Bengaluru Crime: ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿದ ಮೂವರನ್ನು ಬಂಧಿಸಿದ ಬೆಂಗಳೂರು ಪೊಲೀಸರು
ಬೆಂಗಳೂರಿನಲ್ಲಿ ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ವ್ಯಕ್ತಿಗಳನ್ನು ಅಪಹರಿಸುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರು ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿದ್ದರು. (ವರದಿ- ಎಚ್. ಮಾರುತಿ)
ಬೆಂಗಳೂರು: ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮಸಂದ್ರ ಗಾಯತ್ರಿ ಲೇಔಟ್‌ನ 25 ವರ್ಷದ ಸಂಜಯ್, ಮಂಗನಹಳ್ಳಿಯ ಆನಂದ ಮತ್ತು ನಾಗದೇವಹಳ್ಳಿ ನಿವಾಸಿ ಹನುಮಂತು ಬಂಧಿತ ಆರೋಪಿಗಳು.
ಈ ಆರೋಪಿಗಳು ಕಿಶನ್ ಕುಮಾರ್ ಎಂಬ ಯುವಕನನ್ನು ಅಪಹರಿಸಿ, ಹಣ ಸುಲಿಗೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ವಾಪಸ್ ಕಳುಹಿಸಿದ್ದರು. ಮೊದಲ ಪ್ರಯತ್ನ ವಿಫಲವಾದ ನಂತರ ಗುರುಸಿದ್ದಪ್ಪ ಎಂಬುವವರನ್ನು ಅಪಹರಿಸಿ, ಜೀವಂತವಾಗಿ ಬಿಟ್ಟರೆ ತೊಂದರೆ ಮಾಡಬಹುದು ಎಂಬ ಭಯದಿಂದ ರಾಮನಗರ ಜಿಲ್ಲೆ ಕೂಟಗಲ್ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕೊಲೆ ಮಾಡಿದ್ದರು. ಈಗ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿಗೆ 15 ವರ್ಷಗಳ ಹಿಂದೆ ಬಂದಿದ್ದ ಸಂಜಯ್, ಮಂಗನಗಳ್ಳಿಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆನಂದ್ ತರಕಾರಿ ಡೆಲಿವರಿ ಕೆಲಸ ಮಾಡುತ್ತಿದ್ದ. ಈತ ಹಲವು ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ರಾಯಚೂರು ಮೂಲದ ಹನುಮಂತ ನಾಗದೇವಹಳ್ಳಿಯಲ್ಲಿ ನೆಲೆಸಿದ್ದ. ಗಾಂಜಾ ವ್ಯಸನಿಗಳಾಗಿದ್ದ ಈ ಮೂವರು ಹಣಕ್ಕಾಗಿ ವ್ಯಕ್ತಿಗಳನ್ನು ಹುಡುಕಿ ಅಪಹರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಸಂಜಯ್‌ಕುಮಾರ್ ಪಂಡಿತ್ ಅವರಿಗೆ ಈ ಆರೋಪಿಗಳು ಕರೆ ಮಾಡಿ ಬಡಗಿ ಕೆಲಸವಿದ್ದು ಮಾತನಾಡಬೇಕು ಎಂದು ಹೇಳಿರುತ್ತಾರೆ.
ನಾನು ಕುಂದಾಪುರಕ್ಕೆ ತೆರಳಿದ್ದು ಸಹದ್ಯೋಗಿ ಕಿಶನ್‌ಕುಮಾರ್‌ನನ್ನು ಕಳುಹಿಸುವುದಾಗಿ ಪಂಡಿತ್ ತಿಳಿಸಿದ್ದ. ಆರೋಪಿಗಳು ಹೇಳಿದ್ದ ಕೃಷ್ಣ ಅರಮನೆ ಹೋಟೆಲ್‌ಗೆ ಕಿಶನ್ ಹೋಗಿದ್ದ. ಅಲ್ಲಿಗೆ ಬಂದಿದ್ದ ಮೂವರು ಆರೋಪಿಗಳು ಕಿಶನ್‌ನನ್ನು ಅಪಹರಿಸಿದ್ದರು. 10,000 ರೂಪಾಯಿ ನೀಡಿದರೆ ವಾಪಸ್ ಕಳುಹಿಸುವುದಾಗಿ ಕಿಶನ್‌ನನ್ನು ಬೆದರಿಸಿರುತ್ತಾರೆ.
ನನ್ನ ಬಳಿ ಹಣವಿಲ್ಲ ಎಂದು ಕಿಶನ್ ಹೇಳಿದಾಗ, ಸಂಜಯ್‌ಕುಮಾರ್ ಪಂಡಿತ್‌ನಿಂದ 1 ಲಕ್ಷ ರೂಪಾಯಿ ಕೊಡಿಸುವಂತೆ ಒತ್ತಾಯಿಸಿದ್ದರು. ನಂತರ ಕುಂದಾಪುರಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಿದ್ದರು. ಆದರೆ ಸಾಧ್ಯವಾಗಿರಲಿಲ್ಲ.
ಸ್ಥಳೀಯರಿಂದ ರಕ್ಷಣೆ: ಕಾರಿನಲ್ಲಿ ತೆರಳುತ್ತಿದ್ದಾ ಕಿಶನ್ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಪಟ್ಟು ಬಿಡದ ಕಿಶನ್ ಜೋರಾಗಿ ಕಿರುಚಿಕೊಂಡಾಗ ಕಾರಿನಿಂದ ಇಳಿಸಿ ಪರಾರಿಯಾಗಿದ್ದರು. ಸ್ಥಳೀಯರ ಸಹಾಯದಿಂದ ಕಿಶನ್ ಬೆಂಗಳೂರಿಗೆ ಮರಳಿದ್ದರು. ಬೆಂಗಳೂರಿಗೆ ವಾಪಸ್ ಬಂದ ಮೇಲೆ ಸಂಜಯ್ ಕುಮಾರ್ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.
ಮೊದಲ ಪ್ರಯತ್ನ ವಿಫಲವಾದ ನಂತರ ಆರೋಪಿಗಳು ಎರಡನೇ ಬಾರಿ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಸಂಜಯ್‌ಗೆ ಪರಿಚಯವಿದ್ದ ಆಟೊಮೊಬೈಲ್ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಗುರುಸಿದ್ದಪ್ಪ ಎಂಬುವರನ್ನು ಅಪಹರಣ ಮಾಡಿದ್ದರು. ಆತನನ್ನು ಬೆದರಿಸಿ ಹಣ ಸುಲಿಗೆ ಮಾಡಿ ಕಾರಿನಲ್ಲಿ ಹಲವು ಕಡೆ ಸುತ್ತಾಡಿಸಿದ್ದರು. ಜೀವಂತಾಗಿ ಕಳುಹಿಸಿದರೆ ಪೊಲೀಸರಿಗೆ ದೂರು ನೀಡಬಹುದೆಂಬ ಭಯದಿಂದ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಕೊಲೆ ಮಾಡಿ ಮೃತದೇಹ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 2.40 ಲಕ್ಷ ರೂಪಾಯಿ ನಗದು, ಚಿನ್ನದ ಚೈನು, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮೆಟ್ರೊದಲ್ಲಿ ರೀಲ್ಸ್, ಯುಟ್ಯೂಬರ್ ಗೆ ದಂಡ: ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಯುವಕರು ನಡೆಸುವ ಹುಚ್ಚಾಟಗಳಿಗೆ ಕೊನೆಯೇ ಇಲ್ಲ. ಸೆಲ್ಫಿ ಹುಚ್ಚು, ವಿಡಿಯೋ ಮತ್ತು ರೀಲ್ಸ್ ಮಾಡುವುದು ನಡೆಯುತ್ತಲೇ ಇರುತ್ತದೆ.
ಇದೀಗ ರೀಲ್ಸ್ ಮಾಡಿ ನಮ್ಮ ಮೆಟ್ರೊದಲ್ಲಿ ರಂಪಾಟ ನಡೆಸಿದ್ದ ಯುಟ್ಯೂಬರ್ ಸಂತೋಷ್ ಕುಮಾರ್ ಎಂಬಾತನಿಗೆ ಬಿಎಂಆರ್‌ಸಿಎಲ್ 500 ರೂಪಾಯಿ ದಂಡ ವಿಧಿಸಿದೆ.
ಉಪ್ಪಾರಪೇಟೆ ಠಾಣೆ ಪೊಲೀಸರು ಸಂತೋಷ್‌ಕುಮಾರ್ ನನ್ನು ಕರೆಸಿ, ವಿಚಾರಣೆ ನಡೆಸಿ ಮುಂದೆ ಹುಚ್ಚಾಟ ನಡೆಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ಧಾರೆ.
ಬಂಡೆಪಾಳ್ಯದ ಗೆದ್ದನಹಳ್ಳಿಯ ನಿವಾಸಿ ಸಂತೋಷ್ ಕುಮಾರ್ ಕಳೆದ ವರ್ಷ ಡಿಸೆಂಬರ್ 24ರಂದು ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದ. ಪ್ರಯಾಣಿಕರಿಂದ ತುಂಬಿದ ಮೆಟ್ರೊ ರೈಲಿನಲ್ಲಿ ರೀಲ್ಸ್ ಮಾಡಿದ್ದ. ನಂತರ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಇದನ್ನು ಗಮನಿಸಿದ ನಮ್ಮ ಮೆಟ್ರೊ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಯುಟ್ಯೂಬರ್‌ನನ್ನು ಕರೆಸಿ ವಿಚಾರಣೆ ನಡೆಸಿದರು.