ಸ್ಪೂರ್ತಿದಾಯಕ: ವಾರಾಂತ್ಯ ಎಂದು ಈ ಕಾರ್ಮಿಕರು ಸುಮ್ಮನೆ ಕೂರೋದಿಲ್ಲ, ಕೂಲಿ ಕಾರ್ಮಿಕರ ಸಂಘಟನೆಯ ಪರೋಪಕಾರ್ಯದ ಕಥೆಯ ಕೇಳಿರಣ್ಣ
ಕನ್ನಡ ಸುದ್ದಿ  /  ಕರ್ನಾಟಕ  /  ಸ್ಪೂರ್ತಿದಾಯಕ: ವಾರಾಂತ್ಯ ಎಂದು ಈ ಕಾರ್ಮಿಕರು ಸುಮ್ಮನೆ ಕೂರೋದಿಲ್ಲ, ಕೂಲಿ ಕಾರ್ಮಿಕರ ಸಂಘಟನೆಯ ಪರೋಪಕಾರ್ಯದ ಕಥೆಯ ಕೇಳಿರಣ್ಣ

ಸ್ಪೂರ್ತಿದಾಯಕ: ವಾರಾಂತ್ಯ ಎಂದು ಈ ಕಾರ್ಮಿಕರು ಸುಮ್ಮನೆ ಕೂರೋದಿಲ್ಲ, ಕೂಲಿ ಕಾರ್ಮಿಕರ ಸಂಘಟನೆಯ ಪರೋಪಕಾರ್ಯದ ಕಥೆಯ ಕೇಳಿರಣ್ಣ

ಹದಿಮೂರು ವರ್ಷಗಳ ಹಿಂದೆ ಆರಂಭಗೊಂಡ ಕೂಲಿ ಕಾರ್ಮಿಕರ ಸಂಘಟನೆ ಈಗ ಕರ್ನಾಟಕ ಮಟ್ಟಕ್ಕೆ ಈಗ ಬೆಳೆದಿದೆ. ಸಹಾಯಕರು, ನಿರ್ಗತಿಕರು, ಅನಾರೋಗ್ಯಪೀಡಿತರ ಕಷ್ಟಕ್ಕೆ ಹೆಗಲಾಗಲು ಮನೆಯಿಲ್ಲದವರ ಮನೆ ಕಟ್ಟಲು ಶ್ರಮಿಕರಾಗಿ ದುಡಿದ ಸದಸ್ಯರು, ಸಂತ್ರಸ್ತರ ಕಣ್ಣೊರೆಸಿ ಸಂತೃಪ್ತಿ ಹೊಂದುತ್ತಾರೆ. (ಲೇಖನ: ಹರೀಶ್‌ ಮಾಂಬಾಡಿ, ಮಂಗಳೂರು)

ಕೂಲಿ ಕಾರ್ಮಿಕರ ಸಂಘಟನೆಯ ಪರೋಪಕಾರ್ಯದ ಕಥೆ
ಕೂಲಿ ಕಾರ್ಮಿಕರ ಸಂಘಟನೆಯ ಪರೋಪಕಾರ್ಯದ ಕಥೆ

ಮಂಗಳೂರು: ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಳೀಯ ಬಸ್ ಒಂದರಲ್ಲಿ ನಿರ್ವಾಹಕ ವೃತ್ತಿ ಮಾಡುತ್ತಿದ್ದ ದೀಪಕ್ ಈಗಲೂ ಬದಲಾಗಿಲ್ಲ. ಉಜಿರೆಯಲ್ಲಿ ಖಾಸಗಿ ಶಾಲೆಯೊಂದರ ಬಸ್ ಚಾಲಕರಾಗಿ ಮಕ್ಕಳನ್ನು ಕರೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದಾರೆ. ಅದವರ ಜೀವನೋಪಾಯ. ಆದರೆ ವಾರದಲ್ಲೊಂದು ದಿನ ಇವರು ಮಾಡುವ ಕೆಲಸವೇ ಬೇರೆ. ಇವರಂತೆ ದೈನಂದಿನ ದುಡಿಮೆಯೇ ಬದುಕಿಗೆ ಆಧಾರವೆಂದು ನಂಬಿ ಕೆಲಸ ಮಾಡುತ್ತಿರುವ ಯುವಕರ ತಂಡ ಮಾಡುವ ಕೆಲಸ ಅನನ್ಯ. ಶೋಚನೀಯ ಸ್ಥಿತಿಯಲ್ಲಿರುವವರ ನೆರವಿಗೆ ಧಾವಿಸುವ ಈ ತಂಡ, ಅನಾರೋಗ್ಯಪೀಡಿತರು, ನಿರ್ಗತಿಕರಿಗೆ ಮೊದಲ ಆದ್ಯತೆ ನೀಡುತ್ತದೆ. ಅಸಹಾಯಕರನ್ನು ಕಂಡರೆ ಅವರನ್ನು ಸಂತೈಸಿ, ಅವರಿಗೆ ಸಹಾಯ ಒದಗಿಸಲು ಸಮಯದ ಪರಿವೆಯೇ ಇಲ್ಲದೆ ಕೆಲಸ ಮಾಡುತ್ತದೆ. ಹೀಗೆ ಒಬ್ಬರು, ಇಬ್ಬರು ಇದ್ದ ಸಂಘಟನೆ ಈಗ ಹೆಮ್ಮರವಾಗಿದೆ. ಬೆಳ್ತಂಗಡಿಯಂಥ ಸಣ್ಣ ಪ್ರದೇಶದಲ್ಲಿ ಆರಂಭಗೊಂಡ ಸಂಘಟನೆ ರಾಜ್ಯದಾದ್ಯಂತ ವಿಸ್ತರಿಸಿದೆ. ಹದಿಮೂರು ವರ್ಷಗಳ ಹಿಂದೆ ಆರಂಭಗೊಂಡ ಕೂಲಿ ಕಾರ್ಮಿಕರ ಸಂಘಟನೆ ಎಂದೇ ಟ್ಯಾಗ್ ಲೈನ್ ಇರುವ ರಾಜಕೇಸರಿ ಸಂಘಟನೆ ಅಖಿಲ ಕರ್ನಾಟಕ ಮಟ್ಟಕ್ಕೆ ವಿಸ್ತರಿಸಿದ್ದು ಹೀಗೆ.

35 ವರ್ಷದ ದೀಪಕ್ ಈಗ 300ಕ್ಕೂ ಅಧಿಕ ತಂಡದ ನಾಯಕ. ಟ್ರಸ್ಟ್ ಸಂಸ್ಥಾಪಕ, ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನಿಂದ ಕುಪ್ಪೆಪದವಿಗೆ ತೆರಳುವ ಖಾಸಗಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ನಡೆಸುತ್ತಿದ್ದ ದೀಪಕ್, ಬಳಿಕ ಬೆಳ್ತಂಗಡಿ ಉಪ್ಪಿನಂಗಡಿ ರೂಟ್ ನಲ್ಲಿ ಸರ್ವೀಸ್ ಮಾಡುತ್ತಿದ್ದರು. ಇದೀಗ ಉಜಿರೆಯ ಸಾನಿಧ್ಯ ಶಾಲೆಯ ಮಕ್ಕಳ ವಾಹನ ಚಾಲಕರಾಗಿ ಮಕ್ಕಳನ್ನು ಕರೆದುಕೊಂಡು ಹೋಗುವ ವೃತ್ತಿ ಮಾಡುತ್ತಿದ್ದಾರೆ. ನಮ್ಮ ಸಂಘಟನೆ ಎಂದರೆ ಇದು ಕೂಲಿ ಕಾರ್ಮಿಕರ ಸಂಘಟನೆ. ಇದನ್ನು ಕಟ್ಟುವ ಮೊದಲೇ ನಾವು ಬೇರೆ ಬೇರೆ ಸಂಘ, ಸಂಸ್ಥೆಗಳಡಿಯಲ್ಲಿ ಸಮಾಜಸೇವೆ ಮಾಡುತ್ತಿದ್ದೆವು. ಸಣ್ಣಪುಟ್ಟ ಸಹಾಯವನ್ನು ನೀಡುವ ಕಾರ್ಯಕ್ಕೆ ಧಾವಿಸುತ್ತಿದ್ದೆವು. ನಾಲ್ಕೈದು ಮಂದಿ ಸೇರಿ ನಾವು ಮಾಡುತ್ತಿದ್ದ ಈ ಕೆಲಸಕ್ಕೊಂದು ಸ್ಪಷ್ಟ ರೂಪ ದೊರಕಿದ್ದು, ಬೆಳ್ತಂಗಡಿಯ ಹುಣ್ಸೆಕಟ್ಟೆಯಲ್ಲಿ. ಅಲ್ಲಿ ಪೈಂಟರ್, ಆಟೊ ಚಾಲಕರು ಹೀಗೆ ಬೇರೆ ಬೇರೆ ದುಡಿಯುವ ವರ್ಗದವರು ಸೇರಿ ನಾವೊಂದು ಸಂಘಟನೆ ರೂಪದಲ್ಲಿ ಸೇವಾ ಕಾರ್ಯವನ್ನು ನಡೆಸೋಣ ಎಂಬ ಚಿಂತನೆ ನಡೆಸಿದೆವು. ಹದಿಮೂರು ವರ್ಷಗಳ ಹಿಂದೆ ಹುಣ್ಸೆಕಟ್ಟೆಯ ಗಣೇಶೋತ್ಸವ ಸಂದರ್ಭ, ಸೇವಾಕಾರ್ಯಕ್ಕೆಂದು ಒಂದಷ್ಟು ಮಂದಿ ತರುಣರು ಸೇರಿಕೊಂಡು ರಾಜಕೇಸರಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಈಗ ಜನಪ್ರೀತಿ ಗಳಿಸಿ ಮುನ್ನಡೆಯುತ್ತಿದೆ’ ಎನ್ನುತ್ತಾರೆ ದೀಪಕ್. ಬೆಳ್ತಂಗಡಿ ತಾಲೂಕಿನ ಪುಟ್ಟ ಪ್ರದೇಶದಲ್ಲಿ ಆರಂಭಗೊಂಡ ಸಂಘಟನೆ ಬಳಿಕ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿತು. ಇದೀಗ ರಾಜ್ಯ ಮಟ್ಟದವರೆಗೆ ಬೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300 ಸದಸ್ಯರು ಈಗಿದ್ದಾರೆ.

ಹೇಗೆ ಕೆಲಸ ಮಾಡುತ್ತಿದೆ?

ಹದಿಮೂರು ವರ್ಷಗಳಿಂದ ಸಂಘಟನೆ ನಾನಾ ರೀತಿಯಲ್ಲಿ ಕೆಲಸ ಮಾಡುತ್ತಿದೆ. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸಂಘಟನೆ ಸದಸ್ಯರು ಒಟ್ಟುಗೂಡುತ್ತಾರೆ. ಕೂಲಿ ಕಾರ್ಮಿಕರ ಸಂಘಟನೆ ಎಂದೇ ಹೆಸರಿರುವ ರಾಜಕೇಸರಿ ಟ್ರಸ್ಟ್ ನಲ್ಲಿರುವವರೆಲ್ಲರೂ ದಿನದ ಆದಾಯವನ್ನಷ್ಟೇ ನಂಬಿ ಬದುಕು ಸಾಗಿಸುವ ಶ್ರಮಜೀವಿಗಳು. ಪೈಂಟರ್, ಪ್ಲಂಬರ್, ಕಾರ್ಖಾನೆಗಳಲ್ಲಿ ದುಡಿಯುವವರು, ಮೇಸ್ತ್ರಿ ಕೆಲಸ ಮಾಡುವವರು, ಬಸ್ ಕಂಡಕ್ಟರ್, ಡ್ರೈವರ್, ಬಟ್ಟೆಯಂಗಡಿಯಲ್ಲಿ ಸೇಲ್ಸ್ ಮಾಡುವವರು, ಮಾರ್ಕೆಟಿಂಗ್ ಮಾಡುವವರು, ಹೀಗೆ ಎಲ್ಲರೂ ಒಟ್ಟಾಗಿ ಸೇರುವ ದಿನ ಭಾನುವಾರ. ಇಂಥ ದಿನ ಎಲ್ಲರೂ ತಮ್ಮ ದುಡಿಮೆಯ ಒಂದಂಶವನ್ನು ಹಾಕಿ, ಏನು ಮಾಡಬಹುದು ಎಂದು ಪ್ಲ್ಯಾನ್ ಮಾಡುತ್ತದೆ. ರಾಜಕೇಸರಿ ತಂಡ ಅನಾರೋಗ್ಯಪೀಡಿತರ ನೆರವಿಗಾಗಿ ಜಾತ್ರೆ, ಉತ್ಸವ, ಬಸ್ ನಿಲ್ದಾಣಗಳಲ್ಲೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಿನರಲ್ ವಾಟರ್ ಮಾಡುವ ಮೂಲಕ ಅದರಲ್ಲಿ ಬಂದ ಲಾಭಾಂಶವನ್ನು ಒದಗಿಸುವ ಕೆಲಸ ಮಾಡಿತು. ಅಸಹಾಯಕರು, ನಿರ್ಗತಿಕರು, ಅನಾರೋಗ್ಯಪೀಡಿತರ ಕಷ್ಟಕ್ಕೆ ಹೆಗಲಾಗಲು ಮನೆಯಿಲ್ಲದವರ ಮನೆ ಕಟ್ಟಲು ಶ್ರಮಿಕರಾಗಿ ದುಡಿದ ಸದಸ್ಯರು, ಸಂತ್ರಸ್ತರ ಕಣ್ಣೊರೆಸಿ ಸಂತೃಪ್ತಿ ಕಂಡರು. ಇವರ ಈ ಸೇವಾ ಕಾರ್ಯ ಕಂಡು ದಾನಿಗಳೂ ಮುಂದೆ ಬಂದರು. ಎಂಡೋಸಲ್ಫಾನ್ ಮತ್ತು ಅಂಗವಿಕಲರಿಗೆ ದಾನಿಗಳ ನೆರವಿನಿಂದ ಗಾಲಿಕುರ್ಚಿ ನೀಡಿದರು.

ಸ್ವಚ್ಛಾಲಯ ಯೋಜನೆ ಮೂಲಕ 1000 ಶಾಲೆಗಳ ಶೌಚಾಲಯ ದುರಸ್ತಿ

ರಾಜಕೇಸರಿ ಟ್ರಸ್ಟ್ ಇದೀಗ ಸ್ವಚ್ಛಾಲಯ ಯೋಜನೆ ಆರಂಭಿಸಿದೆ. ದಾನಿಗಳ ನೆರವು ಪಡೆದುಕೊಂಡು, ಟ್ರಸ್ಟ್ ಸದಸ್ಯರ ತಂಡದ ಶ್ರಮದಾನದ ಮೂಲಕ ಸರಕಾರಿ ಶಾಲೆಗಳ ದುಸ್ಥಿತಿಯಲ್ಲಿರುವ ಶೌಚಾಲಯಗಳನ್ನು ದುರಸ್ತಿಪಡಿಸುವ ಯೋಜನೆಯಿದು. ದಸರಾ ಸಂದರ್ಭ ಯೋಜನೆಯ ರೂಪುರೇಷೆ ಹಾಕಲಾಗಿ, ಇದೀಗ ಮಂಗಳೂರು ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ಕೆಲ ಶಾಲೆಗಳ ಶೌಚಾಲಯ ದುರಸ್ತಿಗೊಳಿಸುವ ಕಾರ್ಯ ನಡೆಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಸುಮಾರು 1 ಸಾವಿರ ಸರಕಾರಿ ಶಾಲೆಗಳ ಶೌಚಾಲಯವನ್ನು ಸ್ವಚ್ಛಾಲಯ ಮಾಡುವ ಗುರಿ ಟ್ರಸ್ಟ್ ಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆ ಹಿತದೃಷ್ಟಿಯಿಂದ ಅಭಿಯಾನ ಆರಂಭಗೊಂಡಿದೆ. ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಬಡ ಮಕ್ಕಳ ಆರೋಗ್ಯ ನೈರ್ಮಲ್ಯದ ದೃಷ್ಟಿಯಿಂದ ಸ್ವಚ್ಛಾಲಯ ಅಭಿಯಾನ ಆರಂಭಿಸಲಾಗಿದ್ದು, ಮೂರು ವರ್ಷಗಳಲ್ಲಿ 1200 ಶೌಚಾಲಯ ನವೀಕರಣ ಯೋಜನೆ ರೂಪಿಸಲಾಗಿದೆ ಎಂದು ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಹೇಳುತ್ತಾರೆ.

  • ಲೇಖನ: ಹರೀಶ್‌ ಮಾಂಬಾಡಿ, ಮಂಗಳೂರು

Whats_app_banner