ಸಂಡೂರು: ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು, ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲ, ಕೈ ಗೆಲುವಿಗೆ ಕಮಲ ಸೋಲಿಗೆ ಈ ಅಂಶಗಳೇ ಕಾರಣ
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು ಸಾಧಿಸಿದ್ದಾರೆ. ಕೈ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಸೋಲಿಗೆ ಈ ಅಂಶಗಳೇ ಕಾರಣ. (ವರದಿ-ಎಚ್.ಮಾರುತಿ)
ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ಎಸ್ಟಿ ಮೀಸಲು ಕ್ಷೇತ್ರದ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಕೈ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಂಗಾರು ಹನುಮಂತು ವಿರುದ್ಧ 9,645 ಮತಗಳ ಅಂತರದಿಂದ ಸುಲಭದ ಜಯ ಸಾಧಿಸಿದ್ದಾರೆ. ಸಂಡೂರು ಕಾಂಗ್ರೆಸ್ ಭದ್ರಕೋಟೆಗಳಲ್ಲಿ ಒಂದಾದ ಕ್ಷೇತ್ರ. ದಶಕಗಳಿಂದ ಇಲ್ಲಿ ಕಾಂಗ್ರೆಸ್ ಅನಾಯಾಸವಾಗಿ ಗೆಲ್ಲುತ್ತಾ ಬಂದಿದೆ. ಈ ಕ್ಷೇತ್ರದ ಕೈ ಶಾಸಕ ಈ.ತುಕಾರಾಂ ಬಳ್ಳಾರಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಉಪ ಚುನಾವಣೆ ನಡೆದಿತ್ತು.
ಇವರು ಪಟ್ಟು ಹಿಡಿದು ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದರು. 1985ರಲ್ಲಿ ಒಮ್ಮೆ ಮಾತ್ರ ಸಿಪಿಎಂ ಅಭ್ಯರ್ಥಿ ಯು ಸಭಾಪತಿ ಮತ್ತು 2004ರಲ್ಲಿ ಜೆಡಿಎಸ್ ಅಭ್ಯರ್ಥಿ ಸಂತೋಷ್ ಲಾಡ್ ಗೆದ್ದಿದ್ದು ಬಿಟ್ಟರೆ ಸದಾ ಕೈ ಅಭ್ಯರ್ಥಿಗಳೇ ಗೆಲ್ಲುತ್ತಾ ಬಂದಿದ್ದಾರೆ. ಈ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿತ್ತಾದರೂ ಸಾಧ್ಯವಾಗಿಲ್ಲ. ಈ.ತುಕಾರಾಂ ಅವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ನ ಬಹುತೇಕ ಸದಸ್ಯರು ಕಾಂಗ್ರೆಸ್ನಿಂದ ಆರಿಸಿ ಬಂದಿದ್ದಾರೆ. ಗ್ರಾಮ ಪಂಚಾಯತ್ಗಳಲ್ಲೂ ಕೈ ಆಡಳಿತವೇ ವಿಜೃಂಭಿಸುತ್ತಿದೆ.
ಸಂಡೂರು ಕ್ಷೇತ್ರದಲ್ಲಿ 2,36,047 ಮತದಾರರಿದ್ದು, ಎಸ್ ಸಿ ಸಮುದಾಯದ 41,676, ಎಸ್ಟಿ ಸಮುದಾಯದ 59,312, ಲಿಂಗಾಯತ ಸಮುದಾಯದ 30,024, 24,701 ಕುರುಬ, 24,588 ಮುಸ್ಲಿಂ, ಹಿಂದುಳಿದ ವರ್ಗಗಳ 41,506 ಇತರೆ ಸಮುದಾಯಗಳ 15,000 ಮತದಾರರಿದ್ದಾರೆ. ಸುಮಾರು 1.50 ಲಕ್ಷದಷ್ಟು ಗ್ರಾಮೀಣ ಮತದಾರರಿದ್ದು ಇವರ ಒಲವು ಕೈನತ್ತ ಎನ್ನುವುದು ಸ್ಪಷ್ಟವಾಗಿದೆ. ಮತದಾರರ ಸಂಖ್ಯೆ ನೋಡಿದರೆ ಕೈ ಗೆಲುವು ಅನಾಯಾಸ ಎನ್ನುವುದು ವೇದ್ಯವಾಗುತ್ತದೆ. ಒಳ ಮೀಸಲಾತಿಗಾಗಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿರುವುದು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ವರದಾನವಾಗಿದೆ.
ಮೀಸಲು ಕ್ಷೇತ್ರವನ್ನು ಗೆಲ್ಲುವುದು ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ಸವಾಲಾಗಿ ಪರಿಣಮಿಸಿತ್ತು. ಅಹಿಂದ ನಾಯಕರಾಗಿ ಗೆಲ್ಲದಿದ್ದರೆ ಹಿನ್ನೆಡೆ ಎನ್ನುವುದು ಅವರಿಗೆ ತಿಳಿದಿತ್ತು. ಹಾಗಾಗಿ ಅವರು ಈ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲು ಆಪ್ತ ಸಚಿವರಿಗೆ ಸೂಚನೆ ನೀಡಿದ್ದರು. ಸಿಎಂ 3 ದಿನ ಠಿಕಾಣಿ ಹೂಡಿ 15ಕ್ಕೂ ಹೆಚ್ಚು ಸಾರ್ವಜನಿಕ ಸಭೆ ನಡೆಸಿದ್ದರು. ತಮ್ಮ ಆಪ್ತರಾದ ಸಂತೋಷ್ ಲಾಡ್ ಅವರಿಗೆ ಕ್ಷೇತ್ರದ ಗೆಲುವಿನ ಹೊಣೆ ಹೊರಿಸಿದ್ದರು. ಇವರಿಗೆ ಸಚಿವ ಎನ್ಎಸ್ ಬೋಸರಾಜು ಸಾಥ್ ನೀಡಿದ್ದರು. ಡಿಕೆ ಶಿವಕುಮಾರ್, ಕೆಎಚ್ ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಪ್ರಚಾರ ನಡೆಸಿದ್ದರು.
ಕುಮಾರಸ್ವಾಮಿ ಆಗಮಿಸಿದ್ದರೆ ಫಲಿತಾಂಶ ಬದಲಾಗ್ತಿತ್ತಾ?
ಬಿಜೆಪಿಯಿಂದ ವಿಜಯೇಂದ್ರ, ಜನಾರ್ಧನ ರೆಡ್ಡಿ, ಗೋವಿಂದ ಕಾರಜೋಳ, ಪ್ರಹ್ಲಾದ ಜೋಷಿ ಪ್ರಚಾರದಲ್ಲಿ ಭಾಗಿಯಾಗಿದ್ದರೂ ಪ್ರಯೋಜನವಾಗಿಲ್ಲ. ಗಾಲಿ ಜನಾರ್ಧನ ರೆಡ್ಡಿಗೆ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಇಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಹೈದರಾಬಾದ್ ಕರ್ನಾಟಕದಲ್ಲಿ ಜೆಡಿಎಸ್ ಅಸಿತ್ವವನ್ನು ಕಡೆಗಣಿಸುವಂತಿಲ್ಲ. ಆದರೆ ಎಲ್ಲಿಯೂ ಜೆಡಿಎಸ್ ಮುಖಂಡರು ಕಾಣಿಸಿಕೊಳ್ಳಲೇ ಇಲ್ಲ. ಕನಿಷ್ಠ ಒಂದು ಬಾರಿಯಾದರೂ ಕುಮಾರಸ್ವಾಮಿ ಆಗಮಿಸಿದ್ದರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತೇನೋ?
ಬಣ ರಾಜಕೀಯವೂ ಗೆಲುವಿಗೆ ತೊಡಕು
ಸಂತೋಷ್ ಲಾಡ್ಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಕೆಲವೇ ದಿನಗಳಲ್ಲಿ ಸಂಪುಟ ಪುನಾರಚನೆ ನಡೆಯಲಿದ್ದು, ಸೋತರೆ ಸಚಿವ ಸ್ಥಾನವೂ ಕೈ ತಪ್ಪಿಹೋಗಲಿದೆ ಎಂಬ ಇಂಗಿತ ಲಾಡ್ಗೆ ಮನದಟ್ಟಾಗಿತ್ತು. ಆದ್ದರಿಂದ ತನ್ನ ಆಯ್ಕೆಯ ಅಭ್ಯರ್ಥಿಯಲ್ಲದಿದ್ದರೂ ಅನ್ನಪೂರ್ಣ ಗೆಲುವಿಗೆ ಅವರು ಶ್ರಮವಹಿಸಿದ್ದಾರೆ. ವಾಲ್ಮೀಕಿ ಹಗರಣ, ವಕ್ಫ್ ಆಸ್ತಿ ವಿವಾದ, ಮುಡಾ ಹಗರಣಗಳನ್ನು ಪ್ರಸ್ತಾಪಿಸುತ್ತಾ ಮತದಾರರನ್ನು ಓಲೈಸಲು ಹವಣಿಸುತ್ತಿತ್ತು. ಬಿವೈ ವಿಜಯೇಂದ್ರ ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ.
ಆದರೆ ಬಣ ರಾಜಕೀಯ ಗೆಲುವಿಗೆ ತೊಡಕಾಗಿದೆ ಎಂದು ಧಾರಾಳವಾಗಿ ಹೇಳಬಹುದು. ಎಸ್ಟಿ ಸಮುದಾಯದ ಶಾಸಕ ರಮೇಶ್ ಜಾರಕಿಹೊಳಿ ಪ್ರಚಾರ ಮಾಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವುದು ಬಿಜೆಪಿಗೆ ಮುಜಗರವನ್ನುಂಟು ಮಾಡಿತ್ತು. ಯತ್ನಾಳ್, ಅರವಿಂದ ಲಿಂಬಾವಳಿ ಇಲ್ಲಿಗೆ ಹೆಜ್ಜೆಯನ್ನೇ ಇಡಲಿಲ್ಲ. ಒಗ್ಗಟ್ಟಿನ ಶ್ರಮ ಹಾಕಿದ್ದರೆ ಹನುಮಂತು ಅವರನ್ನು ಗೆಲುವಿನ ದಡ ದಾಟಿಸಬಹುದಾಗಿತ್ತು. ರಾಜಕೀಯ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ. ಶಾಸಕರ ಕಚೇರಿಯ ನೌಕರರಾದ ಲಾಡ್ ತುಕಾರಾಂ ಅವರೇ ಇಲ್ಲಿ ಗೆದ್ದಿರುವಾಗ ಭವಿಷ್ಯದಲ್ಲಿ ಬಂಗಾರು ಹನುಮಂತುವೂ ಗೆಲ್ಲಬಾರದು ಎಂದೇನೂ ಇಲ್ಲವಲ್ಲ!