ಬೆಂಗಳೂರು ಸೇರಿ ಭಾರತದ 21 ನಗರಗಳಲ್ಲಿ ಮುಂದಿನ ವರ್ಷಕ್ಕೆ ನೀರು ಉಳಿಸುವ ಅನಿವಾರ್ಯತೆ ಮತ್ತು ಸೂಕ್ತ ಪರಿಹಾರ; ಉದ್ಯಮಿ ರಘುನಂದನ್ ಪ್ರಸಾದ್ ಬರಹ
ಬೆಂಗಳೂರು ಸೇರಿ 21 ನಗರಗಳಲ್ಲಿ ಮುಂದಿನ ವರ್ಷ ಅಂತರ್ಜಲ ಸಮಸ್ಯೆ ಬಿಗಡಾಯಿಸಲಿದೆ. ನೀತಿ ಆಯೋಗದ ವರದಿಯೂ ಇದನ್ನೇ ಉಲ್ಲೇಖಿಸಿದೆ ಎನ್ನುತ್ತ ನೀರು ಉಳಿಸುವ ಅನಿವಾರ್ಯತೆ ಮತ್ತು ಸೂಕ್ತ ಪರಿಹಾರವನ್ನು ವಿವರಿಸಿದ್ದಾರೆ ಕೋನಾರಕ್ ಮೀಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಪ್ರಸಾದ್.
ಭಾರತದಲ್ಲಿ ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಲೇ ಇದೆ. ಭವಿಷ್ಯದಲ್ಲಿ ಈ ಸಮಸ್ಯೆ ಮತ್ತಷ್ಟು ಜಾಸ್ತಿಯಾಗುವ ಎಲ್ಲಾ ಲಕ್ಷಣಗಳೂ ಈಗಲೇ ಕಾಣಿಸುತ್ತಿವೆ. ಇತ್ತೀಚೆಗೆ ನೀತಿ ಆಯೋಗ ಒಂದು ಅಧ್ಯಯನ ವರದಿ ಬಿಡುಗಡೆ ಮಾಡಿತ್ತು. ಅದರಲ್ಲಿ ಕೂಡ ಬೆಂಗಳೂರು, ದೆಹಲಿ ಮತ್ತು ಚೆನ್ನೈಯಂತಹ ಮಹಾನಗರಗಳು ಸೇರಿ ಒಟ್ಟು 21 ನಗರಗಳು 2025ರ ವೇಳೆಗೆ ಅಂತರ್ಜಲ ಸಮಸ್ಯೆಯನ್ನು ಎದುರಿಸಲಿವೆ ಎಂದು ತಿಳಿಸಲಾಗಿದೆ. ಇವೆಲ್ಲವೂ ಮಾಹಿತಿ ಮಾತ್ರವೇ ಅಲ್ಲ. ಎಚ್ಚರಿಕೆಯ ಕರೆಗಂಟೆಯೂ ಹೌದು. ವಿಶ್ವಸಂಸ್ಥೆ ಈ ಮೊದಲೇ ತಿಳಿಸಿದಂತೆ 2025ರಲ್ಲಿ ಭಾರತದ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದ್ದು, ವಾರ್ಷಿಕವಾಗಿ ಪ್ರತಿವ್ಯಕ್ತಿಗೆ ಬಳಕೆಗೆ 1000 ಕ್ಯುಬಿಕ್ ಮೀಟರ್‌ಗಿಂತಲೂ ಕಡಿಮೆ ನೀರು ದೊರೆಯುವ ಸಾಧ್ಯತೆ ಇದೆ. ಹಾಗಾಗಿ ನೀರಿನ ವಿಚಾರ ಕುರಿತು ಈಗಲಾದರೂ ಎಲ್ಲರೂ ಎಚ್ಚೆತ್ತುಕೊಳ್ಳುವುದು ಅವಶ್ಯ. ಭಾರತವು ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಹಳ್ಳಿಗಳೂ ನಗರಗಳಾಗಿ ಪರಿವರ್ತನೆಗೊಳ್ಳುತ್ತಿವೆ. 2030ರ ವೇಳೆಗೆ ಭಾರತದ ನಗರಗಳಲ್ಲಿ ವಾಸಿಸುವವರ ಸಂಖ್ಯೆ 600 ಮಿಲಿಯನ್‌ಗೆ ಏರಬಹುದು ಎಂದು ಲೆಕ್ಕಾಚಾರಗಳು ಹೇಳುತ್ತಿವೆ. ಹೀಗಾಗಿ ನಗರಗಳು ಅದಕ್ಕೆ ತಕ್ಕಂತೆ ತಮ್ಮ ನೀರು ನಿರ್ವಹಣಾ ವ್ಯವಸ್ಥೆಯನ್ನು ಸರಿಹೊಂದಿಸುವುದು ಅವಶ್ಯ ಮತ್ತು ಅನಿವಾರ್ಯ ಆಗಲಿದೆ. ಪ್ರಸ್ತುತ ಇರುವ ಬಹಳ ಹಳೆಯ ನೀರು ಸರಬರಾಜು ವ್ಯವಸ್ಥೆ ಮತ್ತು ಅಸಮರ್ಪಕ ನೀರು ಸರಬರಾಜು ವ್ಯವಸ್ಥೆಗಳು ಮುಂದೆ ಜನರ ನೀರಿನ ಬೇಡಿಕೆ ಪೂರೈಸಲು ಹಿಂದೆ ಬೀಳಲಿವೆ.
ಹವಾಮಾನ ಬದಲಾವಣೆಯಿಂದ ನೀರಿನ ಸಮಸ್ಯೆ ಉಲ್ಬಣ
ಜಾಗತಿಕ ತಾಪಮಾನ ಏರಿಕೆಯಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆಯು 2023ನೇ ವರ್ಷದಲ್ಲಿ ಅತಿ ಹೆಚ್ಚು ಬಿಸಿಯ ವರ್ಷ ಎಂದು ಹೇಳಿಕೆ ನೀಡಿದೆ. ಆ ವರ್ಷದ ಸರಾಸರಿ ತಾಪಮಾನ 0.65 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ಬಹಳ ಜಾಸ್ತಿ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ತಾಗತಿಕ ತಾಪಮಾನ ಏರಿಕೆಯ ಈ ಎಲ್ಲಾ ಪರಿಣಾಮಗಳಿಂದ ಜಲಮೂಲಗಳು ಆವಿಯಾಗುತ್ತಿವೆ. ಅನಿಯತ ಮಳೆಯಾಗುತ್ತಿದೆ. ಸಮುದ್ರ ಮಟ್ಟ ಏರುತ್ತಿರುವುದರಿಂದ ಕರಾವಳಿಯಲ್ಲಿ ಸಮಸ್ಯೆಯಾಗುತ್ತಿವೆ. ಇವೆಲ್ಲವೂ ಕೂಡ ನೀರಿನ ಸಮಸ್ಯೆ ಉಲ್ಬಣವಾಗುತ್ತಿರುವುದರ ಸೂಚನೆಯಾಗಿದೆ.
ಪರಿಹಾರ ಸೂತ್ರಗಳು ಈ ಸಮಸ್ಯೆಗಳನ್ನು ಪರಿಹರಿಸಲು, ಭಾರತೀಯ ನಗರಗಳು ಜಲ ಸಂರಕ್ಷಿತ ನಗರಗಳಾಗಿ ರೂಪುಗೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಂಡು ಒಂದು ಸಮಗ್ರ ಪರಿಹಾರವನ್ನು ಕಂಡುಕೊಳ್ಳುವ ಅವಶ್ಯಕತೆ ಇದೆ. ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಬೇಕು. ಸುಸ್ಥಿರ ಪದ್ಧತಿಗಳನ್ನು ಪಾಲಿಸಬೇಕು. ಪ್ರಮುಖವಾಗಿ ನೀರು ಸೋರಿಕೆಯನ್ನು ತಡೆಯಬೇಕು. ತಡೆಯಬೇಕೆಂದರೆ ಅತ್ಯಾಧುನಿಕ ವಿಧಾನಗಳಿಂದ ನೀರು ಸೋರಿಕೆಯನ್ನು ಪತ್ತೆ ಹಚ್ಚಬೇಕು. ನೀರಿನ ಬೇಡಿಕೆ ಗೊತ್ತು ಮಾಡಲು, ವಿತರಣಾ ವ್ಯವಸ್ಥೆ ಸಮರ್ಪಕಗೊಳಿಸಲು ಮತ್ತು ಸಮಸ್ಯೆಗಳನ್ನು ಪೂರ್ವಭಾವಿಯಾಗಿ ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ ಅನ್ನು ಬಳಸಿಕೊಳ್ಳುವುದು ಸೂಕ್ತ.
ನೀರು ಪೋಲಾಗದಂತೆ ತಡೆಯಲು ಸ್ಮಾರ್ಟ್ ಮೀಟರ್ ಬಳಕೆ
ಸ್ಮಾರ್ಟ್ ಮೀಟರ್ ಬಳಕೆಯು ಬಹಳ ಸೂಕ್ತನೀರಿನ ಸಂರಕ್ಷಣೆಗೆ ಸ್ಮಾರ್ಟ್ ಮೀಟರ್ ಗಳ ಬಳಕೆ ಬಹಳ ಉತ್ತಮವಾದುದು ಎಂಬುದು ಈಗಾಗಲೇ ಸಾಬೀತಾಗಿದೆ. ಈಗಾಗಲೇ ಪುಣೆ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಈ ಸ್ಮಾರ್ಟ್ ಮೀಟರ್ ಗಳ ಬಳಕೆ ಆರಂಭವಾಗಿದ್ದು, ಅದರಿಂದ ದೊರೆತ ಉತ್ತಮ ಫಲಿತಾಂಶವೇ ಸ್ಮಾರ್ಟ್ ಮೀಟರ್ ಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸ್ಮಾರ್ಟ್ ಮೀಟರ್ ಬಳಸಿದ ಕೇವಲ ಒಂದು ವರ್ಷದಲ್ಲಿ ಈ ನಗರಗಳಲ್ಲಿ ಸ್ಮಾರ್ಟ್ ಮೀಟರ್ ಬಳಸಿರುವ ಕಡೆ ಶೇ.15 ರಿಂದ ಶೇ.20 ನೀರು ಉಳಿತಾಯವಾಗಿದೆ ಎಂಬುದು ಲೆಕ್ಕಾಚಾರ ತಿಳಿಸುತ್ತದೆ. ಜೊತೆಗೆ ಶೇ.25 ರಷ್ಟು ಆದಾಯ ಗಳಿಕೆ ಹೆಚ್ಚಾಗಿದೆ. ಆದಾಯ ರಹಿತ ನೀರು ಸರಬರಾಜು ಶೇ.35 ರಿಂದ ಶೇ.15ಕ್ಕೆ ಇಳಿದಿದೆ. ದಕ್ಷಿಣ ದೆಹಲಿಯಲ್ಲಿ ಕೂಡ ಸ್ಮಾರ್ಟ್ ಮೀಟರ್ ಅಳವಡಿಕೆ ಶುರುವಾಗಿದ್ದು, 3000 ಮನೆಗಳಲ್ಲಿ ಅಳವಡಿಸಲಾಗಿದೆ. ಇಲ್ಲಿ ನೀರಿನ ಬಳಕೆ ಶೇ.18 ರಷ್ಟು ಕಡಿಮೆ ಆಗಿದೆ. ಶೇ.90ರಷ್ಟು ಗ್ರಾಹಕ ದೂರುಗಳು ಕಡಿಮೆಯಾಗಿವೆ. ದಿನಬಳಕೆಯ ನೀರಿನ ಉಳಿತಾಯವು ಸುಮಾರು 500,000 ಲೀಟರ್ ಗಳನ್ನು ತಲುಪಿದೆ.
ಕೊನೆಯ ಮಾತು: ಸಮಾಜದಲ್ಲಿ ಜಲ ಸಂರಕ್ಷಣೆ ಕುರಿತು ಮಹತ್ವದ ಹೆಜ್ಜೆ ಇಡುವುದು ಅವಶ್ಯವಾಗಿದೆ. ಸಂದರ್ಭ ಹೀಗಿರುವಾಗ ನೀರನ್ನು ಉಳಿಸುವ ಸುಲಭ ವಿಧಾನವಾಗಿ ಸ್ಮಾರ್ಟ್ ಮೀಟರ್ ಗಳು ನಮ್ಮ ಕಣ್ಣ ಮುಂದಿವೆ. ಪ್ರಮುಖ ಮಹಾನಗರಗಳಲ್ಲಿ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸುವುದರಿಂದ ವಾರ್ಷಿಕವಾಗಿ 2.5 ಬಿಲಿಯನ್ ಕ್ಯುಬಿಕ್ ಮೀಟರ್ ಗಳಷ್ಟು ನೀರಿನ ಉಳಿತಾಯ ಮಾಡಬಹುದಾಗಿದೆ. ನೀರು ಸಂರಕ್ಷಣೆಯ ಜೊತೆಗೆ ಈ ವಿಧಾನದಿಂದ ಪ್ರವಾಹ ಸನ್ನಿವೇಶಗಳನ್ನು ಶೇ.40ರಷ್ಟು ಕಡಿಮೆ ಮಾಡಬಹುದಾಗಿದೆ. ಶೇ.30ರಷ್ಟು ಇಂಧನ ಉಳಿತಾಯ ಆಗಲಿದೆ.
ಲೇಖನ - ರಘುನಂದನ್ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಕೋನಾರಕ್ ಮೀಟರ್ಸ್