ಕರ್ನಾಟಕದಲ್ಲಿ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಮೊದಲ ಬಾರಿ ಕೌನ್ಸೆಲಿಂಗ್; 31 ಜಿಲ್ಲೆ 90 ನೋಂದಣಾಧಿಕಾರಿಗಳ ವರ್ಗಕ್ಕೆ ಇಂದು ಅಂಕಿತ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಮೊದಲ ಬಾರಿ ಕೌನ್ಸೆಲಿಂಗ್; 31 ಜಿಲ್ಲೆ 90 ನೋಂದಣಾಧಿಕಾರಿಗಳ ವರ್ಗಕ್ಕೆ ಇಂದು ಅಂಕಿತ

ಕರ್ನಾಟಕದಲ್ಲಿ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಮೊದಲ ಬಾರಿ ಕೌನ್ಸೆಲಿಂಗ್; 31 ಜಿಲ್ಲೆ 90 ನೋಂದಣಾಧಿಕಾರಿಗಳ ವರ್ಗಕ್ಕೆ ಇಂದು ಅಂಕಿತ

ಕರ್ನಾಟಕದಲ್ಲಿನ ನೋಂದಣಿ ಮುದ್ರಾಂಕ ಇಲಾಖೆಯಲ್ಲಿನ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಮೊದಲ ಬಾರಿಗೆ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

ಕರ್ನಾಟಕದಲ್ಲಿ ಕೌನ್ಸೆಲಿಂಗ್ ಮೂಲಕ ಉಪನೋಂದಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಕರ್ನಾಟಕದಲ್ಲಿ ಕೌನ್ಸೆಲಿಂಗ್ ಮೂಲಕ ಉಪನೋಂದಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಕೌನ್ಸೆಲಿಂಗ್ ಮೂಲಕ 31 ಜಿಲ್ಲೆಯ 90 ಉಪ ನೋಂದಣಿ ಅಧಿಕಾರಿಗಳನ್ನು ಏಕ ಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಉಪ ನೋಂದಣಾಧಿಕಾರಿಗಳ ವರ್ಗಾವಣೆಯಲ್ಲಿ ಹಣ ವಹಿವಾಟು ಸೇರಿದಂತೆ ಭ್ರಷ್ಟಾಚಾರದ ಬಗ್ಗೆ ಈ ಹಿಂದೆ ಹಲವು ಬಾರಿ ದೂರುಗಳು ಕೇಳಿಬಂದಿದ್ದವು. ವರ್ಗಾವಣೆ ದಂಧೆಯ ಬಗ್ಗೆ ಹಲವು ನಾಯಕರು ಸದನದಲ್ಲೇ ಧ್ವನಿ ಎತ್ತಿದ್ದರು. ಹೀಗಾಗಿ ಈ ಎಲ್ಲಾ ಅವ್ಯವಹಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ವರ್ಗಾವಣೆಯಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವ ಸಲುವಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಸಾಲಿನಿಂದ ಉಪ-ನೋಂದಣಾಧಿಕಾರಿಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸುವುದಾಗಿ ಭರವಸೆ ನೀಡಿದ್ದರು.

ಅದರಂತೆ ಇಂದು ರಾಜ್ಯದ 31 ಜಿಲ್ಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಿ ಕಚೇರಿಗಳಲ್ಲಿ ನೋಂದಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ 90 ಜನ ಕೇಂದ್ರಸ್ಥಾನ ಸಹಾಯಕರು/ ಹಿರಿಯ ಉಪನೋಂದಣಾಧಿಕಾರಿಗಳನ್ನು ಇಂದು ಏಕ ಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಕೌನ್ಸೆಲಿಂಗ್‌ ಏಕೆ

ಈ ವರ್ಗಾವಣೆ ಅವಧಿಯಲ್ಲಿ ಒಂದು ರೂಪಾಯಿ ಸಹ ಹಣ ವಹಿವಾಟು ನಡೆದಿರುವ ಬಗ್ಗೆ ದೂರುಗಳು ಬಂದಿಲ್ಲ ಎಂಬುದು ಉಲ್ಲೇಖಾರ್ಹ ಎನ್ನುವುದು ಸಚಿವ ಕೃಷ್ಣಬೈರೇಗೌಡರ ಸ್ಪಷ್ಟನೆ.

ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್‌ ಅವರ ನೇತೃತ್ವದಲ್ಲಿ ನವೆಂಬರ್‌ 04ರಿಂದಲೇ ಕೌನ್ಸಿಲಿಂಗ್‌ ನಡೆಸಲಾಗಿತ್ತು.

ಈ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ಸ್ವ-ಇಚ್ಚೆಯಿಂದ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆಯ್ಕೆಯನ್ನು ಆಧರಿಸಿ ವರ್ಗಾಯಿಸಿ ಆದೇಶಿಸಲಾಗಿದೆ.

ಈ ನಡುವೆ ಕೆಲವು ಉಪ-ನೋಂದಣಾಧಿಕಾರಿಗಳು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸದಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಈ ಬಗ್ಗೆ ಸ್ಪಷ್ಟ ತೀರ್ಪು ನೀಡಿದ್ದ ನ್ಯಾಯಾಲಯ, “ವರ್ಗಾವಣೆ ವಿಚಾರವು ಸರ್ಕಾರದ ನೀತಿ ನಿರ್ಧಾರವಾಗಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ” ಎಂದು ತಿಳಿಸಿತ್ತು.

ಹೊಸ ನೀತಿ ಜಾರಿ

ಕರ್ನಾಟಕದಲ್ಲಿರುವ ಉಪನೋಂದಣಾಧಿರಿಕಾರಿಗಳನ್ನು ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ಮಾಡುವ ಸಂಬಂಧ ರಾಜ್ಯ ಸಚಿವ ಸಂಪುಟವು ಆರು ತಿಂಗಳ ಹಿಂದೆಯೇ ತೀರ್ಮಾನವನ್ನು ಕೈಗೊಂಡಿತ್ತು. ಇದಕ್ಕೆ ಪ್ರತ್ಯೇಕ ನಿಯಮ ರೂಪಿಸುವುದಾಗಿಯೂ ಹೇಳಿತ್ತು. ಅದರಂತೆಯೇ ಸಚಿವ ಕೃಷ್ಣಬೈರೇಗೌಡ ಅವರು ಇದನ್ನು ಜಾರಿಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದನ್ನು ಇದೇ ವರ್ಷದ ವರ್ಗಾವಣೆಯಲ್ಲಿ ಕೌನ್ಸೆಲಿಂಗ್‌ ಪದ್ದತಿ ಬಳಸಲಾಗಿದೆ.

ಇದುವರೆಗೂ ನೇರವಾಗಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡಲಾಗುತ್ತಿತ್ತು. ಇದನ್ನು ಬದಲಿಸಲಾಗಿದ್ದು, ಈಗಿನಿಂದಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ.

ಬೆಂಗಳೂರು ಸುತ್ತಮುತ್ತ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗಳಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲಿ 5 ವರ್ಷ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿ, ಕೇಂದ್ರ ಕಚೇರಿ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕರನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ತೀರ್ಮಾನ

ಬಿಎಂಆರ್‌ಡಿಎ ವ್ಯಾಪ್ತಿಯ ಹೊರಗಿನ 10 ನಗರಸಭೆಗಳ ವ್ಯಾಪ್ತಿಯ ತಾಲೂಕುಗಳಲ್ಲಿ ಕಳೆದ 5 ವರ್ಷಗಳಲ್ಲಿ 4 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡುತ್ತಿರುವ ಈ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಸಬ್‌ ರಿಜಿಸ್ಟ್ರಾರ್‌, ಹಿರಿಯ ಸಬ್‌ ರಿಜಿಸ್ಟ್ರಾರ್‌ಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಪ್ರಥಮ ದರ್ಜೆ ಸಹಾಯಕರ ವರ್ಗಾವಣೆಯನ್ನು ಮುಂದಿನ ವರ್ಷ ಮಾಡಲಾಗುವುದು. ಈ ಮೂಲಕ ಬಹಳ ವರ್ಷಗಳಿಂದ ಬೆಂಗಳೂರು ಸುತ್ತಮುತ್ತಲ ಕಚೇರಿಗಳಲ್ಲಿರುವ ಅಧಿಕಾರಿಗಳನ್ನು ಹೊರಗೆ ವರ್ಗಾಯಿಸಲಾಗುತ್ತಿದೆ.

ಭೂಮಿ ಮೌಲ್ಯ ದುಬಾರಿಯಾಗಿರುವ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಅಕ್ರಮ ಭೂ ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿವೆ. ನೋಂದಣಿ ಇಲಾಖೆ ವರ್ಗಾವಣೆಯಲ್ಲಿ ಪಾರದರ್ಶಕತೆಗಾಗಿ ಕೌನ್ಸೆಲಿಂಗ್‌ ಪದ್ಧತಿ ಜಾರಿ ಮಾಡಲು ಸಂಪುಟ ತೀರ್ಮಾನಿಸಿದ್ದು, ಅದಕ್ಕಾಗಿ ಈಗಾಗಲೇ ಹೊರಡಿಸಲಾಗಿರುವ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಯಲ್ಲಿ ಶೇಕಡಾವಾರು ಮಿತಿ ಮತ್ತು ಅವಧಿಯನ್ನು ಸಡಿಲಗೊಳಿಸಲು ನಿರ್ಣಯಿಸಲಾಗಿದೆ ಎನ್ನುವುದು ಆರು ತಿಂಗಳ ಹಿಂದೆ ಸಚಿವ ಸಂಪುಟ ಸಭೆ ಬಳಿಕ ಸಚಿವ ಎಚ್.ಕೆ.ಪಾಟೀಲ್‌ ಹೇಳಿದ್ದರು.

Whats_app_banner