Bengaluru water Issue: ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲೂ ನೀರಿನ ಸಮಸ್ಯೆ; ಸಾರ್ವಜನಿಕರಿಗೆ ಸರ್ಕಾರ ಅಭಯ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Water Issue: ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲೂ ನೀರಿನ ಸಮಸ್ಯೆ; ಸಾರ್ವಜನಿಕರಿಗೆ ಸರ್ಕಾರ ಅಭಯ

Bengaluru water Issue: ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲೂ ನೀರಿನ ಸಮಸ್ಯೆ; ಸಾರ್ವಜನಿಕರಿಗೆ ಸರ್ಕಾರ ಅಭಯ

Bengaluru water Issue: ಬೆಂಗಳೂರಿನಲ್ಲಿ ಜನರು ನೀರಿಲ್ಲದೆ ಪರದಾಡುತ್ತಿದ್ಧಾರೆ. ಆದರೆ ನಗರದಲ್ಲಿ ಜನ ಸಾಮಾನ್ಯರು ಮಾತ್ರವಲ್ಲದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಿವಾಸದಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಸ್ವತ: ಡಿಕೆಶಿ ಹೇಳಿದ್ದಾರೆ. ಆದಷ್ಟು ಬೇಗ ಜನರ ಸಮಸ್ಯೆ ಬಗೆಹರಿಸುವಂತೆ ಸರ್ಕಾರ ಭರವಸೆ ನೀಡಿದೆ. (ವರದಿ: ಮಾರುತಿ ಎಸ್‌)

ಸಿಎಂ ಸಿದ್ದರಾಮಯ್ಯ,  ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲೂ ನೀರಿನ ಸಮಸ್ಯೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲೂ ನೀರಿನ ಸಮಸ್ಯೆ (PC: DK Shivakumar Official Facebook)

ಬೆಂಗಳೂರು: ಪ್ರಕೃತಿಗೆ ಎಲ್ಲರೂ ಒಂದೇ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಎಂಬ ಭೇಧ ಇರುವುದಿಲ್ಲ. ಏಕೆಂದರೆ ಬೆಂಗಳೂರಿನಲ್ಲಿ ಜನ ಸಾಮಾನ್ಯರಿಗೆ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಮನೆಯಲ್ಲೂ ನೀರಿನ ಸಮಸ್ಯೆ ಎದುರಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕೃಷ್ಣಾದಲ್ಲಿ ನೀರಿನ ಕೊರತೆ ಉಂಟಾಗಿದ್ದು, ಇದರ ಬಿಸಿ ಅವರಿಗೂ ತಟ್ಟಿದೆ. ನೀರು ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ಬೇರೆ ಮಾರ್ಗವಿಲ್ಲದೆ ಬೆಂಗಳೂರು ಜಲಮಂಡಲಿ ಅಧಿಕಾರಿಗಳಿಗೆ ಸಿಎಂ, ಡಿಸಿಎಂ ಮನೆಯವರು ಕರೆ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ 6000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ನೀರು ಬಂದಿದೆ. ಮುಖ್ಯಮಂತ್ರಿಗಳ ನಿವಾಸಕ್ಕೆ ಪ್ರತ್ಯೇಕ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಪೈಪುಗಳು ಒಡೆದು ಹೋಗಿದ್ದು ರಿಪೇರಿ ಕೆಲಸ ನಡೆಯುತ್ತಿದೆ, ಶೀಘ್ರವೇ ಸರಿ ಹೋಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್‌ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲ

ಉಪಮುಖ್ಯಮಂತ್ರಿಗಳ ನಿವಾಸದ ಬೋರ್ ವೆಲ್ ಕೂಡಾ ಬತ್ತಿ ಹೋಗಿದೆ. ಸ್ವತಃ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಜವಬ್ಧಾರಿ ಹೊತ್ತಿರುವ ಡಿಸಿಎಂ ಡಿಕೆ ಶಿವಕುಮಾರ್, ಎಷ್ಟೇ ಬೆಲೆ ತೆತ್ತಾದರೂ ಬೆಂಗಳೂರಿಗೆ ನೀರು ಸರಬರಾಜು ಮಾಡುತ್ತೇವೆ ಎಂದು ಪಣ ತೊಟ್ಟಿದ್ದಾರೆ. ನೀರಿನ ಸಮಸ್ಯೆಯನ್ನು ಪರಿಹರಿಸಲು ಬೆಂಗಳೂರಿಗೆ ಸರ್ಕಾರವು 556 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ತಮ್ಮ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಲು ನಗರದ ಪ್ರತಿ ಶಾಸಕರಿಗೆ ತಲಾ 10 ಕೋಟಿ ರೂಪಾಯಿ ಒದಗಿಸಿದ್ದಾರೆ. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಗೆ 148 ಕೋಟಿ ರೂ. ಮತ್ತು ಜಲಮಂಡಲಿಗೆ 128 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ನೀರಿನ ಕೊರತೆ ಸಮಸ್ಯೆಯನ್ನು ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್‌ವಾರು ಸಮಸ್ಯೆಯ ಪರಿಹಾರ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದೆ. ಸಮಸ್ಯೆಯನ್ನು ಹಿರಿಯ ಅಧಿಕಾರಿಗಳೇ ನಿಭಾಯಿಸುತ್ತಿದ್ದು, ಸಾರ್ವಜನಿಕರು ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ನೀರು ಒದಗಿಸಲಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಕಡೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿದೆ. ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಮರುಬಳಕೆಗಾಗಿ ಮಾರಾಟ ಮಾಡಲು ಅವಕಾಶ ನೀಡುವ ಮಾನದಂಡಗಳನ್ನು ರೂಪಿಸಿ ಒಂದು ವಾರದೊಳಗೆ ಆದೇಶ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳ ಸಂಘಗಳ ಪ್ರತಿನಿಧಿಗಳ ಜೊತೆ, ಬಳಿಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ಕೆಆರ್‌ಎಸ್‌ನಲ್ಲಿರುವುದು 15.72 ಟಿಎಂಸಿ ನೀರು ಮಾತ್ರ

ನಗರದ ಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿ, ಸಂಸ್ಕರಿಸಿದ ಹೆಚ್ಚುವರಿ ನೀರು ಉಳಿಯುತ್ತದೆ. ಈ ನೀರನ್ನು ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗೆ ಬಳಕೆ ಮಾಡಲು ಅವಕಾಶಗಳಿವೆ. ಆದ್ದರಿಂದ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ.

ಬೆಂಗಳೂರಿನ ನೀರಿನ ಬೇಡಿಕೆ ಪ್ರಸ್ತುತ ದಿನಕ್ಕೆ 2,600 ದಶಲಕ್ಷ ಲೀಟರ್‌ (ಎಂಎಲ್‌ಡಿ) ದಾಟಿದೆ. ಅದರಲ್ಲಿ 1,460 ಎಂಎಲ್‌ಡಿಯಷ್ಟು ಮಾತ್ರ ಕಾವೇರಿ ನದಿ ನೀರು ಪೂರೈಕೆಯಾಗುತ್ತಿದೆ. ಅಂದಾಜು 1,392 ಎಂಎಲ್‌ಡಿಯಷ್ಟು ನೀರು ಬೋರ್‌ವೆಲ್‌ ಗಳಿಂದ ಪೂರೈಕೆಯಾಗುತ್ತಿದೆ.

ಕೆಆರ್‌ಎಸ್‌ ಜಲಾಶಯದಲ್ಲಿ ಮಾರ್ಚ್‌ 6ಕ್ಕೆ 15.72 ಟಿಎಂಸಿ ಅಡಿ ನೀರಿದೆ. 2023ರಲ್ಲಿ ಇದೇ ದಿನ 28.44 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. 13 ಟಿಎಂಸಿಯಷ್ಟು ನೀರಿನ ಕೊರತೆ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೆ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿದ್ದು, ಅಲ್ಲಿಯೂ ನೀರಿನ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ 20 ವಸತಿ ಘಟಕಗಳಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲು ಪರಿಸರ ಇಲಾಖೆ ನಿರ್ಧರಿಸಿದೆ.

ವರದಿ: ಮಾರುತಿ. ಹೆಚ್‌

Whats_app_banner