ಸೈಯದ್ ಇಸಾಕ್, ಬಸ್ ಕಂಡಕ್ಟರ್ ಮತ್ತು ಕ್ಷೌರಿಕ: ಮೈಸೂರಿನ 3 ಅಪರೂಪದ ಕನ್ನಡ ರತ್ನಗಳಿವರು
Kannada Rajyotsava Special: ಕನ್ನಡ ಭಾಷೆ ಬಳಕೆ, ಅಳವಡಿಕೆಯಲ್ಲಿ ಕನ್ನಡ ಉಳಿಸಬಹುದು ಎಂದು ತೋರಿಸಿ ಕೊಡುತ್ತಿರುವ ಮೈಸೂರಿನ ಮೂವರು ಸಾಮಾನ್ಯ ಜನರ ಬಗ್ಗೆ ನೀವು ತಿಳಿಯಲೇ ಬೇಕಾದ ಸಂಗತಿ ಇಲ್ಲಿದೆ.
ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಕನ್ನಡಿಗರು ಮೈಸೂರಿನ 3 ಅಪರೂಪದ ಕನ್ನಡ ರತ್ನಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಕನ್ನಡ ಭಾಷೆ ಬಳಕೆ, ಅಳವಡಿಕೆಯಲ್ಲಿ ಕನ್ನಡ ಉಳಿಸಬಹುದು ಎಂದು ತೋರಿಸಿ ಕೊಡುತ್ತಿರುವ ಸಾಮಾನ್ಯ ಜನರಿವರು.
ಮೈಸೂರಿನಲ್ಲೊಬ್ಬರು ಕನ್ನಡ ನಿರ್ವಾಹಕ
ಇತ್ತೀಚೆಗೆ ಅನಿವಾರ್ಯವಾಗಿಯಾದರೂ ಇಂಗ್ಲಿಷ್ ಮಾತನಾಡಲೇಬೇಕು ಎಂಬಂತಾಗಿದೆ ಪರಿಸ್ಥಿತಿ. ಆದರೆ ನಮ್ಮ ನಡುವೆ ಕೆಲವರು ಮಾತ್ರ ಇದಕ್ಕೆ ಹೊರತಾಗಿ ಜೀವನದ ಪ್ರತಿ ಹೆಜ್ಜೆಯನ್ನೂ ಕನ್ನಡೀಕರಣಗೊಳಿಸಿದ್ದಾರೆ. ಇಂತಹವರಲ್ಲಿ ಒಬ್ಬರು ಮೈಸೂರಿನ ಬಸ್ ನಿರ್ವಾಹಕ (Bus Conductor) ತ್ಯಾಗರಾಜ್. ತ್ಯಾಗರಾಜ್ ಅವರು ಕೆಲಸದ ನಿಮಿತ್ತ ತಮಿಳುನಾಡಿಗೆ ಹೋದಾಗ ಅಲ್ಲಿನ ಜನರ ಭಾಷಾಭಿಮಾನ ನೋಡಿ ಬೆರಗಾಗಿದ್ದರು. ಆಗಿನಿಂದ ಎಲ್ಲ ಬಸ್ ಸ್ಟಾಪ್‌ಗಳ ಹೆಸರನ್ನೂ ಕನ್ನಡದಲ್ಲಿಯೇ ಹೇಳುತ್ತಾರೆ ಹಾಗೂ ಇಂಗ್ಲಿಷ್ ಬಳಸದೆ ಶುದ್ಧ ಕನ್ನಡದಲ್ಲಿ ಮಾತನಾಡುತ್ತಾರೆ. ವೀರಸನ್ಯಾಸಿ ವಿವೇಕಾನಂದ ವೃತ್ತ (Vivekananda Circle), ಪ್ರಾದೇಶಿಕ ಸಾರಿಗೆ ಕಚೇರಿ (RTO Office), ಉಗಿಬಂಡಿ ಹಳಿ ಸೇತುವೆ (Railway Under Bridge) ಸೇರಿದಂತೆ ಎಲ್ಲ ನಿಲ್ದಾಣಗಳ ಹೆಸರನ್ನೂ ಕನ್ನಡದಲ್ಲಿಯೇ ಹೇಳುತ್ತಾರೆ. ಬೇರೆ ರಾಜ್ಯ, ದೇಶದ ಜನರಿಗೂ ಕನ್ನಡ ಕಲಿಸುತ್ತಾರೆ.
ರಾಜೀವ್‌ನಗರದ ಅಪರೂಪದ ಕನ್ನಡಪ್ರೇಮಿ
ಮೈಸೂರಿನ ರಾಜೀವ್ ನಗರದಲ್ಲಿರುವ ಕನ್ನಡಪ್ರೇಮಿ ಸೈಯದ್ ಇಸಾಕ್ ದೇಶದಾದ್ಯಂತ ಚಿರಪರಿಚಿತರು. ಮುಸ್ಲಿಂ ಬಾಂಧವರು ಹೆಚ್ಚಾಗಿರುವ ರಾಜೀವ್ ನಗರದಲ್ಲಿ ಕನ್ನಡದ ಗ್ರಂಥಾಲಯ ಇಟ್ಟಿದ್ದಾರೆ ಸೈಯದ್ ಇಸಾಕ್. ತಮಗೆ ಓದು, ಬರಹ ಬರದಿದ್ದರೂ ಉಳಿದವರು ಓದಿನಿಂದ ವಂಚಿತರಾಗದಿರಲಿ ಎಂದು ಒಂದು ಸಣ್ಣ ಜೋಪಡಿಯಲ್ಲಿ ಇಸಾಕ್ ಗ್ರಂಥಾಲಯ ನಡೆಸುತ್ತಿದ್ದರು. ಸುಮಾರು ಹನ್ನೊಂದು ಸಾವಿರ ಪುಸ್ತಕಗಳನ್ನು ಹೊಂದಿದ್ದ ಇವರ ಗ್ರಂಥಾಲಯಕ್ಕೆ ಎಲ್ಲರಿಗೂ ಉಚಿತ ಪ್ರವೇಶ. ಕೆಲವು ಕಿಡಿಗೇಡಿಗಳು 2021ರಲ್ಲಿ ಒಂದು ರಾತ್ರಿ ಇವರ ಗ್ರಂಥಾಲಯವನ್ನು ಸುಟ್ಟುಹಾಕಿದ್ದರು. ಈ ಸುದ್ದಿ ದೇಶದಾದ್ಯಂತ ಹರಡಿತ್ತು. ಅಲ್ಲದೆ ಪ್ರಪಂಚದಾದ್ಯಂತದಿಂದ ಇವರಿಗೆ ಹೊಸ ಗ್ರಂಥಾಲಯ ನಿರ್ಮಿಸಲು ಧನಸಹಾಯ, ಪುಸ್ತಕಗಳು ಹರಿದುಬಂದಿದ್ದವು. ನಂತರ ಸರ್ಕಾರದ ವತಿಯಿಂದ ಸೈಯದ್ ಇಸಾಕ್ ಅವರಿಗೆ ಹೊಸ ಗ್ರಂಥಾಲಯ ಕಟ್ಟಿಸಿಕೊಡಲಾಯಿತು.
ಕವಿಗಳ ಶೈಲಿಯ ಹೇರ್‌ಕಟ್ ಮಾಡುವ ಮೈಸೂರಿನ ಕ್ಷೌರಿಕ!
ಮೈಸೂರಿನ ಅಗ್ರಹಾರದಲ್ಲಿರುವ ಈ ಸಲೂನ್‌ನಲ್ಲಿ ನಿಮಗೆ ಸಿಗುವುದೆಲ್ಲವೂ ವಿಶೇಷ ಹೇರ್‌ಕಟ್‌ಗಳೇ! ಚಿತ್ರನಟರು, ಕ್ರೀಡಾಪಟುಗಳ ಹೇರ್‌ಕಟ್ ಅನುಕರಣೆ ಮಾಡುವ ಈ ಕಾಲದಲ್ಲಿ ಮೈಸೂರಿನ ವಿದ್ಯಾರಣ್ಯಪುರದಲ್ಲಿ ʻಸೂಪರ್ ಸ್ಟೈಲ್ ಮೆನ್ಸ್ ಪಾರ್ಲರ್ʼ ನಡೆಸುತ್ತಿರುವ ಮಂಜುನಾಥ್ ಅವರು ಮಾತ್ರ ತಮ್ಮ ಅಂಗಡಿಗೆ ಬರುವ ಜನರಿಗೆ ಕವಿಗಳ ಶೈಲಿಯ ಹೇರ್‌ಕಟ್ ಮಾಡುತ್ತಾರೆ. ಅವರ ಸಲೂನ್ ಪ್ರವೇಶಿಸುತ್ತಿದ್ದಂತೆ, ಕುವೆಂಪು, ದ.ರಾ.ಬೇಂದ್ರೆ, ಯು.ಆರ್.ಅನಂತಮೂರ್ತಿ ಮುಂತಾದವರ ಭಾವಚಿತ್ರಗಳು ಕಾಣುತ್ತವೆ. ಅಚ್ಚಕನ್ನಡದಲ್ಲಿ ಮಾತನಾಡುವ ಇವರು ತಮ್ಮ ಅಂಗಡಿಗೆ ಬಂದವರನ್ನು ಕೇಳಿ, ಅವರಿಷ್ಟದ ಕವಿಯ ಕೇಶವಿನ್ಯಾಸ ಮಾಡುತ್ತಾರೆ. ಯು.ಆರ್.ಅನಂತಮೂರ್ತಿ ದಾಡಿ ಟ್ರಿಮ್ಮಿಂಗ್, ಕುವೆಂಪು ಅವರ ಮಿಷನ್ ಕಟ್, ಕಾರಂತರ ಹೇರ್ ಸೆಟ್ಟಿಂಗ್ ಎಲ್ಲವೂ ಇಲ್ಲಿ ಲಭ್ಯ. ಜೊತೆಗೆ ಇಲ್ಲಿ ಓದಲು ಕನ್ನಡ ಪುಸ್ತಕಗಳು, ಪತ್ರಿಕೆಗಳನ್ನು ಇಡಲಾಗಿದೆ.