ಕನ್ನಡ ಸುದ್ದಿ  /  Karnataka  /  Lok Sabha Election 2024 Uttara Kannada Congress Candidate Dr Anjali Nimbalkar Profile Hsm

ಲೋಕಸಭಾ ಚುನಾವಣೆ; ಉತ್ತರ ಕನ್ನಡ ಕಣದಲ್ಲಿ ಎಂಬಿಬಿಎಸ್‌ ಎಂಎಸ್‌ ಡಾಕ್ಟರ್‌, ಓಟಿನ ರಾಜಕೀಯದಲ್ಲಿ ಅಂಜಲಿ ನಿಂಬಾಳ್ಕರ್‌

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಬಿಬಿಎಸ್, ಎಂ.ಎಸ್. ಪದವೀಧರೆ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ಅವರ ರಾಜಕೀಯ ಹಿನ್ನೆಲೆ ಸೇರಿ ಕಿರುಪರಿಚಯದ ಮಾಹಿತಿ ಇಲ್ಲಿದೆ. (ವಿಶೇಷ ವರದಿ - ಹರೀಶ ಮಾಂಬಾಡಿ, ಮಂಗಳೂರು)

ಲೋಕಸಭಾ ಚುನಾವಣೆ; ಉತ್ತರ ಕನ್ನಡ ಕಣದಲ್ಲಿ ಎಂಬಿಬಿಎಸ್‌ ಎಂಎಸ್‌ ಡಾಕ್ಟರ್‌ ಅಂಜಲಿ ನಿಂಬಾಳ್ಕರ್‌ ಕಾಂಗ್ರೆಸ್ ಅಭ್ಯರ್ಥಿ
ಲೋಕಸಭಾ ಚುನಾವಣೆ; ಉತ್ತರ ಕನ್ನಡ ಕಣದಲ್ಲಿ ಎಂಬಿಬಿಎಸ್‌ ಎಂಎಸ್‌ ಡಾಕ್ಟರ್‌ ಅಂಜಲಿ ನಿಂಬಾಳ್ಕರ್‌ ಕಾಂಗ್ರೆಸ್ ಅಭ್ಯರ್ಥಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಷ್ಟೇ ಅಲ್ಲ, ಬೆಳಗಾವಿ ಜಿಲ್ಲೆಯ ಎರಡು ತಾಲೂಕುಗಳ ಮತದಾರರ ಗಮನ ಸೆಳೆಯಬೇಕಾಗಿರುವ ಲೋಕಸಭೆಯ ಉತ್ತರ ಕನ್ನಡ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಾ. ಅಂಜಲಿ ನಿಂಬಾಳ್ಕರ್ ಆಯ್ಕೆಯಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ನಿಯಾಗಿರುವ ಇವರು ಎಂಬಿಬಿಎಸ್, ಎಂಎಸ್ ಪದವೀಧರರು. ಹೀಗಾಗಿ ಸಕಾಲಕ್ಕೆ ವೈದ್ಯಕೀಯ ಸೌಲಭ್ಯದ ತೀವ್ರ ಕೊರತೆ ಇರುವ ಉತ್ತರ ಕನ್ನಡಕ್ಕೆ ಸ್ವತಃ ವೈದ್ಯರೂ ಆಗಿರುವ ಅಂಜಲಿ ನಿಂಬಾಳ್ಕರ್ ಗೆದ್ದರೆ ಸವಲತ್ತುಗಳನ್ನು ಒದಗಿಸಲು ಪ್ರಯೋಜನವೇನಾದರೂ ಆಗಬಹುದೇ ಎಂಬ ನಿರೀಕ್ಷೆ ಇದೆಯಾದರೂ ಕಾಂಗ್ರೆಸ್ ಪಕ್ಷ ಅವರನ್ನು ಕಣಕ್ಕಿಳಿಸಿದ್ದು, ವೈದ್ಯೆ ಎಂಬ ಕಾರಣಕ್ಕಾಗಿ ಅಲ್ಲ, ಈ ಕ್ಷೇತ್ರದಲ್ಲಿ ಹರಡಿಕೊಂಡಿರುವ ಮರಾಠಾ ಸಮುದಾಯದವರ ಸಂಖ್ಯೆ ಗಮನಾರ್ಹ ಸಂಖ್ಯೆಯಲ್ಲಿರುವುದು ಅಂಜಲಿ ಸ್ಪರ್ಧೆಗೆ ಮುಖ್ಯ ಕಾರಣ.

ಅಂಜಲಿ ನಿಂಬಾಳ್ಕರ್ ಪ್ಲಸ್ ಪಾಯಿಂಟ್ ಏನು?

ಕ್ಷತ್ರಿಯ ಮರಾಠಾ ಸಮುದಾಯದವರು ಕಿತ್ತೂರು, ಖಾನಾಪುರ, ಹಳಿಯಾಳ, ಕಾರವಾರ ತಾಲೂಕುಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಅಂಜಲಿ ನಿಂಬಾಳ್ಕರ್ ಆ ಸಮುದಾಯದ ಮತಗಳನ್ನು ಸೆಳೆಯಬಲ್ಲವರು ಹಾಗೂ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಒಟ್ಟುಗೂಡಿಸಬಲ್ಲವರು ಎಂಬ ನಂಬಿಕೆ ಪಕ್ಷಕ್ಕಿದೆ. ಇವರು ಖಾನಾಪುರದ ಮಾಜಿ ಶಾಸಕಿ. ಹೀಗಾಗಿ ಬೆಳಗಾವಿ ಜಿಲ್ಲೆಯ ಭಾಗವನ್ನೂ ಈ ಕ್ಷೇತ್ರ ಒಳಗೊಂಡ ಕಾರಣ, ಕ್ಷೇತ್ರಕ್ಕೆ ಪರಿಚಿತರು. ಹೊಸಮುಖಗಳಿಗೆ ಕಾಂಗ್ರೆಸ್ ಮಣೆ ಹಾಕಿದರೆ ಗೆಲ್ಲುವ ಸಾಧ್ಯತೆ ಇರುವ ಹೈಕಮಾಂಡ್ ಲೆಕ್ಕಾಚಾರದ ಭಾಗವಾಗಿ ಡಾ. ಅಂಜಲಿ ಅವರನ್ನು ಕಣಕ್ಕಿಳಿಸಿದೆಯಾದರೂ ಈಗಾಗಲೇ ಆ ಪಕ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಮತಗಳು ಲಭಿಸಿದ್ದು ಪ್ಲಸ್ ಪಾಯಿಂಟ್. ಮಹಿಳಾ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಕಾರಣ ಅವರನ್ನು ಸೆಳೆಯಬಹುದಾದ ಚರಿಷ್ಮಾ ಡಾ. ಅಂಜಲಿ ಅವರಿಗಿದೆ ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ.

ಶಾಸಕಿಯಾಗಿ ಅನುಭವಿ, ಮಂತ್ರಿಗಳ ವೇತನ ಹೆಚ್ಚಳ ವಿರೋಧಿಸಿದ್ದರು

2018ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರವನ್ನು ಪ್ರತಿನಿಧಿಸಿ ವಿಧಾನಸಭೆ ಪ್ರವೇಶಿಸಿದ್ದ ಡಾ. ಅಂಜಲಿ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೆದುರು ಸೋತಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಂತಹಂತವಾಗಿ ಹುದ್ದೆ ಗಳಿಸಿದ್ದ ಅವರು ಪಕ್ಷದ ವಕ್ತಾರರಾಗಿ ಗುರುತಿಸಲ್ಪಟ್ಟರು. 2020ರಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಸ್ಪರ್ಧಿಸಿ ಸೋತಿದ್ದರು. 2023ರಲ್ಲಿ ಬಿಜೆಪಿಯ ವಿಠಲ ಹಲಗಾಂವ್ಕರ್ ಅವರೆದುರು ಸ್ಪರ್ಧಿಸಿ ಸೋತಿದ್ದ ಅಂಜಲಿ ಅವರಿಗೆ ಕೇವಲ 37,205 ಮತಗಳು ದೊರಕಿತ್ತು.

ಡಾ.ಅಂಜಲಿ ನಿಂಬಾಳ್ಕರ್ ರಾಜಕೀಯರಹಿತವಾಗಿ ಒಂದು ವಿಚಾರದಲ್ಲಂತೂ ವಿಶೇಷವಾಗಿ ಗಮನ ಸೆಳೆಯುತ್ತಾರೆ. 2022ರಲ್ಲಿ ಕರ್ನಾಟಕ ಸರಕಾರ ಮಂತ್ರಿಗಳ ವೇತನ ಹೆಚ್ಚಳ ಮಾಡುವುದರ ಬದಲು ಅದನ್ನು ನಾಗರಿಕರ ಸೌಲಭ್ಯವೃದ್ಧಿಗಾಗಿ ಬಳಸಬಹುದು ಎಂದು ಹೇಳಿದ್ದರು. ತನ್ನ ಕ್ಷೇತ್ರದಲ್ಲಿನ ಬಡವರು ಹಾಗೂ ತುಳಿತಕ್ಕೊಳಗಾದವರ ಹಕ್ಕುಗಳ ಕುರಿತು ಗಮನ ಸೆಳೆಯಲು ಪಾದಯಾತ್ರೆಯೊಂದನ್ನು ಕೈಗೊಂಡು ಸುದ್ದಿಯಾಗಿದ್ದರು.

ಪೊಲೀಸ್ ಪತ್ನಿ, ಪ್ರಸೂತಿತಜ್ಞೆ

ಬೆಳಗಾವಿಯ ಖಾನಾಪುರದಲ್ಲಿ ಮರಾಠಾ ಕುಟುಂಬದಲ್ಲಿ ಜನಿಸಿದ್ದ ಅಂಜಲಿ ಎಂಬಿಬಿಎಸ್ ಬಳಿಕ ಪ್ರಸೂತಿಶಾಸ್ತ್ರ ಮತ್ತು ಲೆಪ್ರೋಸ್ಕೊಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಐಪಿಎಸ್ ಅಧಿಕಾರಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಮದುವೆಯಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿದ್ದ ಹತ್ತು ವೈದ್ಯರ ಪೈಕಿ ಡಾ. ಅಂಜಲಿ ಅವರೂ ಒಬ್ಬರಾಗಿದ್ದರು. 1998ನೇ ಬ್ಯಾಚಿನ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿಯಾಗಿರುವ ಹೇಮಂತ್ ನಿಂಬಾಳ್ಕರ್ ಅವರು ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದವರು. ಬೆಳಗಾವಿ ಎಸ್ಪಿ, ಬೆಂಗಳೂರು ಸಿಸಿಬಿ ಜಂಟಿ ಆಯುಕ್ತ, ಹೆಚ್ಚುವರಿ ಆಯುಕ್ತ, ಸಿಐಡಿ ಐಜಿಪಿ ಸೇರಿದಂತೆ ವಿವಿಧ ಹುದ್ದೆಗಳನ್ನು ಹೊಂದಿದ್ದ ಅವರು, 2023ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ನೇಮಕಗೊಂಡಿದ್ದರು.ಇದೀಗ ಅವರು ಎಡಿಜಿಪಿ ಶ್ರೇಣಿಯ ಅಧಿಕಾರಿಯಾಗಿದ್ದಾರೆ.

ಹೇಮಂತ್ ನಿಂಬಾಳ್ಕರ್ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಡಾ. ಅಂಜಲಿ ಆ ಭಾಗಗಳಲ್ಲಿ ಪಿಎಚ್ ಸಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರಿನ ಡಾ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿಯೂ ಅವರು ಕರ್ತವ್ಯ ಸಲ್ಲಿಸಿದ್ದರು. ಕೃಷಿ ಕುಟುಂಬದಲ್ಲಿ ಜನಿಸಿರುವ ಡಾ. ನಿಂಬಾಳ್ಕರ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದವರು. ಶಾಲೆಯಲ್ಲಿ ಕಲಿಯುವ ಹದಿಹರೆಯದ ಬಾಲಕಿಯರ ಋತುಚಕ್ರದ ಸಮಸ್ಯೆಗಳ ಕುರಿತು ಅವರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಗಮನ ಸೆಳೆದವರು. ಎಂಎಲ್ಎ ಚುನಾವಣೆಯಲ್ಲಿ ಅವರು ಸೋಲು ಕಂಡರೂ ಒಂದು ಅವಧಿಯ ಅವರ ಶಾಸಕತ್ವದ ಕಾಲದಲ್ಲಿ ಮಂತ್ರಿಗಳ, ಶಾಸಕರ ವೇತನ ಏರಿಕೆಯನ್ನು ಬಡವರ ಕಲ್ಯಾಣಕ್ಕೆ ಉಪಯೋಗಿಸುವ ವಿಚಾರದ ಕುರಿತು ಪ್ರಸ್ತಾಪಿಸಿ ಗಮನ ಸೆಳೆಯುವುದರ ಮೂಲಕ ತನ್ನ ಭಿನ್ನ ಹೆಜ್ಜೆಗುರುತು ಛಾಪಿಸಿದ್ದರು.

(ವಿಶೇಷ ವರದಿ - ಹರೀಶ ಮಾಂಬಾಡಿ, ಮಂಗಳೂರು)