ಸ್ವಯಂ ಪ್ರೀತಿ ಖಂಡಿತ ಸ್ವಾರ್ಥವಲ್ಲ; ನಮ್ಮನ್ನು ನಾವು ಪ್ರೀತಿಸುವುದಕ್ಕೆ ಕಾರಣವೂ ಬೇಕಿಲ್ಲ– ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಯಂ ಪ್ರೀತಿ ಖಂಡಿತ ಸ್ವಾರ್ಥವಲ್ಲ; ನಮ್ಮನ್ನು ನಾವು ಪ್ರೀತಿಸುವುದಕ್ಕೆ ಕಾರಣವೂ ಬೇಕಿಲ್ಲ– ಮನದ ಮಾತು

ಸ್ವಯಂ ಪ್ರೀತಿ ಖಂಡಿತ ಸ್ವಾರ್ಥವಲ್ಲ; ನಮ್ಮನ್ನು ನಾವು ಪ್ರೀತಿಸುವುದಕ್ಕೆ ಕಾರಣವೂ ಬೇಕಿಲ್ಲ– ಮನದ ಮಾತು

ಭವ್ಯಾ ವಿಶ್ವನಾಥ್ ಬರಹ: ಬೇರೆಯವರ ಸಂತೋಷ ಮತ್ತು ಯೋಗಕ್ಷೇಮ ನೋಡಿಕೊಂಡು, ಬೇರೆಯವರನ್ನು ಗೌರವಿಸಿ– ಪ್ರೀತಿಸಿ ನಮ್ಮನ್ನು ನಾವು ಗೌರವಿಸಿಕೊಂಡು, ನಮ್ಮ ಸಂತೋಷ-ಒಳಿತು ನೋಡಿಕೊಂಡು ಬದುಕು ಸಾಗಿಸುವುದೇ ಸ್ವಯಂ ಪ್ರೀತಿ. ಇದು ಖಂಡಿತವಾಗಿಯೂ ಸ್ವಾರ್ಥವಲ್ಲ. ಸ್ವ-ಪ್ರೀತಿಯು ನಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ನೆರವಾಗುತ್ತದೆ.

ಸ್ವಯಂ ‍ಪ್ರೀತಿ – ಮನದ ಮಾತು ಅಂಕಣ
ಸ್ವಯಂ ‍ಪ್ರೀತಿ – ಮನದ ಮಾತು ಅಂಕಣ (Pc: Canva)

ಏನಿದು ಸೆಲ್ಫ್‌ ಲವ್? ಸೆಲ್ಫ್‌ ಅಂದರೆ ನಾನು, ಲವ್ ಅಂದರೆ ಪ್ರೀತಿ. ಹಾಗಾದರೆ ನನ್ನನ್ನು ನಾನು ಪ್ರೀತಿಸಬೇಕೆ? ನನ್ನನ್ನು ನಾನೇ ಪ್ರೀತಿಸೋದು ಹೇಗೆ ಸಾಧ್ಯ? ವಿಚಿತ್ರವಲ್ಲವೇ? ನನ್ನನ್ನು ನಾನು ಪ್ರೀತಿಸುವುದು ಸ್ವಾರ್ಥವಲ್ಲವೇ? ಹೀಗೆ ಅನೇಕ ಆಲೋಚನೆಗಳು ಮೂಡುವುದುಂಟು. ಆದರೆ, ಮನಃಶಾಸ್ತ್ರದ ಅನುಸಾರ ನಮ್ಮನ್ನು ನಾವು ಪ್ರೀತಿಸಿಕೊಳ್ಳಲು ಸಾಧ್ಯವಿದೆ ಮತ್ತು ಇದು ಖಂಡಿತವಾಗಿಯೂ ಸ್ವಾರ್ಥವಲ್ಲ. ಪ್ರೀತಿ ಎನ್ನುವುದು ಎರಡು ಜೀವಿಗಳ ನಡುವೆ ಮಾತ್ರ ಇರಬೇಕೆಂದಿಲ್ಲ. ಪ್ರತಿಯೊಂದು ಜೀವಿಯೂ ವ್ಯಕ್ತಿಯೂ ತನ್ನನ್ನು ತಾನು ಪ್ರೀತಿಸಿಕೊಳ್ಳಬಹುದು. ಇನ್ನೊಬ್ಬ ವ್ಯಕ್ತಿಯನ್ನು, ಪ್ರಾಣಿ–ಪಕ್ಷಿ, ಪ್ರಕೃತಿಯನ್ನು ಹೇಗೆ ಪ್ರೀತಿಸುತ್ತೇವೋ ಹಾಗೆಯೇ ನಮ್ಮನ್ನು ನಾವು ಪ್ರೀತಿಸಿಕೊಳ್ಳಬಹುದು.

ಎಷ್ಟೋ ಸಲ, ಬಹಳ ಜನ ಅದರಲ್ಲೂ ಹೆಣ್ಣುಮಕ್ಕಳು, ಮುಖ್ಯವಾಗಿ ತಾಯಂದಿರು, ತಮ್ಮ ಆರೋಗ್ಯದ ಕಾಳಜಿ ತೆಗೆದುಕೊಳ್ಳುವುದು, ತಮ್ಮ ಸುಖ–ಸಂತೋಷದ ಬಗ್ಗೆ ಯೋಚಿಸುವುದನ್ನು ಸ್ವಾರ್ಥವೆಂದು ಭಾವಿಸುತ್ತಾರೆ. ತಾಯಿಯಾದವಳು ತ್ಯಾಗಮಯಿಯಾಗಿರಬೇಕು, ತನ್ನ ಸಂತೋಷ ನೆಮ್ಮದಿಗೆ ಮಹತ್ವ ಕೊಟ್ಟರೆ ಸ್ವಾರ್ಥಿಯಾಗಬಹುದೆಂದು ಯೋಚಿಸುತ್ತಾಳೆ.

ಸ್ವಾರ್ಥವೆಂದರೆ ನಮ್ಮನ್ನು ಮಾತ್ರ ನಾವು ಹೆಚ್ಚು ಪ್ರೀತಿಸಿಕೊಂಡು, ನಮ್ಮ ಬಗ್ಗೆ ನಾವೇ ಅತಿಯಾದ ಅನುಕಂಪ ತೋರಿಸಿಕೊಂಡು, ಎಲ್ಲಾ ಪರಿಸ್ಥಿತಿಗಳಲ್ಲೂ ನಮಗೆ ನಾವು ಹೆಚ್ಚಿನ ಮಹತ್ವ ಕೊಡುವುದು. ನಮ್ಮ ಲಾಭ ನಷ್ಟ, ಅನುಕೂಲ ಅನಾನುಕೂಲ, ನೋವು ಸಂತೋಷಗಳನ್ನು ಹೆಚ್ಚು ಪರಿಗಣಿಸುವುದು. ಬೇರೆಯವರ ಅನುಕೂಲ, ಸಂತೋಷವನ್ನು ನಿರ್ಲಕ್ಷಿಸುವುದು. ಇನ್ನೊಬ್ಬರನ್ನು ಪ್ರೀತಿಸುವ ನಾವು, ನಮ್ಮನ್ನೂ ಪ್ರೀತಿಸಿಕೊಂಡರೆ ಅದು ಖಂಡಿತ ಸ್ವಾರ್ಥವಲ್ಲ.

ಸ್ವಯಂ ಪ್ರೀತಿ ಎಂದರೇನು?

ಸ್ವಯಂ ಪ್ರೀತಿ ಎಂದರೆ ನಮ್ಮ ಪ್ರಯತ್ನ ಮತ್ತು ಕೊಡುಗೆಗಳನ್ನು ನಾವು ಮೊದಲು ಗುರುತಿಸಿಕೊಂಡು ಮೆಚ್ಚುಗೆಯನ್ನು ವ್ಯಕ್ತಪಡಿಸುವುದು. ನಮ್ಮ ಯೋಗಕ್ಷೇಮ ಮತ್ತು ಸಂತೋಷದ ಬಗ್ಗೆ ಗೌರವವನ್ನು ಹೊಂದಿರುವುದು. ಸದಾ ಇತರರನ್ನು ಮೆಚ್ಚಿಸಲು, ಒಪ್ಪಿಗೆ ಪಡೆಯಲು ನಮ್ಮ ಆತ್ಮಗೌರವವನ್ನು ತ್ಯಜಿಸದೇ ಇರುವುದು ಅಥವಾ ನಮ್ಮನ್ನು ನಾವು ಕೀಳು ಮಾಡಿಕೊಳ್ಳದೇ ಇರುವುದು. ನಮ್ಮ ಅಸ್ತಿತ್ವವನ್ನು ಗೌರವಿಸುವುದು, ನಮ್ಮ ವ್ಯಕ್ತಿತ್ವವನ್ನು, ಗುಣ ಸ್ವಭಾವಗಳನ್ನು ಅರಿಯುವುದು, ನಮ್ಮ ದೇಹ ಸೌಂದರ್ಯವನ್ನು ಗೌರವಿಸುವುದು, ನಮ್ಮ ಆಯ್ಕೆ, ಇಷ್ಟಗಳನ್ನು ಅರಿತು ಗೌರವಿಸುವುದು, ನಮ್ಮ ಸಾಮರ್ಥ್ಯವನ್ನು ಅರಿತು ಅದರ ಬಗ್ಗೆ ಹೆಮ್ಮೆಯಿಂದ ಇರುವುದು (ಅಹಂ ತೋರಿಸುವುದಲ್ಲ, ನನ್ನಂತೆ ಇನ್ನೊಬ್ಬರಿಲ್ಲ, ನಾನೇ ಮೇಲು, ಉಳಿದವರು ಕೀಳು ಎಂದಲ್ಲ). ನಮ್ಮ ದೌರ್ಬಲ್ಯಗಳನ್ನು ಅರಿತು ಅವುಗಳನ್ನು ಒಪ್ಪಿಕೊಳ್ಳುವುದು, ಸಾಧ್ಯವಾದರೆ ಸುಧಾರಿಸಿಕೊಳ್ಳುವುದು ಇಲ್ಲವಾದರೆ ನಮ್ಮ ದೌರ್ಬಲ್ಯಗಳ ಕುರಿತು ಕೀಳರಿಮೆ ಬೆಳೆಸಿಕೊಳ್ಳದೇ ಇರುವುದು.

ನಮ್ಮ ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ ಅಗತ್ಯಗಳನ್ನು ಪರಿಗಣಿಸುವುದು, ನಮ್ಮ ಗುರಿ, ಕನಸು, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ‘ಸೆಲ್ಫ್ ಲವ್‌’ನ ಭಾಗವಾಗಿದೆ. ನಮ್ಮ ಸಂತೋಷ, ನೆಮ್ಮದಿ, ಆರೈಕೆ, ಆರೋಗ್ಯ, ಅಗತ್ಯಗಳನ್ನು ಇತರರು ನೋಡಿಕೊಳ್ಳಬೇಕು. ಇದು ಇನ್ನೊಬ್ಬರ ಕರ್ತವ್ಯವೆಂದು ಸೀಮಿತಗೊಳಿಸದೆ ನಮ್ಮನ್ನು ನಾವು ನೋಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಇನ್ನೊಬ್ಬರಿಂದ ನಿರೀಕ್ಷಿಸಿ ಸಿಗದೇ ಇದ್ದಲ್ಲಿ ನಿರಾಶೆಗೊಳ್ಳುವ ಪ್ರಮೇಯ ಬರುವುದಿಲ್ಲ.

ಬೇರೆಯವರ ಸಂತೋಷ ಮತ್ತು ಯೋಗಕ್ಷೇಮಗಳನ್ನು ನೋಡಿಕೊಂಡು, ಬೇರೆಯವರನ್ನು ಗೌರವಿಸಿ, ಪ್ರೀತಿಸಿ ನಮ್ಮನ್ನು ನಾವು ಗೌರವಿಸಿಕೊಂಡು, ನಮ್ಮ ಸಂತೋಷ ಒಳಿತು ನೋಡಿಕೊಂಡು ಹೋಗುವುದೇ ಸ್ವಯಂ ಪ್ರೀತಿ. ಇದು ಖಂಡಿತವಾಗಿಯೂ ಸ್ವಾರ್ಥವಲ್ಲ.

ಅತಿ ತ್ಯಾಗ, ಅನಗತ್ಯ ಹೊಂದಾಣಿಕೆ ಸಲ್ಲದು

ನಮ್ಮ ಬೇಸರ, ಅಗತ್ಯ ಯೋಗಕ್ಷೇಮಗಳನ್ನು ನಾವೇ ನಿರ್ಲಕ್ಷ್ಯ ಮಾಡಿ ಇತರರ ಒಳಿತಿಗಾಗಿ ಮಾತ್ರ ಆದ್ಯತೆ ಕೊಡುವುದು, ಅತಿಯಾದ ತ್ಯಾಗ ಮಾಡುವುದು, ನಮಗೆ ಪದೇಪದೇ ಅಗೌರವ ನೀಡಿದವರಿಗೆ ನಮ್ಮ ಮಿತಿ ಮೀರಿ ಒಳ್ಳೆಯದನ್ನು ಮಾಡಿ ಮೋಸ ಹೋಗುವುದು. ಅನಗತ್ಯವಾಗಿ ಹೊಂದಿಕೊಂಡು ಹೋಗುವುದು, ಸ್ವಯಂ ಪ್ರೀತಿಗೆ ವಿರುದ್ಧವಾದುದು. ಸ್ವ-ಪ್ರೀತಿಯು ನಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ನೆರವಾಗುತ್ತದೆ. ಇದು ನಮ್ಮನ್ನು ನಾವು ಗೌರವಿಸಿಕೊಳ್ಳುವ ಕ್ರಿಯೆಯಾಗಿರುವುದರಿಂದ ನಮ್ಮ ಸುತ್ತಮುತ್ತವಿರುವ ಜನಗಳೂ ಕೂಡ ನಮ್ಮನ್ನು ಗೌರವಿಸುತ್ತಾರೆ.

ಮನದ ಮಾತು – ಭವ್ಯಾ ವಿಶ್ವನಾಥ್
ಮನದ ಮಾತು – ಭವ್ಯಾ ವಿಶ್ವನಾಥ್

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

Whats_app_banner