ಕನ್ನಡ ಸುದ್ದಿ  /  ಕರ್ನಾಟಕ  /  Modi Cabinet: ಕರ್ನಾಟಕದಿಂದ ಐವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ, ಸೋಮಣ್ಣಗೆ ಬಂಪರ್‌

Modi Cabinet: ಕರ್ನಾಟಕದಿಂದ ಐವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ, ಸೋಮಣ್ಣಗೆ ಬಂಪರ್‌

Karnataka politics ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಐವರಿಗೆ ಅವಕಾಶ ಸಿಗುವುದು ಖಚಿತವಾಗಿದೆ.

ಕೇಂದ್ರ ಸಂಪುಟ ಸೇರುವ ಐವರು.
ಕೇಂದ್ರ ಸಂಪುಟ ಸೇರುವ ಐವರು.

ದೆಹಲಿ: ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಅಧಿಕಾರ ಬರುವುದಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ. ಮೋದಿ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು. ಕರ್ನಾಟಕದಿಂದ ಐವರಿಗೆ ಅಧಿಕಾರ ದೊರಕುವುದು ಖಚಿತವಾಗಿದೆ. ಅದರಲ್ಲಿ ಈ ಹಿಂದೆ ಮಂತ್ರಿಗಳಾಗಿ ನಿರ್ಮಲಾ ಸೀತಾರಾಮನ್‌, ಪ್ರಲ್ಜಾದ ಜೋಶಿ, ಶೋಭಾ ಕರಂದ್ಲಾಜೆ ಮತ್ತೊಂದು ಅವಕಾಶವನ್ನು ಪಡೆದುಕೊಂಡಿದ್ಧಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮಿತ್ರ ಪಕ್ಷ ಜೆಡಿಎಸ್‌ ಕೋಟಾದಲ್ಲಿ ಸಚಿವರಾದರೆ, ಮಾಜಿ ಸಚಿವ ಹಾಗೂ ತುಮಕೂರು ಕ್ಷೇತ್ರದಿಂದ ಸಂಸದರಾಗಿರುವ ವಿ.ಸೋಮಣ್ಣ ಅವರು ಕೇಂದ್ರದಲ್ಲಿ ಮಂತ್ರಿಯಾಗುವುದು ನಿಕ್ಕಿಯಾಗಿದೆ. ಈಗಾಗಲೇ ಎಲ್ಲಾ ಐದು ಮಂದಿಗೆ ಸಿದ್ದರಿರುವಂತೆ ಸೂಚನೆ ನೀಡಲಾಗಿದೆ. ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣ ಅವರು ರಾಜ್ಯ ಸಚಿವರಾದರೆ ಇನ್ನು ಮೂವರು ಸಂಪುಟ ದರ್ಜೆ ಸಚಿವರು.

ಟ್ರೆಂಡಿಂಗ್​ ಸುದ್ದಿ

ಸತತ ಹತ್ತು ವರ್ಷದಿಂದ ಹಣಕಾಸು ಸಚಿವೆಯಾಗಿ ಕೆಲಸ ಮಾಡಿರುವ ನಿರ್ಮಲಾ ಸೀತಾರಾಮನ್‌ ಅವರು ಮೂಲತಃ ತಮಿಳುನಾಡಿನವರು. ಆದರೆ ಅವರು ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆ. ಕರ್ನಾಟಕ ಕೋಟಾದಡಿಯೇ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿದೆ. ಈ ಬಾರಿ ಹಣಕಾಸು ಖಾತೆ ಇಲ್ಲವೇ ಮತ್ತೊಂದು ಪ್ರಮುಖ ಖಾತೆಯೇ ಅವರಿಗೆ ಸಿಗಬಹುದು

ಮಾಜಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ಸಂಪುಟ ಸೇರುವ ಹಿರಿಯ ನಾಯಕ. ಜೆಡಿಎಸ್‌ ಮೈತ್ರಿ ಪಕ್ಷವಾಗಿ ಎನ್‌ಡಿಎದಲ್ಲಿದೆ. ಈ ಬಾರಿ ಎರಡು ಸ್ಥಾನ ಗೆದ್ದಿದ್ದು ಅಲ್ಲದೇ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಜೆಡಿಎಸ್‌ ಕೊಡುಗೆಯೂ ಇದೆ. ಈ ಕಾರಣದಿಂದ ಕುಮಾರಸ್ವಾಮಿ ಅವರು ಬಯಸುವ ಕೃಷಿ ಖಾತೆಯೇ ಅವರಿಗೆ ಸಿಗಬಹುದು ಎನ್ನಲಾಗುತ್ತಿದೆ.

ಐದು ವರ್ಷದಿಂದ ಕೇಂದ್ರದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಜತೆಗೆ ಗಣಿ ಖಾತೆ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರೂ ಮತ್ತೊಮ್ಮೆ ಮಂತ್ರಿಯಾಗುವ ಪಟ್ಟಿಯಲ್ಲಿದ್ದಾರೆ. ಮೊದಲ ಅವಧಿಯಲ್ಲಿ ಎರಡೂ ಖಾತೆಗಳಲ್ಲಿ ಉತ್ತಮವಾಗಿ ಕೆಲಸ ಮಾಡಿರುವ ಜೋಶಿ ಅವರಿಗೆ ಈ ಬಾರಿ ಸಂಸದೀಯ ವ್ಯವಹಾರಗಳ ಖಾತೆ ಜತೆಗೆ ಬೇರೆ ಖಾತೆ ಸಿಗಬಹುದು.

ಶೋಭಾಕರಂದ್ಲಾಜೆ ಅವರು ಕಳೆದ ಅವಧಿಯ ಮೂರು ವರ್ಷ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದರು. ಅವರೂ ಕೂಡ ಚೆನ್ನಾಗಿ ಕಲಸ ಮಾಡಿದ್ದಾರೆ. ಈ ಬಾರಿ ಕ್ಷೇತ್ರ ಬದಲಿಸಿ ಬೆಂಗಳೂರಿನಿಂದ ಗೆದ್ದಿದ್ದಾರೆ. ಅವರಿಗೂ ಕೂಡ ಮತ್ತೊಮ್ಮೆ ಅವಕಾಶ ದೊರೆತಿದೆ.

ಕೇಂದ್ರ ಸಚಿವ ಸಂಪುಟ ಸೇರುತ್ತಿರುವವರಲ್ಲಿ ವಿ.ಸೋಮಣ್ಣ ಅವರಿಗೆ ಬಂಪರ್.‌ ಹಿರಿಯರಾದ ಜಗದೀಶ್‌ ಶೆಟ್ಟರ್‌ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರೂ ಆಕಾಂಕ್ಷಿಗಳಿದರೂ ವಿ.ಸೋಮಣ್ಣ ಅವರಿಗೆ ಹೈಕಮಾಂಡ್‌ ಒತ್ತು ನೀಡಿದೆ. ಬಿಜೆಪಿಗೆ ಸೇರಿ ದಶಕ ಕಳೆದರೂ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗಿನ ಮುನಿಸಿನಿಂದ ಸೋಮಣ್ಣ ಬೇಸರಕ್ಕೆ ಒಳಗಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ಮೈಸೂರಿನ ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧಿಸಿ ಸೋತಿದ್ದರು. ಆದರೆ ಹೈಕಮಾಂಡ್‌ ನಿಮ್ಮ ಕೈಬಿಡುವುದಿಲ್ಲ ಎಂದು ಅಭಯ ನೀಡಿತ್ತು. ಈಗ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟು ಕೇಂದ್ರ ಮಂತ್ರ ಸ್ಥಾನವನ್ನು ನೀಡಿದೆ. ಈ ಮೂಲಕ ಸೋಮಣ್ಣ ರಾಜ್ಯ ಸಚಿವರಾಗಿ ಸಂಪುಟ ಸೇರುವುದು ಖಚಿತವಾಗಿದೆ.

ಜಿಗಜಿಣಗಿ ಅಥವಾ ಕಾರಜೋಳ

ಈ ಬಾರಿ ಸಂಬಂಧಿಗಳಾದ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಇಬ್ಬರೂ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರವಿತ್ತು. ಮುಂದಿನ ಅವಧಿಯಲ್ಲಿ ಅವಕಾಶ ಕೊಡಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

ಖೂಬಾ, ರಾಜೀವ್‌ ಸೋಲು

ಕಳೆದ ಅವಧಿಯಲ್ಲಿ ಸಚಿವರಾಗಿದ್ದ ಬೀದರ್‌ ನ ಭಗವಂತ ಖೂಬಾ ಈ ಬಾರಿ ಸೋತಿದ್ದಾರೆ. ಮತ್ತೊಬ್ಬ ಕೇಂದ್ರ ಸಚಿವರಾಗಿದ್ದ ರಾಜೀವ್‌ ಚಂದ್ರಶೇಖರ್‌ ಕೇರಳದ ತಿರುವನಂತಪುರಂನಲ್ಲಿ ಸೋತಿದ್ದಾರೆ. ಇದರಿಂದ ಇಬ್ಬರು ಈ ಬಾರಿ ಅವಕಾಶ ಪಡೆಯುತ್ತಿಲ್ಲ ಎನ್ನಲಾಗಿದೆ.

ಟಿ20 ವರ್ಲ್ಡ್‌ಕಪ್ 2024