Forest Tales: ಕಾಡು ಸೇರಿವೆ ನಾಡಾನೆ, ಮಠ- ದೇಗುಲಗಳಲ್ಲೀಗ ಯಾಂತ್ರಿಕ ಗಜ ಸೇವೆ, ಕೇರಳದಲ್ಲಿ ರಾಮನ್- ಮೈಸೂರಲ್ಲಿ ಶಿವ !
ಮಠಗಳಿಗೆ ಮತ್ತೆ ಆನೆ ಬಂದಿತು. ಅದು ನಿಜ ಆನೆಯಲ್ಲ. ಬದಲಿಗೆ ಯಾಂತ್ರಿಕ ಆನೆ. ನಾಡಾನೆ ಕಾಡು ಸೇರಿದ ಮೇಲೆ ಈಗ ಬಂದ ಈ ಹೊಸ ಆನೆ ವಿಶೇಷ ಏನು. ಈ ವಾರದ ಕಾಡಿನ ಕಥೆಯಲ್ಲಿ..
ದಶಕದ ಹಿಂದಿನ ನೆನಪು, ಮೈಸೂರಿನ ಮುಖ್ಯ ರಸ್ತೆಯಲ್ಲಿ ಏಕಾಏಕಿ ಆನೆ ಓಡಿ ಬಂದಿತು. ಜನ ಅದನ್ನು ಹಿಂಬಾಲಿಸಿದರು. ಸಿಬ್ಬಂದಿಯೂ ಹಿಂದೆಯೇ ಓಡಿದರು. ವಾಹನಗಳು ಪಕ್ಕದಲ್ಲಿಯೇ ಸಂಚರಿಸಿದರು. ಒಂದು ಗಂಟೆಯ ನಂತರ ಆನೆಯನ್ನು ಸರಪಳಿ ಹಾಕಿ ಹಿಡಿಯಲಾಯಿತು. ಆನೆಯಿಂದ ಯಾರಿಗೂ ಅನಾಹುತ ಆಗಲಿಲ್ಲ. ಆದರೆ ಆನೆ ಹೀಗೆ ಓಡಿ ಬಂದಿದ್ದು ಎಲ್ಲಿಂದ ಎಂದು ನೋಡಿದಾಗ ಅದು ಮೈಸೂರು ಅರಮನೆಯ ದಿಕ್ಕನ್ನು ತೋರಿಸಿತ್ತು. ಮೈಸೂರು ಅರಮನೆ ಎಂದರೆ ಎಂತಹ ಆಕರ್ಷಣೆ. ನಾವು ಅಲ್ಲಿ ಇರಬಾರದೇ ಎಂದು ಬಯಸುವವರು ಅಧಿಕ. ಆನೆಗೂ ಅರಮನೆಯ ಆತಿಥ್ಯವೇ ಇದ್ದಿರಬೇಕು ಎಂದು ನಾವು ಖಂಡಿತಾ ಭಾವಿಸಿಕೊಳ್ಳುತ್ತೇವೆ. ಅರಮನೆಯ ವಾಸದಿಂದ ಕಸಿವಿಸಿಕೊಂಡು ಓಡಿ ಬಂದಿದ್ದ ಇಂದಿರಾ ಆನೆ ವರ್ತನೆ ಹೀಗೆಕೇ ಎಂದು ಅಲ್ಲಿನ ಆನೆ ಮನೆಯ ಮಾವುತರು, ಕವಾಡಿಗರನ್ನು ಕೇಳಿದರೆ ಅವರು ಹೇಳಿದ್ದು ಆನೆಗೆ ಅರಮನೆ ಸಹವಾಸ ಬೇಡ ಎನ್ನಿಸುತ್ತದೆ. ಇಲ್ಲಿ ಅವುಗಳಿಗೆ ಸಾಂಗತ್ಯವೇ ಇಲ್ಲ. ಸಂಗಾತಿಯೇ ಇಲ್ಲದೇ ಯಾರು ತಾನೆ ಇರಬಲ್ಲರು. ಅರಮನೆಯಲ್ಲಿ ಆರು ಹೆಣ್ಣಾನೆಗಳಿವೆ. ಒಂದಾದರೂ ಗಂಡಾನೆ ಬೇಡವೇ. ಕೊನೆಗೆ ಅರಮನೆಯವರಿಗೆ ಈ ಮಾಹಿತಿ ಕಿವಿಗೆ ಬಿದ್ದು ಎಲ್ಲ ಆನೆಗಳನ್ನೂ ಕಾಡಿಗೆ ಕಳುಹಿಸುವ ತೀರ್ಮಾನಕ್ಕೆ ಬಂದರು. ವರ್ಷಕ್ಕೆ ಒಮ್ಮೆ ದಸರಾ ಆನೆಗಳೊಂದಿಗೆ ಜತೆಯಾಗುತ್ತಿದ್ದ ಮೈಸೂರು ಅರಮನೆ ಆನೆಗಳಿಗೆ ಅರಣ್ಯ ಸೇರಿದ ಖುಷಿ. ಇಂದಿರಾ ಅರಮನೆ ಬಿಟ್ಟು ಓಡಿದ್ದು ಏನೆಲ್ಲಾ ಬದಲಾವಣೆಗೆ ನಾಂದಿ ಹಾಡಿತು.
ಮಠಗಳ ನಂಟು
ಕರ್ನಾಟಕ ಏಷ್ಯಾದಲ್ಲಿಯೇ ಅತಿ ಹೆಚ್ಚು ಕಾಡಾನೆ ಹೊಂದಿರುವ ರಾಜ್ಯ. ಅಷ್ಟೇ ಅಲ್ಲ. ಸಾಕಾನೆಗಳ ವಿಚಾರದಲ್ಲೂ ಕರ್ನಾಟಕದ್ದೇ ಮೊದಲ ಸ್ಥಾನ. ಏಕೆಂದರೆ ಕರ್ನಾಟಕದಲ್ಲಿ ಸಿಗುವ ಆನೆಗಳ ಸಂತತಿ ಅಷ್ಟು ಗಟ್ಟಿಮುಟ್ಟು. ಈ ಕಾರಣದಿಂದ ಹೊರ ರಾಜ್ಯಗಳಲ್ಲೂ ನಮ್ಮ ಆನೆಗಳಿಗೆ ಬೇಡಿಕೆ.
ಹಿಂದೆಲ್ಲಾ ಮಠ, ದೇಗುಲಗಳಲ್ಲಿ ಆನೆಗಳನ್ನು ಇಟ್ಟುಕೊಳ್ಳುವುದು ಸಂಪ್ರದಾಯವೇ. ಈ ಆನೆಗಳನ್ನು ನಿತ್ಯ ಪೂಜೆ, ದೇಗುಲ ಇಲ್ಲವೇ ಮಠದ ಮೆರವಣಿಗೆ, ಇತರೆ ಚಟುವಟಿಕೆಗೆ ಬಳಸಿಕೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕಾಡಿನಲ್ಲಿದ್ದ ಆನೆಗಳು ಶಿಬಿರಕ್ಕೆ ಬಂದವು. ಅಲ್ಲಿಂದ ಅವುಗಳು ಮಠ ಮಾನ್ಯ ಸೇರಿಕೊಂಡವು. ಕೆಲವು ಸರ್ಕಸ್ ಕಂಪೆನಿ ಪಾಲಾಗಿ ಮನರಂಜನೆಯ ಸರಕೂ ಆದವು.
ಪ್ರಾಣಿ ಹಿಂಸೆ ವಿರೋಧಿ ಹೋರಾಟ
ದಶಕಗಳ ಹಿಂದೆಯೇ ಆನೆಗಳ ಬಳಕೆ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲನ್ನು ಪ್ರಾಣಿ ಪ್ರಿಯರು ಏರಿದರು. ಅದರ ಹಿಂದೆ ಇದ್ದ ಶಕ್ತಿ ಕೇಂದ್ರದಲ್ಲಿ ಸಚಿವೆಯಾಗಿದ್ದ ಮನೇಕಾ ಗಾಂಧಿ. ಅವರ ನಿರಂತರ ಹೋರಾಟ, ಕಾನೂನು ಬೆಂಬಲದ ಫಲವಾಗಿ ಈಗ ಮಠ, ಮಂದಿರಗಳಲ್ಲಿ ಆನೆಗಳಿಲ್ಲ. ಅವುಗಳೆಲ್ಲಾ ಅರಣ್ಯ ಇಲಾಖೆ ಸುಪರ್ದಿಗೆ ಸೇರಿಕೊಂಡಿವೆ.
ಆನೆಗಳನ್ನು ದಸರೆ ಅಂಬಾರಿ ಹೊರಲು ಬಳಸಬಾರದು ಎನ್ನುವ ಒತ್ತಡ ಆಗ ಕೇಳಿ ಬಂದಿತ್ತು. ಆಗ ಸಿಎಂ ಆಗಿದ್ದ ಜೆ.ಎಚ್.ಪಟೇಲ್ ಅವರು ಹಾಸ್ಯಭರಿತವಾಗಿಯೇ ಉತ್ತರಿಸಿದ್ದರು. ಅಂಬಾರಿಯನ್ನು ಆನೆಗಳು ಹೊರದೇ ಮನೇಕಾ ಹೊರ್ತಾಳಂತೇನು ಎಂದು ಪಟೇಲರು ತಮ್ಮದೇ ಶೈಲಿಯಲ್ಲಿ ಕಿಚಾಯಿಸಿದ್ದರು.
ಕೇರಳದಲ್ಲಿನ ಕಥೆ
ಕರ್ನಾಟಕದಲ್ಲಿಯೇ ಧರ್ಮಸ್ಥಳ, ಮೈಸೂರಿನ ಸುತ್ತೂರು ಮಠ, ಸಿರಿಗೆರೆ ಮಠ ಸೇರಿ ಹಲವು ಕಡೆ ಸಾಕಾನೆಗಳ ಬಳಕೆ ಇತ್ತು.ಸುತ್ತೂರು ಮಠದ ಆನೆಯೇ ಒಮ್ಮೆ ಮೆರವಣಿಗೆ ಕರೆದೊಯ್ಯುವಾಗ ನಿಯಂತ್ರಣ ಕಳೆದುಕೊಂಡು ಆನಂತರ ಅದನ್ನು ಹಿಡಿಯುವಷ್ಟರಲ್ಲಿ ಸಾಕು ಬೇಕಾದ ಸನ್ನಿವೇಶವನ್ನೂ ನೋಡಿದ್ದಾಗಿತ್ತು.
ಕರ್ನಾಟಕದಲ್ಲಿ ಹೀಗೆ ಮಠ, ದೇಗುಲಗಳಲ್ಲಿದ್ದ ಆನೆಗಳು ಆಗಾಗ ಭಕ್ತರ ಮಿತಿ ಮೀರಿದ ಪ್ರೀತಿಗೆ ಬಿಸಿ ಮುಟ್ಟಿಸಿದ್ದ ಸನ್ನಿವೇಶಗಳು ಇವೆ. ಕರ್ನಾಟಕದ್ದು ಒಂದು ಕಥೆಯಾದರೆ, ಕೇರಳದಲ್ಲಿ ಆನೆಗಳಿಲ್ಲದ ದೇಗುಲಗಳೇ ಇಲ್ಲ. ಅಲ್ಲಿನ ಮಠಗಳಿಗೆ ಆನೆಗಳೇ ಕಳಶಪ್ರಾಯ. ಆನೆಗಳನ್ನು ಹಿಂಸಿಸುವ ಮುಂಚೂಣಿ ರಾಜ್ಯ ಕೇರಳವೇ ಆಗಿತ್ತು. ಹಿಂಸೆಯನ್ನು ತಾಳಲಾರದೇ ಅಲ್ಲಿನ ದೇಗುಲದ ಆನೆಗಳು 15 ವರ್ಷದಲ್ಲೇ 526 ಜನರನ್ನು ಕೊಂದು ಹಾಕಿದ್ದವು. ನಾಲ್ಕು ದಶಕ ದೇವಸ್ಥಾನದಲ್ಲೇ ಬಂಧಿಯಾಗಿದ್ದ ಆನೆಯೊಂದು 13 ಜನರನ್ನು ಸಾಯಿಸಿತ್ತು. ಇದರಲ್ಲಿ 6 ಮಂದಿ ಆನೆ ದೇಖರೇಖಿ ಮಾಡುವ ಮಾವುತರೇ ಎಂದರೆ ನಂಬಲೇಬೇಕು.
ಈ ಎಲ್ಲಾ ಕಾರಣಗಳು ಆನೆಗಳನ್ನು ಮಠ, ದೇಗುಲ, ಸರ್ಕಸ್, ಅರಮನೆ ಸಹಿತ ಎಲ್ಲಾ ಕಡೆಯಿಂದಲೂ ವಾಪಾಸ್ ಪಡೆಯುವ ಆದೇಶವೂ ಆಯಿತು. ನಿಧಾನವಾಗಿಯಾದರೂ ಇದು ಜಾರಿಗೆ ಬಂದಿತು.
ಸರ್ಕಾರದ ಉತ್ಸವಗಳಿಂದ ವಿನಾಯಿತಿ ನೀಡಿ ಖಾಸಗಿ ಸುಪರ್ದಿಯಲ್ಲಿದ್ದ ಆನೆಗಳನ್ನು ವಶಕ್ಕೆ ಪಡೆದದ್ದು, ಆನೆಗಳ ಸಾಕಿದ್ದ ಮಠಗಳು ಮುಂದೇನು ಪ್ರಶ್ನೆ ಹಾಕಿದ್ದು ದಶಕದ ಹಿಂದಿನ ಮಾತು.
ಹೊಸ ಆನೆ ಹೋದ ವರ್ಷ ಬಂತು
ವರ್ಷದ ಹಿಂದಿನ ಘಟನೆಯಿದು. ಕೇರಳದ ತ್ರಿಶೂರ್ ನಗರದ ಇರಿಂಜಡಪ್ಪಿಲ್ಲಿ ಶ್ರೀಕೃಷ್ಣ ದೇಗುಲಕ್ಕೆ ಮತ್ತೆ ಭಾರೀ ಗಾತ್ರದ ಆನೆ ಬಂದೇ ಬಿಟ್ಟಿತು. ಮೊರದಗಲದ ಕಿವಿಯನ್ನು ಅಲ್ಲಾಡಿಸುವ ಆನೆ ಕಣ್ಣು ಪಿಳಿಪಿಳಿ ಬಿಡುವುದನ್ನು ಕಂಡವರು ಆಶ್ಚರ್ಯ ಚಕಿತರಾದರು. ಜತೆಗೆ ಬಂದಿದ್ದವರು ಕೊಡುತ್ತಿದ್ದ ಸೂಚನೆಯನ್ನು ಅದು ಪಾಲಿಸುತ್ತಿತ್ತು. ಈ ಆನೆ ನಿಯಂತ್ರಿಸಲು ಕೋಲು ಇರಲಿಲ್ಲ. ಬದಲಿಗೆ ಕೈಯಲ್ಲೊಂದು ಯಂತ್ರ ಇತ್ತು. ಯಂತ್ರ ಒತ್ತಿದಂತೆ ಆನೆ ಮುಂದೆ ಸರಿಯುತ್ತ ಹೋಗುತ್ತಲೇ ಇತ್ತು. ಇದು ನಿಜವಾದ ಆನೆಯಾಗಿರಲಿಲ್ಲ. ಬದಲಿಗೆ ಯಾಂತ್ರಿಕ ಆನೆ( mechanical elephant ) . ಅದಕ್ಕೆ ಇಟ್ಟಿದ್ದ ಹೆಸರು ರಾಮನ್. ಆನೆಯನ್ನು ರೂಪಿಸಿದ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್( PETA) ಇಂಡಿಯಾ ಸಂಸ್ಥೆ. ಪ್ರಾಣಿಗಳ ಹಕ್ಕುಗಳಿಗೆ ಹೋರಾಡುತ್ತಿರುವ ಪೇಟಾ ಮನುಷ್ಯರಿಂದ ಆನೆ ಸಹಿತ ಯಾವುದೇ ಪ್ರಾಣಿಗಳನ್ನು ದೂರ ಮಾಡುವುದಕ್ಕಿಂತ ಅವುಗಳನ್ನು ಪರ್ಯಾಯವಾಗಿ ಹೇಗೆ ಬಳಸಬಹುದು ಎನ್ನುವ ಯೋಚನೆ ಮಾಡಿತು. ಇದರ ಮುಂದುವರೆದ ಭಾಗವೇ ಯಾಂತ್ರಿಕ ಆನೆ. ಸುಮಾರು 800 ಕೆಜಿ ತೂಗುವ 11 ಎತ್ತರದ ಆನೆ ಕಬ್ಬಿಣ ಹಾಗೂ ರಬ್ಬರ್ ಬಳಸಿ ಮಾಡಿರುವಂತದ್ದು. ಸುಮಾರು 5 ಲಕ್ಷ ರೂ. ಈ ಆನೆಯ ವೆಚ್ಚ. ಮಾಮೂಲಿ ಆನೆಯಂತ ಈ ರೋಬೋಟಿಕ್ ಆನೆಯು ನಾಲ್ವರನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಸಂಪ್ರದಾಯದ ಚಟುವಟಿಕೆಗಳನ್ನು ಈ ಆನೆ ನಡೆಸಿಕೊಡಲಿದೆ ಎಂದು ಪೇಟಾ ಆಗ ಹೇಳಿಕೊಂಡಿತ್ತು. ಒಂದು ವರ್ಷದಿಂದ ಕೇರಳದ ಯಾಂತ್ರಿಕ ಆನೆ ರಾಮನ್ ಅಲ್ಲಿನ ದೇಗುಲದ ಭಾಗವೇ ಆಗಿ ಹೋಗಿದೆ.
ಸುತ್ತೂರು ಮಠದಲ್ಲಿ ಶಿವ
ವರ್ಷದ ನಂತರ ಅದೇ ಯಾಂತ್ರಿಕ ಆನೆ ಈಗ ಮೈಸೂರಿಗೆ ಬಂದಿದೆ. ಮೈಸೂರಿನ ಹಳೆಯ ಹಾಗೂ ಪ್ರಸಿದ್ದ ಮಠಗಳಲ್ಲಿ ಒಂದಾದ ಸುತ್ತೂರು ಮಠದ ಅಂಗಳಕ್ಕೆ ಯಾಂತ್ರಿಕ ಆನೆ ಕಾಲಿಟ್ಟಿದೆ. ಇದರ ಹೆಸರು ಶಿವ. ಈ ಆನೆ ಇನ್ನು ಮುಂದೆ ನಂಜನಗೂಡು ತಾಲ್ಲೂಕಿನ ಸುತ್ತೂರು ಮಠದ ಆವರಣದಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲಿದೆ. ಈ ಆನೆಯನ್ನು ಪೇಟಾ ಇಂಡಿಯಾದವರೇ ರೂಪಿಸಿದ್ದು. ಮಠಕ್ಕೆ ಹಸ್ತಾಂತರ ಮಾಡಲಿದ್ಧಾರೆ. ಮಂಗಳವಾರ ಮಧ್ಯಾಹ್ನ ಈ ಆನೆಯನ್ನು ಬರ ಮಾಡಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೇ ಯಾಂತ್ರಿಕ ಶಿವ ನನ್ನು ಸ್ವಾಗತಿಸುವರು.
ಪೇಟಾ ಇಂಡಿಯಾ ಸಂಸ್ಥೆಯೇ ಯಾಂತ್ರಿಕ ಆನೆ ಸಿದ್ದಪಡಿಸುವ ಮುನ್ನ ಸೆಲೆಬ್ರೆಟಿಯನ್ನು ಹುಡುಕಿ ಅವರಿಂದಲೇ ಇದರ ಖರ್ಚನ್ನು ತುಂಬಿ ಸಮಾಜಮುಖಿ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡುತ್ತಾರೆ. ಕೇರಳ ಆನೆಯನ್ನು ನಟಿ ಪಾರ್ವತಿ ತಿರುವೊತ್ತು ಅವರು ತಮ್ಮ ಖರ್ಚಿನಲ್ಲಿ ಹಸ್ತಾಂತರಿಸಿದ್ದರು. ಕರ್ನಾಟಕದ ಮೊದಲ ಪ್ರಯತ್ನವಾಗಿ ಸುತ್ತೂರು ಮಠಕ್ಕೆ ಆನೆಯನ್ನು ತಾರಾ ದಂಪತಿಗಳಾದ ದಿಗಂತ್ ಹಾಗೂ ಐಂದ್ರಿತಾ ರೇ ಅವರು ನೀಡುತ್ತಿರುವುದು ವಿಶೇಷ.
ಆನೆಗಳು ಸಂಘಜೀವಿಗಳು. ಕುಟುಂಬವಿಲ್ಲದೇ ಒಂಟಿಯಾಗಿ ಅವು ಬದುಕುವುದು ಕಡಿಮೆ. ಅವುಗಳ ಹಕ್ಕು ರಕ್ಷಣೆ ಭಾಗವಾಗಿ ಆನೆಗಳೇನೋ ಕಾಡು ಸೇರಿಕೊಂಡವು. ಮನುಷ್ಯ ಹೆಚ್ಚೆಚ್ಚು ಯಾಂತ್ರಿಕವಾಗುತ್ತಿರುವ ಈ ಹೊತ್ತಿನಲ್ಲಿ ಯಾಂತ್ರಿಕ ಆನೆಯ ಸಾಂಗತ್ಯ ಬಳಸುತ್ತಿದ್ದಾನೆ. ಇದು ನಾಡಾನೆ ಕಾಡು ಸೇರಿದ ಮಹಿಮೆಯೇ ಇರಬೇಕು.