ಲಗಾನ್ ನಿರ್ದೇಶಕರ ಜತೆ ರಿಷಬ್ ಶೆಟ್ಟಿ ಪ್ರತ್ಯಕ್ಷ; ಇದು ಸಹಜ ಭೇಟಿಯೇ ಅಥವಾ ಸಿನಿಮಾ ಮಾತುಕತೆಯೇ?
ನಟ ರಿಷಬ್ ಶೆಟ್ಟಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಆ ಭೇಟಿಯ ಅಸಲಿಯತ್ತು ಏನಿರಬಹುದು ಎಂಬ ವಿಚಾರ ಬಗೆಬಗೆ ಸ್ವರೂಪ ಪಡೆದುಕೊಳ್ಳುತ್ತಿದೆ. ನಿರ್ದೇಶಕ ಅಶುತೋಷ್ ಗೋವಾರಿಕರ್ ಜತೆ ರಿಷಬ್, ಸಿನಿಮಾ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಗೊತ್ತಾಗಬೇಕಿದೆ.
Rishab Shetty: ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆ, ನಟ ನಿರ್ದೇಶಕ ರಿಷಬ್ ಶೆಟ್ಟಿ ಹೆಸರೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಯಾವ ನಿರೀಕ್ಷೆ ಇಟ್ಟುಕೊಳ್ಳದೆ, ಅಚ್ಚುಕಟ್ಟಾಗಿ ಕಾಂತಾರ ಸಿನಿಮಾ ಮಾಡಿ ಅಚ್ಚರಿಯ ಗೆಲುವು ಕಂಡಿದ್ದರು. ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ರಿಷಬ್, ದೇಶಾದ್ಯಂತ ಹೆಸರು ಮಾಡಿದರು. ಅದೇ ಫೇಮ್‌ನಿಂದಲೇ ಪರಭಾಷೆಗಳಿಂದಲೂ ಸಿನಿಮಾ ಆಫರ್‌ಗಳು ಬರಲಾರಂಭಿಸಿದವು. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಿಷಬ್, ಕನ್ನಡದಲ್ಲಿಯೇ ಮುಂದುವರಿಯುವುದಾಗಿಯೇ ಹೇಳುತ್ತ ಬಂದಿದ್ದಾರೆ.
ಇದೀಗ ಇದೆಲ್ಲದರ ನಡುವೆಯೇ ಮುಂಬೈನಲ್ಲಿ ರಿಷಬ್ ಪ್ರತ್ಯಕ್ಷರಾಗಿದ್ದಾರೆ. ಅದೂ ಬಾಲಿವುಡ್ ಕಂಡ ಖ್ಯಾತ ನಿರ್ದೇಶಕ, ಲಗಾನ್, ಸ್ವದೇಶ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅಶುತೋಷ್ ಗೋವಾರಿಕರ್ ಅವರನ್ನು ಭೇಟಿ ಮಾಡಿದ್ದಾರೆ. ಅಶುತೋಷ್ ಕಚೇರಿಗೂ ತೆರಳಿದ್ದಾರೆ. ಈ ನಟ ಮತ್ತು ನಿರ್ದೇಶಕರು ಒಂದೇ ಫೋಟೋ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಬಗೆಬಗೆ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಈ ಜೋಡಿ ಆಕ್ಷನ್ ಸಿನಿಮಾವೊಂದರ ತಯಾರಿಯಲ್ಲಿದೆ ಎಂದೇ ಹೇಳಲಾಗುತ್ತಿದೆ.
ಅಂದಹಾಗೆ ರಿಷಬ್ ಶೆಟ್ಟಿ ಮತ್ತು ಅಶುತೋಷ್ ಗೋವಾರಿಕರ್ ಜೋಡಿ ಸಿನಿಮಾ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದ ಈ ಸಿನಿಮಾದಲ್ಲಿ ಮೂಡಿ ಬರಲಿದೆ. ಕಾಂತಾರ ರೀತಿಯಲ್ಲಿಯೇ ನೆಲದ ಕಥೆ ಹೇಳುವ ಸ್ಕ್ರಿಪ್ಟ್‌ವೊಂದನ್ನು ನಿರ್ದೇಶಕರು ರೆಡಿ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಇನ್ನು ಮಾರ್ಚ್- ಏಪ್ರಿಲ್‌ನಲ್ಲಿ ಈ ಸಿನಿಮಾ ಘೋಷಣೆ ಆಗುವ ಸಾಧ್ಯತೆಗಳಿವೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ಇನ್ನು ಕಾಂತಾರ ಯಶಸ್ಸಿನ ಬಳಿಕ ಅದೇ ಚಿತ್ರದ ಪ್ರೀಕ್ವೆಲ್ ಕೆಲಸಗಳಲ್ಲಿ ರಿಷಬ್ ಬಿಜಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ತಯಾರಿಯೂ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿಕೊಂಡು, ಚಿತ್ರದ ಫಸ್ಟ್ ಲುಕ್ ಟೀಸರ್ ಸಹ ಬಿಡುಗಡೆ ಆಗಿತ್ತು. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಸಹ ಮೂಡಿಬರುತ್ತಿದ್ದು, ಮುಂದಿನ ವರ್ಷ ಬಿಡುಗಡೆ ಆಗುವ ಸಾಧ್ಯತೆಗಳಿವೆ.
ನಾನು ಎಲ್ಲೂ ಹೋಗಲ್ಲ ಎಂದಿದ್ದ ರಿಷಬ್
"ಸದ್ಯ ಕಾಂತಾರದ ಮೇಲೆ ನನ್ನ ಗಮನ ಇದೆ. ಬೇರೆ ಬೇರೆ ಭಾಷೆಗಳ ಸಾಕಷ್ಟು ಸಿನಿಮಾ ಅವಕಾಶಗಳು ಬಂದಿವೆ. ಆ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿವೆ. ಬರೀ ಹಿಂದಿ ಅಷ್ಟೇ ಅಲ್ಲ ಸಾಕಷ್ಟು ಭಾಷೆಗಳಿಂದ ಸಿನಿಮಾ ಆಫರ್‌ಗಳು ಬಂದಿವೆ. ಹಾಗೇ ಸಿನಿಮಾ ಕಥೆ ಹೇಳಿದವರ ಅಭಿಮಾನಿ ಕೂಡ ಹೌದು. ಮುಂದೆಯೂ ಅವರ ಅಭಿಮಾನಿಯೇ. ನಿಜಕ್ಕೂ ನನಗಿದು ಒಳ್ಳೆಯ ಅವಕಾಶ. ನಾನು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಕನ್ನಡ ಸಿನಿಮಾ ಇಂಡಸ್ಟ್ರಿ ಬಿಟ್ಟು ನಾನು ಬೇರೆಲ್ಲೂ ಹೋಗಲ್ಲ. ಅದೊಂದು ಭಾವನಾತ್ಮಕ ನಂಟು. ಕಾಂತಾರ ಸಿನಿಮಾ ಈ ಮಟ್ಟದಲ್ಲಿ ಹಿಟ್ ಆಗಿದ್ದಕ್ಕೆ ನನ್ನ ಕನ್ನಡಿಗರ ಕೊಡುಗೆ ಅದರಲ್ಲಿ ಅಪಾರ ಇದೆ. ಅವರಿಂದಲೇ ಅದು ಗಡಿ ದಾಟಿ ಸದ್ದು ಮಾಡಿದ್ದು. ಅದಾದ ಬಳಿಕ ಅವರೂ ಸಿನಿಮಾ ಮೆಚ್ಚಿಕೊಂಡರು. ಹಾಗಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾನು ಸದಾ ಚಿರಋಣಿ. ಒಂದು ಸಿನಿಮಾ ಹಿಟ್ ಆಗ್ತಿದ್ದಂತೆ, ಇಂಡಸ್ಟ್ರಿ ಬಿಟ್ಟು ಹೊರಟ ನೋಡು ಎಂಬ ಮಾತು ಬರಬಾರದು" ಎಂದು ಇತ್ತೀಚೆಗಷ್ಟೇ ಗೋವಾ ಸಿನಿಮೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ರಿಷಬ್ ಹೇಳಿಕೊಂಡಿದ್ದರು.