ಕನ್ನಡ ಸುದ್ದಿ  /  ಕರ್ನಾಟಕ  /  Covid Updates: ಗೋವಾದಿಂದ ಬಂದ ಯುವಕನಿಗೆ ಕೊರೊನಾ ಸೋಂಕು, ಉತ್ತರ ಕನ್ನಡದಲ್ಲಿ ಮತ್ತೆ ವೈರಲ್ ಫಿವರ್ ಕಾಟ, ಇತ್ತ ಕೇರಳ ಗಡಿಯಲ್ಲೂ ಕಟ್ಟೆಚ್ಚರ

COVID Updates: ಗೋವಾದಿಂದ ಬಂದ ಯುವಕನಿಗೆ ಕೊರೊನಾ ಸೋಂಕು, ಉತ್ತರ ಕನ್ನಡದಲ್ಲಿ ಮತ್ತೆ ವೈರಲ್ ಫಿವರ್ ಕಾಟ, ಇತ್ತ ಕೇರಳ ಗಡಿಯಲ್ಲೂ ಕಟ್ಟೆಚ್ಚರ

ಕರ್ನಾಟಕದಲ್ಲಿ ಗೋವಾದಿಂದ ಬಂದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮತ್ತೊಮ್ಮೆ ಕೋವಿಡ್ ಸಂಕಷ್ಟದ ಕಳವಳ ಹೆಚ್ಚಾಗಿದೆ. ಉತ್ತರ ಕನ್ನಡದಲ್ಲಿ ಮತ್ತೆ ವೈರಲ್ ಫಿವರ್ ಕಾಟ ಹೆಚ್ಚಾಗಿದೆ. ಇತ್ತ ಕೇರಳದಲ್ಲೂ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಗಡಿಯಲ್ಲೂ ಕಟ್ಟೆಚ್ಚರವಹಿಸಲಾಗಿದೆ.

ಕೊರೊನಾ ಆತಂಕ (ಸಾಂಕೇತಿಕ ಚಿತ್ರ)
ಕೊರೊನಾ ಆತಂಕ (ಸಾಂಕೇತಿಕ ಚಿತ್ರ) (pixabay)

ಕಾರವಾರ/ಮಂಗಳೂರು: ಕೊರೊನಾ ಸೋಂಕು ಪ್ರಕರಣಗಳ ಕುರಿತು ಕರ್ನಾಟಕ ಸರಕಾರ ಸಾಮಾಜಿಕ ಮಾರ್ಗಸೂಚಿಯನ್ನು ಪ್ರಕಟಿಸುತ್ತಿರುವ ಹೊತ್ತಿನಲ್ಲೇ ಉತ್ತರ ಕನ್ನಡ ಜಿಲ್ಲೆಗೆ ಕೊರೊನಾ ಕಾಲಿಟ್ಟ ವಿಚಾರ ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಯುವಕನೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈತ ಗೋವಾದಿಂದ ಬಂದಿದ್ದ ಎನ್ನಲಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಉತ್ತರಕನ್ನಡ ಜಿಲ್ಲೆಗೂ ಕೊರೊನಾ ವೈರಸ್ ಹರಡುತ್ತಿದೆ ಎಂಬುದು ಖಾತ್ರಿಯಾಗಿದೆ.

ಇತ್ತ ಕೇರಳ ಕರ್ನಾಟಕದ ಗಡಿ ಭಾಗದಲ್ಲೂ ಕಟ್ಟೆಚ್ಚರ ಮಾಡಲಾಗುತ್ತಿದೆ. ಪ್ರಸ್ತುತ ಕೊಡಗು, ಮಂಗಳೂರು, ಚಾಮರಾಜನಗರ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶೀತ, ಜ್ವರ, ಕೆಮ್ಮು ಇರುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಈಗಾಗಲೇ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಗೋವಾದಿಂದ ಬಂದ ಯುವಕನಿಗೆ ಸೋಂಕು: ಕಾರವಾರ ತಾಲೂಕಿನ ಸದಾಶಿವಗಡ ಗ್ರಾಮದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಗೋವಾದಿಂದ ಬಂದಿದ್ದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಯುವಕನಲ್ಲಿ ಸೋಂಕು ಪತ್ತೆಯಾಗಿತ್ತು ಪ್ರಸ್ತುತ ಯುವಕನ ಆರ್ ಟಿ ಪಿ ಸಿ ಆರ್ ರಿಪೋರ್ಟ್ ನೆಗೆಟಿವ್ ಬಂದಿದೆ.

ಈ ಭಾಗದಲ್ಲಿ ಕೆಲವು ದಿನಗಳಲ್ಲಿ ಹದಿನೈದರಿಂದ ಇಪ್ಪತ್ತು ಜನರಲ್ಲಿ ಕೆಮ್ಮು, ನೆಗಡಿ ಜ್ವರ ಕಾಣಿಸಿಕೊಂಡಿತ್ತು ಒಂದೇ ಕುಟುಂಬ ಸದಸ್ಯರು, ಸ್ಥಳೀಯರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು. ಲಸಿಕೆ ಪಡೆದ ಹಿನ್ನೆಲೆ ಕೇವಲ ಮೂರ್ನಾಲ್ಕು ದಿನದಲ್ಲಿ ಕೊರೊನಾ ವಾಸಿಯಾಗುತ್ತಿದೆ. ಚಳಿಗಾಲದ ಹಿನ್ನೆಲೆ ಹೆಚ್ಚು ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ.

ಕೊರೊನಾ ಲಕ್ಷಣ ಹೆಚ್ಚಾಗಿ ಕಂಡು ಬಂದಲ್ಲಿ ಮಾತ್ರ ಕೊರೊನಾ ಪರೀಕ್ಷೆಯನ್ನು ಆರೋಗ್ಯ ಇಲಾಖೆ ಮಾಡುತ್ತಿದ್ದು, ಸರಕಾರದ ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿದೆ. ಹೊಸ ವರ್ಷಕ್ಕೆ ಹೊರ ರಾಜ್ಯಗಳಿಂದ ಹೆಚ್ಚಿನ ಜನರು ಉತ್ತರಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಉತ್ತರಕನ್ನಡ ಜಿಲ್ಲಾಡಳಿತ‌ ಎಲ್ಲೆಡೆ ಕಟ್ಟೆಚ್ಚರ ವಿಧಿಸಿದೆ.

ಶಬರಿಮಲೆ ಯಾತ್ರಿಕರಿಗೆ ಮುನ್ನೆಚ್ಚರಿಕೆ: ಕೇರಳದಲ್ಲಿ ದಿನವೊಂದಕ್ಕೆ ಮುನ್ನೂರರಷ್ಟು ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರಿಕರು ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ ಕರ್ನಾಟಕ ಕೇರಳ ಗಡಿಭಾಗವಾದ ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಾಜ್ಯದಿಂದ ಹೊರಹೋಗುವವರು ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದರೆ, ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವವರು ಜ್ವರಪೀಡಿತರಾಗಿರದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ.

ಶಬರಿಮಲೆ ಯಾತ್ರಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು, ಜನವರಿ ಮೊದಲ ವಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರಾಜ್ಯದಿಂದ ಕೇರಳದ ಶಬರಿಮಲೆಗೆ ಹೋಗುವವರು ಇರುವ ಕಾರಣ, ಅವರ ಆರೋಗ್ಯ ರಕ್ಷಣೆಗೂ ವಿಶೇಷ ಕಾಳಜಿ ವಹಿಸಲು ಸೂಚಿಸಲಾಗಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆ ಸಂಪಾಜೆ ಗಡಿಯಲ್ಲಿ ತಪಾಸಣೆ ಆರಂಭ ಮಾಡಿದೆ. ಅಂತಾರಾಜ್ಯ, ಅಂತರ್ಜಿಲ್ಲೆ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆರಂಭಿಸಿದೆ. ಮಾಣಿ ಮೈಸೂರು ಹೆದ್ದಾರಿಯಲ್ಲಿ ಸುಳ್ಯ ಮಡಿಕೇರಿ ಮಧ್ಯೆ ಇರುವ ಸಂಪಾಜೆಯ ಚೆಕ್ ಪೋಸ್ಟ್ ನಲ್ಲಿ ಈಗಾಗಲೇ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಆರಂಭಿಸಲಾಗಿದೆ.

ನೆರೆಯ ಕೇರಳ ರಾಜ್ಯದಲ್ಲಿ ಸೋಂಕು ದಿನೇ ದಿನೇ ಜಾಸ್ತಿ ಆಗುತ್ತಿದೆ. ಈ ರಸ್ತೆಯಲ್ಲಿ ಅತಿ ಹೆಚ್ಚು ಕೇರಳ ಸಂಪರ್ಕ ಹೊಂದಿರುವ ಮತ್ತು ಕೇರಳ ಮೂಲದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಗುವ ಕಾರಣ, ಕೇರಳ ರಾಜ್ಯದ ವಾಹನಗಳನ್ನು ನಿಲ್ಲಿಸಿ, ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಮಾಡಲಗುತ್ತಿದೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಸಂಭ್ಯಾವ್ಯ ಸಮಸ್ಯೆ ನಿಭಾಯಿಸಲು ಸಜ್ಜಾಗುತ್ತಿವೆ.

ಇನ್ನು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್‍ಪೋಸ್ಟ್‌ ನಲ್ಲಿ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ ಎಂದು ಸಾರ್ವಜನಿಕರೂ ದೂರುತ್ತಿದ್ದಾರೆ. ಕೊಡಗು ಜಿಲ್ಲೆಯ ಮೂರು ಚೆಕ್‍ಪೋಸ್ಟ್‌ ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೇರಳದಿಂದ ಬರುವವರ ತಪಾಸಣೆ ನಡೆಸುತ್ತಿದ್ದಾರೆ.

ಕೇರಳದಿಂದ ಬರುವ ಸರ್ಕಾರಿ ಬಸ್ಸು ಹಾಗೂ ಖಾಸಗಿ ವಾಹನಗಳನ್ನು ತಡೆದು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸೋಂಕಿನ ಲಕ್ಷಣ ಕಂಡು ಬಂದವರಿಗೆ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೇರಳ ಕರ್ನಾಟಕದ ಗಡಿಭಾಗವಾದ ಸಾರಡ್ಕ ಚೆಕ್ ಪೋಸ್ಟ್ ನಲ್ಲೂ ಸದ್ಯಕ್ಕೆ ಯಾವುದೇ ತಪಾಸಣೆಗಳು ನಡೆಯುತ್ತಿಲ್ಲ. ಆದರೆ ಮುಂದೆ ಆರಂಭಗೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಕೆಲವು ದಿನಗಳನ್ನು ಕಾದು ಸರಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದರೂ ಅಚ್ಚರಿ ಇಲ್ಲ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇರಳ ಕರ್ನಾಟಕದ ಬಾರ್ಡರ್ ಎಂದೇ ಹೇಳಲಾಗುವ ತಲಪಾಡಿ ಚೆಕ್ ಪೋಸ್ಟ್ ಸಹಿತ ಜಿಲ್ಲೆಯ ಒಳರಸ್ತೆಗಳಲ್ಲಿ ಕೊರೊನಾ ಸಹಿತ ಸಾಂಕ್ರಾಮಿಕ ರೋಗಗಳು ಅತ್ತಿಂದಿತ್ತ ನುಸುಳದಂತೆ ಮಾಡಿಕೊಳ್ಳಬೇಕಾದ ವ್ಯವಸ್ಥೆಗಳ ಕುರಿತು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಮಹತ್ವದ ಮಾರ್ಗಸೂಚಿ ಹೊರಡಿಸುವ ನಿರೀಕ್ಷೆ ಇದೆ.

IPL_Entry_Point