Kodagu Rain Updates: ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
Kodagu Rain Updates: ಕೊಡಗು ಜಿಲ್ಲೆಯಲ್ಲಿ ಮಂಗಳವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ಕಾರಣದಿಂದಾಗಿ ಪದವಿಪೂರ್ವವರೆಗಿನ ಎಲ್ಲಾ ಶಾಲಾ, ಕಾಲೇಜುಗಳಿಗೆ ಡಿಸೆಂಬರ್ 3ರ ಮಂಗಳವಾರದಂದು ರಜೆ ಘೋಷಿಸಲಾಗಿದೆ.
Kodagu Rain Updates: ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಎರಡು ದಿನದಿಂದಲೂ ಮಳೆಯಾಗುತ್ತಿದೆ. ಸೋಮವಾರವೂ ಮಳೆ ಮುಂದುವರಿದಿದೆ. ಮಂಗಳವಾರವೂ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ. ಅದರಲ್ಲೂ ಸೋಮವಾರದಿಂದ ಮಂಗಳವಾರ ಬೆಳಿಗ್ಗೆವರೆಗೂ ರೆಡ್ ಅಲರ್ಟ್ ಅನ್ನೂ ಕೂಡ ನೀಡಲಾಗಿದೆ. ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯಿಂದ ಕೊಡಗು ಜಿಲ್ಲಾಡಳಿತವು 2024ರ ಡಿಸೆಂಬರ್ 3ರ ಮಂಗಳವಾರದಂದು ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಂಗಳವಾರ ರಜೆ ನೀಡಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಎಂದಿನಂತೆ ನಡೆಯಲಿವೆ ಎಂದು ಪ್ರಭಾರ ಜಿಲ್ಲಾಧಿಕಾರಿ ಆನಂದ್ ಪ್ರಕಾಶ್ ಮೀನಾ ತಿಳಿಸಿದ್ದಾರೆ.
ಈ ನಡುವೆ ಮಂಗಳವಾರವೂ ಮಳೆ ಅಬ್ಬರ ಜೋರಾಗಿಯೇ ಇರಲಿದೆ. ಅದರಲ್ಲೂ ಕೊಡಗಿನಲ್ಲಿ ಅತೀ ಭಾರೀ ಮಳೆಯಾಗುವ ಮುನ್ಸೂಚನೆಯೂ ಇದೆ.
ಈಗಾಗಲೇ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವೂ ಕೊಡಗಿನಲ್ಲಿ ಭಾರೀ ಮಳೆಯಾಗಬಹುದಾದ ರೆಡ್ ಅಲರ್ಟ್ ಅನ್ನು ಘೋಷಣೇ ಮಾಡಿದೆ.
ಈ ಕಾರಣದಿಂದ ಕೊಡಗು ಜಿಲ್ಲಾಡಳಿತವು ಶಾಲಾ ಕಾಲೇಜುಗಳಿಗೆ ಮಂಗಳವಾರವೂ ರಜೆ ನೀಡಿದೆ. ಸೋಮವಾರವು ಶಾಲಾ ಕಾಲೇಜುಗಳಿಗೆ ಕೊಡಗಲ್ಲಿ ರಜೆ ನೀಡಲಾಗಿತ್ತು.
ಭಾರಿ ಮಳೆಯ ಮುನ್ಸೂಚನೆ; ಎಚ್ಚರವಹಿಸಲು ತಹಶೀಲ್ದಾರ್ ಸೂಚನೆ
ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆ ಜನ, ಜಾನುವಾರು ಜಾಗೃತೆಗೆ ಎಚ್ಚರವಹಿಸುವಂತೆ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಅವರು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ವರದಿಯಂತೆ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯಾದ್ಯಂತ ರೆಡ್ಡ್ ಅಲರ್ಟ್ ಘೋಷಿಸಲಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ,ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದಿದ್ದಾರೆ.
ಸೋಮವಾರಪೇಟೆ ತಾಲೂಕಿನ ಬಹುತೇಕ ಕುಗ್ರಾಮಗಳಾಗಿದ್ದು ರೈತಾಪಿ ವರ್ಗದವರು ತಮ್ಮ ಜಾನು ವಾರುಗಳೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಅವುಗಳ ರಕ್ಷಣೆಯೂ ಮುಖ್ಯವಾಗಿರುತ್ತದೆ ಆದ್ದರಿಂದ ಎಲ್ಲಾ ಜನತೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ಚಾಮರಾಜನಗರದಲ್ಲೂ ರಜೆ
ಫೆಂಗಲ್ ಚಂಡಮಾರುತದ ಪರಿಣಾಮ ಮಳೆ ಮುಂದುವರೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಡಿಸೆಂಬರ್ 3 ರ ಮಂಗಳವಾರವು ಸಹ ರಜೆ ಘೋಷಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಪರೀಕ್ಷೆ ನಡೆಯುತ್ತಿರುವ ಪದವಿ ಕಾಲೇಜುಗಳಿಗೆ ಹೊರತುಪಡಿಸಿ ರಜೆ ಘೋಷಣೆ ಮಾಡಲಾಗಿದೆ. ಸೋಮವಾರವೂ ಚಾಮರಾಜನಗರ ಜಿಲ್ಲೆಯಲ್ಲಿ ರಜೆ ಇತ್ತು