HD Kumaraswamy: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಪ್ರಯೋಗ; ನಾಳೆ 1 ಲಕ್ಷ ಕಾರ್ಯಕರ್ತರ ಜತೆ ವಿಡಿಯೋ ಕಾನ್ಫರೆನ್ಸ್
ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಪ್ರಯೋಗ; ನಾಳೆ 1 ಲಕ್ಷ ಕಾರ್ಯಕರ್ತರ ಜತೆ ವಿಡಿಯೋ ಕಾನ್ಫರೆನ್ಸ್

HD Kumaraswamy: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಪ್ರಯೋಗ; ನಾಳೆ 1 ಲಕ್ಷ ಕಾರ್ಯಕರ್ತರ ಜತೆ ವಿಡಿಯೋ ಕಾನ್ಫರೆನ್ಸ್

ಮಾಜಿ ಸಿಎಂ ಹೆಚ್ಡಿಕೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ನಾಳೆ (ಫೆ.20, ಸೋಮವಾರ) ಏಕಕಾಲಕ್ಕೆ ವಿಡಿಯೋ ಕಾನ್ಫರೆನ್ಸ್ ಕಾಲ್ ಮೂಲಕ ಕಾರ್ಯಕರ್ತರ ಜತೆ ಚರ್ಚೆ ನಡೆಸಲಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (ಫೋಟೋ-ಫೈಲ್)
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (ಫೋಟೋ-ಫೈಲ್)

ಬೆಂಗಳೂರು: ಜೆಡಿಎಸ್ ಸಂಘಟನೆ ಹಾಗೂ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ನಾಳೆ (ಫೆ.20, ಸೋಮವಾರ) ಪಕ್ಷದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಜತೆ ನೇರವಾಗಿ ಫೋನ್ ಕರೆಯಲ್ಲಿ ಮಾತನಾಡಲಿದ್ದಾರೆ.

ಸ್ವತಃ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿರುವ ಮಾಜಿ ಸಿಎಂ, ನಾಳೆ ಬೆಳಗ್ಗೆ 11 ರಿಂದ 12 ಗಂಟೆಗೆ ಬೆಂಗಳೂರಿನಲ್ಲಿ ಕಾರ್ಯಕರ್ತರ ಜತೆ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡುವುದಾಗಿ ಹೇಳಿದ್ದಾರೆ.

ನಾನು ಮಾತನಾಡಲಿರುವ ಎಲ್ಲರೂ ಬೂತ್ ಮಟ್ಟದ ಕಾರ್ಯಕರ್ತರಾಗಿದ್ದು, ಪಂಚರತ್ನ ರಥಯಾತ್ರೆ ಕಾರಣದಿಂದ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿ ಮಾಡಲು ಆಗುತ್ತಿಲ್ಲ. ಹೀಗಾಗಿ ಮೊಬೈಲ್ ಮೂಲಕ ಎಲ್ಲರನ್ನೂ ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಸವಾಲುಗಳಿಗೆ ಪರಿಹಾರವನ್ನೂ ಸೂಚಿಸಿದ್ದೇನೆ

ಈಗಾಗಲೇ ಪಂಚರತ್ನ ರಥಯಾತ್ರೆ ಮೂಲಕ 67 ದಿನಗಳಲ್ಲಿ ರಾಜ್ಯದ 65 ಕ್ಷೇತ್ರಗಳನ್ನು ಕ್ರಮಿಸಿದ್ದೇನೆ. ಪ್ರತಿ ಕ್ಷೇತ್ರದಲ್ಲಿಯೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ನೇರವಾಗಿ ಸಂಪರ್ಕ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಆವರ ಸವಾಲುಗಳಿಗೆ ಪರಿಹಾರವನ್ನೂ ಸೂಚಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾರ್ಯಕರ್ತರು ಪಕ್ಷದ ಆಸ್ತಿ. ಅವರ ಜತೆ ಸದಾ ನಿಲ್ಲುವುದು ನನ್ನ ಕರ್ತವ್ಯ. ಈ ಚುನಾವಣೆ ಬಹಳ ಮುಖ್ಯವಾಗಿದ್ದು, ರಾಜ್ಯ ರಾಜಕಾರಣಕ್ಕೆ ಮಹತ್ವದ ತಿರುವು ಕೊಡಲಿದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಈಗಾಗಲೇ ಅನೇಕ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಮ್ಮ ಕಾರ್ಯಕರ್ತರಿಗೆ ಅನಗತ್ಯ ಕಿರುಕುಳ ನೀಡುತ್ತಿವೆ.

ಆಡಳಿತ ಪಕ್ಷ ಬಿಜೆಪಿಯಂತೂ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಬೆದರಿಕೆ ಹಾಕುವ ವ್ಯರ್ಥ ತಂತ್ರ ನಡೆಸುತ್ತಿದೆ. ಇದಕ್ಕೆಲ್ಲಾ ಚರಮಗೀತೆ ಹಾಡಬೇಕು ಹಾಗೂ ಕಾರ್ಯಕರ್ತರ ಜತೆ ಬಲವಾಗಿ ನಿಲ್ಲಬೇಕು ಎನ್ನುವುದು ನನ್ನ ಉದೇಶ. ಈ ಕಾರಣಕ್ಕಾಗಿ ಈ ಫೋನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮ

ಬೂತ್ ಮಟ್ಟದಲ್ಲಿ ಪಕ್ಷ ಬಲವಾಗಿದೆ. ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮತ್ತಷ್ಟು ಶಕ್ತಿ ತುಂಬುವ ಹಾಗೂ ಅವರ ಆತ್ಮ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಹೊಸ ಪ್ರಯೋಗ:

ಏಕಕಾಲಕ್ಕೆ ಒಂದು ಲಕ್ಷ ಕಾರ್ಯಕರ್ತರ ಜತೆ ಸಂಪರ್ಕ ಸಾಧಿಸಿ ಮೊಬೈಲ್ ಮೂಲಕ ಮಾತನಾಡುವ ಈ ಪ್ರಯೋಗ ರಾಜ್ಯ ರಾಜಕಾರಣದಲ್ಲಿ ಇದೇ ಮೊದಲು ಎಂದಿರುವ ಮಾಜಿ ಮುಖ್ಯಮಂತ್ರಿಗಳು, ನಮ್ಮ ಪಕ್ಷ ಸಂಘಟನಾತ್ಮಕವಾಗಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.

ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಕೆಎನ್ ತಿಪ್ಪೇಸ್ವಾಮಿ, ಇಂಚರ ನಾರಾಯಣಸ್ವಾಮಿ, ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಕೋಲಾರದ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್, ಮುಳಬಾಗಿಲು ಅಭ್ಯರ್ಥಿ ಸಮೃದ್ಧಿ ಮಂಜುನಾಥ್, ಬಂಗಾರಪೇಟೆ ಅಭ್ಯರ್ಥಿ ಮಲ್ಲೇಶ್ ಬಾಬು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಕಾಶ್ ಇತರರು ಹಾಜರಿದ್ದರು.

ಜೆಡಿಎಸ್ ಗೆ ಸೇರ್ಪಡೆ

ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹಾಗೂ ಕೋಲಾರದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮತ್ತು ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್‍ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

Whats_app_banner