ಪ್ರಾಣಕ್ಕೆ ಕಂಟಕವಾಗಬಹುದು ಅಧಿಕ ರಕ್ತದೊತ್ತಡ, ಹೈ ಬಿಪಿ ಸಮಸ್ಯೆ ಬರಬಾರದು ಅಂದ್ರೆ ಜೀವನಶೈಲಿಯಲ್ಲಿ ಈಗಲೇ ಈ ಬದಲಾವಣೆ ತನ್ನಿ
ಇತ್ತೀಚಿನ ದಿನಗಳಲ್ಲಿ ಹಲವರ ಸಾವಿಗೆ ಕಾರಣವಾಗುತ್ತಿರುವ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡವು ಒಂದು. ಇದು ಪರೋಕ್ಷವಾಗಿ ಪ್ರಾಣಕ್ಕೆ ಕಂಟಕವಾಗುತ್ತಿದೆ. ರಕ್ತದೊತ್ತಡ ಬರುವ ಮುನ್ನವೇ ಎಚ್ಚರ ವಹಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಅದಕ್ಕಾಗಿ ಮೊದಲೇ ಮುನ್ನೆಚ್ಚರಿಕೆ ವಹಿಸಿ, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಇತ್ತೀಚಿಗೆ ಲಕ್ಷಾಂತರ ಜನರು ಅಧಿಕ ರಕ್ತದೊತ್ತಡದಿಂದ (ಬಿಪಿ) ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಇತರ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೈಬಿಪಿಯು ಹೃದ್ರೋಗ, ಮಧುಮೇಹ ಮತ್ತು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ಅಧಿಕ ರಕ್ತದೊತ್ತಡ ಬರದಂತೆ ಎಚ್ಚರಿಕೆ ವಹಿಸಬೇಕು. ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು, ಮುಂಚಿತವಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ ಅಧಿಕರಕ್ತದೊತ್ತಡದ ಸಮಸ್ಯೆಯಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.
ಉಪ್ಪನ್ನು ಮಿತವಾಗಿ ಸೇವಿಸಿ
ಪ್ರತಿನಿತ್ಯವೂ ಹೆಚ್ಚೆಚ್ಚು ಉಪ್ಪನ್ನು ಸೇವಿಸುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಅದಕ್ಕಾಗಿ ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಮಿತಿಗೊಳಿಸಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಉಪ್ಪು ಸೇವಿಸಬಾರದು. ಉಪ್ಪಿನ ಬಳಕೆಯ ಪ್ರಮಾಣ ಸ್ವಲ್ಪ ಕಡಿಮೆ ಇರಬೇಕು. ಸೋಡಿಯಂ ಅಧಿಕವಾಗಿರುವ ಸಂಸ್ಕರಿತ ಮತ್ತು ಪ್ಯಾಕ್ ಮಾಡಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
ನಿಯಮಿತ ವ್ಯಾಯಾಮ ಅತ್ಯಗತ್ಯ
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದು. ಇದು ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು. ವಾರದಲ್ಲಿ ಕನಿಷ್ಠ 150 ನಿಮಿಷಗಳ ತೀವ್ರವಾದ ವ್ಯಾಯಾಮ ಮಾಡಿ. ನೀವು ಬ್ರಿಸ್ಕ್ ವಾಕ್, ಸೈಕ್ಲಿಂಗ್ ಮತ್ತು ಈಜುವುದನ್ನು ಸಹ ಮಾಡಬೇಕು. ಶಕ್ತಿ ತರಬೇತಿ ವ್ಯಾಯಾಮಗಳನ್ನು ಮಾಡುವುದು ಸಹ ಒಳ್ಳೆಯದು.
ತೂಕ ಏರಿಕೆಯಾಗದಂತೆ ನೋಡಿಕೊಳ್ಳುವುದು
ಸ್ಥೂಲಕಾಯತೆಯು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ದೇಹದ ತೂಕವನ್ನು ಎತ್ತರಕ್ಕೆ ಅನುಗುಣವಾಗಿ ನಿರ್ವಹಿಸಬೇಕು. ಅಧಿಕ ತೂಕವನ್ನು ತಪ್ಪಿಸಿ. ವ್ಯಾಯಾಮ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು.
ಈ ಆಹಾರಗಳ ಸೇವನೆಗೆ ಒತ್ತು ನೀಡಿ
ಅಧಿಕ ರಕ್ತದೊತ್ತಡವನ್ನು ತಡೆಯಲು DASH (DASH) ಎಂಬ ಆಹಾರ ಯೋಜನೆಯೂ ಇದೆ. ಇದರ ಭಾಗವಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೊಟೀನ್ ಮತ್ತು ಕೊಬ್ಬಿನಾಂಶ ಕಡಿಮೆ ಇರುವ ಡೈರಿ ಉತ್ಪನ್ನಗಳನ್ನು ತಿನ್ನಬೇಕು. ಈ ಆಹಾರದಲ್ಲಿ ಸೋಡಿಯಂ, ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರಬೇಕು. DASH ಆಹಾರವನ್ನು ಅನುಸರಿಸುವುದರಿಂದ ಅಧಿಕ ರಕ್ತದೊತ್ತಡದ ಅಪಾಯವನ್ನು ನಿಯಂತ್ರಿಸಲು ಸಾಧ್ಯವಿದೆ. ಅದಕ್ಕಾಗಿಯೇ ನಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳು, ಹಣ್ಣುಗಳು, ಸಿರಿಧಾನ್ಯಗಳು ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ಸೇರಿಸಲು ನಾವು ಕಾಳಜಿ ವಹಿಸಬೇಕು. ಬೀಜಗಳು, ಬೀನ್ಸ್, ಮೀನು ಮತ್ತು ಮೊಟ್ಟೆಗಳಂತಹ ಪ್ರೊಟೀನ್ ಭರಿತ ಆಹಾರವನ್ನು ಸೇವಿಸಿ.
ಧೂಮಪಾನ ಮತ್ತು ಮಧ್ಯಪಾನ ಮಾಡದಿರುವುದು
ಧೂಮಪಾನ ಹಾಗೂ ಮಧ್ಯಪಾನದ ಅಭ್ಯಾಸಗಳು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. ಈ ಅಭ್ಯಾಸಗಳು ತುಂಬಾನೇ ಅಪಾಯಕಾರಿ. ಆದ್ದರಿಂದ ಈ ಅಭ್ಯಾಸಕ್ಕೆ ಮಿತಿ ಹೇರಬೇಕು. ಸಾಧ್ಯವಾದರೆ ಸಿಗರೇಟ್, ಬೀಡಿ ಸೇದುವುದು, ಮದ್ಯಪಾನ, ತಂಬಾಕು ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಒತ್ತಡ ನಿರ್ವಹಣೆ
ನೀವು ಒತ್ತಡದಲ್ಲಿದ್ದರೆ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಈ ಒತ್ತಡವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ದೈನಂದಿನ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಕಾಳಜಿಯನ್ನು ತೆಗೆದುಕೊಳ್ಳಬೇಕು. ಯೋಗ, ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕು. ನಿಮಗೆ ಏನು ಒತ್ತಡವಿದೆ ಎಂಬುದನ್ನು ಕಂಡುಹಿಡಿಯಿರಿ ಮತ್ತು ಅದನ್ನು ಕಡಿಮೆ ಮಾಡಿ. ಪುಸ್ತಕಗಳನ್ನು ಓದುವುದು ಮತ್ತು ನೆಚ್ಚಿನ ಸಂಗೀತವನ್ನು ಕೇಳುವುದು ಸಹ ಒತ್ತಡವನ್ನು ಕಡಿಮೆ ಮಾಡುತ್ತದೆ.
ಈ ಎಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಅಧಿಕರಕ್ತದೊತ್ತಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬಿಪಿ ಹೆಚ್ಚಾಗುವುದು ಹಾಗೂ ಬಿಪಿ ಕಡಿಮೆಯಾಗುವುದು ಎರಡೂ ಅಪಾಯಕಾರಿ. ಈ ಎರಡರಿಂದಲೂ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ, ಆ ಕಾರಣಕ್ಕೆ ಬಿಪಿ ನಿಯಂತ್ರಣದಲ್ಲಿ ಇಡುವುದು ಅತ್ಯವಶ್ಯವಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ