ಚಳಿಗಾಲದಲ್ಲಿ ಬೆಂಡೆಕಾಯಿ ಸ್ಲೋ ಪಾಯಿಸನ್‌ ಆಗುತ್ತಾ, ಈ ಸೀಸನ್‌ನಲ್ಲಿ ತಿನ್ನೋದು ಆರೋಗ್ಯಕ್ಕೆ ಅಪಾಯನಾ; ಇಲ್ಲಿದೆ ತಜ್ಞರ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಬೆಂಡೆಕಾಯಿ ಸ್ಲೋ ಪಾಯಿಸನ್‌ ಆಗುತ್ತಾ, ಈ ಸೀಸನ್‌ನಲ್ಲಿ ತಿನ್ನೋದು ಆರೋಗ್ಯಕ್ಕೆ ಅಪಾಯನಾ; ಇಲ್ಲಿದೆ ತಜ್ಞರ ಉತ್ತರ

ಚಳಿಗಾಲದಲ್ಲಿ ಬೆಂಡೆಕಾಯಿ ಸ್ಲೋ ಪಾಯಿಸನ್‌ ಆಗುತ್ತಾ, ಈ ಸೀಸನ್‌ನಲ್ಲಿ ತಿನ್ನೋದು ಆರೋಗ್ಯಕ್ಕೆ ಅಪಾಯನಾ; ಇಲ್ಲಿದೆ ತಜ್ಞರ ಉತ್ತರ

ಚಳಿಗಾಲದಲ್ಲಿ ಬೆಂಡೆಕಾಯಿ ತಿನ್ನೋದು ಅಪಾಯ, ಈ ಸೀಸನ್‌ನಲ್ಲಿ ಬೆಂಡೆಕಾಯಿ ಸ್ಲೋ ಪಾಯಿಸನ್ ರೀತಿ ಕೆಲಸ ಮಾಡುತ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈದ್ಯರೊಬ್ಬರು ಹೇಳಿದ್ದಾರೆ. ಹಾಗಾದರೆ ಚಳಿಗಾಲದಲ್ಲಿ ನಿಜಕ್ಕೂ ಬೆಂಡಕಾಯಿ ತಿನ್ನಬಾರದಾ, ಇದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಾ ಎನ್ನುವ ಬೆಂಡೆಕಾಯಿ ಪ್ರಿಯರ ಪ್ರಶ್ನೆ ಇಲ್ಲಿದೆ ತಜ್ಞರ ಉತ್ತರ.

ಚಳಿಗಾಲದಲ್ಲಿ ಬೆಂಡೆಕಾಯಿ ತಿನ್ನೋದು ಅಪಾಯನಾ?
ಚಳಿಗಾಲದಲ್ಲಿ ಬೆಂಡೆಕಾಯಿ ತಿನ್ನೋದು ಅಪಾಯನಾ?

ಬೆಂಡೆಕಾಯಿ ಹಲವರಿಗೆ ಇಷ್ಟವಾಗುವ ತರಕಾರಿ. ಇದರಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಬೆಂಡೆಕಾಯಿಯಿಂದ ಮಾಡಿದ ಖಾದ್ಯಗಳು ಅನ್ನ, ರೋಟಿ, ಚಪಾತಿ ಜೊತೆ ಸಖತ್ ಕಾಂಬಿನೇಷನ್ ಆಗುತ್ತೆ. ಆದರೆ ಚಳಿಗಾಲದಲ್ಲಿ ಬೆಂಡೆ ತಿನ್ನೋದು ಖಂಡಿತ ಅಪಾಯ. ಈ ಬಗ್ಗೆ ಡಿಜಿಟಲ್ ಕ್ರಿಯೇಟರ್ ಆಗಿರುವ ಡಾ. ಪೂರ್ಣಿಮಾ ಬಹುಗುಣ ತನ್ನ ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಡಾ. ಪೂರ್ಣಿಮಾ ಅವರ ಪ್ರಕಾರ ಬೆಂಡೆಕಾಯಿ ಚಳಿಗಾಲದಲ್ಲಿ ಸ್ಲೋ ಪಾಯಿಸನ್ ರೀತಿ ನಮ್ಮನ್ನು ಆವರಿಸುತ್ತದೆ. ಯಾಕೆಂದರೆ ಶೀತ ವಾತಾವರಣದಲ್ಲಿ ಬೆಂಡೆಕಾಯಿ ಎಲೆಗಳ ಮೇಲೆ ಶಿಲೀಂಧ್ರದ ಅಂಶ ಮತ್ತು ಅವುಗಳನ್ನು ಸುರಕ್ಷಿತವಾಗಿಡಲು ಬಳಸುವ ಕೀಟನಾಶಕಗಳಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಆದರೆ ತಜ್ಞರ ಪ್ರಕಾರ ಚಳಿಗಾಲದಲ್ಲಿ ಬೆಂಡೆಕಾಯಿ ತಿನ್ನವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಕಾರಣಗಳಿಲ್ಲ. ಬೆಂಗಳೂರಿನ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಮುಖ್ಯ ಕ್ಲಿನಿಕಲ್ ಡಯೆಟಿಷಿಯನ್ ವೀಣಾ ವಿ. ಅವರ ಪ್ರಕಾರ ಚಳಿಗಾಲದಲ್ಲಿ ಬೆಂಡೆಕಾಯಿ ಸೇವನೆ ಕೆಟ್ಟದು ಎಂದು ಸಾಬೀತುಪಡಿಸುವ ಯಾವುದೇ ಅಧ್ಯಯನ ಅಥವಾ ಡೇಟಾ ಇಲ್ಲ. ವಾಸ್ತವವಾಗಿ, ಬೆಂಡೆಕಾಯಿಯಲ್ಲಿ ಫೈಬರ್, ವಿಟಮಿನ್‌ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ವರ್ಷದ ಯಾವುದೇ ಸಮಯದಲ್ಲಿ ತಿನ್ನಲು ಪ್ರಯೋಜನಕಾರಿಯಾಗಿದೆ ಎಂದು ಅವರ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅತಿಯಾಗಿ ತಿಂದ್ರೆ ತೊಂದ್ರೆ ತಪ್ಪಿದ್ದಲ್ಲ 

ಆದರೆ ಬೆಂಡೆಕಾಯಿಯನ್ನು ಅತಿಯಾಗಿ ತಿನ್ನುವುದು ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಏಕೆಂದರೆ ಇದರಲ್ಲಿ ಫ್ರಕ್ಟಾನ್‌ ಎಂಬ ಕಾರ್ಬೋಹೈಡ್ರೇಟ್ ಅಂಶವಿದ್ದು ಇದು ಅತಿಸಾರ, ಆಸಿಡಿಟಿ ಹಾಗೂ ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು. ಅದರಲ್ಲೂ ವಿಶೇಷವಾಗಿ ಈಗಾಗಲೇ ಕರುಳಿನ ಸಮಸ್ಯೆ ಹೊಂದಿರುವ ಜನರಿಗೆ ಬೆಂಡೆಕಾಯಿ ಇನ್ನಷ್ಟು ಸಮಸ್ಯೆ ತಂದೊಡ್ಡಬಹುದು. ಬೆಂಡೆಕಾಯಿಯು ಮೂತ್ರಪಿಂಡದ ಕಲ್ಲುಗಳ ಪ್ರಮುಖ ಅಂಶವಾದ ಆಕ್ಸಲೇಟ್‌ಗಳಲ್ಲಿಯೂ ಸಹ ಅಧಿಕವಾಗಿದೆ.

ಬೆಂಡೆಕಾಯಿ ಆರೋಗ್ಯ ಪ್ರಯೋಜನಗಳು

ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ 

ಇದು ಫೋಲೇಟ್ ಜೊತೆಗೆ ವಿಟಮಿನ್ ಎ, ಸಿ ಮತ್ತು ಕೆ ಸೇರಿದಂತೆ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿ, ದೃಷ್ಟಿ ಮತ್ತು ಮೂಳೆಯ ಆರೋಗ್ಯ ಸುಧಾರಿಸುತ್ತದೆ.

ಜೀರ್ಣಕ್ರಿಯೆ ಆರೋಗ್ಯವನ್ನು ಬೆಂಬಲಿಸುತ್ತದೆ

ಬೆಂಡೆಕಾಯಿಯಲ್ಲಿ ಹೆಚ್ಚಿನ ನಾರಿನಾಂಶವಿದ್ದು, ಇದು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ 

ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಮೂಲಕ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ತುಂಬಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಕರಗುವ ನಾರಿನಾಂಶವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ 

ಇದು ಕರಗುವ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದರಿಂದಾಗಿ ಹೃದ್ರೋಗವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ 

ಬೆಂಡೆಕಾಯಿಯು ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುತ್ತದೆ ಮತ್ತು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ.

ಚರ್ಮದ ಆರೋಗ್ಯ 

ವಿಟಮಿನ್ ಸಿ ಸೇರಿದಂತೆ ಬೆಂಡೆಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರಿ ರ‍್ಯಾಡಿಕಲ್‌ಗಳನ್ನು ಎದುರಿಸುವ ಮೂಲಕ ಮತ್ತು ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಕೊಡುಗೆ ನೀಡುತ್ತವೆ.

ಕಬ್ಬಿಣದ ಹೀರಿಕೊಳ್ಳುವಿಕೆ 

ಬೆಂಡೆಕಾಯಿಯಲ್ಲಿ ಕಂಡುಬರುವ ವಿಟಮಿನ್ ಸಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯನ್ನು ಸಮರ್ಥವಾಗಿ ತಡೆಯುತ್ತದೆ.

ಬೆಂಡೆಕಾಯಿಯನ್ನು ಯಾವುದೇ ಸೀಸನ್‌ನಲ್ಲಿ ತಿನ್ನುವುದಿದ್ದರೂ ಅದನ್ನು ಸರಿಯಾದ ವಿಧಾನದಲ್ಲಿ ಬೇಯಿಸುವುದು ಕೂಡ ಮುಖ್ಯವಾಗುತ್ತದೆ. ಅದರ ಲೋಳೆ ರಚನೆ ಕಡಿಮೆಯಾಗುವಂತೆ ಬೇಯಿಸಿ ತಿನ್ನಬೇಕು. ಇದನ್ನು ಧಾನ್ಯಗಳು ಪ್ರೊಟೀನ್ ಜೊತೆ ಸಂಯೋಜಿಸಿದಾಗ ಸಮತೋಲಿತ ಆಹಾರವಾಗುತ್ತದೆ. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner