ಫ್ಲ್ಯಾಟ್ನಲ್ಲಿ ಮಲ ವಿಸರ್ಜನೆ ಮಾಡಿತ್ತೆಂದು ಸಾಕು ಬೆಕ್ಕಿನ ಮೇಲೆ ತೀವ್ರ ಹಲ್ಲೆಗೈದವನ ಬಂಧಿಸಿದ ಪೊಲೀಸರು
Pet Cat: ಬೆಂಗಳೂರಿನ ಫ್ಲ್ಯಾಟ್ವೊಂದರಲ್ಲಿ ಬೆಕ್ಕು ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ಹಲ್ಲೆಗೈದ ಕಾರಣಕ್ಕೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು: ಬಿಟಿಎಂ ಲೇಔಟ್ ಫ್ಲ್ಯಾಟ್ನಲ್ಲಿ ತನ್ನ ಕೋಣೆಯಲ್ಲಿ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ಸಾಕು ಬೆಕ್ಕಿನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಕ್ಕಿನ ಮಾಲೀಕರು ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಮನೀಶ್ ರತ್ನಾಕರ್ ಬಂಧನಕ್ಕೆ ಒಳಗಾದ ವ್ಯಕ್ತಿ. ಮೊಹಮ್ಮದ್ ಅಫ್ತಾಬ್ ಬೆಕ್ಕು ಮಾಲೀಕ ಮತ್ತು ದೂರು ಕೊಟ್ಟವರು. ರತ್ನಾಕರ್ ಅವರು ತನ್ನ 25 ವರ್ಷದ ಅಫ್ತಾಬ್ ಜೊತೆ ಫ್ಲ್ಯಾಟ್ ಹಂಚಿಕೊಂಡಿದ್ದ. ಅಫ್ತಾಬ್ ತನ್ನ ಬೆಕ್ಕು ಸಾಕುತ್ತಿದ್ದ. ಬೆಕ್ಕಿನ ವಿಚಾರಕ್ಕೆ ಆಗಾಗ್ಗೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿತ್ತು. ರೂಮ್ ಮೇಟ್ ಮೊಹಮ್ಮದ್ ಅಫ್ತಾಬ್ ಜತೆ ಫ್ಲಾಟ್ ಹಂಚಿಕೊಂಡಿದ್ದ.
ಬೆಕ್ಕಿನ ಮೇಲೆ ಹಲ್ಲೆ, ರಕ್ತಸ್ರಾವ
ಆದರೆ, ಅಫ್ತಾಬ್ ಹೊರಹೋಗಿದ್ದಾಗ ರತ್ನಾಕರ್ ಕೋಣೆಯಲ್ಲಿ ಬೆಕ್ಕು ಮಲವಿಸರ್ಜನೆ ಮಾಡಿತ್ತು. ಆಗ ರತ್ನಾಕರ್, ಅಫ್ತಾಬ್ಗೆ ಕರೆ ಮಾಡಿ ಬೈದಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಬೆಕ್ಕನ್ನು ಫ್ಲಾಟ್ನಿಂದ ಓಡಿಸುವಂತೆ ಕೇಳಿದ್ದ. ಅಫ್ತಾಬ್ ಮನೆಗೆ ಮರುಳಿದ ಬಳಿಕ ಬೆಕ್ಕು ಎಲ್ಲಿದೆ ಎಂದು ಕೇಳಿದ್ದಾನೆ. ಆದರೆ ರತ್ನಾಕರ್ ನನಗೆ ಗೊತ್ತಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದಾನೆ.
ಎಲ್ಲೆಡೆ ಹುಡುಕಾಟ ನಡೆಸಿದ ಅಫ್ತಾಬ್ ಟೆರೇಸ್ ಮೇಲೆ ಹೋಗಿ ನೋಡಿದಾಗ ಟೆರೇಸ್ನಲ್ಲಿ ಬಕೆಟ್ನಲ್ಲಿ ಅಡಗಿಸಿಡಲಾಗಿತ್ತು. ಆದರೆ ಬೆಕ್ಕು ಗಾಯಗೊಂಡು ರಕ್ತಸ್ರಾವವಾಗುತ್ತಿತ್ತು. ಮಲ ವಿಸರ್ಜನೆ ಮಾಡಿದ್ದ ಕಾರಣ ರತ್ನಾಕರ್ ಬೆಕ್ಕಿನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದರು. ಬಳಿಕ ರತ್ನಾಕರ್ ಕೋಪದಿಂದ ಬೆಕ್ಕನ್ನು ಕೋಪದಿಂದ ಒದಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ತನ್ನ ಬೆಕ್ಕಿಗೆ ಹಲ್ಲೆ ಮಾಡಿದ್ದಕ್ಕೆ ಕುಪಿತಗೊಂಡ ಅಫ್ತಾಬ್ ಅವರು ವೈದ್ಯಕೀಯ ಚಿಕಿತ್ಸೆ ಕೊಡಿಸಿ ನಂತರ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ರತ್ನಾಕರ್ನನ್ನು ಬಿಟಿಎಂ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
'ಸಾಕುಪ್ರಾಣಿ ಮಾಲೀಕರಿಗೆ ದಂಡ ವಿಧಿಸಿ...'
ಸಾರ್ವಜನಿಕ ಉದ್ಯಾನವನಗಳಲ್ಲಿ ತಮ್ಮ ಸಾಕು ಪ್ರಾಣಿಗಳ ಮಲ ವಿಸರ್ಜನೆ ಮಾಡಿದ ಬಳಿಕ ಸ್ವಚ್ಛಗೊಳಿಸಲು ವಿಫಲವಾದರೆ ಸಾಕು ಪ್ರಾಣಿ ಮಾಲೀಕರಿಗೆ ದಂಡ ವಿಧಿಸುವಂತೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ (CUPA) ಎಂಬ ಎನ್ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ವಹಿಸುತ್ತಿರುವ 1,288 ಉದ್ಯಾನವನಗಳಲ್ಲಿ ಕೆಲವು ಸಾಕು ಪ್ರಾಣಿ ಮಾಲೀಕರ ಬೇಜವಾಬ್ದಾರಿ ನಡವಳಿಕೆ ಬಗ್ಗೆ, ವಿಶೇಷವಾಗಿ ತಮ್ಮ ಸಾಕುಪ್ರಾಣಿಗಳ ಮಲವನ್ನು ಸ್ವಚ್ಛಗೊಳಿಸದಿರುವ ಬಗ್ಗೆ ಹಲವಾರು ಸಾರ್ವಜನಿಕ ದೂರುಗಳು ದಾಖಲಾಗಿವೆ ಎಂದು ನ್ಯಾಯಪೀಠ ಗಮನಿಸಿದೆ. ಸಾರ್ವಜನಿಕ ಸ್ಥಳಗಳ ಶುಚಿತ್ವ ಕಾಪಾಡಿಕೊಳ್ಳುವ ಅಗತ್ಯ ಇದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.