Gandhi Jayanti 2023: ಎರಡು ದಶಕದಲ್ಲಿ ಹದಿನೆಂಟು ಬಾರಿ ಕರ್ನಾಟಕಕ್ಕೆ ಬಂದಿದ್ದರು ಗಾಂಧಿ
ಮಹಾತ್ಮಾ ಗಾಂಧೀಜಿ ಅವರು ಎರಡು ದಶಕಗಳ ಅವಧಿಯಲ್ಲಿ 18 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಗಾಂಧೀ ಜಯಂತಿ ಅಂಗವಾಗಿ ಅವರ ಪ್ರವಾಸ ಕುರಿತ ಒಂದು ಸ್ಥೂಲ ಪರಿಚಯ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿತ್ತು. ಅವರು ರಾಜ್ಯದಲ್ಲಿ 1915-40 ರ ಅವಧಿಯಲ್ಲಿ 18 ಬಾರಿ ಸ್ವಾತಂತ್ರ್ಯ ಹೋರಾಟ, ಅಸಹಕಾರ ಚಳವಳಿ, ಸ್ವದೇಶಿ, ಹರಿಜನ ಕಲ್ಯಾಣ ಪಾನ ನಿಷೇಧ ಹೀಗೆ ವಿವಿಧ ಕಾರಣಗಳಿಗಾಗಿ ಪ್ರವಾಸ ಕೈಗೊಂಡಿದ್ದಾರೆ. ಅವರು ಪ್ರಪ್ರಥಮವಾಗಿ ಆಗಮಿಸಿದ್ದು 1915 ರಲ್ಲಿ. ಆದರೆ ಅವರು ಬಂದಾಗಲೆಲ್ಲಾ ಚಾರಿತ್ರಿಕ ಘಟನೆಗಳೇ ಸಂಭವಿಸಿವೆ. ಅವರು ಒಂದೇ ಒಂದು ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷರಾಗಿದ್ದರು. ಅದೂ ಬೆಳಗಾವಿಯಲ್ಲಿ ನಡೆದ ಅಧಿವೇಶನ. ಹೀಗೆ ಕರ್ನಾಟಕ ಗಾಂಧೀಜಿ ಅವರ ಕಾರ್ಯಕ್ಷೇತ್ರವೇ ಆಗಿತ್ತು.
ಬೆಂಗಳೂರು ಭೇಟಿ
ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಕೆಲವೇ ತಿಂಗಳಲ್ಲಿ ಮೇ 1915ರಲ್ಲಿ ಬೆಂಗಳೂರಿಗೆ ಮೊದಲ ಬಾರಿಗೆ ಆಗಮಿಸುತ್ತಾರೆ. ಇದು ರಾಜ್ಯ ಮತ್ತು ರಾಜ್ಯ ರಾಜಧಾನಿಗೆ ಚೊಚ್ಚಲ ಭೇಟಿ. ಗಾಂಧೀಜಿ ತಮ್ಮ ಪತ್ನಿ ಕಸ್ತೂರ ಬಾ ಅವರೊಂದಿಗೆ ಆಗಮಿಸುತ್ತಾರೆ. ಅವರಿಗಾಗಿ ಸಾರೋಟು ಸಿದ್ದವಾಗಿದ್ದರೂ ನಡದೇ ಓಡಾಡುತ್ತಾರೆ. ಆನಂದ ರಾವ್ ವೃತ್ತದಲ್ಲಿರುವ ಶೇಷಾದ್ರಿ ರಸ್ತೆಯ ನಾಲ್ಕನೇ ಮನೆಯಲ್ಲೂ ಅವರ ವಾಸ್ತವ್ಯಕ್ಕೆ ಏರ್ಪಾಟು ಮಾಡಲಾಗಿತ್ತು. ಮೊದಲ ಸಭೆ ನಡೆದ್ದಿದ್ದು ಈಗಿನ ಕಲಾ ಮತ್ತು ವಿಜ್ಞಾನ ಕಾಲೇಜು ಆವರಣದಲ್ಲಿ. ಇದೇ ಸಂದರ್ಭದಲ್ಲಿ ಗೋಖಲೆ ಇನ್ ಸ್ಟಿಟ್ಯೂಟ್ ನಲ್ಲಿ ಗೋಖಲೆ ಅವರ ಭಾವಚಿತ್ರವನ್ನು ಅನಾವರಣ ಮಾಡುತ್ತಾರೆ.
ಹರಿಜನೋದ್ದಾರಕ್ಕೆ ರಾಜ್ಯ ಪ್ರವಾಸ
ನಂತರ 1920 ರಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಮಂಗಳೂರಿಗೆ ಭೇಟಿ ನೀಡಿ ಅಸಹಕಾರ ಚಳವಳಿಯಲ್ಲಿ ಭಾಗಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ನಿಪ್ಪಾಣಿಗೂ ಭೇಟಿ ನೀಡುತ್ತಾರೆ. ನಂತರ ನಡೆದಿದ್ದು ಬೆಳಗಾವಿಯ ಕಾಂಗ್ರೆಸ್ ಅಧಿವೇಶನ. ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಇದಾಗಿತ್ತು.
1934-36 ರಲ್ಲಿ ಹರಿಜನೋದ್ದಾರಕ್ಕೆ ಅವರು ರಾಜ್ಯ ಪ್ರವಾಸ ಮಾಡುತ್ತಾರೆ. ಆಗ ಸಿದ್ದಾಪುರ ಕ್ಕೆ ಬರುತ್ತಾರೆ. ಅಲ್ಲಿ ಒಬ್ಬರು ಗಾಂಧಿಯವರಿಗೆ ಉಂಗುರವನ್ನು ದಾನವಾಗಿ ನೀಡುತ್ತಾರೆ. ಆಗ ಗಾಂಧೀಜಿ ಒಳ್ಳೆಯ ಕೆಲಸ ಮಾಡಿದಿರಿ. ನೀವು ಆ ಅಸಡ್ಡೆ ಪದಾರ್ಥವನ್ನು ನನಗೆ ಕೊಟ್ಟು ಬಿಟ್ಟು ನೀವು ಹಗುರಾದಿರಿ ಎಂದು ಹೇಳಿದಾಗ ಅಲ್ಲಿ ಸೇರಿದವರಿಗೆ ಆಶ್ಚರ್ಯವೋ ಆಶ್ಚರ್ಯ.
1937 ರಲ್ಲಿ ಖಾದಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಾರೆ. ಬೆಳಗಾವಿಯ ಹುದಲಿ, ವಿದುರಾಶ್ವತ್ಥಕ್ಕೆ ಪ್ರವಾಸ ಕೈಗೊಳ್ಳುತ್ತಾರೆ.
ನಂದಿಯಲ್ಲಿ ವಿಶ್ರಾಂತಿ
ಅವರು ರಾಜ್ಯದಲ್ಲಿ ಸುಧೀರ್ಘ ಪ್ರವಾಸ ಮಾಡಿದ್ದು 1936 ರಲ್ಲಿ. ಆರೋಗ್ಯ ಸುಧಾರಣೆಗಾಗಿ ನಂದಿಯಲ್ಲಿ 45 ದಿನಗಳ ಕಾಲ ನೆಲೆಸುತ್ತಾರೆ. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ, ಅಸ್ಪೃಶ್ಯತೆ ನಿವಾರಣೆಗಾಗಿ ಮೈಸೂರಿಗೆ ಮೊದಲ ಬಾರಿಗೆ 1934 ರ ಜನವರಿ 5 ರಂದು ಮತ್ತು 1936 ರಲ್ಲೂ ಆಗಮಿಸುತ್ತಾರೆ. ಆಗ ತಗಡೂರು, ಬದನವಾಳು ಮತ್ತು ನಂಜನಗೂಡಿಗೆ ಪ್ರವಾಸ ಕೈಗೊಂಡು ಅಸ್ಪೃಶ್ಯತಾ ನಿವಾರಣಾ ಆಂದೋಲನ ನಡೆಸುತ್ತಾರೆ.
ಇದಕ್ಕೂ ಮುನ್ನ 1927 ರಲ್ಲಿ ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅತಿಥಿಯಾಗಿ ಮೈಸೂರಿಗೆ ಆಗಮಿಸುತ್ತಾರೆ. ಈ ಭೇಟಿಗೆ ಬ್ರಿಟಿಷರು ತೀವ್ರ ವಿರೋಧ ವ್ಯಕ್ತಪಡಿಸಿರುತ್ತಾರೆ. ಆದರೂ ಒಡೆಯರ್ ಅವರು ಗಾಂಧೀಜಿ ಅವರಿಗೆ ಆತಿಥ್ಯ ನೀಡಿರುತ್ತಾರೆ.
ಬೆಳಗಾವಿ ಕಾಂಗ್ರೆಸ್ ಅಧಿವೇಶನ
ಬೆಳಗಾವಿಗೆ 39 ನೇ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಡಿಸೆಂಬರ್ 26 ಮತ್ತು 27, 1924 ರಲ್ಲಿ ಆಗಮಿಸುತ್ತಾರೆ. ಇದೇ ಅಧಿವೇಶನದಲ್ಲಿ ಬೆಳಗಾವಿಯ ಮಣ್ಣು ಹಿಡಿದು ಅಹಿಂಸಾ ಮತ್ತು ಅಸಹಕಾರ ಚಳವಳಿಯೇ ಸ್ವಾತಂತ್ರ್ಯದ ಮುಖ್ಯ ಉದ್ದೇಶ ಎಂದು ಘೋಷಿಸುತ್ತಾರೆ. ಇದಕ್ಕೂ ಮುನ್ನ 1916 ರಲ್ಲಿ ಆಗಮಿಸಿರುತ್ತಾರೆ.
ಮಂಗಳೂರು ಪ್ರವಾಸ
ಮಂಗಳೂರಿಗೆ 1920, 1927 ಮತ್ತು 1934 ರಲ್ಲಿ ಭೇಟಿ ನೀಡಿರುತ್ತಾರೆ. ಮಂಗಳೂರು ಆಗ ಮದ್ರಾಸ್ ಪ್ರಾಂತ್ಯಕ್ಕೆ ಸೇರಿರುತ್ತದೆ. ಹರಿಜನರ ಕಲ್ಯಾಣಕ್ಕೆ ನಿಧಿ ಸಂಗ್ರಹಕ್ಕೆ 1934ರ ಫೆಬ್ರವರಿ 28 ರಂದು ಉಡುಪಿಗೆ ಆಗಮಿಸುತ್ತಾರೆ. ಆಗ ದಲಿತರನ್ನು ಕೆಲವು ದೇವಾಲಯಗಳಿಗೆ ಕರೆದೊಯ್ಯುವ ಪ್ರಯತ್ನ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ತುಮಕೂರು ಮತ್ತು ಮಧುಗಿರಿಗೂ ಭೇಟಿ ನೀಡಿರುತ್ತಾರೆ.
ಇದು ಗಾಂಧೀಜಿ ಮತ್ತು ಕರ್ನಾಟಕದ ಸಂಬಂಧ ಕುರಿತ ಸ್ಥೂಲ ನೋಟ ಮಾತ್ರ. ನಿಪ್ಪಾಣಿ, ನಂದಿದುರ್ಗ, ತೀರ್ಥಹಳ್ಳಿ, ಹರಿಹರ, ಭದ್ರಾವತಿ, ಚಿಕ್ಕಮಗಳೂರು, ಬೇಲೂರು, ಅರಸೀಕೆರೆ, ಮಡಿಕೇರಿ, ಗೌರಿಬಿದನೂರು, ಬಂಗಾರಪೇಟೆ, ನಂಜನಗೂಡು, ಚನ್ನಪಟ್ಟಣ, ಹಾವೇರಿ, ಮುಲ್ಕಿ, ಕುಂದಾಪುರ, ಕಾರವಾರ, ಸಿರಸಿ, ಹರಪನಹಳ್ಳಿ, ದಾವಣಗೆರೆ, ಬಿಜಾಪುರ, ಅಥಣಿ ಹೀಗೆ ನೂರಾರು ಪಟ್ಟಣಗಳಿಗೆ ಪ್ರವಾಸ ಕೈಗೊಂಡು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ.
ಸ್ವಾತಂತ್ರ್ಯ ಹೋರಾಟದ ಜತೆ ಜತೆಗೆ ಗೋ ರಕ್ಷಣೆ, ಖಾದಿ, ಸ್ವದೇಶಿ, ವಿದೇಶಿ ವಸ್ತ್ರ ಸುಡುವುದು, ಕೈ ನೂಲು, ಚರಕ, ಅಹಿಂಸೆ, ಸ್ತ್ರೀ ಉದ್ದಾರ ಹೀಗೆ ಹತ್ತಾರು ಸಮಾಜೋದ್ದಾರ ಕುರಿತು ಜಾಗೃತಿ ಮೂಡಿಸಿದ್ದಾರೆ .
(ಬರಹ: ಎಚ್. ಮಾರುತಿ)