Kalaburagi News: ತೊಗರಿ ಕಣಜ ಖ್ಯಾತಿಯ ಕಲಬುರಗಿಯಲ್ಲಿ ತೊಗರಿ ಬೇಳೆ ದರ ಹೆಚ್ಚಳದಿಂದ ಜನ ಹೈರಾಣ
Toor Dal Price: ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೇಳೆ ಬಳಕೆ ಮಾಡುತ್ತಾರೆ. ಆದರೆ ಇದೀಗ ತೊಗರಿ ಬೇಳೆ ಬೆಲೆ ದುಬಾರಿಯಾಗಿದ್ದು, ಸ್ವತಃ ಕಲಬುರಗಿ ಜನರಿಗೆ ತೊಗರಿ ಬೇಳೆ ಬಳಸಲು ಹಿಂದೇಟು ಹಾಕುವಂತಾಗಿದೆ.
ಕಲಬುರಗಿ: ತೊಗರಿ ಬೇಳೆ ಉತ್ಪಾದನೆ ಕುಸಿತಗೊಂಡಿರುವ ಪರಿಣಾಮ ಆಹಾರ ಧಾನ್ಯಗಳ ಬೆಲೆ ಗಗಕ್ಕೇರಿವೆ. ಅದರಲ್ಲೂ ರಾಜ್ಯದ ತೊಗರಿ ಕಣಜವೆಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೇಳೆ ದರ ಹೆಚ್ಚಳವಾಗಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಕಳೆದ 15 ದಿನಗಳ ಹಿಂದೆ ಪ್ರತಿ ಕ್ವಿಂಟಲ್ಗೆ ತೊಗರಿ ಬೇಳೆ 8562 ರೂಪಾಯಿಯಿಂದ 9631 ರೂಪಾಯಿ ಇತ್ತು. ಅದು ಈಗ 8772 ರೂ.ಗಳಿಂದ 10.159 ರೂ.ವರೆಗೆ ಅಂದರೆ 210 ರೂ.ಗಳಿಂದ 528 ರೂಪಾಯಿಗಳ ವರೆಗೆ ದರ ಹೆಚ್ಚಳವಾಗಿದೆ.
ಅದೇ ರೀತಿ ಜೋಳ 3500 ರೂ.ಗಳಿಂದ 5000 ರೂ.ಗಳ ವರೆಗೆ ದರ ಇತ್ತು. ಈಗ 4800 ರೂ.ಗಳಿಂದ 5425 ರೂ.ಗಳವರೆ ಅಂದರೆ 425 ರೂ.ಗಳಿಂದ 1300 ರೂ.ವರೆಗೆ ದರ ಹೆಚ್ಚಳವಾಗಿದೆ. ಇನ್ನೂ ಅಕ್ಕಿ ದರ 4100 ರೂ.ಗಳಿಂದ 4800 ರೂ. ಇತ್ತು. ಈಗ 4200 ರೂ.ಗಳಿಂದ 5200 ರೂ.ವರೆಗೆ ಅಂದರೆ 100 ರೂ.ಯಿಂದ 400 ರೂ.ವರೆಗೆ ದರ ಹೆಚ್ಚಳವಾಗಿದೆ.
ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೇಳೆ ಬಳಕೆ ಮಾಡುತ್ತಾರೆ. ಆದರೆ ಇದೀಗ ತೊಗರಿ ಬೇಳೆ ಬೆಲೆ ದುಬಾರಿಯಾಗಿದ್ದು, ಸ್ವತಃ ಕಲಬುರಗಿ ಜನರಿಗೆ ತೊಗರಿ ಬೇಳೆ ಬಳಸಲು ಹಿಂದೇಟು ಹಾಕುವಂತಾಗಿದೆ. ಇನ್ನು ತೊಗರಿ ಬೇಳೆ ಬೆಲೆ ಹೆಚ್ಚಾದ್ದರೂ ಕೂಡ ಅದರ ಲಾಭ ಮಾತ್ರ ರೈತರಿಗೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಸರಿಸುಮಾರು ಎಂಟು ಲಕ್ಷ ಹೆಕ್ಟೇರ್ ನಷ್ಟು ಭೂಮಿಯಲ್ಲಿ ತೊಗರಿ ಬೆಳೆಯಲಾಗುತ್ತದೆ.
ಜೊತೆಗೆ ಕಲಬುರಗಿ ನಗರ ಸೇರಿ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ದಾಲ್ ಮಿಲ್‌ಗಳಿವೆ. ರಾಜ್ಯ ಮತ್ತು ನೆರೆಯ ರಾಜ್ಯಗಳಿಗೆ ಹೆಚ್ಚಿನ ತೊಗರಿ ಬೇಳೆ ಹೋಗುವದೇ ನಮ್ಮ ಕಲಬುರಗಿಯಿಂದ. ಆದರೆ ಕಳೆದ ಎರಡು ವಾರದಿಂದ ತೊಗರಿ ಬೇಳೆ ಬೆಲೆ ಹೆಚ್ಚಾಗಿದೆ. ಇದು ತೊಗರಿ ಕಣಜ ಕಲಬುರಗಿ ಜನರಿಗೆ ಬೇಳೆ ಬಿಸಿ ತಟ್ಟಿದೆ.
ಇನ್ನು ಈ ಬಾಗದಲ್ಲಿ ಹೆಚ್ಚಾಗಿ ತೊಗರಿ ಬೇಳೆ ಬೆಳೆಯುತ್ತಿದ್ದರಿಂದ, ಜನರು ಹೆಚ್ಚಾಗಿ ತೊಗರಿ ಬೇಳೆಯನ್ನು ಬಳಸುವ ರೂಢಿಯನ್ನು ಹೊಂದಿದ್ದಾರೆ. ರೊಟ್ಟಿ ಜೊತೆ ದಾಲ್ ಇಲ್ಲಿನ ಜನರಿಗೆ ಬೇಕೆ ಬೇಕು. ಜೊತೆಗೆ ಸಾಂಬಾರ್ ಗೆ ಕೂಡ ಹೆಚ್ಚಾಗಿ ತೊಗರಿ ಬೇಳೆಯನ್ನೇ ಬಳಸುತ್ತಾರೆ. ಜೋತೆಗೆ ಅನ್ನ ಸಹ ನಿತ್ಯವೂ ಊಟ ಮಾಡುತ್ತಾರೆ. ಆದರೆ, ಇದೀಗ ತೊಗರಿ ಬೇಳೆ, ಜೋಳ ಮತ್ತು ಅಕ್ಕಿ ದರ ಹೆಚ್ಚಾಗಿದೆ. ಹಾಗಂತ ಅವುಗಳ ಖರೀದಿ ಮಾಡದೇ ಬಿಡಲಾಗದು. ಅನಿವಾರ್ಯವಾಗಿ ಅವುಗಳನ್ನು ಖರೀದಿ ಮಾಡಿ ಜೀವನ ಸಾಗಿಸಲೇ ಬೇಕು. ಅಲ್ಲಲ್ಲಿ ಸಾಲ ಮಾಡಿ ಅವುಗಳನ್ನು ಖರೀದಿಸಿ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತೊಗರಿ ಬೇಳೆ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಂತ ತೊಗರಿ ಬೆಳೆಗಾರರಿಗೆ ಅದರಿಂದ ಲಾಭವಾಗುತ್ತಿದೆಯಾ ಅಂದ್ರೆ ಇಲ್ಲಾ. ಕಳೆದ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನಟೆ ರೋಗದಿಂದ ತೊಗರಿ ಬೆಳೆ ಹಾಳಾಗಿ ಹೋಗಿತ್ತು. ಮೂರು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಬೆಳೆ ಸಂಪೂರ್ಣವಾಗಿ ಹಾಳಾಗಿತ್ತು. ಉಳಿದಡೆ ಬೆಳೆ ಬಂದ್ರು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಕಾಳುಗಳು ಆಗಿರಲಿಲ್ಲ.
ರೈತರು ತಾವು ಬೆಳೆದ ತೊಗರಿಯನ್ನು ಮಾರುಕಟ್ಟೆಯಲ್ಲಿ ಏಳರಿಂದ ಎಂಟು ಸಾವಿರಕ್ಕೆ ಪ್ರತಿ ಕ್ವಿಂಟಲ್ನಂತೆ ಕಳೆದ ಡಿಸೆಂಬರ್ನಲ್ಲಿಯೇ ಮಾರಾಟ ಮಾಡಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಬೆಲೆ 9 ರಿಂದ 10 ಸಾವಿರವಿದೆ. ಇದೀಗ ಬೆಲೆ ಹೆಚ್ಚಾದ್ರು ಕೂಡ ರೈತರ ಬಳಿ ತೊಗರಿ ಇಲ್ಲದೆ ಇರುವುದರಿಂದ ಬೆಲೆ ಹೆಚ್ಚಳ ಲಾಭ ರೈತರಿಗೆ ಸಿಗದಂತಾಗಿದೆ. ಬೆಲೆ ಹೆಚ್ಚಾದ್ರು ಕೂಡ ಅದು ದಾಲ್ ಮಿಲ್ ಮಾಲೀಕರಿಗೆ ಆಗುತ್ತಿದೆ. ವಿನಃ ರೈತರಿಗೆ ಇಲ್ಲ ಅಂತಿದ್ದಾರೆ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ.
ಕಳೆದ ವರ್ಷ ತೊಗರಿ ಉತ್ಫಾದನೆ ಗಣನೀಯವಾಗಿ ಕುಸಿತವಾಗಿದ್ದರಿಂದ ಇದೀಗ ಬೇಳೆ ಬೆಲೆ ಹೆಚ್ಚಾಗುತ್ತಲೇ ಇದೆ. ಇದು ಇನ್ನು ಹೆಚ್ಚಾಗುವ ಆತಂಕ ಕೂಡ ಇದೆ. ಆದರೆ ಕೇಂದ್ರ ಸರ್ಕಾರ ತನ್ನ ಸ್ಟಾಕ್ ನಲ್ಲಿರುವ ತೊಗರಿಯನ್ನು ಮಾರ್ಕೇಟ್ ಗೆ ಬಿಟ್ಟರೆ, ಬೇಳೆ ಬೆಲೆ ಕೂಡ ಕಡಿಮೆಯಾಗೋ ಸಾಧ್ಯತೆಯಿದೆ.
(ವರದಿ: ಎಸ್.ಬಿ.ರೆಡ್ಡಿ)