Forest tales: ಕಾಡು- ನಾಡು ನಡುವಿನ ಮಿಷನ್ ಬಿದಿರಿನ ಕಥೆ ವ್ಯಥೆ; ಕರ್ನಾಟಕದಲ್ಲಿ ಬಿದಿರಿಗೆ ಬೆಲೆ ತಂದವರಿಗೂ ಸಂಕಟ
Forest Tales Bamboo Story ಮತ್ತೊಂದು ಬಿದಿರಿನ ದಿನ( World Bamboo day2023) ಮುಗಿದಿದೆ. ಭಾರತ, ಕರ್ನಾಟಕದಲ್ಲಿ ಬಿದಿರು ಬೆಳೆ, ವಲಯದ ಕಥೆ ವ್ಯಥೆ ಮಾತ್ರ ಬೇಸರದಾಯಕವಾಗಿದೆ.
ಕಾಡಿನ ರಸ್ತೆ ಹಿಡಿದು ಹೊರಡಿ. ನಿಮಗೆ ಮುಗಿಲೆತ್ತರಕ್ಕೆ ಬೆಳದ ಗಿಡ ಕಾಣುತ್ತದೆ. ಅದು ನಮ್ಮ ಬದುಕಿನ ಭಾಗವೇ ಆಗಿರುವ ಬಿದಿರು. ದೊಡ್ಡ ಊರೊಂದರ ರಸ್ತೆಗಳಲ್ಲಿ ಹೊರಟರೆ ಬಿದಿರು ನಿಲ್ಲಿಸಿದ ಪೊದೆಗಳು ಕಾಣಬಹುದು. ಬಿದಿರು ಕಾಡಿಗೂ ಬೇಕು. ನಾಡಿಗೂ ಬೇಕು. ಬಿದಿರಿಗೆ ನಾಡಿನ ಜತೆಯಲ್ಲಿ ಕಾಡಿಗೂ ನಂಟಿದೆ. ಹಾಗೆಂದು ಬಿದಿರಿನ ಭಿನ್ನ ಕಥೆ- ವ್ಯಥೆಯನ್ನು ನಾವು ಕೇಳಲೇಬೇಕು.
ಹುಟ್ಟುವುದರಿಂದ ಹಿಡಿದು ಸಾಯುವವರೆಗೂ ನಮ್ಮ ಬದುಕಿಗೆ ಹಲವು ರೀತಿಯಲ್ಲಿ ಆಸರೆಯಾಗುತ್ತದೆ ಬಿದಿರು. ಕಾಡಿನಲ್ಲೂ ಬಿದಿರು ಇದೆಯೆಂದರೆ ಕಳೆ ಕಡಿಮೆ ಎನ್ನುವ ನಂಬಿಕೆ.
ಬಿದಿರು ನೀನಾರಿಗಲ್ಲದವಳೂ.. ಎನ್ನುವ ಜನಪದ ಗೀತೆಯನ್ನು ನೀವು ಕೇಳಿರಬಹುದು. ಆ ಹಾಡು ಅಕ್ಷರಶಃ ಸತ್ಯವೂ ಹೌದು.
ಕಾಡು ಬಿದಿರನ ಕಥೆ
ಕರ್ನಾಟಕದಲ್ಲಿ ಬಹುತೇಕ ಎಲ್ಲ ಕಾಡಿನಲ್ಲೂ ಬಿದಿರು ಇದೆ. ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಯ ಭದ್ರಾ ಹುಲಿಧಾಮ, ಕೊಡಗು- ಮೈಸೂರಿನ ನಾಗರಹೊಳೆ, ಚಾಮರಾಜನಗರ-ಮೈಸೂರು ಜಿಲ್ಲೆಯ ಬಂಡೀಪುರ, ಚಾಮರಾಜನಗರ- ಮಂಡ್ಯ-ರಾಮನಗರದ ಕಾವೇರಿ ವನ್ಯಧಾಮ.. ಹೀಗೆ ಎಲ್ಲ ಕಡೆಯೂ ಯಥೇಚ್ಛವಾಗಿ ಬಿದಿರು ಇದೆ. ಬಹುತೇಕ ಕಡೆ ಕೆಲ ವರ್ಷಗಳ ಹಿಂದೆ ಹೂವು ಬಿಟ್ಟು ಬಿದಿರು ನಾಶವಾಗಿ ಹೋಗಿತ್ತು. ಕಟ್ಟೆ ರೋಗ ಬಂದು ಬಿದಿರು ಹಾಳಾಯಿತು ಎಂದು ಅರಣ್ಯ ಇಲಾಖೆ ಆಗಲೇ ಹೇಳಿತ್ತು. ಇದೇ ವೇಳೆ ನಾಗರಹೊಳೆ, ಭದ್ರಾ, ಬಂಡೀಪುರ ಭಾಗದಲ್ಲಿ ಕಾಡಿನ ಬೆಂಕಿಯಿಂದಲೂ ಬಿದಿರು ನಾಶವಾಗಿ ಹೋಯಿತು. ಅಂದರೆ ಒಮ್ಮೆ ಬೆಳೆದ ಬಿದಿರಿನ ಅವಧಿ ನಲವತ್ತರಿಂದ ಅರವತ್ತು ವರ್ಷ. ಅದು ಮರುಹುಟ್ಟು ಪಡೆಯುತ್ತದೆ. ಹೂವು ಬಿಟ್ಟು ಬಿದಿರು ಸಂಪೂರ್ಣ ನಾಶವಾಗಿ ಮತ್ತೆ ಹೊಸದಾಗಿಯೇ ಹುಟ್ಟಬೇಕು. ಭದ್ರಾ, ನಾಗರಹೊಳೆ, ಬಂಡೀಪುರದ ಕೆಲವು ಕಡೆ ಈಗಾಗಲೇ ಬಿದಿರು ಮತ್ತೆ ಹುಟ್ಟಿದೆ. ಬೆಂಕಿ ಬಿದ್ದ ಕಡೆ ಮಾತ್ರ ಅಷ್ಟಾಗಿ ಬಿದಿರು ಬೆಳೆದಿಲ್ಲ. ಇಲ್ಲಿ ಅರಣ್ಯ ಇಲಾಖೆಯವರು ಬಿದಿರಿನ ಬೀಜ ತಂದು ಹಾಕಿ ಬೆಳೆಯಲು ಪ್ರಯತ್ನಿಸಿದ್ದಾರೆ. ಏಕೆಂದರೆ ಬಿದಿರು ಇದ್ದರೆ ಇತರೆ ಕಳೆಗಳು ಕಾಡಿನಲ್ಲಿ ಬೆಳೆಯುವುದಿಲ್ಲ. ವಿಶೇಷವಾಗಿ ಲಂಟಾನ ಎಂಬ ರಾಕ್ಷಸ ಕಳೆ ಬೆಳೆಯಿತೆಂದರೆ ಕಾಡು ನಾಶವಾಯಿತು ಎಂದೇ ಅರ್ಥ. ನಮ್ಮಲ್ಲಿ ಬಂಡೀಪುರ, ಭದ್ರಾದಲ್ಲಿ ಬಿದಿರಿನ ಪ್ರಮಾಣ ಕಡಿಮೆಯಾಗಿ ಲಂಟಾನವೇ ಹೆಚ್ಚು ಬೆಳೆದಿದೆ. ಬಿದಿರು ಆನೆಗಳಿಗೆ ಪ್ರಿಯವಾದ ಆಹಾರವೂ ಹೌದು. ಮರಿಯಾನೆಗಳಿಂದ ಹಿಡಿದು ಗುಂಪುಗಳು ಬಿದಿರನ್ನು ನಿತ್ಯ ಯಥೇಚ್ಛವಾಗಿ ತಿನ್ನುತ್ತವೆ. ಇತರೆ ಆಹಾರದೊಂದಿಗೆ ಆನೆ ಬಿದಿರನ್ನೂ ಇಷ್ಟಪಡುವುದರಿಂದ ಬಿದಿರು ಹುಡುಕಿಕೊಂಡು ಬರುತ್ತವೆ. ಬಿದಿರಿನ ಆಹಾರ ಕೊರತೆಯೂ ಕಾಡಾನೆಗಳು ನಾಡಿನತ್ತ ಮುಖ ಮಾಡಲು ಕಾರಣವೂ ಆಗಿದೆ. ಕಾಡಿನಲ್ಲಿನ ಬಿದಿರಿನ ಕೊರತೆ ಪರೋಕ್ಷವಾಗಿ ವನ್ಯಜೀವಿ- ಮಾನವ ಸಂಘರ್ಷ ಅಧಿಕಗೊಳ್ಳಲು ಕೊಡುಗೆ ನೀಡಿದೆ. ಇದು ಕಾಡಿನಲ್ಲಿನ ಬಿದಿರಿನ ಕಥೆ.
ಬಿದಿರು ಮಿಷನ್‌ನ ವ್ಯಥೆ
ದೇಶದಲ್ಲಿ ಕಾಡಿನ ಜತೆಗೆ ನಾಡಿನಲ್ಲೂ ಬಿದಿರು ಹೆಚ್ಚು ಬೆಳೆಯುವಂತಾಗಬೇಕು. ಕಾಡಿಗೂ ನಾಡಿಗೂ ನಂಟು ಗಟ್ಟಿಯಾಗಬೇಕು. ಬಿದಿರು ಬೆಳೆವ ರೈತರಿಗೂ ಆದಾಯ ಬರಬೇಕು ಎನ್ನುವ ಆಶಯದೊಂದಿಗೆ ಎರಡೂವರೆ ದಶಕದ ಹಿಂದೆ ಭಾರತದಲ್ಲಿ ಬಿದಿರು ಮಿಷನ್ ಆರಂಭಿಸಲಾಯಿತು. ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಬಿದಿರು ಮಿಷನ್‌ಗೆ ನೂರು ಕೋಟಿ ರೂ. ಅನುದಾನದೊಂದಿಗೆ ಹತ್ತು ವರ್ಷದ ಮೊದಲ ಮಿಷನ್‌ಗೆ ಚಾಲನೆ ಕೊಟ್ಟರು. ಆನಂತರ ಎರಡನೇ ಅವಧಿಯೂ ಮುಗಿದು ಈಗ ಮೂರನೇ ಅವಧಿಯ ಬಿದಿರು ಮಿಷನ್ ಚಾಲ್ತಿಯಲ್ಲಿದೆ. ಬಿದಿರು ಮಿಷನ್ ಅಡಿ ಹಲವಾರು ಯೋಜನೆಗಳನ್ನೇನೂ ಜಾರಿಗೊಳಿಸಲಾಗಿದೆ. ಬಿದಿರು ಬೆಳೆಯುವವರಿಗೆ, ವಹಿವಾಟಿನಲ್ಲಿ ತೊಡಗಿರುವವರಿಗೂ ವಿಶೇಷ ಸಹಾಯಧನ ಸಹಿತ ಹಲವು ಕಾರ್ಯಕ್ರಮಗಳೇನೂ ಇವೆ. ಆದರೆ ಭಾರತದಲ್ಲಿ ಹತ್ತು ಮಿಲಿಯನ್ ಎಕರೆಯಲ್ಲಿ ಬಿದಿರು ಬೆಳೆಯಲಾಗುತ್ತಿದೆ. ಕೋಟಿಗಟ್ಟಲೇ ವಹಿವಾಟು ನಡೆಯುತ್ತಿದೆ. ಕರ್ನಾಟಕದಲ್ಲೂ 45 ಲಕ್ಷ ಎಕರೆ ಪ್ರದೇಶದಲ್ಲಿ ಬಿದಿರು ಇದೆ. ವಾರ್ಷಿಕ 1200 ಕೋಟಿ ರೂ.ಗೂ ಅಧಿಕ ವಹಿವಾಟು ಇದೆ. ಕರ್ನಾಟಕ ಅರಣ್ಯ ಇಲಾಖೆ ಅಡಿಯಲ್ಲಿ ಬಿದಿರು ಮಿಷನ್ ದಶಕದ ಹಿಂದಿನಿಂದಲೇ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯೂ ರೈತರು, ಕರಕುಶಲಕರ್ಮಿಗಳನ್ನು ಉತ್ತೇಜಿಸುವ ಚಟುವಟಿಕೆಗಳಿವೆ. ಅವು ಬರೀ ಯೋಜನೆಗಳಾಗಿ ಉಳಿದಿವೆ.
ಮಿಷನ್ ಮಾತು ನಂಬಿ ಹಲವು ರೈತರು ಬಿದಿರು ಬೆಳೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಸೂಕ್ತ ನೀತಿಗಳ ಜತೆಗೆ ಮಾರುಕಟ್ಟೆ ಇಲ್ಲದೇ ಬೆಳೆದ ರೈತರ ಬಿದಿರು ಒಣಗಿ ಹೋಗುತ್ತಿದೆಯೇ ಹೊರತು ಆದಾಯವನ್ನು ತರುತ್ತಿಲ್ಲ. ಸೂಕ್ತ ಮಾರುಕಟ್ಟೆಯೇ ಇಲ್ಲದೇ ಇದ್ದರೆ ಬೆಳೆದು ಏನು ಪ್ರಯೋಜನ ಎನ್ನುವುದು ರೈತರ ಪ್ರಶ್ನೆ. ಹೀಗೆನ್ನೆತ್ತಲೇ ಬಿದಿರು ಬೆಳೆಯುವುದರಿಂದ ರೈತರೂ ವಿಮುಖರಾಗುತ್ತಿದ್ದಾರೆ.
ಬಿದಿರು ಬೆಳೆಯುವ ರೈತರು, ಕರಕುಶಲಕಾರರು, ಉದ್ಯಮಿಗಳು ಹೀಗೆ ತಮಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ಇನ್ನಿಲ್ಲದ ಹರಸಾಹಸ ಪಡಬೇಕು. ಆನ್‌ಲೈನ್ ವ್ಯವಸ್ಥೆಯೂ ಇಲ್ಲಿ ಕೊಟ್ಟ ಅರ್ಜಿ ಎಲ್ಲಿ ಹೋಗಿದೆ ಎಂದು ಕೇಳಲು ಆಗದ ಸ್ಥಿತಿ. ಬಿದಿರು ಮಿಷನ್‌ಗೆ ಏಕ ರೂಪವೇ ಇಲ್ಲ. ಕರ್ನಾಟಕದಲ್ಲಿ ಅರಣ್ಯ ಇಲಾಖೆ ಜತೆಗೆ ಇದ್ದರೆ ಕೇರಳದಲ್ಲಿ ಕೈಗಾರಿಕಾ ಇಲಾಖೆಯ ಜತೆಗೆ ಜೋಡಿಸಲಾಗಿದೆ. ತಮಿಳುನಾಡಿನಲ್ಲಿ ತೋಟಗಾರಿಕೆ ಇಲಾಖೆಯಡಿ ಬಿದಿರು ಮಿಷನ್ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಬಿದಿರು ಎನ್ನುವುದು ಒಂದು ರಾಜ್ಯದಲ್ಲಿ ಅರಣ್ಯವಾದರೆ, ಮತ್ತೊಂದು ಕಡೆ ತೋಟಗಾರಿಕೆ ಬೆಳೆ. ಇನ್ನೊಂದು ರಾಜ್ಯದಲ್ಲಿ ಕೃಷಿ-ತೋಟಗಾರಿಕೆಗಿಂತ ಕೈಗಾರಿಕಾ ಉತ್ಪನ್ನ. ಹೀಗೆ ಏಕ ರೂಪದ ನೀತಿಯಿಲ್ಲದೇ ಇಡೀ ಯೋಜನೆ ಜಾರಿಯಲ್ಲಿಯೇ ಎಡವಿದೆ ಎನ್ನುವುದು ಬೇಸರದಾಯಕ.
ಚೀನಾದಲ್ಲಿ ಭಾರತದ ಅರ್ಧದಷ್ಟು ಪ್ರದೇಶದಲ್ಲೂ ಬಿದಿರು ಬೆಳೆಯುವುದಿಲ್ಲ. ಆದರೆ ಅಲ್ಲಿನ ವಹಿವಾಟು, ಕೃಷಿಕರು, ಸಾಮಾನ್ಯರು ತೊಡಗಿಸಿಕೊಳ್ಳುವ ಪ್ರಮಾಣ ಅಧಿಕ. ಬಿದಿರು ಬಳಸಲು ಸೂಕ್ತ ಮಾರುಕಟ್ಟೆ ರೂಪಿಸಿ ಬೆಳೆಯುವವರಿಗೂ ಗೌರವ ಸಿಗುವಂತೆ ಮಾಡಿರುವ ಚೀನಾ ನಮಗಿಂತ ಬಹು ಮುಂದೆ ಹೋಗಿದೆ. ವಿಯೆಟ್ನಾಂ, ಕಾಂಬೋಡಿಯಾ ದಂತಹ ಪುಟ್ಟ ದೇಶಗಳೂ ಬಿದಿರಿನಲ್ಲಿ ಸ್ವಾವಲಂಬಿಯಾಗಿವೆ. ಭಾರತ ಮಾತ್ರ ಯಥೇಚ್ಛ ಬಿದಿರು ಬೆಳೆಯುವ ಸನ್ನಿವೇಶವಿದ್ದರೂ, ಕರಕುಶಲತೆ, ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದರೂ ಹಿಂದೆಯಂತೂ ಬಿದ್ದಿದೆ. ಇದು ನಾಡ ಬಿದಿರಿನ ವ್ಯಥೆ.
ಮನೆಯನ್ನೇ ಬಿದಿರು ಮಾಡಿಕೊಂಡ ಲಕ್ಷ್ಮಣ್
ಬಿದಿರು ಕರ್ನಾಟಕದಲ್ಲಿ ಹಲವು ಕಡೆ ಬೆಳೆಯುವ ಹಿಂದೆ ಅರಣ್ಯ ಇಲಾಖೆಯಲ್ಲಿ ಮೂರೂವರೆ ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದ ಎ.ಸಿ.ಲಕ್ಷ್ಮಣ ಅವರ ಶ್ರಮವೂ ಅಧಿಕ. ಅರಣ್ಯ ಹಾಗೂ ಪರಿಸರ ಇಲಾಖೆ ಕಾರ್ಯದರ್ಶಿಯೂ ಆಗಿದ್ದ ಲಕ್ಷ್ಮಣ ಅವರು ನಿವೃತ್ತರಾಗಿಯೇ 27 ವರ್ಷವಾಗಿದೆ. 85 ರ ಇಳಿ ವಯಸ್ಸಿನಲ್ಲೂ ಅವರು ಸುಮ್ಮನೇ ಕುಳಿತಿಲ್ಲ. ಈಗಲೂ ಅವರಿಗೆ ರೈತರದ್ದೇ ಧ್ಯಾನ. ರೈತರು ಬೆಳೆದ ಉತ್ಪನ್ನಗಳನ್ನು ಉಪಯೋಗಿಸಿಕೊಂಡೇ ಹಲವರು ಕೋಟ್ಯಾಧಿಪತಿಗಳಾದರು. ಬೆಳೆದವರೂ ಕೋಟ್ಯಧಿಪತಿಗಳಾಗಬೇಕು ಎನ್ನುವುದು ಅವರ ಚಿಂತನೆ. ಅದಕ್ಕಾಗಿಯೇ ರೈತರಿಗ ಬಿದಿರು ಬೆಳೆಯುವಂತೆ ಪ್ರೋತ್ಸಾಹಿಸಿದವರಲ್ಲಿ ಅವರೂ ಒಬ್ಬರು. ಬಿದಿರು ಬೆಳೆದು ಅವರಿಗೆ ಮಾರುಕಟ್ಟೆಯ ಸಂಪರ್ಕವನ್ನೂ ಬೆಳೆಸಿದವರು.
ಇಲಾಖೆಯಲ್ಲಿದ್ದಾಗ ಕೊಡಗು, ಮೈಸೂರು, ಚಾಮರಾಜನಗರ, ಬಳ್ಳಾರಿ, ಚಿಕ್ಕಮಗಳೂರು ಸಹಿತ ಹಲವು ಕಡೆ ಅರಣ್ಯ ಭಾಗದಲ್ಲಿ ಬಿದಿರು ಬೆಳೆಯಲು ವಿಶೇಷ ಮುತುವರ್ಜಿ ವಹಿಸಿದವರು. ಬಿದಿರು ನಂಬಿ ಬದುಕುವ ಮೇದಾರರು ಈಗಲೂ ಲಕ್ಷ್ಮಣ್ ಅವರನ್ನು ಹೆಡ್ ಮೇದ ಎಂದು ಪ್ರೀತಿಯಿಂದಲೇ ಕರೆಯುತ್ತಾರೆ.
ದಶಕದ ಹಿಂದೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ನಡೆಯಿತು. ಆಗ ಅರಸು ಅವರ ಹೆಸರಿನಲ್ಲಿ ನಾಗರಹೊಳೆ ಸಮೀಪ ಬಿದಿರು ವನ ರೂಪಿಸಿ ಎಪ್ಪತ್ತು ಎಕರೆಯಲ್ಲಿ ಬಿದಿರು ವನವೂ ಆಗಿ ಏಳು ತಳಿಯ ಬಿದಿರುಗಳು ಇಲ್ಲಿ ಬೆಳೆದಿವೆ.
ಅವರನ್ನು ಅರಣ್ಯ ಇಲಾಖೆ ಬಿದಿರಿನ ಲಕ್ಷ್ಮಣ್ ಎಂದೇ ಈಗಲೂ ಕರೆಯುತ್ತದೆ. ಮೈಸೂರಿನ ಗೋಕುಲಂನಲ್ಲಿರುವ ಮನೆಯೂ ಬಿದಿರು ವನವೇ. ವಿಶ್ವದ ವಿವಿಧ ದೇಶಗಳ ಹದಿನಾಲ್ಕು ಬಿದಿರು ತಳಿಗಳನ್ನು ಮನೆಯ ಸುತ್ತಲೂ ಬೆಳೆದಿದ್ದಾರೆ. ಹೊರ ದೇಶಕ್ಕೆ ಹೋದರೆ ಆ ದೇಶದ ಬಿದಿರು ತಳಿ ತರುತ್ತಾರೆ. ಯಾರಾದರೂ ಕೇಳಿದರೆ ಅವರಿಗೆ ಬಿದಿರು ತಳಿ ಕೊಡುತ್ತಾರೆ. ಬಿದಿರ ಧ್ಯಾನದ ನಡುವೆ ಅವರ ಬದುಕು ಸಾಗಿದೆ.
ಬಿದಿರಿಗೆ ಹೊಸ ರೂಪ ಕೊಟ್ಟ ಪರಮೇಶ್ವರ್
ಕೇರಳ ಮೂಲದವರಾದರೂ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಪರಮೇಶ್ವರ್ ಅವರು ಬಿದಿರನ್ನು ಹಲವು ಕಡೆ ಯಶಸ್ವಿಯಾಗಿ ಬಳಸಿ ಬಿದಿರು ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.
ಷೇರು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ ಪರಮೇಶ್ವರ್ ಅವರಿಗೆ ಒಂದೂವರೆ ದಶಕದ ಹಿಂದೆ ಕರಕುಶಲ ಕಲಾವಿದರೊಬ್ಬರ ಭೇಟಿಯಾಗಿ ಬಿದಿರಿನಿಂದ ರೂಪಿಸಿದ್ದ ಕೆಲ ವಸ್ತುಗಳು ಆಕರ್ಷಿಸಿತ್ತು. ಬಿದಿರಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಿಳಿದುಕೊಳ್ಳುತ್ತಾ ಹೋದರು. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಸಲಹೆ ಕೇಳಿ ಪರಮೇಶ್ವರ್ ಇಮೇಲ್ ಹಾಕಿದ್ದರು. ಅವರಿಂದ ಉತ್ತರ ಬಂದಿತ್ತು. ಈ ಅಧಿಕಾರಿ ಭೇಟಿ ಮಾಡಿ. ಅವರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯಿದು. ಬಿದಿರಿನ ಕುರಿತು ನಿಮಗೆ ಎಲ್ಲಾ ಮಾರ್ಗದರ್ಶನ ಸಿಗಲಿದೆ ಎಂದು ಅಬ್ದುಲ್ ಕಲಾಂ ಅವರು ಉತ್ತರ ನೀಡಿದ್ದರು. ಅವರ ಸಲಹೆಯಂತೆ ತಿವಾರಿ ಎನ್ನುವ ಅಧಿಕಾರಿ ಭೇಟಿ ಮಾಡಿದಾಗ ಪರಮೇಶ್ವರ್ ಅವರಿಗೆ ಸೂಕ್ತ ಮಾರ್ಗದರ್ಶನವೇ ದೊರೆತಿತ್ತು.
ರೈತಸೇತುವಾಗಿ ಬಿದಿರಿನ ವಹಿವಾಟು ಮಾಡೋಣ ಎಂದುಕೊಂಡರು. ಸಣ್ಣ ಯೋಜನೆಗಳೊಂದಿಗ ಆರಂಭಿಸಿ ಈಗ ಐದಾರು ರಾಜ್ಯಗಳಲ್ಲಿ ತಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಿದ್ದಾರೆ. ಅವೆಲ್ಲವೂ ಬಿದಿರಿನ ಯೋಜನೆಗಳೇ. ಕೆಫೆಟೆರಿಯಾ, ಸಭಾ ಕೊಠಡಿ, ಗೋಶಾಲೆ, ಮೇಲ್ಛಾವಣಿ ಹೀಗೆ ಸಣ್ಣ ಪುಟ್ಟ ಯೋಜನೆ ರೂಪಿಸಿದರು. ಕೊಯಮತ್ತೂರು ಸ್ವಾರ್ಟ್ ಸಿಟಿ ಯೋಜನೆಯಡಿ ಹಲವು ಕಡೆ ರೂಪಿಸಿರುವ ಬಿದಿರಿನ ಪರಿಸರ ಸ್ನೇಹಿ ಯೋಜನೆ ಮೆಚ್ಚುಗೆ ಕೂಡ ಪಡೆದಿವೆ. ಮಹಾರಾಷ್ಟ್ರದ ನಾಗ್ಪುರ, ಗೋವಾದಲ್ಲೂ ಯೋಜನೆ ರೂಪಿಸುತ್ತಿದ್ದಾರೆ. ಕರ್ನಾಟಕದಲ್ಲೂ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ಬಿದಿರಿನ ಬಳಕೆಯ ಯೋಜನೆ ರೂಪಿಸಿ ಯಶಸ್ವಿಯೂ ಆಗಿದ್ದಾರೆ.
ಕರ್ನಾಟಕ ಸಹಿತ ದಕ್ಷಿಣದ ರಾಜ್ಯಗಳಲ್ಲಿ ಬಿದಿರಿನ ಬೆಳೆ ಇದ್ದರೂ ವಹಿವಾಟು ಚಟುವಟಿಕೆ ಅಡ್ಡಿಗಳೂ ಇವೆ. ಇದರಿಂದ ಈಶಾನ್ಯ ರಾಜ್ಯದ ಅಸ್ಸಾಂನಿಂದಲೇ ಪ್ರತಿ ತಿಂಗಳು ಬಿದಿರನ್ನು ಅವರು ತರಿಸುತ್ತಾರೆ. ಅಸ್ಸಾಂನಲ್ಲಿ ಬಿದಿರು ಮಾರಾಟ ಇದ್ದುದರಲ್ಲಿ ಉತ್ತಮ ಎನ್ನುವುದು ಪರಮೇಶ್ವರ್ ಅವರ ಅಭಿಪ್ರಾಯ.
ಬಿದಿರು ಉತ್ಪನ್ನಗಳನ್ನೇ ಬಳಸಿ ವಾರ್ಷಿಕ ಎರಡು ಕೋಟಿ ರೂ.ವರೆಗೂ ವಹಿವಾಟು ನಡೆಸುವ ಪರಮೇಶ್ವರ್ ಅವರಿಗೆ ಇನ್ನಷ್ಟು ವಿಸ್ತರಣೆ ಮಾಡುವ ಬಯಕೆಯೂ ಇದೆ. ಆದರೆ ಬಿದಿರು ಯೋಜನೆಗಳ ಅಡೆತಡೆಗಳು ಕಟ್ಟಿ ಹಾಕುತ್ತಿವೆ. ಬಿದಿರು ಬೆಳೆ ಬಳಕೆ ನಡುವಿನ ಕಥೆ ವ್ಯಥೆ ಹೀಗೆಯೇ ಮುಂದುವರಿದಿದೆ.
-ಕುಂದೂರು ಉಮೇಶಭಟ್ಟ
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)
ವಿಭಾಗ