ಉತ್ತರಾಖಂಡ ಚಾರಣ; ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಮೃತರಾದ 9 ಚಾರಣಿಗರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ
ಉತ್ತರಾಖಂಡ ಚಾರಣ; ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಮೃತರಾದ 9 ಚಾರಣಿಗರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡುವ ಕೆಲಸವನ್ನು ಸರ್ಕಾರ ನಿನ್ನೆಯೇ ಪೂರ್ಣಗೊಳಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿ, ಮೃತ ಚಾರಣಿಗರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಂಗಳೂರು: ಉತ್ತರಾಖಂಡದಲ್ಲಿ ಚಾರಣಕ್ಕೆ ಹೋಗಿ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಮೃತಪಟ್ಟ ಒಂಬತ್ತು ಚಾರಣಿಗರ ಮೃತದೇಹಗಳನ್ನು ಶುಕ್ರವಾರ ಬೆಂಗಳೂರಿಗೆ ತರಲಾಯಿತು. ಸಚಿವ ಕೃಷ್ಣಬೈರೇಗೌಡ ಅವರು ಚಾರಣಿಗರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ರಾಜ್ಯ ಸರ್ಕಾರವು ಮೃತದೇಹಗಳನ್ನು ಗುರುವಾರವೇ ಬೆಂಗಳೂರಿಗೆ ವಾಪಸ್ ತರುವುದಕ್ಕೆ ಪ್ರಯತ್ನಿಸಿತ್ತು. ಆದರೂ, ದಾಖಲಾತಿ ಪ್ರಕ್ರಿಯೆ ವಿಳಂಬ ಮತ್ತು ಲಾಜಿಸ್ಟಿಕ್ ಸಮಸ್ಯೆಗಳು ಮೃತದೇಹಗಳನ್ನು ವಾಪಸ್ ತರುವ ಪ್ರಯತ್ನವನ್ನು ವಿಳಂಬವಾಗುವಂತೆ ಮಾಡಿದವು. ಒಂಬತ್ತು ಮೃತದೇಹಗಳನ್ನು ಗುರುವಾರ ಡೆಹ್ರಾಡೂನ್‌ನಿಂದ ದೆಹಲಿಗೆ ಮತ್ತು ಮೂರು ವಿಭಿನ್ನ ವಿಮಾನಗಳ ಮೂಲಕ ಬೆಂಗಳೂರಿಗೆ ರವಾನಿಸಲಾಗಿತ್ತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಖುದ್ದು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಅವರ ಅಗಲಿಕೆಗೆ ಸಾಂತ್ವನ ಹೇಳಿದರು.
‘‘ಎಲ್ಲ ಒಂಬತ್ತು ಮೃತದೇಹಗಳು ನಗರಕ್ಕೆ ಆಗಮಿಸಿದ್ದು, ಅಂತಿಮ ಸಂಸ್ಕಾರಕ್ಕಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದೇವೆ. ಅವರಿಗೆ ಧೈರ್ಯ ಹೇಳಿದ್ದೇವೆ" ಎಂದು ಕೃಷ್ಣಬೈರೇ ಗೌಡ ಹೇಳಿದರು.
ಉತ್ತರಾಖಂಡ ಚಾರಣ; ಕರ್ನಾಟಕದ ಚಾರಣಿಗರಿಗೆ ಏನಾಯಿತು
ಬೆಂಗಳೂರಿನಿಂದ 22 ಚಾರಣಿಗರು ಸಹಸ್ತ್ರ ತಾಲ್-ಮಯಾಲಿ ಸ್ಟ್ರೆಚ್‌ನಲ್ಲಿ ತಮ್ಮ ಚಾರಣದಲ್ಲಿರುವಾಗ, ಪ್ರತಿಕೂಲ ಹವಾಮಾನ, ಚಳಿ, ಹಿಮಪಾತದಿಂದಾಗಿ ಗರ್ವಾಲ್ ಪರ್ವತ ಶ್ರೇಣಿಯಲ್ಲಿ ಸಿಕ್ಕಿಹಾಕಿಕೊಂಡರು. ನಂತರ ರಾಜ್ಯ ಸರ್ಕಾರವು ಉತ್ತರಾಖಂಡ ಸರ್ಕಾರವನ್ನು ಸಂಪರ್ಕಿಸಿದ್ದು, ಎರಡು ದಿನಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು. ಬದುಕುಳಿದ 13 ಮಂದಿ ಗುರುವಾರ ಸಂಜೆ ಬೆಂಗಳೂರು ತಲುಪಿದ್ದಾರೆ.
ಮೃತರನ್ನು ಆಶಾ ಸುಧಾಕರ್, ಸುಜಾತಾ ಮುಂಗುರವಾಡಿ, ವಿನಾಯಕ್ ಮುಂಗುರವಾಡಿ, ಚಿತ್ರಾ ಪ್ರಣೀತ್, ಅನಿತಾ ರಂಗಪ್ಪ, ವೆಂಕಟೇಶ್ ಪ್ರಸಾದ್, ಸಿಂಧು ವಾಕೆಲಂ, ಪದ್ಮಿನಿ ಹೆಗಡೆ, ಪದ್ಮನಾಭ ಕೆ.ಪಿ. ಎಂದು ಗುರುತಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆ ತೆರಳಿದ್ದ ಸಚಿವ ಕೃಷ್ಣ ಬೈರೇಗೌಡ
ಉತ್ತರಾಖಂಡದ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿದ್ದ 22 ಚಾರಣಿಗರ ತಂಡ ಹವಾಮಾನ ವೈಪರೀತ್ಯಕ್ಕೆ ಸಿಲುಕಿತ್ತು. ಅಲ್ಲಿ ಮೂವರು ಮೊದಲು ಮೃತಪಟ್ಟರೆ ಉಳಿದವರು ಬಳಿಕ ಉಸಿರಾಟದ ತೊಂದರೆ ಒಳಗಾಗಿ ಮೃತಪಟ್ಟರು. ಈ ಪೈಕಿ 13 ಜನ ಅಪಾಯದಿಂದ ಪಾರಾಗಿದ್ದು, ಅವರ ಜೊತೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತುಕತೆ ನಡೆಸಿ ಅವರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಿದರು.
ಬದುಕಿ ಉಳಿದ 13 ಚಾರಣಿಗರ ತಂಡ ಗುರುವಾರ ರಾತ್ರಿ 9.30ರ ಸುಮಾರಿಗೆ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಜೊತೆಗಿದ್ದರು. ಸಚಿವರು ಬುಧವಾರ ಸುದ್ದಿ ತಿಳಿದ ಕೂಡಲೇ ಉತ್ತರಾಖಂಡ ತೆರಳಿದ್ದರು. ವಿಮಾನ ನಿಲ್ದಾಣದ ಬಳಿ ಕಾದಿದ್ದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ಬಂದ ಚಾರಣಿಗರನ್ನು ಸ್ವಾಗತಿಸಿದರು.
ಚಾರಣದಲ್ಲಿ ಮೃತಪಟ್ಟ 9 ಮೃತದೇಹಗಳ ಮರಣೋತ್ತರ ಪರೀಕ್ಷೆಆಗಿದ್ದು, ಉತ್ತರಕಾಶಿಯಿಂದ ಮೃತದೇಹಗಳನ್ನು ನೇರವಾಗಿ ಬೆಂಗಳೂರಿಗೆ ರವಾನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ರಸ್ತೆ ಮಾರ್ಗದ ಮೂಲಕ ಆಂಬುಲೆನ್ಸ್‌ನಲ್ಲಿ ಮೃತದೇಹಗಳನ್ನು ದೆಹಲಿಗೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಮೃತದೇಹ ತರುವ ಕೆಲಸ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಎಲ್ಲ ಮೃತದೇಹಗಳು ಬೆಂಗಳೂರಿಗೆ ತಲುಪಲಿವೆ ಎಂದು ಸಚಿವರು ಮಾಹಿತಿ ನೀಡಿದ್ದರು.
ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.