Karnataka Rains: ದಕ್ಷಿಣ ಕನ್ನಡ, ಚಿತ್ರದುರ್ಗದಲ್ಲಿ ಉತ್ತಮ, 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ: 2 ದಿನ ಹಗುರ ಮಳೆ, ಕೆಲವೆಡೆ ಚಳಿ ಹೆಚ್ಚಳ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ದಕ್ಷಿಣ ಕನ್ನಡ, ಚಿತ್ರದುರ್ಗದಲ್ಲಿ ಉತ್ತಮ, 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ: 2 ದಿನ ಹಗುರ ಮಳೆ, ಕೆಲವೆಡೆ ಚಳಿ ಹೆಚ್ಚಳ

Karnataka Rains: ದಕ್ಷಿಣ ಕನ್ನಡ, ಚಿತ್ರದುರ್ಗದಲ್ಲಿ ಉತ್ತಮ, 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ: 2 ದಿನ ಹಗುರ ಮಳೆ, ಕೆಲವೆಡೆ ಚಳಿ ಹೆಚ್ಚಳ

Karnataka weather updates ಕರ್ನಾಟಕದ ಹಲವು ಭಾಗಗಳಲ್ಲಿ ಎರಡು ದಿನ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ.

ಕರ್ನಾಟಕದ ಹಲವು ಕಡೆ ಬೆಳಿಗ್ಗೆಯೇ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ.
ಕರ್ನಾಟಕದ ಹಲವು ಕಡೆ ಬೆಳಿಗ್ಗೆಯೇ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ.

ಬೆಂಗಳೂರು: ಈ ವಾರವೂ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆ. ಹಿಂದಿನ ವಾರ 6 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದರೆ, 17 ಜಿಲ್ಲೆಗಳಲ್ಲಿ ಮಳೆರಾಯನ ದರ್ಶನವೇ ಇಲ್ಲ. ಇನ್ನು 7 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ಡಿ. 6ರಿಂದ 13ರ ವರೆಗೆ ಕರ್ನಾಟಕದಲ್ಲಿ ಸುರಿದಿರುವ ವಾಡಿಕೆ ಮಳೆಯ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ

ದಕ್ಷಿಣ ಕನ್ನಡ, ಚಿತ್ರ ದುರ್ಗದಲ್ಲಿ ಉತ್ತಮ ಮಳೆ ಸುರಿದಿದ್ದರೆ, ಬೆಂಗಳೂರು, ಚಾಮರಾಜನಗರ, ಕಲಬುರಗಿ, ಬೆಳಗಾವಿ ಸಹಿತ ಹಲವು ಜಿಲ್ಲೆಗಳಲ್ಲಿ ಮಳೆಯಾಗಿಲ್ಲ.

ಶನಿವಾರವೂ ಕೆಲವು ಕಡೆ ಹಗುರ ಮಳೆಯಾಗಿದ್ದರೆ, ಮುಂದಿನ ಎರಡು ದಿನವೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ವಿಜಯಪುರ, ಚಿಕ್ಕಮಗಳೂರಿನಲ್ಲಿ ಶನಿವಾರ ಚಳಿಯ ಪ್ರಮಾಣ ಅಧಿಕವಾಗಿತ್ತು.

ಎಲ್ಲೆಲ್ಲಿ ಮಳೆ ಹೇಗಿತ್ತು

ಹಿಂದಿನ ವಾರ ಕರ್ನಾಟಕದ 6 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಅದರಲ್ಲೂ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗಿನಲ್ಲೂ ವಾಡಿಕೆಗಿಂತ ಕೊಂಚ ಹೆಚ್ಚಿನ ಮಳೆ ಸುರಿದಿದೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲೂ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ದಕ್ಷಿಣ ಕನ್ನಡ(ಶೇ.1005 ) ಚಿಕ್ಕಮಗಳೂರು(ಶೇ.818 ),ಚಿತ್ರದುರ್ಗ( ಶೇ.961), ಹಾಸನ(ಶೇ.406), ಕೊಡಗು( ಶೇ.121), ಚಿಕ್ಕಬಳ್ಳಾಪುರದಲ್ಲಿ( ಶೇ.45 ) ಹೆಚ್ಚು ಮಳೆಯಾದ ವರದಿಯಾಗಿದೆ.

ಕಳೆದ ವಾರ ಮಳೆ 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ. ದಕ್ಷಿಣದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ , ಕರಾವಳಿಯಲ್ಲಿ ಉತ್ತರ ಕನ್ನಡ, ಉತ್ತರ ಕರ್ನಾಟಕದಲ್ಲಿ ಹಾವೇರಿ, ಬಳ್ಳಾರಿ, ಕೊಪ್ಪಳ. ಗದಗ, ಧಾರವಾಡ, ಬೆಳಗಾವಿ. ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಶೇ. 100ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಲಾಗಿದೆ.

ಅದೇ ರೀತಿ ಮೈಸೂರು(ಶೇ.85) ಮಂಡ್ಯ(ಶೇ85) ರಾಮನಗರ (ಶೇ.86) ದಾವಣಗೆರೆ (ಶೇ.74) ಜಿಲ್ಲೆಯಲ್ಲೂ ಮಳೆ ಕೊರತೆಯಾಗಿದೆ. ತುಮಕೂರು (ಶೇ.23), ಉಡುಪಿ (ಶೇ. 23), ಶಿವಮೊಗ್ಗ (ಶೇ. 28 ) ಕಡಿಮೆ ಮಳೆ ಕೊರತೆ ಇರುವ ಜಿಲ್ಲೆಗಳ ಪಟ್ಟಿಯಲ್ಲಿವೆ.

ಎರಡು ದಿನ ಸಾಧಾರಣ ಮಳೆ

ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಭಾನುವಾರ ಹಾಗೂ ಸೋಮವಾರ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಅಂದರೆ ಭಾನುವಾರದಿಂದ ಸೋಮವಾರ ಬೆಳಿಗ್ಗೆವರೆಗೆ ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಬಹುದು. ದಕ್ಷಿಣ ಒಳನಾಡಿನ ಬೆಂಗಳೂರು, ಚಿಕ್ಕಮಗಳೂರು ಸಹಿತ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಸೂಚನೆ ಇಲ್ಲ. ಈ ಭಾಗದಲ್ಲಿ ಒಣಹವೆಯ ವಾತಾವರಣ ಕಂಡು ಬರಲಿದೆ ಎಂದು ತಿಳಿಸಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ಅಂದರೆ ಸೋಮವಾರದಿಂದ ಮಂಗಳವಾರ ಬೆಳಿಗ್ಗೆ ವರೆಗೆ ಕರ್ನಾಟಕ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳು ಅಧಿಕವಾಗಿವೆ.

ಈ ಅವಧಿಯಲ್ಲಿ ಗುಡುಗು, ಮಿಂಚಿನ ಮುನ್ನೆಚ್ಚರಿಕೆ ಇಲ್ಲ. ಭಾರೀ ಮಳೆಯ ಸಾಧ್ಯತೆಗಳೂ ಕಡಿಮೆ ಎಂದು ತಿಳಿಸಲಾಗಿದೆ.

ಬೆಂಗಳೂರು ಹವಾಮಾನ

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರದಿಂದ ಮಂಗಳವಾರ ಬೆಳಿಗ್ಗೆವರೆಗೂ ಮೋಡ ಕವಿದ ವಾತಾವರಣವೇ ಹೆಚ್ಚಾಗಿ ಕಂಡು ಬರಲಿದೆ. ಸಂಜೆ ಇಲ್ಲವೇ ರಾತ್ರಿ ವೇಳೆ ಎರಡೂ ದಿನದಲ್ಲಿ ಕೆಲವು ಭಾಗಗಳಲ್ಲಿ ಅತಿ ಹಗುರ ಮಳೆಯಾಗಬಹುದು. ಬೆಂಗಳೂರು ನಗರ ಮಾತ್ರವಲ್ಲದೇ ಅಕ್ಕಪಕ್ಕದ ಪ್ರದೇಶದಲ್ಲೂ ಎರಡು ದಿನದಲ್ಲಿ ಗರಿಷ್ಠ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್‌ ಹಾಗು ಕನಿಷ್ಠ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್‌ನಷ್ಟು ಕಂಡು ಬರಲಿದೆ.

ಚಳಿಯಲ್ಲೂ ಏರಿಕೆ

ಕರ್ನಾಟಕದಲ್ಲಿ ಶನಿವಾರ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದ್ದು ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ. ಸಮತಟ್ಟಾದ ಪ್ರದೇಶಗಳಲ್ಲಿ ಒಂದಾದ ವಿಜಯಪುರದಲ್ಲಿ 12.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎರಡು ದಿನಗಳಿಗೆ ಹೋಲಿಸಿದರೆ ಚಳಿ ಪ್ರಮಾಣ ಕಡಿಮೆಯಾದರೂ ಈ ಭಾಗದಲ್ಲಿ ಚಳಿ ಹೆಚ್ಚಾಗಿಯೇ ಇದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಳಿ ಹೆಚ್ಚಾಗಿದೆ. ಇಲ್ಲಿಯೂ ಕನಿಷ್ಠ ಉಷ್ಣಾಂಶ ಗಣನೀಯ ಕುಸಿತ ಕಂಡಿದೆ. ಶನಿವಾರರಂದು ಚಿಕ್ಕಮಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕನಿಷ್ಠ ಉಷ್ಣಾಂಶ 14.6 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

ಗದಗ, ಧಾರವಾಡ, ಬೀದರ್‌, ಬೆಳಗಾವಿ ವಿಮಾನ ನಿಲ್ದಾಣ ಭಾಗದಲ್ಲೂ 15 ರಿಂದ 16 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಕಂಡು ಬಂದಿತು. ಬಾಗಲಕೋಟೆ, ದಾವಣಗೆರೆ, ಬೆಂಗಳೂರು ನಗರ, ಮೈಸೂರಿನಲ್ಲಿಯೂ ಚಳಿ ಅಧಿಕವಾಗಿತ್ತು.́

Whats_app_banner