಗೆ ಇಡುತ್ತಿದೆ. ತಮಿಳುನಾಡಿನ ಫಾಕ್ಸ್‌ ಕಾನ್‌ ಸೌಲಭ್ಯಗಳನ್ನು ಬಳಸಿಕೊಂಡು ಸ್ಮಾರ್ಟ್‌ ಫೋನ್‌ ಗಳನ್ನು ಉತ್ಪಾದಿಸಲಿದೆ. ದ್ರೋಣ್‌ ಉತ್ಪಾದಿಸಲೂ ಗೂಗಲ್‌ ಮುಂದಾಗಿದೆ ಎಂಬ ಮಾಹಿತಿ ಇದೆ.

ಗೂಗಲ್‌ ಭಾರತದಲ್ಲಿ 8 ಪಿಕ್ಸೆಲ್‌ ಮಾದರಿಯ ಸ್ಮಾರ್ಟ್ ಫೋನ್‌ ಗಳನ್ನು ಉತ್ಪಾದಿಸುವ ಗುರಿ ಹಾಕಿಕೊಂಡಿದೆ. ಕಳೆದ ವರ್ಷ ನಡೆದ ಭಾರತಕ್ಕಾಗಿ ಗೂಗಲ್‌ ಸಮ್ಮೇಳನದಲ್ಲಿ ಸ್ಮಾರ್ಟ್‌ ಫೋನ್‌ ಗಳ ಉತ್ಪಾದನೆಯ ಸುಳಿವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಮೂಲಕ ಗೂಗಲ್‌ ಭಾರತದಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡಲಿದೆ. ಭಾರತದಲ್ಲಿ ಪಿಕ್ಸೆಲ್‌ ಸ್ಮಾರ್ಟ್‌ ಫೋನ್‌ ಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಗೂಗಲ್‌ ಈ ಬೇಡಿಕೆಯನ್ನು ಪೂರೈಕೆ ಮಾಡಲಿದೆ ಎಂದು ಈ ತಿಂಗಳ ಆರಂಭದಲ್ಲಿ ತನ್ನ ಬ್ಲಾಗ್‌ ನಲ್ಲಿ ಬರೆದುಕೊಂಡಿತ್ತು. ಜಗತ್ತಿನ ದೈತ್ಯ ಕಂಪನಿಗಳೀಗೆ ಈಗಲೂ ಭಾರತವೇ ಪ್ರಮುಖ ಆಕರ್ಷಣೆ ಎನ್ನುವ ಮಾತುಗಳು ಐಟಿ ವಲಯದಲ್ಲಿವೆ.

(ವರದಿ: ಎಚ್.ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner