ಕನ್ನಡ ಸುದ್ದಿ  /  ಕರ್ನಾಟಕ  /  Health News: ಕರ್ನಾಟಕದಲ್ಲಿ 7 ಸಾವಿರ ಗಡಿ ದಾಟಿದ ಡೆಂಗ್ಯೂ ಪೀಡಿತರ ಸಂಖ್ಯೆ; ಬೆಂಗಳೂರಿನ 25 ಲಕ್ಷ ಮನೆಗಳ ಸಮೀಕ್ಷೆಗೆ ಬಿಬಿಎಂಪಿ ನಿರ್ಧಾರ

Health News: ಕರ್ನಾಟಕದಲ್ಲಿ 7 ಸಾವಿರ ಗಡಿ ದಾಟಿದ ಡೆಂಗ್ಯೂ ಪೀಡಿತರ ಸಂಖ್ಯೆ; ಬೆಂಗಳೂರಿನ 25 ಲಕ್ಷ ಮನೆಗಳ ಸಮೀಕ್ಷೆಗೆ ಬಿಬಿಎಂಪಿ ನಿರ್ಧಾರ

Bangalore News ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿರುವುದರಿಂದ ಬೆಂಗಳೂರಿನಲ್ಲಿ ಮನೆ ಮನೆ ಸಮೀಕ್ಷೆಯನ್ನು ಬಿಬಿಎಂ ಆರಂಭಿಸಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಡೆಂಗಿ ನಿಯಂತ್ರಣಕ್ಕೆ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಂಗಳೂರಿನಲ್ಲಿ ಡೆಂಗಿ ನಿಯಂತ್ರಣಕ್ಕೆ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಬ್ಬರು ಸಾವಿಗೀಡಾಗಿದ್ದು, ಇದುವರೆಗೂ ಡೆಂಗ್ಯೂಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಡೆಂಗ್ಯೂ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಳೆದ 24 ಗಂಟೆಗಳಲ್ಲಿ 892 ಪರೀಕ್ಷೆಗಳನ್ನು ನಡೆಸಲಾಗಿದೆ. ಹೊಸದಾಗಿ ಡೆಂಗ್ಯೂ ರೋಗ ಪತ್ತೆಯಾದವರ ಪೈಕಿ 1 ವರ್ಷದ ಮಗುವೂ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.

18 ವರ್ಷದೊಳಗಿನ 63 ಮಂದಿ ಮತ್ತು 18 ವರ್ಷ ದಾಟಿದವರ ಪೈಕಿ133 ಮಂದಿ ಡೆಂಗ್ಯೂ ಪೀಡಿತರಾಗಿದ್ದಾರೆ. ಸದ್ಯ ವಿವಿಧ ಆಸ್ಪತ್ರೆಗಳಲ್ಲಿ 303 ಡೆಂಗ್ಯೂ ರೋಗಿಗಳು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರ್ಷದ ಜನವರಿಯಿಂದ ಇದುವರೆಗೂ ವರದಿಯಾದಡೆಂಗ್ಯೂ ಪ್ರಕರಣಗಳ ಸಂಖ್ಯೆ 7,362 ಕ್ಕೆ ಏರಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 95 ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿಡೆಂಗ್ಯೂ ಪ್ರಕರಣಗಳ ಸಂಖ್ಯೆ 2,083ಕ್ಕೆ ಹೆಚ್ಚಳವಾಗಿದೆ. ಈ ಪೈಕಿ 135 ಮಂದಿ ಪಾಲಿಕೆ ವ್ಯಾಪ್ತಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳದಿಂದ ಪಾಲಿಕೆ ಎಚ್ಚೆತ್ತುಕೊಂಡಿದೆ. ಜುಲೈ1ರಿಂದ 6ರವರೆಗೆ ಪ್ರತಿದಿನ ಸರಾಸರಿ 130 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ 25 ಲಕ್ಷ ಮನೆಗಳ ಸಮೀಕ್ಷೆ ನಡೆಸಲು 3 ಸಾವಿರ ತಂಡಗಳನ್ನು ನಿಯೋಜಿಸಿದೆ.ಈ ತಂಡದಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕರು, ಆಶಾ ಕಾರ್ಯಕರ್ತರು, ನರ್ಸ್‌ ಗಳು ಮತ್ತು ಲಿಂಕ್‌ ಕಾರ್ಯಕರ್ತರು ಇರಲಿದ್ದಾರೆ. ಈತಂಡಗಳು 15 ದಿನಗಳಲ್ಲಿ ಎಲ್ಲ 25 ಲಕ್ಷ ಮನೆಗಳ ಸಮೀಕ್ಷೆ ನಡೆಸಲಿದ್ದಾರೆ.

ಜುಲೈ3ರಂದು 99 ಪ್ರಕರಣಗಳು ಮತ್ತು ಇತರ ದಿನಗಳಲ್ಲಿ 130-140 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದುವರೆಗೂ ಒಟ್ಟು 776 ಪ್ರಕರಣಗಳು ವರದಿಯಾಗಿವೆ. ಡೆಂಗ್ಯೂನಿಯಂತ್ರಣಕ್ಕೆ ಪಾಲಿಕೆಯ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸುವ ಅಗತ್ಯವಿದೆ. ಸಾರ್ವಜನಿಕರು ತಮ್ಮ ಮನೆ ಮತ್ತು ಮನೆಯ ಸುತ್ತಮುತ್ತ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪಾದನೆಯಾಗದಂತೆ ಎಚ್ಚರ ವಹಿಸಬೇಕೆಂದು ಪಾಲಿಕೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

ಬಿಎಂಟಿಸಿ ಘಟಕಗಳಲ್ಲಿ ಸ್ವಚ್ಛತೆ

ಈ ಮಧ್ಯೆ ಡೆಂಗ್ಯೂ ನಿಯಂತ್ರಣ ಮಾಡಲು ಬಿಎಂಟಿಸಿ ಘಟಕಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ದ್ರಾವಣ ಸಿಂಪಡಣೆ ಮಾಡಲಾಗಿದೆ. ಡೆಂಗ್ಯೂನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.‌ ರಾಮಚಂದ್ರನ್‌ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅವರ ಸೂಚನೆಯಂತೆ 49 ಘಟಕಗಳು, 10 ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರಗಳು, ನಾಲ್ಕು ಕಾರ್ಯಾಗಾರಗಳು, ನಗರದ ಅತಿ ದೊಡ್ಡ ಬಸ್‌ ನಿಲ್ದಾಣಗಳಾದ ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಮತ್ತು ಶಿವಾಜಿನಗರದ ಬಸ್‌ ನಿಲ್ದಾಣಗಳಲ್ಲಿ ಲಾರ್ವಾ ನಿಯಂತ್ರಣ ದ್ರಾವಣ ಸಿಂಪಡಣೆ ಮಾಡಲಾಗಿದೆ. ಬಿಎಂಟಿಸಿ ಘಟಕಗಳಲ್ಲಿ ಹಳೆಯ ಟಯರ್‌ ಗಳಲ್ಲಿ ನೀರು ಸಂಗ್ರಹವಾದಂತೆ, ಕ್ರಮ ಜರುಗಿಸಲಾಗಿದೆ. ನೀರು ಸಂಗ್ರಹಣೆ ಮಾಡುವ ತೊಟ್ಟಿಗಳು, ಡ್ರಂಗಳನ್ನು ಮುಚ್ಚಲು ಕ್ರಮ ಜರುಗಿಸಲಾಗಿದೆ. ತ್ಯಾಜ್ಯಗಳಲ್ಲಿ ನೀರು ಸಂಗ್ರಹವಾಗದಂತೆ ಅಂದಿನ ಕಸವನ್ನು ಅಂದಂದೇ ವಿಲೇವಾರಿ ಮಾಡಲು ಕ್ರಮ ಜರುಗಿಸಲಾಗಿದೆ.

ವರದಿ: ಎಚ್‌.ಮಾರುತಿ. ಬೆಂಗಳೂರು