Bengaluru Vande Bharat: ನ.11ರಿಂದ ಬೆಂಗಳೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಶುರು, ರೈಲ್ವೆ ವೇಳಾಪಟ್ಟಿ ವಿವರ ಇಲ್ಲಿದೆ
Bengaluru Vande Bharat: ಬೆಂಗಳೂರು-ಮೈಸೂರು-ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ನವೆಂಬರ್ 11 ರಂದು ಸಂಚಾರ ಶುರುಮಾಡಲಿದೆ. ಈ ರೈಲಿನ ಸಮಯ, ವೇಳಾಪಟ್ಟಿ, ದರ ಮತ್ತು ಹೆಚ್ಚಿನ ಎಲ್ಲ ವಿವರಗಳು ಇಲ್ಲಿವೆ.
ಬೆಂಗಳೂರು: ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಕ್ಷಿಣ ಭಾರತದಲ್ಲಿ ತನ್ನ ಚೊಚ್ಚಲ ಸಂಚಾರವನ್ನು ನವೆಂಬರ್ 11ರಂದು ಶುರುಮಾಡಲಿದೆ. ಭಾರತದ ಹೈಸ್ಪೀಡ್ ರೈಲಿನ ಕುರಿತು ನೀವು ತಿಳಿದುಕೊಳ್ಳಬೇಕಾದ ಐದು ಮಹತ್ವದ ಅಂಶಗಳು ಇಲ್ಲಿವೆ.
- ಇದು ಭಾರತದ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ. ಕರ್ನಾಟಕ ಮತ್ತು ತಮಿಳುನಾಡು ರಾಜಧಾನಿಗಳ ನಡುವಿನ ವೇಗದ ಸಂಪರ್ಕ ಸೇತು ರೈಲು ಇದು. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಚೆನ್ನೈಗೆ ಇದು ಸಂಪರ್ಕ ಕಲ್ಪಿಸುತ್ತದೆ. 'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿರುವ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನ.11ಕ್ಕೆ ಚಾಲನೆ ನೀಡಲಿದ್ದಾರೆ. ವಂದೇ ಭಾರತ್ ಸೇವೆಗಳು ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ವೇಗ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಪ್ರಾರಂಭಿಸಲಾದ ನಾಲ್ಕು ರೈಲುಗಳು ದೆಹಲಿ, ಮುಂಬೈ, ಅಹಮದಾಬಾದ್, ಕಾನ್ಪುರ, ವಾರಣಾಸಿ ಮತ್ತು ಇತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತವೆ.
- ಚೆನ್ನೈ-ಮೈಸೂರು ರೈಲು ಪ್ರಯಾಣದ ಸರಾಸರಿ ವೇಗ ಗಂಟೆಗೆ 75 ರಿಂದ 77 ಕಿಲೋಮೀಟರ್. ಪ್ರಯಾಣದ ದೂರವು ಸುಮಾರು 504 ಕಿಲೋಮೀಟರ್. ಸಮಯ ಸುಮಾರು ಆರೂವರೆ ಗಂಟೆ. ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50ಕ್ಕೆ ಹೊರಡುವ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್‌ಎಸ್) ನಿಲ್ದಾಣದಲ್ಲಿ ನಿಲುಗಡೆ ತಗೊಂಡು ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಲಿದೆ.
- ಮರುಪ್ರಯಾಣದಲ್ಲಿ ಈ ರೈಲು ಮೈಸೂರನ್ನು ಅಪರಾಹ್ನ 1.05ಕ್ಕೆ ಬಿಟ್ಟು, ಬೆಂಗಳೂರಿಗೆ ಅಪರಾಹ್ನ 2.25ಕ್ಕೆ ತಲುಪಲಿದೆ. ರಾತ್ರಿ 7.35ಕ್ಕೆ ಚೆನ್ನೈನಲ್ಲಿ ಇರಲಿದೆ.
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಇಲ್ಲಿದೆ:
4. ರೈಲು ವಾರದ ಆರು ದಿನಗಳಲ್ಲಿ ಸಂಚರಿಸುತ್ತದೆ. ಇದು ಬುಧವಾರ ಲಭ್ಯವಿರುವುದಿಲ್ಲ. ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರ್ ಅನ್ನು ಈ ರೈಲು ಹಾದುಹೋಗುತ್ತದೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ. ಆದರೆ ಅಲ್ಲೆಲ್ಲೂ ಈ ರೈಲು ನಿಲ್ಲುವುದಿಲ್ಲ. ಇದರಲ್ಲಿ 16 ಕೋಚ್‌ಗಳಿದ್ದು, ಸ್ವಯಂಚಾಲಿತ ಬಾಗಿಲುಗಳು ಮತ್ತು 180 ಡಿಗ್ರಿ ಸುತ್ತುವ ಸೀಟುಗಳಿವೆ.
5. ನ್ಯೂಸ್ 18 ವರದಿ ಪ್ರಕಾರ, ಎಕಾನಮಿ ಕ್ಲಾಸ್ ಟಿಕೆಟ್ (ಚೆನ್ನೈ-ಮೈಸೂರು ದಾರಿ) 921 ರೂಪಾಯಿ. ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ 1,880 ರೂಪಾಯಿ. ಮೈಸೂರು ಮತ್ತು ಬೆಂಗಳೂರು ನಡುವಿನ ಪ್ರಯಾಣದ ದರ ಅನುಕ್ರಮವಾಗಿ 368 ರೂಪಾಯಿ ಮತ್ತು 768 ರೂಪಾಯಿ ಆಗಿದೆ.