Channapatna Betting: ಚನ್ನಪಟ್ಟಣದಲ್ಲಿ ಬಾಜಿ ಕಟ್ಟಿ ನೋಡು ಬಾರಾ; ನಿಖಿಲ್‌, ಯೋಗೇಶ್ವರ್‌ ಗೆಲುವಿಗೆ ಜಮೀನು ಪಣ, ಹೇಗಿದೆ ಬೆಟ್ಟಿಂಗ್‌
ಕನ್ನಡ ಸುದ್ದಿ  /  ಕರ್ನಾಟಕ  /  Channapatna Betting: ಚನ್ನಪಟ್ಟಣದಲ್ಲಿ ಬಾಜಿ ಕಟ್ಟಿ ನೋಡು ಬಾರಾ; ನಿಖಿಲ್‌, ಯೋಗೇಶ್ವರ್‌ ಗೆಲುವಿಗೆ ಜಮೀನು ಪಣ, ಹೇಗಿದೆ ಬೆಟ್ಟಿಂಗ್‌

Channapatna Betting: ಚನ್ನಪಟ್ಟಣದಲ್ಲಿ ಬಾಜಿ ಕಟ್ಟಿ ನೋಡು ಬಾರಾ; ನಿಖಿಲ್‌, ಯೋಗೇಶ್ವರ್‌ ಗೆಲುವಿಗೆ ಜಮೀನು ಪಣ, ಹೇಗಿದೆ ಬೆಟ್ಟಿಂಗ್‌

ಚನ್ನಪಟ್ಟಣ ವಿಧಾನಸಭೆ ಚುನಾವಣಾ ಅಖಾಡದಲ್ಲಿ ಈಗ ಬೆಟ್ಟಿಂಗ್‌ ಸದ್ದು. ನಿಖಿಲ್‌ ಪರವಾಗಿ ಮಂಡ್ಯ ಭಾಗದವರು ಹೆಚ್ಚು ಬೆಟ್ಟಿಂಗ್‌ಗೆ ಇಳಿದಿದ್ದರೆ, ಸ್ಥಳೀಯವಾಗಿ ಕೆಲವರು ಯೋಗೇಶ್ವರ್‌ ಪರವಾಗಿ ಬೆಟ್ಟಿಂಗ್‌ ನಡೆಸುತ್ತಿದ್ದಾರೆ.

ತೀವ್ರ ತುರುಸಿನ ಅಖಾಡವಾಗಿ ಮಾರ್ಪಟ್ಟಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್‌ ಪರವಾಗಿ ಭರ್ಜರಿ ಬೆಟ್ಟಿಂಗ್‌ ನಡೆದಿದೆ.
ತೀವ್ರ ತುರುಸಿನ ಅಖಾಡವಾಗಿ ಮಾರ್ಪಟ್ಟಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್‌ ಪರವಾಗಿ ಭರ್ಜರಿ ಬೆಟ್ಟಿಂಗ್‌ ನಡೆದಿದೆ.

ರಾಮನಗರ: ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವಾ ಎಂದು ಹಾಡಿದರೆ ಅದು ಈಗ ಅನ್ವಯಿಸುವುದು ರಾಮನಗರ ಜಿಲ್ಲೆಯ ಜಿದ್ದಾಜಿದ್ದಿನ ಚುನಾವಣಾ ಕಣ ಚನ್ನಪಟ್ಟಣಕ್ಕೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಈಗಾಗಲೇ ಮುಗಿದಿದೆ. ಮತ ಎಣಿಕೆ ಬಾಕಿ ಇದೆ. ಇದರ ನಡುವೆ ಇಡೀ ಕ್ಷೇತ್ರದಲ್ಲಿ ಬೆಟ್ಟಿಂಗ್‌ ಹವಾ ಜೋರಾಗಿದೆ. ಎರಡು ದಿನದಿಂದ ಬೆಟ್ಟಿಂಗ್‌ ಚಟುವಟಿಕೆ ಬಿರುಸುಕೊಂಡಿದ್ದು. ಮತ ಎಣಿಕೆಗೆ ಇನ್ನೂ ಒಂದು ವಾರ ಇರುವುದರಿಂದ ಇದು ಇನ್ನೂ ಹೆಚ್ಚುವ ಸೂಚನೆಯಂತೂ ಸಿಗುತ್ತಿದೆ. ಕೆಲವರು ಹಣವನ್ನು ಬೆಟ್ಟಂಗ್‌ ಕಟ್ಟಿದರೆ, ಇನ್ನು ಕೆಲವರು ಜಮೀನು, ವಾಹನಗಳನ್ನೇ ಬೆಟ್ಟಿಂಗ್‌ಗೆ ಇರಿಸಿದ್ದಾರೆ. ಚನ್ನಪಟ್ಟಣದ ಜತೆಗೆ ಮಂಡ್ಯದವರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಿಂಗ್‌ಗೆ ಇಳಿದಿದ್ದಾರೆ.

ಬೆಟ್ಟಿಂಗ್‌ ಭರಾಟೆ ಜೋರು

ಮಂಡ್ಯ, ರಾಮನಗರ, ಹಾಸನ, ತುಮಕೂರು ಭಾಗದ ಚುನಾವಣೆಗಳು ಎಂದರೆ ಅದರ ಮಜಲೇ ಬೇರೆ. ಚುನಾವಣೆ ನಡೆಸುವುದರಿಂದ ಹಿಡಿದು ಗೆಲ್ಲಿಸಿ, ಸೋಲಿಸುವವರೆಗೂ ಅದರ ಖದರೇ ಬೇರೆ. ಅದರಲ್ಲೂ ಬೆಟ್ಟಿಂಗ್‌ನಲ್ಲು ಈ ಭಾಗದ ಜನ ಒಂದು ಕೈ ಮೇಲೆ. ಚುನಾವಣೆ ಬಂದರೆ ಬೆಟ್ಟಿಂಗ್‌ ಭರಾಟೆ ಶುರುವಾಗುತ್ತದೆ.

ಹಿರಿಯರು, ಯುವಕರು ಎಲ್ಲರೂ ಬೆಟ್ಟಿಂಗ್‌ನಲ್ಲಿ ನಿರತರಾಗುತ್ತಾರೆ. ಮತದಾನ ಮುಗಿದ ಮೇಲೆ ಫಲಿತಾಂಶ ಪ್ರಕಟಗೊಳ್ಳುವವರೆಗೂ ಇದು ಮುಂದುವರೆಯುತ್ತದೆ. ಹಿಂದಿನ ಹಲವು ಚುನಾವಣೆಗಳಲ್ಲೂ ಹೀಗೆ ಬೆಟ್ಟಿಂಗ್‌ ಜೋರಾಗಿಯೇ ನಡೆದಿದೆ. ಈ ಬಾರಿ ಕೊಂಚ ಜೋರೇ ಇದೆ.

ಮಂಡ್ಯ ನಂಟು

ಚನ್ನಪಟ್ಟಣದಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗ ಅಲ್ಲಿನ ಜನ ಬೆಟ್ಟಿಂಗ್‌ ಕಟ್ಟುವುದು ವಾಡಿಕೆ. ಈ ಬಾರಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಿರುವುದರಿಂದ ಇದಕ್ಕೆ ಮಂಡ್ಯದ ನಂಟು ಬಂದಿದೆ. ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ ಸೋತ ನಂತರ ರಾಮನಗರ ಜಿಲ್ಲಾ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ರಾಮನಗರ ನಂತರ ಚನ್ನಪಟ್ಟಣ ವಿಧಾನಸಭೆ ಚುನಾವಣೆಗೆ ಧುಮುಕಿದ್ದಾರೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಭಾರೀ ಅಂತರದಲ್ಲಿ ಗೆದ್ದು ಈಗ ಚನ್ನಪಟ್ಟಣ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟಿದ್ದಾರೆ. ಇದರಿಂದ ಈ ಬಾರಿ ಚುನಾವಣೆಗೆ ಮಂಡ್ಯದ ನಂಟು ಪ್ರಬಲವಾಗಿದೆ. 25 ಸಾವಿರಕ್ಕೂ ಅಧಿಕ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಮಂಡ್ಯದಿಂದ ಚನ್ನಪಟ್ಟಣಕ್ಕೆ ಬಂದು ಚುನಾವಣೆ ಮಾಡಿದ್ದಾರೆ. ಈಗ ಬೆಟ್ಟಿಂಗ್‌ ಭರಾಟೆಯೂ ಮಂಡ್ಯದವರ ಪ್ರವೇಶದಿಂದ ಹೆಚ್ಚಿದೆ.

ಈ ಬಾರಿ ಯಾರ ಪರ

ಈ ಚುನಾವಣೆಯಲ್ಲಿ ಜೆಡಿಎಸ್‌ನ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ನಡುವೆಯೇ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದೆ. ಯಾರೂ ಗೆದ್ದರೂ ಕೂದಲೆಳೆಯ ಅಂತರ ಎನ್ನುವ ಕುತೂಹಲವಿದೆ.

ಕೊನೆ ದಿನಗಳಲ್ಲಿ ನಿಖಿಲ್‌ ಕುಮಾರಸ್ವಾಮಿ ತಮ್ಮ ನಡವಳಿಕೆ ಮೂಲಕ ಜನರ ಅನುಕಂಪ ಪಡೆದುಕೊಂಡರು ಎನ್ನುವ ಮಾತುಗಳು ಇರುವುದರಿಂದ ನಿಖಿಲ್‌ ಪರವಾಗಿಯೇ ಬೆಟ್ಟಿಂಗ್‌ ನಡೆಯುತ್ತಿದೆ. ಇನ್ನು ಕೆಲವರು ಯೋಗೇಶ್ವರ್‌ ಪರವಾಗಿಯೂ ಬೆಟ್ಟಿಂಗ್‌ಗೆ ಇಳಿದಿದ್ದಾರೆ. ಕೆಲವರು ಹಣವನ್ನ ನೇರವಾಗಿ ಕಟ್ಟಿದರೆ, ಇನ್ನು ಕೆಲವರು ಜಮೀನು, ಟ್ರಾಕ್ಟರ್‌ ಸಹಿತ ವಾಹನಗಳನ್ನೇ ಇರಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರಕ್ಕೂ ಮಂಡ್ಯಕ್ಕೂ ಮೊದಲಿನಿಂದಲೂ ನಂಟು ಇದೆ. ಚನ್ನಪಟ್ಟಣದೊಂದಿಗೆ ಮಂಡ್ಯ ಜಿಲ್ಲೆಯವರು ಮದುವೆ ಸಂಬಂಧಗಳೂ ಆಗಿವೆ.ಇದರಿಂದ ಚನ್ನಪಟ್ಟಣ ಇಲ್ಲವೇ ಮಂಡ್ಯ ಚುನಾವಣೆ ಎಂದರೆ ಎರಡೂ ಕಡೆಯುವರು ಬಂದು ಹೋಗುತ್ತಾರೆ. ಈ ಬಾರಿ ಉಪಚುನಾವಣೆ ಆಗಿದ್ದರಿಂದ ಚನ್ನಪಟ್ಟಣದ ಕಡೆಗೆ ಮಂಡ್ಯದವರು ಹೆಚ್ಚು ಬಂದರು. ಈ ಚುನಾವಣೆಯಲ್ಲಿ ಬೆಟ್ಟಿಂಗ್‌ ಭರ್ಜರಿ ನಡೆಯುವ ಮಾತುಗಳು ಕೇಳಿ ಬರುತ್ತಿವೆ. ಕೋಟಿಗಟ್ಟಲೇ ಬೆಟ್ಟಿಂಗ್‌ ಕಟ್ಟುತ್ತಿರುವ ಚರ್ಚೆಗಳೂ ನಡೆಯುತ್ತಿವೆ ಎನ್ನುವುದು ಹಿರಿಯ ಪತ್ರಕರ್ತ, ಚನ್ನಪಟ್ಟಣ ತಾಲ್ಲೂಕಿನವರೇ ಆದ ಮತ್ತಿಕೆರೆ ಜಯರಾಂ ವಿವರಣೆ.

Whats_app_banner