Subramanya: ಟಾರ್ಪಲಿನ್ ಹೊದಿಸಿದ ಪೊಲೀಸ್ ಠಾಣೆ ನೋಡಿ ಗೃಹಸಚಿವರೇ ಶಾಕ್, ಸುಬ್ರಮಣ್ಯ ಆರಕ್ಷಕರಿಗೆ ಇದೆಂಥಾ ಪರಿಸ್ಥಿತಿ
ಸುಬ್ರಮಣ್ಯ ಪೊಲೀಸ್ ಠಾಣೆಯ ಈ ಹಳೆಯ ಕಟ್ಟಡ ಹೆಂಚಿನದ್ದು. ಮಳೆ ಬಿದ್ದಾಗಲೆಲ್ಲಾ ಸೋರುವ ಚಾವಣಿಗೆ ತಾತ್ಕಾಲಿಕವಾಗಿ ಟರ್ಪಾಲು ಹೊದಿಸಿ ಅದರಲ್ಲೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ದೃಶ್ಯ ಕಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ.
ಮಂಗಳೂರು: ಪವಿತ್ರ ತೀರ್ಥ ಕ್ಷೇತ್ರದಿಂದಾಗಿ ಸುಬ್ರಮಣ್ಯ ದೇಶದಲ್ಲೇ ಹೆಸರುವಾಸಿ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಾಲಯ, ರಾಜ್ಯದ ಶ್ರೀಮಂತ ದೇವಾಲಯವೂ ಹೌದು. ಆದರೆ ಇಲ್ಲಿನ ಪೊಲೀಸ್ ಠಾಣೆಯ ಪರಿಸ್ಥಿತಿಯನ್ನು ನೋಡಿದರೆ, ನಿಮಗೆ ಅಚ್ಚರಿಯಾಗಬಹುದು. ಇಲ್ಲಿನ ಆರಕ್ಷಕರು ಇಷ್ಟೊಂದು ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರಾ ಎಂದು ಅನಿಸದೇ ಇರದು.
ಇದು ಕುಕ್ಕೆ ಸುಬ್ರಮಣ್ಯದ ಪೊಲೀಸ್ ಠಾಣೆಯ ಪರಿಸ್ಥಿತಿ. ಮಳೆಗಾಲದಲ್ಲಿ ಬಡವರ ಮನೆ ಸೋರುವುದನ್ನು ಕೇಳಿದ್ದೇವೆ. ಅಂತಹ ಸಂದರ್ಭದಲ್ಲಿ ಮನೆಗೆ ಟರ್ಪಾಲು ಹಾಕಿ ಮಳೆಯಿಂದ ನೀರು ಸೋರುವುದಕ್ಕೆ ತಾತ್ಕಾಲಿಕೆ ರಕ್ಷಣೆ ನೀಡುತ್ತಾರೆ. ಆದರೆ ಇಂತಹ ಪರಿಸ್ಥಿತಿ ಪೊಲೀಸ್ ಠಾಣೆಗೆ ಎದುರಾದರೆ ಹೇಗೆ? ಇದು ಊಹೆ ಅಲ್ಲ. ಸುಬ್ರಮಣ್ಯ ಪೊಲೀಸ್ ಠಾಣೆಯ ವಾಸ್ತವ ಸ್ಥಿತಿ. ಮಳೆಗೆ ಚಾವಣಿಯಿಂದ ನೀರು ಸೋರಿಕೆಯಾಗುವುದನ್ನು ತಡೆಯಲು ಪೊಲೀಸರು ಆರಕ್ಷಕ ಠಾಣೆಗೆ ಟರ್ಪಾಲು ಹೊದಿಸಿ ತಾತ್ಕಾಲಿಕ ರಕ್ಷಣೆ ನೀಡಿದ್ದಾರೆ. ಇಂದು ಇಂದು ಮೊನ್ನೆಯಿಂದಲ್ಲ. ಕಳೆದ ಮೂರ್ನಾಲ್ಕು ವರ್ಷಕ್ಕೆ ಇದೇ ಪರಿಸ್ಥಿತಿ ಇದೆಯಂತೆ.
ಟಾರ್ಪಾಲು ಹೊದಿಸಿದ ಚಾವಣಿ ಇರುವ ಪೊಲೀಸ್ ಠಾಣೆಯಲ್ಲಿ ವರ್ಷಗಳಿಂದ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ಇಲ್ಲಿಗೆ ರಾಜ್ಯದ ಗೃಹಸಚಿವರು ಭೇಟಿ ನೀಡಿದ್ದು, ಈ ವೇಳೆ ಪರಿಸ್ಥಿತಿ ನೋಡಿ ಸಚಿವ ಆರಗ ಜ್ಞಾನೇಂದ್ರ ಅಚ್ಚರಿಪಟ್ಟಿದ್ದಾರೆ. ಜನಸಾಮಾನ್ಯರಿಗೆ ರಕ್ಷಣೆ ನೀಡುವ ಪೊಲೀಸ್ ಠಾಣೆಗೆ ರಕ್ಷಣೆ ಇಲ್ಲದೆ ಟರ್ಪಾಲಿನ್ ಹಾಕಿದ್ದನ್ನು ನೋಡಿ, ಗೃಹ ಸಚಿವರೇ ದಂಗಾಗಿದ್ದಾರೆ. ನಮ್ಮ ಪೊಲೀಸರು ಇಷ್ಟೊಂದು ಕಷ್ಟದಲ್ಲಿ ಕರ್ತವ್ಯ ನಿರ್ವಹಿಸಿಸುತ್ತಿದ್ದಾರಾ ಎಂದು ಅಚ್ಚರಿಗೆ ಒಳಗಾಗಿದ್ದಾರೆ.
ಸುಬ್ರಮಣ್ಯ ಪೊಲೀಸ್ ಠಾಣೆಯ ಈ ಹಳೆಯ ಕಟ್ಟಡ ಹೆಂಚಿನದ್ದು. ಮಳೆ ಬಿದ್ದಾಗಲೆಲ್ಲಾ ಸೋರುವ ಚಾವಣಿಗೆ ತಾತ್ಕಾಲಿಕವಾಗಿ ಟರ್ಪಾಲು ಹೊದಿಸಿ ಅದರಲ್ಲೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ದೃಶ್ಯ ಕಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ.
2017ರಲ್ಲೇ ಇಲ್ಲೇ ಪಕ್ಕದಲ್ಲಿ ಹೊಸ ಪೊಲೀಸ್ ಠಾಣೆ ಕಟ್ಟಡಕ್ಕೆ 1.23 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿತ್ತು. ಆದರೆ ಅದು ಟೆಂಡರ್ ಆಗಿ ಬಿಡುಗಡೆಗೊಂಡಾಗ 4 ವರ್ಷ ಕಳೆದಿದ್ದು, ಆ ಮೊತ್ತಕ್ಕೆ ಸುಬ್ರಹ್ಮಣ್ಯ ಠಾಣೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ. ಹೆಚ್ಚುವರಿ ಹಣ ಬೇಕು ಎಂದು ಪೊಲೀಸ್ ಇಲಾಖೆ ಸರ್ಕಾರಕ್ಕೆ ಕೇಳಿಕೊಂಡಿದೆ ಎನ್ನಲಾಗಿದೆ. ಈ ಹೆಚ್ಚುವರಿ ಹಣ ಸೇರ್ಪಡೆಗೊಂಡು ಆ ಅನುದಾನ ಬಿಡುಗಡೆಯಾಗದೆ ಈ ರೀತಿ ಆಗಿದೆ ಎನ್ನಲಾಗಿದೆ.
ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ಗೃಹ ಸಚಿವರು ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯ ಗುತ್ತಿಗೆ ವಹಿಸಿದ್ದ ಇಂಜಿನಿಯರ್‌ಗೆ ಸ್ಥಳದಲ್ಲೇ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಸಚಿವರು, ಒಂದು ವರ್ಷದೊಳಗೆ ಕಟ್ಟಡ ಕಾಮಗಾರಿ ಪೂರ್ತಿಗೊಳಿಸಿ ಹೊಸ ಕಟ್ಟಡಕ್ಕೆ ಸ್ಥಾಳಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ಹಿಂದೆ ಬಂದಾಗಲೂ ಭರವಸೆ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಿಂಗಳ ಹಿಂದೆ ಗೃಹ ಸಚಿವ ಆರಗ ಜಾನೇಂದ್ರ ಬಂದಿದ್ದರು. ಆ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸುಬ್ರಹ್ಮಣ್ಯ ಠಾಣೆಗೆ ಒಂದು ಕೋಟಿ ರೂ ಅನುದಾನವಿದ್ದು, ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಮಾತ್ರ ಗೊತ್ತಾಗಿಲ್ಲ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಚಾವಣಿ ಶಿಥಿಲಗೊಂಡು 3 ರಿಂದ 4 ವರ್ಷಗಳೇ ಆಗಿದೆಯಂತೆ. ಕಟ್ಟಡದ ಒಳಭಾಗದ ಚಾವಣಿ ಶಿಥಿಲಗೊಂಡು ಹೆಚುಗಳ ಮಧ್ಯೆ ಅಲ್ಲಲ್ಲಿ ನೀರು ಸೋರುತ್ತಿದೆ. ಇದರಿಂದಾಗಿ ಪ್ರಮುಖ ದಾಖಲೆಗಳು ಕೂಡಾ ಒದ್ದೆಯಾಗುವ ಸಾಧ್ಯತೆ ಇದೆ. ಅಪರಾಧಿಗಳನ್ನು ದಸ್ತಗಿರಿ ಮಾಡಿ ಕೂಡಿಹಾಕುವ ಕೊಠಡಿಯಲ್ಲೂ ನೀರು ತುಂಬುತ್ತಿದೆ. ಆದರೂ ಪೊಲೀಸರು ಬೇರೆ ದಾರಿ ಇಲ್ಲದೆ ಇದೇ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.