ಕನ್ನಡ ಸುದ್ದಿ  /  ಕರ್ನಾಟಕ  /  Uttara Kannada News: ಉತ್ತರ ಕನ್ನಡ ಜಿಲ್ಲೆ ಗ್ರಾಮೀಣ ಪ್ರದೇಶಕ್ಕೂ ಬರುತ್ತಿವೆ 51 ಹೈಟೆಕ್‌ ಕೂಸಿನ ಮನೆಗಳು

Uttara Kannada News: ಉತ್ತರ ಕನ್ನಡ ಜಿಲ್ಲೆ ಗ್ರಾಮೀಣ ಪ್ರದೇಶಕ್ಕೂ ಬರುತ್ತಿವೆ 51 ಹೈಟೆಕ್‌ ಕೂಸಿನ ಮನೆಗಳು

Child care center ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅನುಕೂಲವಾಗಲೆಂದು ಉತ್ತರ ಕನ್ನಡ ಜಿಲ್ಲೆಯಲ್ಲಿ( Uttara Kannada District) ಕೂಸಿನ ಮನೆ( Child care center) ಗಳನ್ನು ಜಿಲ್ಲಾಪಂಚಾಯಿತಿಯಿಂದ ನಿರ್ಮಿಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಸಿನ ಮನೆಗಳು ಇದೇ ಮಾದರಿಯಲ್ಲಿ ಅಣಿಯಾಗುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಸಿನ ಮನೆಗಳು ಇದೇ ಮಾದರಿಯಲ್ಲಿ ಅಣಿಯಾಗುತ್ತಿವೆ.

ಕಾರವಾರ: ಕರಾವಳಿ, ನಗರ, ಗ್ರಾಮೀಣ, ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದ ಹಿನ್ನಲೆಯ ಉತ್ತರ ಕನ್ನಡ ಜಿಲ್ಲೆಯ ಉದ್ಯೋಗಸ್ಥ ಮಹಿಳೆಯರಿಗೆ ನೆರವಾಗಲು ನಿರ್ಮಾಣವಾಗುತ್ತಿವೆ ಕೂಸಿನ ಮನೆಗಳು.

ಟ್ರೆಂಡಿಂಗ್​ ಸುದ್ದಿ

ನಗರ ಪ್ರದೇಶಗಳಲ್ಲಿ ಮನೆಯವರೆಲ್ಲರೂ ಉದ್ಯೋಗಕ್ಕೆ ತೆರಳಿದರೆ, ಶಿಶುಗಳನ್ನು ನೋಡಿಕೊಳ್ಳಲು ಡೇ ಕೇರ್ ಸೆಂಟರ್ ಗಳಿವೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಮಾತ್ರ ಹೆಣ್ಣು ಮಕ್ಕಳು ಉದ್ಯೋಗಕ್ಕೆ ತೆರಳುತ್ತಾರೆ. ಹಳ್ಳಿಗಳಲ್ಲಿ ಮನೆಯೊಳಗೇ ಮನೆವಾರ್ತೆ ನೋಡಿಕೊಳ್ಳುತ್ತಾರೆ ಎಂಬ ಭಾವನೆ ಇದೆ.

ಆದರೆ ಗ್ರಾಮೀಣ ಪ್ರದೇಶದ ಮಹಿಳೆಯರೂ ಮನೆಯ ಪುರುಷರ ಜೊತೆ ಹೊರಗೆ ತೆರಳಿ ದುಡಿಯುತ್ತಾರೆ. ಕೆಲವೊಮ್ಮೆ ಮನೆಗೆ ಬೀಗ ಹಾಕಿ ತೆರಳುವ ಪರಿಸ್ಥಿತಿಯೂ ಇರುತ್ತದೆ. ಹೀಗಾಗಿ ನಗರದ ಹೆತ್ತವರಂತೆಯೇ ಗ್ರಾಮೀಣ ಪ್ರದೇಶದ ಹೆತ್ತವರೂ ಅನಿವಾರ್ಯವಾಗಿ ಉದ್ಯೋಗಕ್ಕೆ ತೆರಳುವ ಸಂದರ್ಭ ಹುಟ್ಟಿದ ಸಣ್ಣ ಮಗುವನ್ನು ಏನು ಮಾಡುವುದು ಎಂಬ ಯೋಚನೆಯಲ್ಲಿದ್ದಾಗಲೇ ಹುಟ್ಟಿಕೊಂಡದ್ದು ಶಿಶು ಪಾಲನಾ ಕೇಂದ್ರದ ಕಲ್ಪನೆ. ಇದು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೂ ಹೌದು.

ಉತ್ತರ ಕನ್ನಡ ಜಿಲ್ಲೆಯೆಂದರೆ, ಹಳ್ಳಿಗಳ ಪ್ರದೇಶ. ಇಲ್ಲಿ ಪಟ್ಟಣ ಭಾಗಗಳೂ ಹಳ್ಳಿಯ ಸೊಗಡನ್ನು ಉಳಿಸಿಕೊಂಡಿವೆ. ಹೀಗಾಗಿ ಇಲ್ಲಿ ಶಿಶು ಪಾಲನಾ ಕೇಂದ್ರದ ಅಗತ್ಯ ಹೆಚ್ಚು. ಹಾಗಾಗಿಯೇ ಇಡೀ ಜಿಲ್ಲೆಯಲ್ಲಿ 51 ಕೇಂದ್ರಗಳ ಸ್ಥಾಪನೆಗೆ ಸರಕಾರ ಉದ್ದೇಶಿಸಿದೆ. ಇವಕ್ಕಿಟ್ಟ ಹೆಸರು ‘ಕೂಸಿನ ಮನೆ’.

ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಪೈಕಿ ಒಟ್ಟು 51 ಕಡೆಗಳಲ್ಲಿ ಜಿಲ್ಲಾ ಪಂಚಾಯತ್‌ನಿಂದ ಕೂಸಿನ ಮನೆ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಕಾರಿ ಈಶ್ವರ ಕುಮಾರ ಖಂಡು.

ಮಾತೆಯರಿಗೆ ಕೂಸಿನ ಮನೆ ಬಲ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ-ಪಾಲನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ’ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದೆ.

ಕೆಲಸದ ಸಮಯದಲ್ಲಿ ಹಳ್ಳಿ ಮಹಿಳೆಯರು ತಮ್ಮ ಚಿಕ್ಕ ಮಕ್ಕಳ ಕುರಿತು ಚಿಂತಿಸದೇ ನಿರ್ಭೀತಿಯಿಂದ ಕೆಲಸ ನಿರ್ವಹಿಸಬಹುದು. ಪ್ರತಿಯೊಬ್ಬ ಕೂಲಿಕಾರರೂ ತಮ್ಮ ಹತ್ತಿರದ ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಡುವ ಮೂಲಕ ಯೋಜನೆ ಸದುಪಯೋಗ ಪಡೆದುಕೊಳ್ಳಬಹುದು.

ನರೇಗಾ ಯೋಜನೆ ಬಳಕೆ

ಕೂಲಿ ಕಾರ್ಮಿಕರ ಶಿಶುಗಳ ಪೋಷಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶನದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ 229 ಗ್ರಾಮ ಪಂಚಾಯತಿಗಳ ಪೈಕಿ ಜಾಗದ ಹಾಗೂ ಸರಕಾರಿ ಕಟ್ಟಡಗಳ ಲಭ್ಯತೆಗೆ ಅನುಗುಣವಾಗಿ ಆಯ್ದ 51 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಕೂಸಿನ ಮನೆ(ಶಿಶು ಪಾಲನಾ ಕೇಂದ್ರ) ಕಾರ್ಯಾರಂಭವಾಗಲಿದೆ .

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ಇರುವ ಸರ್ಕಾರಿ ಶಾಲೆ, ಸಮುದಾಯ ಭವನ ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳನ್ನು ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಆರಂಭಿಸುವ ಆಯ್ಕೆಗೆ ಪರಿಗಣಿಸಿದೆ. ಈ ಕಟ್ಟಡಗಳ ಅಲ್ಪಸ್ವಲ್ಪ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಆರಂಭದಲ್ಲಿ ಪ್ರತಿ ಘಟಕಕ್ಕೆ 1 ಲಕ್ಷ ರೂ ಅನುದಾನ ಬಿಡುಗಡೆ ಮಾಡುತ್ತದೆ. ಶಿಶುಗಳಿಗೆ ಪೂರಕ ಪೌಷ್ಠಿಕ ಆಹಾರ, ತೊಟ್ಟಿಲು, ಆಟಿಕೆ ಸಾಮಗ್ರಿ, ಕುಡಿಯುವ ನೀರು, ಗಾಳಿ-ಬೆಳಕು ಮತ್ತಿತರ ಸೌಲಭ್ಯಗಳನ್ನು ಈ ಕೇಂದ್ರದಲ್ಲಿ ಕಲ್ಪಿಸಲಾಗುತ್ತದೆ.

ಕಾರ್ಮಿಕರೇ ತಾಯಂದಿರು

ವಿಶೇಷವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿರುವ 22 ರಿಂದ 45 ವರ್ಷದ ಕನಿಷ್ಠ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿರುವ 10 ಜನ ಮಹಿಳಾ ಕೂಲಿ ಕಾರ್ಮಿಕರನ್ನೇ ಈ ಕೂಸಿನ ಮನೆಗೆ ಕೇರ್ ಟೆಕರ್ಸ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇವರಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ಗೌರವಧನ ನೀಡದೇ ಮನರೇಗಾ ಯೋಜನೆಯಡಿ ಎನ್.ಎಂ.ಆರ್ ಸೃಜನೆ ಮಾಡಿ ದಿನಕ್ಕೆ ರೂ. 316 ರಂತೆ ನೂರು ದಿನಗಳ ವರೆಗೆ ಕೆಲಸ ನೀಡಲಾಗುತ್ತದೆ. ಒಂದು ವೇಳೆ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರು 100 ದಿನ ಕೆಲಸ ನಿರ್ವಹಿಸಿದರೆ ನಂತರ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವುದು ಖಂಡು ಅವರ ವಿವರಣೆ.

ತರಬೇತಿಯೂ ಆಗಿದೆ

ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಪ್ರಾರಂಭಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2 ಜನರಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡ ಪರಿಣಿತ ಮಾಸ್ಟರ್ ಟ್ರೇನರ್‌ಗಳು ಜಿಲ್ಲೆಯ 8 ಸ್ಥಳಗಳಲ್ಲಿ ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿ ಕೇರ್ ಟೇಕರ್ಸ್‌ಗಳಿಗೆ ತರಬೇತಿ ನೀಡಿದ್ದಾರೆ.]

-ಹರೀಶ ಮಾಂಬಾಡಿ, ಮಂಗಳೂರು

IPL_Entry_Point

ವಿಭಾಗ