ಕನ್ನಡ ಸುದ್ದಿ  /  Karnataka  /  Bengaluru Bandh Protest Against Kannada Writers Kambara Chakravarty Sulibele Sl Bhyrappa Over Cauvery Water Issue Mgb

ಕಾವೇರಿ ವಿಚಾರದಲ್ಲಿ ದನಿ ಎತ್ತದ ಕಂಬಾರ, ಭೈರಪ್ಪ, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರತಿಭಟನೆ

Bengaluru Bandh: ಕಾವೇರಿ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದರೂ ಸಹ ಚಕಾರ ಎತ್ತದ ಸಾಹಿತಿಗಳ ಭಿತ್ತಿ ಪತ್ರ ಹಿಡಿದು ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದರು.

ಸಾಹಿತಿಗಳ ವಿರುದ್ಧ ಪ್ರತಿಭಟನೆ
ಸಾಹಿತಿಗಳ ವಿರುದ್ಧ ಪ್ರತಿಭಟನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಸಂಬಂಧ ಇಂದು ಬೆಂಗಳೂರು ಬಂದ್​ ಆಗಿದ್ದು, ಸೆ.29ಕ್ಕೆ ಕರ್ನಾಟಕ ಬಂದ್​ ಆಗುತ್ತಿದೆ. ಕಾವೇರಿ ನದಿ ನೀರಿನ ವಿವಾದ ತೀವ್ರಗೊಂಡಿದ್ದರೂ ಧ್ವನಿ ಎತ್ತದೇ ಮೌನವಾಗಿರುವ ಕವಿ, ಸಾಹಿತಿಗಳ ವಿರುದ್ಧ ರಾಷ್ಟ್ರೀಯ ಚಾಲಕರ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿದೆ.

ಕಾವೇರಿ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದರೂ ಸಹ ಚಕಾರ ಎತ್ತದ ಸಾಹಿತಿಗಳ ಭಿತ್ತಿ ಪತ್ರ ಹಿಡಿದು ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದರು.

ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಡಾ.ಎಸ್.ಎಲ್. ಭೈರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಎಚ್. ಎಸ್. ಶಿವಪ್ರಕಾಶ್, ದುಂಡಿರಾಜ್, ಅರಳು ಮಲ್ಲಿಗೆ ಪಾರ್ಥಸಾರಥಿ, ಬಿ.ಆರ್. ಲಕ್ಷಣ್ ರಾವ್, ಶತವಧಾನಿ ಗಣೇಶ್,‌ ಥಟ್ ಅಂತಾ ಹೇಳಿ ಡಾ. ನಾ ಸೋಮೇಶ್ವರ, ಹಂಪಾ ನಾಗರಾಜಯ್ಯ, ಡಾ.ಎಚ್.ಎಲ್. ಪುಷ್ಪ, ಆರ್.ಜಿ. ಹಳ್ಳಿ ನಾಗರಾಜ್ ಮತ್ತು ಉಗ್ರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮತ್ತಿತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‌

ಕಾವೇರಿ ವಿವಾದ - ಧ್ವನಿ ಎತ್ತದ ಕವಿಗಳು, ಎಲ್ಲಿದ್ದೀರಿ ಕವಿಪುಂಗವರೇ, ಕಾವೇರಿ ವಿವಾದ – ಪುಸ್ತಕದ ಬದನೆಕಾಯಿಯಲ್ಲ, ಎಲ್ಲಿ ಅಡಗಿದೆ ನಿಮ್ಮ ಧ್ವನಿ, ಕ್ರಾಂತಿ - ಕಿಚ್ಚು ಅಕ್ಷರದಲ್ಲಲ್ಲ. ಹೋರಾಟದಲ್ಲಿ, ಇನ್ನಾದರೂ ಧ್ವನಿ ಮೊಳಗಿಸಿ, ಎಲ್ಲಿ ಅಡವಿಟ್ಟಿದ್ದೀರಿ ನಿಮ್ಮ ಧ್ವನಿಯನ್ನು, ಬನ್ನಿ, ಹೋರಾಟದ ಸಾಗರದಲ್ಲಿ ಸೇರಿ, ಹೋರಾಟಕ್ಕೆ ತಾಂಬೂಲ ಕೊಟ್ಟು ಕರೆಯಬೇಕೆ?, ಕಾವೇರಿ ತಾಯಿ ಬಗ್ಗೆ ಹುಸಿ ಪ್ರೀತಿ ತೋರಬೇಡಿ, ಕರುನಾಡಿಗೆ ಎಂತಹ ದೌರ್ಭಾಗ್ಯ ಬಂತಪ್ಪ, ನೀವು ನಿಜಕ್ಕೂ ಕನ್ನಡದ ಮಕ್ಕಳೇ?. ಏಕೋ ಅನುಮಾನ ಎಂಬ ಫಲಕ ಹಿಡಿದು ಸಾಹಿತಿಗಳ ವಿರುದ್ಧ ಘೋಷಣೆ ಕೂಗಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗಂಡಸಿ ಸದಾನಂದ ಸ್ವಾಮಿ, ಸಾಹಿತಿಗಳ ಬಗ್ಗೆ ನಮಗೆ ಗೌರವವಿದೆ. ಆದರೆ ಹೋರಾಟಕ್ಕೆ ಮಾರ್ಗದರ್ಶನ ಮಾಡಬೇಕಾದ, ನಾಡಿನ ನೆಲೆ, ಜಲ ವಿಚಾರಕ್ಕೆ ಧಕ್ಕೆ ಬಂದಾಗಲೂ ಸಹ ಧ್ವನಿ ಎತ್ತದ ಧೋರಣಿ ಬಗ್ಗೆ ತೀವ್ರ ಅಸಮಾಧಾನವಿದೆ. ಸಾಹಿತಿಗಳು ಇನ್ನಾದರೂ ಹೋರಾಟಕ್ಕಿಳಿಯಬೇಕು ಎಂದು ಮನವಿ ಮಾಡಿದರು.