ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಶಂಕಿತ ಉಗ್ರರ ಮೂಲಕ ಘಟನೆಯ ಮರುಸೃಷ್ಟಿ , ಹೋಟೆಲ್‌ಗೆ ಬಿಗಿ ಬಂದೋಬಸ್ತ್
ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಇಂದು (ಆಗಸ್ಟ್ 5) ಶಂಕಿತ ಉಗ್ರರ ಮೂಲಕ ಘಟನೆಯ ಮರುಸೃಷ್ಟಿ ಮಾಡಿಸಿದೆ. ಹೀಗಾಗಿ ಹೋಟೆಲ್‌ಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.(ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಐದು ತಿಂಗಳ ಹಿಂದೆ ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ನ್ ಐ ಎ) ಸೋಮವಾರ ಬೆಳಗ್ಗೆಯಿಂದಲೇ ಕೆಫೆಯಲ್ಲಿ ಶಂಕಿತ ಇಬ್ಬರು ಉಗ್ರರನ್ನು ಕರೆ ತಂದು ಮಹಜರು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಹೋಟೆಲ್ ಅನ್ನು ಮುಚ್ಚಲಾಗಿದೆ.
ಈ ಹೋಟೆಲ್ ಗೆ ಶಂಕಿತ ಉಗ್ರ ಮುಸಾವೀರ್ ನನ್ನು ಕರೆ ತರಲಾಗಿದ್ದು, ಆತ ಈ ಹೋಟೆಲ್ ಗೆ ಹೇಗೆ ಪ್ರವೇಶಿಸಿದ, ಬಾಂಬ್ ಅನ್ನು ಹೇಗೆ ಇರಿಸಿದ ಎಂಬ ದೃಶ್ಯಗಳನ್ನು ಮರುಸೃಷ್ಟಿ ಮಾಡಲಾಗುತಿದೆ. ಇಬ್ಬರೂ ಶಂಕಿತ ಉಗ್ರರನ್ನು ಮುಂಜಾನೆ 5 ಗಂಟೆಗೆ ಹೋಟೆಲ್ ಗೆ ಕರೆ ತರಲಾಗಿದೆ.
ಏಪ್ರಿಲ್ 12ರಂದು ಎನ್ ಐಎ ಇಬ್ಬರು ಪ್ರಮುಖ ಆರೋಪಿಗಳು ಮತ್ತು ಈ ಸಂಚಿನ ರೂವಾರಿಗಳಾದ ಅಬ್ದುಲ್ ಮಥೀನ್ ಅಹಮದ್ ತಾಹಾ ಮತ್ತು ಮುಸೀರ್ ಹುಸೇನ್ ಶಾಜೀಬ್ ಎಂಬುವರನ್ನು ಬಂಧಿಸಿತ್ತು. ಮಾರ್ಚ್ 1ರಂದು ಶಾಜಿಬ್ ಎಂಬಾತ ಈ ಹಿಂದೆ ಸುಧಾರಿತ ಸ್ಫೋಟಕ ವಸ್ತುವಿದ್ದ ಬ್ಯಾಗ್ ಅನ್ನು ಹೋಟೆಲ್‌ನಲ್ಲಿ ಇರಿಸಿದ್ದ. ಈತ ಅಲ್ಲಿಯೇ ತಿಂಡಿಯನ್ನು ಮಾಡಿ ತೆರಳಿದ್ದ. ನಂತರ ಈ ಬಾಂಬ್ ಸ್ಪೋಟಗೊಂಡು ಇದರಿಂದ ಹೋಟೆಲ್ ನಲ್ಲಿ ಊಟ ತಿಂಡಿ ಸೇವನೆಗೆಂದು ಬಂದಿದ್ದ 10 ಮಂದಿ ಗಾಯಗೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಎನ್ ಐಎ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಐದಾರು ರಾಜ್ಯಗಳ ಸುಮಾರು 29 ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು.
ಇಂದು ರಾಮೇಶ್ವರಂ ಕೆಫೆ ಬಂದ್
ಇಂದು ಹೋಟೆಲ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಸ್ಥಳದಲ್ಲಿ ಬಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಹೋಟೆಲ್ ಸುತ್ತಮುತ್ತ ಬ್ಯಾರಿಕೇಡ್ ಗಳನ್ನು ಅಳವಡಿಸಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಸ್ಫೋಟ ನಡೆದ ಎರಡು ದಿನಗಳ ನಂತರ ಮಾರ್ಚ್ 3ರಂದು ತನಿಖೆಗಾಗಿ ಪ್ರಕರಣವನ್ನು ಎನ್ ಐಎ ಗೆ ವಹಿಸಲಾಗಿತ್ತು. ಇಬ್ಬರೂ ಆರೋಪಿಗಳನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿತ್ತು. ವಿವಿಧ ಧರ್ಮೀಯರ ಹೆಸರಿನಲ್ಲಿ ಇವರು ವಿವಿಧ ರಾಜ್ಯಗಳ ಹೋಟೆಲ್ ಗಳಲ್ಲಿ ತಲೆ ಮರೆಸಿಕೊಳ್ಳುತ್ತಿದ್ದರು. ಒಂದು ವೇಳೆ ಇವರ ಬಂಧನ ತಡವಾಗಿದ್ದರೆ ಇವರು ಬಾಂಗ್ಲಾದೇಶಕ್ಕೆ ಪಲಾಯನ ಮಾಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.
ಇವರಿಬ್ಬರ ಜೊತೆಗೆ ಮಾಜ್ ಮುನೀರ್ ಅಹಮದ್ ಮತ್ತು ಮುಜಾಮಿಲ್ ಶರೀಫ್ ಅವರನ್ನೂ ಬಂಧಿಸಲಾಗಿದೆ. ಷರೀಪ್ ಎಂಬಾತ ಚಿಕ್ಕಮಗಳೂರಿನ ಜಿಲ್ಲೆಯ ನಿವಾಸಿಯಾಗಿದ್ದಾನೆ ಎನ್ನುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎನ್ ಐಎ 5 ಮಂದಿ ಶಂಕಿತರನ್ನು ಬಂಧಿಸಿದೆ.
ರಾಮೇಶ್ವರಂ ಕೆಫೆ ಸ್ಫೋಟ ಹೀಗಾಗಿತ್ತು
ಬೆಂಗಳೂರಿನ ಕುಂದಲಹಳ್ಳಿ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿತ್ತು. ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಆಗಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಬಳಿಕ ಎಫ್‌ಎಸ್‌ಎಲ್ ತಂಡಕ್ಕೆ ಕರೆ ಕಳುಹಿಸಿದರು. ಅವರು ಬಂದು ಸಾಕ್ಷ್ಯಗಳನ್ನು ಕಲೆಹಾಕಿದರು. ಅಲ್ಲಿ ಬ್ಯಾಟರಿ ಮತ್ತು ಇತರೆ ಅವಶೇಷಗಳು ಸಿಕ್ಕಿದ್ದವು.
ಈ ನಡುವೆ, ನಿಗೂಢ ಸ್ಫೋಟ ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಅಲ್ಲ ಎಂಬುದನ್ನು ದಿ ರಾಮೇಶ್ವರಂ ಕೆಫೆ ಮಾಲೀಕರು ಪ್ರತಿಪಾದಿಸುತ್ತಲೇ ಇದ್ದರು. 10 ಸೆಕೆಂಡ್ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಬ್ಯಾಗ್ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಗಾಯಾಳುಗಳ ಆರೈಕೆ ವಿಚಾರದಲ್ಲಿ ಕಾಳಜಿ ತೋರಿದ ಅವರು, ದುರಂತಕ್ಕೆ ಸಂಬಂಧಿಸಿ ಕಳವಳ ವ್ಯಕ್ತಪಡಿಸಿದರು. ಆರಂಭದಲ್ಲಿ ಬೆಂಗಳೂರು ಪೊಲೀಸರು ಈ ಕೇಸ್ ವಿಚಾರಣೆ ನಡೆಸಿದ್ದರು. ಬಳಿಕ ಇದನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.
(ವರದಿ- ಎಚ್.ಮಾರುತಿ, ಬೆಂಗಳೂರು)