Bengaluru News: ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ರಾತ್ರಿ ಸಂಚಾರಕ್ಕೆ ನಿರ್ಬಂಧ; ಎಲ್ಲ ವಾಹನಗಳಿಗೆ ವೇಗ ಮಿತಿ ಜಾರಿ
ನೈಸ್ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಅಪಘಾತಗಳಿಗೆ ಅತಿವೇಗವೇ ಕಾರಣ ಎಂಬುದನ್ನು ಗುರುತಿಸಿದ ನಂತರ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. (ವರದಿ: ಮಾರುತಿ ಎಚ್.)
ಬೆಂಗಳೂರು: ನೈಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಪೊಲೀಸರು ನಿಷೇಧ ವಿಧಿಸಿದ್ದಾರೆ. ಇತರ ವಾಹನಗಳ ವೇಗಕ್ಕೂ ಮಿತಿ ವಿಧಿಸಲಾಗಿದೆ. ನೈಸ್ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಅಪಘಾತಗಳಿಗೆ ಅತಿವೇಗವೇ ಕಾರಣ ಎಂಬುದನ್ನು ಗುರುತಿಸಿದ ನಂತರ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹಗಲಿನಲ್ಲಿಯೂ ದ್ವಿಚಕ್ರ ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 80 ಕಿಮೀಗೆ ಸೀಮಿತಗೊಳಿಸಲಾಗಿದೆ. ದ್ವಿಚಕ್ರ ವಾಹನಗಳ ಸಂಚಾರವನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗ ನಿಷೇಧಿಸಲಾಗಿದೆ.
ಗೂಡ್ಸ್ ವಾಹನ ಅಂದರೆ ಸರಕು ವಾಹನಗಳಿಗೆ ವೇಗದ ಮಿತಿಯನ್ನು ಗಂಟೆಗೆ 80 ಕಿಮೀ ಮಿತಗೊಳಿಸಲಾಗಿದೆ. 9 ಅಥವಾ ಅದಕ್ಕಿಂತ ಹೆಚ್ಚಿನ ಆಸನಗಳುಳ್ಳ ವಾಹನಗಳ (ಎಂ2 ಮತ್ತು ಎಂ3 ವೇಗದ ವಾಹನಗಳು) ವೇಗದ ಮಿತಿಯನ್ನು ಗಂಟೆಗೆ 100 ಕಿಮೀಗೆ ಮಿತಿಗೊಳಿಸಲಾಗಿದೆ. 8 ಅಥವಾ ಅದಕ್ಕಿಂತ ಕಡಿಮೆ ಸೀಟುಗಳುಳ್ಳ ವಾಹನಗಳ (ಎಂ1 ವರ್ಗದ ವಾಹನಗಳು) ವೇಗದ ಮಿತಿಯನ್ನು ಗಂಟೆಗೆ 120 ಕಿಮೀಗೆ ಮಿತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿಗೆ ಭಾರೀ ವಾಹನ ಪ್ರವೇಶ: ಸಮಯ ಬದಲಾವಣೆ
ಈ ಆದೇಶ ಶುಕ್ರವಾರದಿಂದಲೇ ಜಾರಿಗೆ ಬಂದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ನೈಸ್ ರಸ್ತೆಯಲ್ಲಿ ಉಂಟಾಗುತ್ತಿರುವ ಅಪಘಾತಗಳಿಗೆ ವಾಹನ ಸವಾರರು ಮತ್ತು ಚಾಲಕರ ನಿರ್ಲಕ್ಷ್ಯ, ಅತಿ ವೇಗ, ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣ ಎಂದೂ ಪೊಲೀಸರು ಹೇಳಿದ್ದಾರೆ. ಬೆಂಗಳೂರು ನಗರಕ್ಕೆ ಭಾರಿ ವಾಹನ ಪ್ರವೇಶ ನಿಷೇಧ ಬೆಂಗಳೂರು ನಗರ ವ್ಯಾಪ್ತಿಯ ಒಳಭಾಗದಲ್ಲಿ ಭಾರೀ ವಾಹನ ಸಂಚಾರದ ಸಮಯವನ್ನು ಪೊಲೀಸರು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಭಾರೀ ವಾಹನಗಳ ಸಂಚಾರವನ್ನು ಶನಿವಾರಗಳಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ಮತ್ತು ಸಂಜೆ 4.30ರಿಂದ ರಾತ್ರಿ 9 ಗಂಟೆಯವರೆಗೆ ನಿರ್ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ವಾರದ ಉಳಿದ 6 ದಿನ, ಅಂದರೆ ಭಾನುವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7ರಿಂದ 11, ಸಂಜೆ 4ರಿಂದ ರಾತ್ರಿ 10 ರವರೆಗೆ ಈ ಹಿಂದಿನಂತೆಯೇ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಳಿ ಮೇಲೆ ಬಿದ್ದ ಬಾಲಕನ ರಕ್ಷಿಸಿದ ಮೆಟ್ರೋ ಸಿಬ್ಬಂದಿ
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದು, ಕೂಡಲೇ ಮೆಟ್ರೋ ಸಿಬ್ಬಂದಿ ಆ ಮಗುವನ್ನು ರಕ್ಷಿಸಿದ್ದಾರೆ. ಪೋಷಕರೊಂದಿಗೆ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಾಗ ಮೆಟ್ರೋ ಸಿಬ್ಬಂದಿ ಕೂಡಲೇ ತುರ್ತು ರೈಲು ನಿಲುಗಡೆ ಮಾಡಿದ್ದಾರೆ. ನಂತರ ಮಗುವನ್ನು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಭಾಲಕನ ಕಿವಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.