ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಚಳಿ; ಬೆಂಗಳೂರಿನಲ್ಲಿ ಬೆಳಗಿನ ಜಾವ ದಟ್ಟ ಮಂಜಿನ ವಾತಾವರಣ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಚಳಿ; ಬೆಂಗಳೂರಿನಲ್ಲಿ ಬೆಳಗಿನ ಜಾವ ದಟ್ಟ ಮಂಜಿನ ವಾತಾವರಣ

ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಚಳಿ; ಬೆಂಗಳೂರಿನಲ್ಲಿ ಬೆಳಗಿನ ಜಾವ ದಟ್ಟ ಮಂಜಿನ ವಾತಾವರಣ

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಚಳಿ ತೀವ್ರಗೊಳ್ಳುತ್ತಿದ್ದು, ಜನರು ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ 19ರ ಗುರುವಾರವೂ ಬೀದರ್, ವಿಜಯಪುರ ಹಾಗೂ ಕಲಬುರಗಿಯಲ್ಲಿ ಚಳಿ ಮುಂದುವರಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಮಂಜಿನ ವಾತಾವರಣ ಮುಂದುವರಿದಿದೆ.

ಡಿಸೆಂಬರ್ 19ರ ಗುರುವಾರ ಕರ್ನಾಟಕ ಹವಾಮಾನ
ಡಿಸೆಂಬರ್ 19ರ ಗುರುವಾರ ಕರ್ನಾಟಕ ಹವಾಮಾನ

ಕರ್ನಾಟಕದಲ್ಲಿ ಮಳೆಯ ಪರಿಸ್ಥಿತಿ ಕಡಿಮೆಯಾಗುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಚಳಿ ತೀವ್ರಗೊಳ್ಳುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮೈಕೊರೆಯುವ ಚಳಿಯ ಹೊಡೆತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬೆಂಗಳೂರು ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಡಿಸೆಂಬರ್ 19ರ ಗುರುವಾರ ಮುಂಜಾನೆಯಿಂದಲೇ ಬೀದರ್, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಭಾರಿ ಚಳಿಯ ವಾತಾವರಣ ಇದೆ. ಈ ಭಾಗದಲ್ಲಿ ತಾಪಮಾನ 6 ರಿಂದ 7 ಡಿಗ್ರಿ ಸೆಲ್ಸಿಯಸ್ ಗೆ ತಲುಪುವ ಸಾಧ್ಯತೆ ಇದೆ ಎಂದು ತನ್ನ ದೈನಂದಿನ ವರದಿಯಲ್ಲಿ ಮಾಹಿತಿ ನೀಡಿದೆ. ಈ ತಾಪಮಾನ ಸಾಮಾನ್ಯಕ್ಕಿಂತ ಆರೇಳು ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಇರಲಿದೆ. ಕೆಲವೆಡೆ ಜನರು ಚಳಿಯಿಂದ ಪಾರಾಗಲು ಫೈಯರ್ ಕ್ಯಾಂಪ್ ಗಳ ಮೊರೆ ಹೋಗಿರುವುದು ಸಾಮಾನ್ಯವಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಯಾದಗಿರಿ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಶೀತದ ಅಲೆ ಇದೆ. ಈ ಭಾಗದಲ್ಲಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಸಾಮಾನ್ಯಕ್ಕಿಂತ ನಾಲ್ಕೈದು ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಲಿದೆ. ತೀವ್ರ ಚಳಿಯಿಂದಾಗಿ ಕೃಷಿ ಚಟುವಟಿಕೆ ಸೇರಿದಂತೆ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟು ಮಾಡುತ್ತಿದೆ. ಅತಿ ಹೆಚ್ಚು ಚಳಿ ಇರುವ ಜಿಲ್ಲೆಗಳಲ್ಲಿ ರೈತರು ಮುಂಜಾನೆ ಸಮಯದಲ್ಲಿ ಹೊಲ ಗದ್ದೆಗಳಿಗೆ ಹೋಗಿ ಕೆಲಸ ಮಾಡದಂತೆ ಅಧಿಕಾರಿಗಳು ಸಲಹೆಗಳನ್ನು ನೀಡಿದ್ದಾರೆ.

ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 19, ಗುರುವಾರ) ಮುಂಜಾನೆ ಮಂಜು ಮುಸುಕಿದ ವಾತಾವರಣ ಇದ್ದು, ಚಳಿ ಮುಂದುವರಿದಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮಂಜಿನ ವಾತಾವರಣ ಇದೆ. ಬೆಳಗಿನ ಸಮಯದಲ್ಲಿ ಚಳಿ ಮತ್ತು ಹೆಚ್ಚು ಮಂಜು ಇರುವ ಕಾರಣ ಜನ ಮನೆಯಿಂದ ನಿಧಾನವಾಗಿ ಹೊರ ಬರುವಂತಾಗಿದೆ. ಮಂದ ಬೆಳಕಿನ ಪರಿಣಾಮವಾಗಿ ಚಾಲಕರಿಗೆ ವಾಹನಗಳನ್ನು ಚಲಾಯಿಸುವುದು ಸವಾಲಿನ ಕೆಲಸವಾಗಿದೆ.

ಡಿಸೆಂಬರ್ 20ರ ಶುಕ್ರವಾರದ 3 ಜಿಲ್ಲೆಗಳಲ್ಲಿ ತೀವ್ರ ಚಳಿಯ ಮುನ್ಸೂಚನೆ

ಬೀದರ್, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಡಿಸೆಂಬರ್ 20ರ ಶುಕ್ರವಾರವೂ ತೀವ್ರ ಚಳಿಯ ಪರಿಸ್ಥಿತಿ ಇರುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ತಾಪಮಾನ 6 ರಿಂದ 7 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಇದು ಸಾಮಾನ್ಯಕ್ಕಿಂತ ಆರೇಳು ಡಿಗ್ರಿ ಕಡಿಮೆ ಇರುತ್ತದೆ. ಯಾದಗಿರಿ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ತೀವ್ರ ಚಳಿಯ ವಾತಾವರಣ ಇರುವ ಸಾಧ್ಯತೆ ಇದೆ. ಈ ಮೂರು ಜಿಲ್ಲೆಗಳಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ವರಿಗೆ ಇರುವ ಮುನ್ಸೂಚನೆ ಇದೆ. ಇದು ಸಾಮಾನ್ಯಕ್ಕಿಂತ ನಾಲ್ಕೈದು ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ.

ನಾಡಿದ್ದು 2 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಡಿಸೆಂಬರ್ 21ರ ಶನಿವಾರ ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿಂದ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ನಿರ್ಮಲ ಆಕಾಶ ಇರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜಿನ ಇರುವ ಸಾಧ್ಯತೆ ಇರುತ್ತದೆ. ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇರುತ್ತದೆ.

Whats_app_banner