ಬೆಂಗಳೂರು ಈಗ ಉದ್ಯಾನ ನಗರಿಯಲ್ಲ; ಬಹುತೇಕ ಕಾಂಕ್ರೀಟ್ ಕಾಡು, ಐಐಎಸ್‌ಸಿ ಬೆಂಗಳೂರು ಅಧ್ಯಯನ ವರದಿ, ನೀರಿನ ಸಮಸ್ಯೆಗೆ ಇನ್ನೊಂದು ಕಾರಣ-bengaluru news 93 pc of bengaluru is concrete jungle says iisc study garden city no more bengaluru water crisis uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಈಗ ಉದ್ಯಾನ ನಗರಿಯಲ್ಲ; ಬಹುತೇಕ ಕಾಂಕ್ರೀಟ್ ಕಾಡು, ಐಐಎಸ್‌ಸಿ ಬೆಂಗಳೂರು ಅಧ್ಯಯನ ವರದಿ, ನೀರಿನ ಸಮಸ್ಯೆಗೆ ಇನ್ನೊಂದು ಕಾರಣ

ಬೆಂಗಳೂರು ಈಗ ಉದ್ಯಾನ ನಗರಿಯಲ್ಲ; ಬಹುತೇಕ ಕಾಂಕ್ರೀಟ್ ಕಾಡು, ಐಐಎಸ್‌ಸಿ ಬೆಂಗಳೂರು ಅಧ್ಯಯನ ವರದಿ, ನೀರಿನ ಸಮಸ್ಯೆಗೆ ಇನ್ನೊಂದು ಕಾರಣ

ಬೆಂಗಳೂರಿನ ನೀರಿನ ಸಮಸ್ಯೆಗೆ ಮೂಲ ಕಾರಣದ ಹುಡುಕಾಟದ ನಡುವೆ ಬೆಂಗಳೂರು ಈಗ ಉದ್ಯಾನ ನಗರಿಯಲ್ಲ ಎಂಬ ಅಂಶ ಗಮನಸೆಳೆದಿದೆ. ಮಹಾನಗರ ಬಹುತೇಕ ಕಾಂಕ್ರೀಟ್ ಕಾಡು ಆಗಿದ್ದು, ನೀರು ಹರಡುವಿಕೆ ಪ್ರದೇಶ ಕುಸಿದಿದೆ ಎನ್ನುತ್ತಿದೆ ಐಐಎಸ್‌ಸಿ ಬೆಂಗಳೂರು ಅಧ್ಯಯನ ವರದಿ. ಇದರ ವಿವರ ಇಲ್ಲಿದೆ.

ಬೆಂಗಳೂರು ಕೆರೆ (ಸಾಂದರ್ಭಿಕ ಚಿತ್ರ)
ಬೆಂಗಳೂರು ಕೆರೆ (ಸಾಂದರ್ಭಿಕ ಚಿತ್ರ) (https://site.bbmp.gov.in/departmentwebsites/Lakes/)

ಬೆಂಗಳೂರು: ಉದ್ಯಾನ ನಗರಿ ಎಂದೆನಿಸಿಕೊಂಡಿದ್ದ ಕರ್ನಾಟಕ ರಾಜಧಾನಿ ಬೆಂಗಳೂರು ಕಳೆದ ಕೆಲವು ದಶಕಗಳಲ್ಲಿ ಬಹಳ‍ಷ್ಟು ಬದಲಾಗಿದೆ. ಮರಗಿಡಗಳು ಕಣ್ಮರೆಯಾಗಿ ಬೃಹತ್ ಕಟ್ಟಡಗಳಿಂದ ಕೂಡಿದ ಕಾಂಕ್ರೀಟ್ ಕಾಡು (Concrete Jungle) ಆಗಿ ಬದಲಾಗಿದೆ. ಮಹಾನಗರದ ವ್ಯಾಪ್ತಿ ವಿಸ್ತರಣೆಯಾಗಿದೆ. ಈ ಎಲ್ಲ ವಿದ್ಯಮಾನಗಳೂ ಗೊತ್ತಿರುವಂಥವೇ. ಆದರೆ, ಅದರ ಪರಿಣಾಮ ಈಗೀಗ ಅನುಭವಕ್ಕೆ ಬರುತ್ತಿದೆ. ಬೆಂಗಳೂರು ಸದ್ಯ ನೀರಿನ ಸಮಸ್ಯೆ (Bengaluru Water Crisis) ಎದುರಿಸುತ್ತಿದ್ದು, ಒಂದೊಂದೇ ಅಧ್ಯಯನ ವರದಿಗಳು ಗಮನಸೆಳೆಯತೊಡಗಿವೆ. ಬೆಂಗಳೂರಿನ ಐಐಎಸ್‌ಸಿ ನೀಡಿರುವ ವರದಿಯಲ್ಲಿ ಬೆಂಗಳೂರು ಬದಲಾದ ಬಗೆಯನ್ನು ವಿವರಿಸಲಾಗಿದೆ.

ಬೆಂಗಳೂರಿನಲ್ಲಿ ಕಳೆದ 50 ವರ್ಷಗಳ ಅವಧಿಯಲ್ಲಿ ಶೇಕಡ 1055ರಷ್ಟು ಕಾಂಕ್ರೀಟ್‌ ಕಟ್ಟಡಗಳು ಏರಿಕೆಯಾಗಿವೆ. ನೀರಿನ ಹರಡುವಿಕೆಯ ಪ್ರದೇಶ ಶೇಕಡ 79 ಕುಸಿತವಾಗಿದೆ. ಉಸಿರಾಟದ ಇಂಗಾಲದ ಪ್ರತ್ಯೇಕತೆಯ ಮೇಲೆ ಪರಿಣಾಮ ಬೀರುವ ಸಸ್ಯವರ್ಗದ ಶೇಕಡಾ 88 ನಷ್ಟವಾಗಿದೆ ಎಂಬುದರ ಕಡೆಗೆ ಅಧ್ಯಯನ ವರದಿ ಗಮನಸೆಳೆದಿದೆ. ಅಷ್ಟೇ ಅಲ್ಲ, ಬೆಂಗಳೂರು ನಗರ ಮತ್ತು ಸುತ್ತಲಿನ ಕೆರೆಗಳನ್ನು ಸಂರಕ್ಷಿಸಿ, ವನಸಿರಿಯನ್ನು ಮರುಸ್ಥಾಪಿಸದೇ ಇದ್ದರೆ, ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಜಲ ಕ್ಷಾಮ ಇನ್ನಷ್ಟು ಕಾಡಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ವರದಿ ಎಚ್ಚರಿಸಿದೆ.

ನೀರಿನ ಹರಡುವಿಕೆ ಪ್ರದೇಶ 696 ಹೆಕ್ಟೇರ್‌ಗೆ ಇಳಿಕೆ

ಬೆಂಗಳೂರಿನಲ್ಲಿ ನೀರಿನ ಹರಡುವಿಕೆ ಪ್ರದೇಶವು 1973 ರಲ್ಲಿ 2,324 ಹೆಕ್ಟೇರ್‌ ಇದ್ದದ್ದು 2023 ರಲ್ಲಿ ಕೇವಲ 696 ಹೆಕ್ಟೇರ್‌ಗಳಿಗೆ ಕುಸಿದಿದೆ. ಬೆಂಗಳೂರಿನಾದ್ಯಂತ ಕ್ಷೀಣಿಸುತ್ತಿರುವ ಅಂತರ್ಜಲ ಮಟ್ಟಕ್ಕೆ ಇದು ಮೂಲ ಕಾರಣ ಎಂದು ಹೇಳಲಾಗುತ್ತದೆ. ಕಳೆದ 50 ವರ್ಷಗಳಲ್ಲಿ, ಅಜಾಗರೂಕ ಕಾಂಕ್ರೀಟೀಕರಣದಿಂದಾಗಿ, ನೀರಿನ ಮೇಲ್ಮೈ ಗಣನೀಯವಾಗಿ ಕುಗ್ಗಿದೆ.

ಉಳಿದ ಜಲಮೂಲಗಳಲ್ಲಿ, 98 ಪ್ರತಿಶತ ಕೆರೆಗಳು ಅತಿಕ್ರಮಣಗೊಂಡಿವೆ ಮತ್ತು ಅವುಗಳಲ್ಲಿ 90 ಪ್ರತಿಶತವು ಸಂಸ್ಕರಿಸದ ಒಳಚರಂಡಿ ಅಥವಾ ಕೈಗಾರಿಕಾ ತ್ಯಾಜ್ಯದಿಂದ ತುಂಬಿವೆ. ಸ್ವಾಭಾವಿಕವಾಗಿ, ಇದು ಅಂತರ್ಜಲದ ಮೇಜಿನ ಮರುಪೂರಣದ ಮೇಲೂ ಪರಿಣಾಮ ಬೀರಿದೆ ಎಂದು ಐಐಎಸ್ಸಿಯ ಪರಿಸರ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ. ಟಿ.ವಿ.ರಾಮಚಂದ್ರನ್ ಹೇಳಿದ್ಧಾಗಿ ಟೈಮ್ಸ್ ಆಫ್ ಇಂಡಿಯಾ/ಕನ್ನಡ ಪ್ರಭ ವರದಿಗಳು ಹೇಳಿವೆ.

ಮೂಲಸಮಸ್ಯೆ ಇರುವುದೇ ಇಲ್ಲಿ, ವನಸಿರಿ ನಾಶ, ಅಂತರ್ಜಲ ಕುಸಿತ

ಬೆಂಗಳೂರಿಗೆ ಬೇಕಾಗುವ ನೀರಿನಲ್ಲಿ ಶೇಕಡ 45 ಅಂತರ್ಜಲದಿಂದಲೇ ಲಭ್ಯವಾಗುತ್ತದೆ. ಇದಕ್ಕೆ ಭೂಮಿಯ ಮೇಲ್ಮೈ ಮಣ್ಣು, ಗಿಡ-ಮರ ಸಹಿತ ಪರಿಸರ ಸ್ಪಂಜಿನಂತೆ ಇರಬೇಕು. ಸ್ಥಳೀಯ ಪ್ರಬೇಧದ ಸಸ್ಯಗಳ ಸಹಿತ ವನಸಿರಿಯ ಹೊದಿಕೆ ಇರಬೇಕು. 1970 ರಲ್ಲಿ ನಗರದಲ್ಲಿ ಶೇ.78 ರಷ್ಟು ಹಸಿರು ಪ್ರದೇಶ ಅಥವಾ ವನಸಿರಿ ಇತ್ತು. ಇಂದು ಈ ವನಸಿರಿ ಪ್ರದೇಶದ ಪ್ರಮಾಣ ಶೇಕಡ 8ಕ್ಕೆ ಕುಸಿದಿದೆ. ಇದು ಈ ಮಹಾನಗರಕ್ಕೆ ಬೇಕಾದ ಅಂತರ್ಜಲ ಮರುಪೂರಣಕ್ಕೆ ಸಾಕಾಗುವುದಿಲ್ಲ. ಉಸಿರಾಟದ ಇಂಗಾಲವನ್ನು ಆಮ್ಲಜನಕವಾಗಿ ಪರಿವರ್ತಿಸಲೂ ಸಾಲದು.

ಮತ್ತೊಂದೆಡೆ ಶೇ.86 ನಗರ ಪ್ರದೇಶದಲ್ಲಿ ಕಟ್ಟಡಗಳೇ ತುಂಬಿಕೊಂಡಿವೆ. ಬಿದ್ದ ಮಳೆ ನೀರು ರಾಜಾಕಾಲುವೆ ಮೂಲಕ ಹರಿದು ಹೋಗುತ್ತದೆ. ಸಾರಕ್ಕಿ ಕೆರೆ, ಜಕ್ಕೂರು ಕೆರೆ, ಸ್ಯಾಂಕಿ ಕೆರೆ ಸೇರಿ ಕೆಲವು ಕೆರೆಗಳ ಸುತ್ತಲಿನ ಪ್ರದೇಶಗಳಲ್ಲಿನ ಕೊಳವೆಬಾವಿಗಳಲ್ಲಿ ನೀರು ಬತ್ತಿಲ್ಲ. ಏಕೆಂದರೆ, ಇಂತಹ ಕೆಲವೇ ಕೆಲವು ಕೆರೆಗಳಿಗೆ ನೀರು ಸರಾಗವಾಗಿ ಹರಿದು ಬರಲು ವ್ಯವಸ್ಥೆ ಇದೆ.

ಜಕ್ಕೂರು ಕೆರೆಗೆ ಚೌಗು ಪ್ರದೇಶ ನಿರ್ಮಿಸಲಾಗಿದ್ದು, ಶುದ್ದೀಕರಣ ಘಟಕ ಇದೆ. ಹೀಗಾಗಿ, ಈ ಪ್ರದೇಶದ ಸುತ್ತ ನೀರಿಗೆ ಸಮಸ್ಯೆಯಾಗಿಲ್ಲ, ಸಾರಕ್ಕಿ ಕೆರೆಗೂ ಇದೇ ಮಾದರಿಯನ್ನು ಅನುಸರಿಸಲಾಗಿದೆ. ಬಳಸಿದ ನೀರನ್ನು ಶುದ್ದೀಕರಿಸಿ ಕೆರೆಗೆ ಬಿಡುವುದು ಮತ್ತು ಚೌಗು ಪ್ರದೇಶ ನಿರ್ಮಾಣ ನೀರಿನ ಸಮಸ್ಯೆಗೆ ಬಹುದೊಡ್ಡ ಪರಿಹಾರ ಒದಗಿಸುತ್ತದೆ ಎಂಬುದರ ಕಡೆಗೆ ವರದಿ ಬೆಳಕು ಚೆಲ್ಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)