ರೋಹಿತ್ ಶರ್ಮಾಗೆ ಬಡ್ತಿ, ಕೆಎಲ್ ರಾಹುಲ್ಗೆ ಹಿಂಬಡ್ತಿ; ಗಬ್ಬಾ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ 11ನಲ್ಲೂ ಅಚ್ಚರಿ ಬದಲಾವಣೆ
India Playing XI: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಅಲ್ಲದೆ, ಪ್ಲೇಯಿಂಗ್ 11ನಲ್ಲೂ ಅಚ್ಚರಿಯ ಎರಡು ಬದಲಾವಣೆ ಖಚಿತ ಎಂದು ವರದಿಯಾಗಿದೆ.
ಪರ್ತ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ತಂಡ, ಅಡಿಲೇಡ್ನಲ್ಲಿ ಮುಗ್ಗರಿಸಿದೆ. ಈಗ ಐಸಿಹಾಸಿಕ ಗಬ್ಬಾ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧತೆ ನಡೆಸಿವೆ. ಸೋಲಿನ ಬಳಿಕ ಪರಾಮರ್ಶೆ ನಡೆಸಿರುವ ಟೀಮ್ ಮ್ಯಾನೇಜ್ಮೆಂಟ್, ಪ್ಲೇಯಿಂಗ್ 11 ಜೊತೆಗೆ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆಗೆ ಚಿಂತನೆ ನಡೆಸಿದೆ. 3ನೇ ಟೆಸ್ಟ್ನಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆಯುವುದಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಲ್ಲಿ ಉಳಿದುಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ.
ಮೊದಲ ಟೆಸ್ಟ್ನಲ್ಲಿ 295 ರನ್ಗಳ ಅಂತರದಿಂದ ಗೆದ್ದಿದ್ದ ಟೀಮ್ ಇಂಡಿಯಾ, ಎರಡನೇ ಟೆಸ್ಟ್ನಲ್ಲಿ 10 ವಿಕೆಟ್ಗಳಿಂದ ಹೀನಾಯವಾಗಿ ಸೋಲು ಕಂಡಿದೆ. 2020-21ರಲ್ಲಿ ಇದೇ ಮೈದಾನದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಭಾರತ, ಅಮೋಘ ಗೆಲುವು ಸಾಧಿಸಿ ಐಸಿಹಾಸಿಕ ಸರಣಿಗೆ ಮುತ್ತಿಕ್ಕಿತ್ತು. ಇದೀಗ ಅಂತಹದ್ದೇ ಗೆಲುವು ಕಾಣುವ ವಿಶ್ವಾಸದಲ್ಲಿದೆ. ಅದಕ್ಕಾಗಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮತ್ತು ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಲು ಬಯಸಿದೆ.
ಆರಂಭಿಕ ಸ್ಥಾನಕ್ಕೆ ರೋಹಿತ್ ವಾಪಸ್
ಪರ್ತ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿದು ಅದ್ಭುತ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಎಲ್ ರಾಹುಲ್ 2ನೇ ಪಂದ್ಯದಲ್ಲೂ ಅದೇ ಸ್ಥಾನದಲ್ಲಿ ಬ್ಯಾಟ್ ಬೀಸಿದ್ದರು. ರೋಹಿತ್ ಶರ್ಮಾ ಲಭ್ಯರಾಗಿದ್ದರೂ ತನ್ನ ಸ್ಥಾನವನ್ನು ರಾಹುಲ್ಗೆ ತ್ಯಾಗ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ 2ನೇ ಟೆಸ್ಟ್ನಲ್ಲಿ ಇಬ್ಬರು ಅಂದುಕೊಂಡಂತೆ ಪ್ರದರ್ಶನ ನೀಡಲಿಲ್ಲ. ಹೀಗಾಗಿ, ರಾಹುಲ್ಗೆ ಹಿಂಬಡ್ತಿ ಮತ್ತು ರೋಹಿತ್ಗೆ ಬಡ್ತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ.
ಅದರಂತೆ ರೋಹಿತ್ ಆರಂಭಿಕ ಸ್ಥಾನಕ್ಕೆ ಬಡ್ತಿ ಪಡೆದರೆ, ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಲಿದ್ದಾರೆ. ಐತಿಹಾಸಿಕ ಗಬ್ಬಾ ಟೆಸ್ಟ್ನಲ್ಲಿ ರೋಹಿತ್ ಮತ್ತು ಜೈಸ್ವಾಲ್ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದು, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅಗ್ರ 6 ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ವೇಗ ಮತ್ತು ಸ್ಪಿನ್ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
2ನೇ ಟೆಸ್ಟ್ನಲ್ಲಿ ರೋಹಿತ್-ರಾಹುಲ್ ಪ್ರದರ್ಶನ
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ 37 ರನ್, ಎರಡನೇ ಇನ್ನಿಂಗ್ಸ್ನಲ್ಲಿ 7 ರನ್ ಗಳಿಸಿದ್ದರು.
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್ನಲ್ಲಿ 3 ರನ್, ಎರಡನೇ ಇನ್ನಿಂಗ್ಸ್ನಲ್ಲಿ 6 ರನ್ ಗಳಿಸಿದ್ದರು.
ಬೌಲಿಂಗ್ನಲ್ಲಿ ಎರಡು ಬದಲಾವಣೆ
ಬೌಲಿಂಗ್ನಲ್ಲಿ ಎರಡು ಬದಲಾವಣೆಯಾಗುವುದು ಖಚಿತ ಎಂದು ವರದಿಯಾಗಿದೆ. ನಿತೀಶ್ ಕುಮಾರ್ ರೆಡ್ಡಿ ಆಲ್ರೌಂಡರ್ ಆಗಿ ಕಣಕ್ಕೆ ಇಳಿದರೆ, ಸ್ಪಿನ್ ಆಲ್ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಆರ್ ಅಶ್ವಿನ್ ಅವಕಾಶ ಪಡೆದಿದ್ದರೂ ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿನ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಬದಲಾವಣೆ ಮಾಡಲು ಮ್ಯಾನೇಜ್ಮೆಂಟ್ ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೇಗಿ ಹರ್ಷಿತ್ ರಾಣಾ ಅವರನ್ನು ಕೈಬಿಡಬಹುದು. ಏಕೆಂದರೆ ಎರಡನೇ ಪಂದ್ಯದಲ್ಲಿ ವಿಕೆಟ್ ಪಡೆಯದೆ ತೀವ್ರ ನಿರಾಸೆ ಮೂಡಿಸಿದ್ದರು. ಹೀಗಾಗಿ, ಆಕಾಶ್ ದೀಪ್ಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಜೊತೆಗೆ ಆಕಾಶ್ ದೀಪ್ ಅವಕಾಶ ಪಡೆದರೆ ಆಸೀಸ್ ಬ್ಯಾಟಿಂಗ್ ಕೋಟೆಯನ್ನು ಛಿದ್ರಗೊಳಿಸಲು ಭರ್ಜರಿ ಸಿದ್ಧತೆ ನಡೆಸುವುದು ಅನಿವಾರ್ಯ.
3ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ XI
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ರೋಹಿತ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.