Education News: 5, 8ನೇ ತರಗತಿಗಳಿಗೆ ಮತ್ತೆ ಅನುತ್ತೀರ್ಣ ನೀತಿ, ಕೇಂದ್ರೀಯ ವಿದ್ಯಾಲಯಗಳಲ್ಲಿ ಜಾರಿಗೊಳಿಸಿ ಆದೇಶ, ಕರ್ನಾಟಕದಲ್ಲಿ ಹೇಗೆ
Education News: ಕೇಂದ್ರ ಸರ್ಕಾರಿ ವ್ಯಾಪ್ತಿಯ ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ, ಜವಾಹರ ನವೋದಯ ವಿದ್ಯಾಲಯ, ಏಕಲವ್ಯ ಶಾಲೆಗಳಲ್ಲಿ 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ನೀತಿ ಜಾರಿಗೆ ಬರಲಿದೆ.
ದೆಹಲಿ: ಭಾರತದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೊಂಡ ನಂತರ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಪದ್ದತಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿತ್ತಾದರೂ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರವೂ ಇದನ್ನು ತೆಗೆದು ಹಾಕಿದೆ. ಇನ್ನು ಮುಂದೆ 5 ಹಾಗೂ 8ನೇ ತರಗತಿಗಳಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದ, ಗುರಿ ತಲುಪದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಎದುರಿಸಲು ಅವಕಾಶ ನೀಡಲಾಗುತ್ತದೆ. ಆಗಲೂ ಬದಲಾವಣೆ ಕಾಣದೇ ಇದ್ದರೆ ಮತ್ತೆ ಅದೇ ತರಗತಿಯಲ್ಲಿ ಓದಬೇಕಾಗುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ತಿದ್ದುಪಡಿ ಅಧಿಸೂಚನೆಯು ಭಾರತದ ಕೇಂದ್ರೀಯ ವಿದ್ಯಾಲಯಗಳು, ಸೈನಿಕ ಶಾಲೆಗಳು, ಜವಾಹರ ನವೋದಯ ವಿದ್ಯಾಲಯ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಅನ್ವಯವಾಗಲಿದೆ. ಆಯಾ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಮಾರ್ಪಾಡು ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಐದು ವರ್ಷದ ಹಿಂದೆಯೇ ಭಾರತದಲ್ಲಿ 18 ರಾಜ್ಯಗಳು ಈ ನೀತಿ ಜಾರಿಗೊಳಿಸಿವೆ. ಕರ್ನಾಟಕವೂ ಸೇರಿದಂತೆ ಇನ್ನೂ ಕೆಲವು ರಾಜ್ಯಗಳು ಹಿಂದಿನ ನೀತಿಯನ್ನೇ ಮುಂದುವರಿಸಿವೆ.
ಅಧಿಸೂಚನೆಯಲ್ಲಿ ಏನಿದೆ
ಕಳೆದ ವಾರ ಹೊರಡಿಸಿದ ಅಧಿಸೂಚನೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು 5 ಮತ್ತು 8 ನೇ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ನಿಯಮಗಳು, 2010 ಕ್ಕೆ ತಿದ್ದುಪಡಿ ಮಾಡಿದೆ. ಈ ಹಿಂದೆ ಇದ್ದ ಅನುತ್ತೀರ್ಣಗೊಳಿಸದ( ನೊ ಡಿಟೆನ್ಶನ್ ನೀತಿ) ಬದಲಾಗಲಿದೆ.
ವಿದ್ಯಾರ್ಥಿ ಅನುತ್ತೀರ್ಣಗೊಂಡಾಗ ಅಗತ್ಯವಿದ್ದಲ್ಲಿ ತರಗತಿಯ ಶಿಕ್ಷಕರು ಮಗುವಿಗೆ ಮತ್ತು ಮಗುವಿನ ಪೋಷಕರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಮೌಲ್ಯಮಾಪನದ ವಿವಿಧ ಹಂತಗಳಲ್ಲಿ ಕಲಿಕೆಯ ಅಂತರವನ್ನು ಗುರುತಿಸಿದ ನಂತರ ಮಗುವನ್ನು ಉತ್ತೀರ್ಣ ಮಾಡಬೇಕೇ ಅಥವಾ ಅದೇ ತರಗತಿಯಲ್ಲಿ ಮುಂದುವರೆಸಬೇಕೋ ಎನ್ನುವುದನ್ನು ತೀರ್ಮಾನಿಸುತ್ತಾರೆ. ಇದು ಈಗ ಆಗಿರುವ ಹೊಸ ಬದಲಾವಣೆ.
5 ನೇ ತರಗತಿ ಅಥವಾ 8 ನೇ ತರಗತಿಯ ವಿದ್ಯಾರ್ಥಿಯು ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಿಯಮಿತ ಪರೀಕ್ಷೆಯಲ್ಲಿ ಬಡ್ತಿ ಮಾನದಂಡಗಳನ್ನು ಪೂರೈಸದಿದ್ದರೆ, ಅವನು/ಆಕೆಗೆ "ಹೆಚ್ಚುವರಿ ಸೂಚನೆ ಮತ್ತು ಮರು ಪರೀಕ್ಷೆಗೆ ಅವಕಾಶವನ್ನು ನೀಡಲಾಗುತ್ತದೆ" ಎಂದು ನಿಯಮಗಳು ಈಗ ಹೇಳುತ್ತವೆ. ಫಲಿತಾಂಶಗಳನ್ನು ಘೋಷಿಸಿದ ಎರಡು ತಿಂಗಳ ನಂತರ. ಮರು ಪರೀಕ್ಷೆಯ ನಂತರವೂ ವಿದ್ಯಾರ್ಥಿಯು ಬಡ್ತಿ ಮಾನದಂಡಗಳನ್ನು ಪೂರೈಸದಿದ್ದರೆ, ಅವನು/ಅವಳನ್ನು ಅದೇ ತರಗತಿಯಲ್ಲಿ ಇನ್ನೊಂದು ವರ್ಷ ಮುಂದುವರಿಸಬಹುದು.
ಅಗತ್ಯವಿದ್ದಲ್ಲಿ ತರಗತಿಯ ಶಿಕ್ಷಕರು ಮಗುವಿಗೆ ಮತ್ತು ಮಗುವಿನ ಪೋಷಕರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಮೌಲ್ಯಮಾಪನದ ವಿವಿಧ ಹಂತಗಳಲ್ಲಿ ಕಲಿಕೆಯ ಅಂತರವನ್ನು ಗುರುತಿಸಿದ ನಂತರ ಉತ್ತೀರ್ಣ ಮಾಡಬೇಕೋ ಅಥವಾ ಅದೇ ತರಗತಿಯಲ್ಲಿ ಮುಂದುವರಿಸಬೇಕೋ ಎನ್ನುವ ತೀರ್ಮಾನ ಮಾಡುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
"ಶಾಲೆಯ ಮುಖ್ಯಸ್ಥರು ಫಲಿತಾಂಶ ತಡೆಹಿಡಿದಿರುವ ಅಥವಾ ಅನುತ್ತೀರ್ಣಗೊಂಡ ಮಕ್ಕಳ ಪಟ್ಟಿಯನ್ನು ನಿರ್ವಹಿಸಬೇಕು. ಅಂತಹ ಮಕ್ಕಳಿಗೆ ವಿಶೇಷ ಮಾರ್ಗದರ್ಶನ ಮಾಡುವ ನಿಬಂಧನೆಗಳನ್ನು ಮತ್ತು ಗುರುತಿಸಲಾದ ಕಲಿಕೆಯ ಅಂತರಗಳಿಗೆ ಸಂಬಂಧಿಸಿದಂತೆ ಅವರ ಪ್ರಗತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಬೇಕು" ಎಂದು ತಿಳಿಸಲಾಗಿದೆ
ಕೇಂದ್ರೀಯ ವಿದ್ಯಾಲಯಗಳಿಗೆ ಅನ್ವಯ
ಕೇಂದ್ರೀಯ ವಿದ್ಯಾಲಯಗಳು ಮತ್ತು ಜವಾಹರ ನವೋದಯ ವಿದ್ಯಾಲಯಗಳು ಸೇರಿದಂತೆ ತನ್ನ ಆಡಳಿತದ ಶಾಲೆಗಳಲ್ಲಿ ಯನ್ನು ರದ್ದುಗೊಳಿಸಿರುವ ಕೇಂದ್ರವು 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳನ್ನು ಶಿಕ್ಷಣ ಗುಣಮಟ್ಟವನ್ನು ವೃದ್ದಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡಿರುವುದಾಗಿ ಹೇಳಿದೆ. ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕ ಶಾಲೆಗಳು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳು ಸೇರಿದಂತೆ ಸುಮಾರು 3,000 ಕೇಂದ್ರೀಯ ಶಾಲೆಗಳಲ್ಲೂ ಈ ನೀತಿ ಜಾರಿಗೆ ಬರಲಿದೆ
ಶಿಕ್ಷಣ ಹಕ್ಕು ಕಾಯಿದೆ, 2009 ರ ಕಾಯಿದೆಗೆ 2019 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, 5 ಮತ್ತು 8 ನೇ ತರಗತಿಗಳಲ್ಲಿ ಮಕ್ಕಳು ನಿರೀಕ್ಷಿತ ಸಾಧನೆ ತೋರದೇ ಇದ್ದಾಗ ಅವರನ್ನು ಅನುತ್ತೀರ್ಣಗೊಳಿಸುವ ಹಾಗೂ ಪುನಶ್ಛೇತನ ಶಿಕ್ಷಣ ನೀಡುವುದನ್ನು ಸೇರಿಸಿತ್ತು. ಈ ಸಂಬಂಧದ ನಿರ್ಧಾರವನ್ನು ಆಯಾ ರಾಜ್ಯಗಳೇ ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು. ಇದು ಕೇಂದ್ರ ಸರ್ಕಾರದ ವ್ಯಾಪ್ತಿಯ ಶಾಲೆಗಳಲ್ಲೂ ಅನ್ವಯವಾಗಿರಲಿಲ್ಲ. ಆದರೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಅನುತ್ತೀರ್ಣಗೊಳಿಸದೇ ಶಿಕ್ಷಣ ನೀಡಬೇಕು ಎನ್ನುವ ನೀತಿಯನ್ನು ರದ್ದುಪಡಿಸಲಾಗಿದೆ. ಈಗ ಕೇಂದ್ರ ಸರ್ಕಾರವು ತನ್ನ ವ್ಯಾಪ್ತಿಯ ಶಾಲೆಗಳಲ್ಲಿ ಇದನ್ನು ಅನುಷ್ಠಾನಗೊಳಿಸಿದೆ.
ಹಿಂದೆ ಹೇಗಿತ್ತು
ಶಿಕ್ಷಣ ಹಕ್ಕು ಕಾಯಿದೆ, 2009 ರ ಸೆಕ್ಷನ್ 16 ರ ಅಡಿಯಲ್ಲಿ, ಶಾಲೆಗಳು 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದನ್ನು ನಿಷೇಧಿಸಲಾಗಿದೆ. ಅಂದರೆ ಅವರ ಫಲಿತಾಂಶಕ್ಕಿಂತ ಶಾಲೆಗೆ ಬರುವುದು ಮುಖ್ಯ. ಶಿಕ್ಷಣ ಪಡೆಯಬೇಕು ಎನ್ನುವ ಆಶಯದಿಂದ ಕಡ್ಡಾಯ ಶಿಕ್ಷಣ ನೀತಿಯಲ್ಲಿ ಇದನ್ನು ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಅನುತ್ತೀರ್ಣಗೊಂಡರೆ ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯೊಂದಿಗೆ, ಮಕ್ಕಳು ಕನಿಷ್ಠ ಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ ಇದರಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇಂತಹ ಮಾನದಂಡಗಳಿಂದ ಒಟ್ಟಾರೆ ಪ್ರಗತಿಯ ಮೇಲೂ ಪರಿಣಾಮ ಆಗುತ್ತಿದೆ. ಇದರಿಂದ ಅನುತ್ತೀರ್ಣಗೊಳಿಸದ ನೀತಿ ತೆಗೆದು ಹಾಕಿ ಎನ್ನುವ ಬೇಡಿಕೆ ಕೇಳಿ ಬಂದಿತ್ತು.
ಅಭಿಪ್ರಾಯಗಳನ್ನು ಆಲಿಸಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯು 2016 ರಲ್ಲಿ ನೀತಿಯಲ್ಲಿ ಬದಲಾವಣೆಗೆ ಸೂಚಿಸಿತ್ತು. ಈ ಕಾಯಿದೆಯನ್ನು ನಂತರ 2019 ರಲ್ಲಿ ತಿದ್ದುಪಡಿ ಮಾಡಲಾಯಿತು. ಇದರ ನಿರ್ಧಾರದ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಡಲಾಯಿತು.
ಅನುತ್ತೀರ್ಣಗೊಳಿಸದ ನೀತಿಯನ್ನು ರದ್ದುಪಡಿಸಲು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಮಾನವ ಸಂಪನ್ಮೂಲ ಸಚಿವರಾಗಿದ್ದ ಪ್ರಕಾಶ್ ಜಾವಡೇಕರ್, “ಇದು ಬಹಳ ಮುಖ್ಯವಾದ ಶಾಸನ ಮತ್ತು ಬಹುಪಾಲು ರಾಜ್ಯ ಸರ್ಕಾರಗಳು ಈ ಪ್ರಸ್ತಾಪವನ್ನು ಬೆಂಬಲಿಸಿವೆ. ನೀತಿ ಬದಲಾವಣೆಯು ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಹೊಣೆಗಾರಿಕೆಯನ್ನು ತರಲಿದೆ. ಶಿಕ್ಷಣ ಮತ್ತು ಕಲಿಕೆಯಲ್ಲಿ ಬದಲಾವಣೆಗಳಾಗಿ ಶಾಲೆಗಳು ಮಧ್ಯಾಹ್ನದ ಊಟ ನೀಡುವುದಕ್ಕೆ ಮಾತ್ರ ನಮ್ಮ ಶಾಲೆಗಳ ಸೀಮಿತವಾಗಿವೆ ಎಂದು ಹೇಳಿದ್ದರು.
ಕರ್ನಾಟಕ ಸಹಿತ ಯಾವ ರಾಜ್ಯದಲ್ಲಿ ಹೇಗಿದೆ
ತಿದ್ದುಪಡಿಯ ನಂತರ, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುತ್ತೀರ್ಣಗೊಳಿಸದ ನೀತಿಯನ್ನು ತೆಗೆದುಹಾಕಿವೆ. ಅಸ್ಸಾಂ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ , ಉತ್ತರಾಖಂಡ, ಪಶ್ಚಿಮ ಬಂಗಾಳ, ದೆಹಲಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ವಿನಲ್ಲಿ ಐದು ವರ್ಷದಿಂದಲೂ ಎರಡೂ ತರಗತಿಗಳಲ್ಲಿ ಅನುತ್ತೀರ್ಣಗೊಳಿಸುವ ಹಾಗೂ ಮಕ್ಕಳ ಪುನಶ್ಚೇತನ ನೀತಿ ಜಾರಿಯಲ್ಲಿದೆ.
ಶಿಕ್ಷಣ ಸಚಿವಾಲಯದ ಪ್ರಕಾರ, ಹರಿಯಾಣ ಮತ್ತು ಪುದುಚೇರಿ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.
ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಲಡಾಖ್, ಲಕ್ಷದ್ವೀಪ, ಚಂಡೀಗಢ, ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾತ್ರ ಇನ್ನೂ ಮೊದಲಿದ್ದ ನೀತಿಯಂತೆ ಅನುತ್ತೀರ್ಣಗೊಳಿಸದ ನೀತಿಯೇ ಜಾರಿಯಲ್ಲಿದೆ.