Karnataka Weather: ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕು; ದಕ್ಷಿಣ ಕನ್ನಡ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
ಕರಾವಳಿಯ ಬಹುತೇಕ ಜಿಲ್ಲೆಗಳು, ಒಳನಾಡಿನ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿದೆ. ಆದರೆ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ಒಳ ನಾಡಿನ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ (Karnataka Rain).
ಇಂದು (ಜೂನ್ 29, ಗುರುವಾರ) ಮತ್ತು ನಾಳೆ (ಜೂನ್ 30, ಶುಕ್ರವಾರ) ಕರಾವಳಿಯ ಬಹುತೇಕ ಜಿಲ್ಲೆಗಳು, ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅದೇ ರೀತಿಯಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಇಂದು, ನಾಳೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮಮ್ಮೆ ಬಲವಾದ ಮೇಲ್ಮೈಗಾಳಿ ಬೀಸುವ ಸಾಧ್ಯತೆ ಇದೆ (Bengaluru Rain). ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಐಎಂಡಿ ತನ್ನ ತಿಳಿಸಿದೆ.
ರಾಜ್ಯದ ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ 40-45 ಕಿಮೀಯಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಇದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಜೂನ್ 28ರ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವ ವರದಿಯ ಪ್ರಕಾರ ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಅತಿ ಹೆಚ್ಚು 19 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 16 ಸೆಂಟಿ ಮೀಟರ್ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ 14, ಮಂಗಳೂರು 13, ಮಂಕಿ ಹಾಗೂ ಬೇಲಿಕೇರಿಯಲ್ಲಿ ತಲಾ 12 ಸೆಂಟಿ ಮೀಟರ್ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 11, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 10, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಶಿರಾಲಿ, ಕುಮಟಾ, ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಪುತ್ತೂರು, ಉಡುಪಿ, ಕಾರ್ಕಳದಲ್ಲಿ ತಲಾ 9, ಕೋಟ, ಬೆಳ್ತಂಗಡಿ ತಲಾ 8, ಕೊಲ್ಲೂರು, ಸುಬ್ರಹ್ಮಣ್ಯ, ಅಂಕೋಲಾ, ಗೇರುಸೊಪ್ಪದಲ್ಲಿ ತಲಾ 7 ಸೆಂಟಿ ಮೀಟರ ಮಳೆಯಾಗಿದೆ.
ಧರ್ಮಸ್ಥಳ, ನಾಪೋಕ್ಲು 6, ಸ್ಯಾಸಲ್ ರಾಕ್, ಸಿದ್ದಾಪುರ, ಭಾಗಮಂಡಲ, ಕೊಟ್ಟಿಗೆಹಾರ 5, ಕದ್ರಾ, ಖಜೂರಿ, ವಿರಾಜಪೇಟೆ 4, ಸಿದ್ದಾಪುರ, ಉಪ್ಪಿನಂಗಡಿ, ಲಿಂಗನಮಕ್ಕಿ, ಹುಡಕೆರೆಯಲ್ಲಿ ತಲಾ 3 ಸೆಂಟಿ ಮೀಟರ್ ಮಳೆಯಾಗಿದೆ.
ಇನ್ನೂ ದೇಶದ ಶೇಕಡಾ 80 ರಷ್ಟು ಕಡೆಗಳಲ್ಲಿ ಮಳೆಯಾಗುತ್ತಿದ್ದು, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಮುಂಬೈ, ದೆಹಲಿ, ಪಂಜಾಬ್ ಹಾಗೂ ರಾಜಸ್ಥಾನದಲ್ಲೂ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.