ಮೊಬೈಲ್ ಬಳಕೆಗೆ ಹೆತ್ತವರ ಆಕ್ಷೇಪಕ್ಕೆ ಬಾಲಕ, ಬಾಲಕಿ ಆತ್ಮಹತ್ಯೆ; ಉಡುಪಿಯ ಹಿರಿಯಡ್ಕ, ದಕ್ಷಿಣ ಕನ್ನಡದ ಕರಾಯದಲ್ಲಿ ಪ್ರತ್ಯೇಕ ಪ್ರಕರಣ-mangaluru news mobile addiction two teen agers ends their life in different incident udupi dakshina kannada dist hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೊಬೈಲ್ ಬಳಕೆಗೆ ಹೆತ್ತವರ ಆಕ್ಷೇಪಕ್ಕೆ ಬಾಲಕ, ಬಾಲಕಿ ಆತ್ಮಹತ್ಯೆ; ಉಡುಪಿಯ ಹಿರಿಯಡ್ಕ, ದಕ್ಷಿಣ ಕನ್ನಡದ ಕರಾಯದಲ್ಲಿ ಪ್ರತ್ಯೇಕ ಪ್ರಕರಣ

ಮೊಬೈಲ್ ಬಳಕೆಗೆ ಹೆತ್ತವರ ಆಕ್ಷೇಪಕ್ಕೆ ಬಾಲಕ, ಬಾಲಕಿ ಆತ್ಮಹತ್ಯೆ; ಉಡುಪಿಯ ಹಿರಿಯಡ್ಕ, ದಕ್ಷಿಣ ಕನ್ನಡದ ಕರಾಯದಲ್ಲಿ ಪ್ರತ್ಯೇಕ ಪ್ರಕರಣ

Mobile Addiction; ಉಡುಪಿಯ ಹಿರಿಯಡ್ಕ, ದಕ್ಷಿಣ ಕನ್ನಡದ ಕರಾಯದಲ್ಲಿ ಮೊಬೈಲ್ ಬಳಕೆಗೆ ಹೆತ್ತವರ ಆಕ್ಷೇಪಕ್ಕೆ ಬಾಲಕ, ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಎರಡು ಪ್ರತ್ಯೇಕ ಮನಕಲಕುವ ಘಟನೆಗಳು ವರದಿಯಾಗಿವೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಉಡುಪಿಯ ಹಿರಿಯಡ್ಕ, ದಕ್ಷಿಣ ಕನ್ನಡದ ಕರಾಯದಲ್ಲಿ ಮೊಬೈಲ್ ಬಳಕೆಗೆ ಹೆತ್ತವರ ಆಕ್ಷೇಪದ ಕಾರಣಕ್ಕೆ ಬಾಲಕ, ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ)
ಉಡುಪಿಯ ಹಿರಿಯಡ್ಕ, ದಕ್ಷಿಣ ಕನ್ನಡದ ಕರಾಯದಲ್ಲಿ ಮೊಬೈಲ್ ಬಳಕೆಗೆ ಹೆತ್ತವರ ಆಕ್ಷೇಪದ ಕಾರಣಕ್ಕೆ ಬಾಲಕ, ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ) (Canva)

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೊಬೈಲ್ ಜಾಸ್ತಿ ಬಳಕೆ ಮಾಡಬೇಡ ಎಂಬ ಹೆತ್ತವರ ಬುದ್ಧಿವಾದಕ್ಕೆ ಸಿಟ್ಟಾಗಿ ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.

ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ವಿದ್ಯಾರ್ಥಿ ಪ್ರಥಮೇಶ್ ಬ್ಯಾಗ್ ಸಹಿತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಕರಾಯದಲ್ಲಿ ನೀಲಮ್ ಎಂಬ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದಾಳೆ. ಎರಡೂ ಪ್ರಕರಣಗಳು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.

ಬುದ್ಧಿಮಾತು ಹೇಳಿ ಮೊಬೈಲ್ ತೆಗೆದಿಟ್ಟಿದ್ದ ಮನೆಯವರೊಂದಿಗೆ ಕೋಪ

ಪರೀಕ್ಷೆಗಳು ಹತ್ತಿರವಾಗುತ್ತಿವೆ, ಮೊಬೈಲ್ ಅನ್ನು ಪದೇ ಪದೇ ನೋಡಿ ಮಾರ್ಕ್ ಕಡಿಮೆ ಪಡೆಯಬೇಡ, ಓದುವುದರ ಕಡೆ ಗಮನ ಕೊಡು ಎಂದು ಹೆತ್ತವರು ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಹಾಗು ಅಂಜಾರು ಪೊಲೀಸ್ ಕ್ವಾರ್ಟರ್ಸ್ ಬಳಿ ನಿವಾಸಿ ಪ್ರಥಮೇಶ್ (17)ಗೆ ಆಗಾಗ್ಗೆ ಹೇಳುತ್ತಿದ್ದರು. ಇದಕ್ಕೆ ಪೂರಕವಾಗಿ ಆತನಿಗೆ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬರುತ್ತಿದ್ದವು. ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಆತನ ಚಾಳಿ ಕಡಿಮೆ ಮಾಡಲು ಮನೆಯವರು ಬುದ್ಧಿ ಮಾತು ಹೇಳಿ ಮೊಬೈಲ್ ತೆಗೆದಿಟ್ಟಿದ್ದರು.

ಆದರೆ ಕಾಲೇಜಿಗೆಂದು ಹೋದ ವಿದ್ಯಾರ್ಥಿ, ಅತ್ತ ಕಾಲೇಜಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದ. ಸೋಮವಾರ ಎಷ್ಟು ಹುಡುಕಿದರೂ ಪ್ರಥಮೇಶ್ ಸಿಕ್ಕಿರಲಿಲ್ಲ. ಮಂಗಳವಾರ ಬೆಳಗ್ಗೆ ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನ ಸಮೀಪ ಜನವಸತಿರಹಿತ ಬಾವಿಯಲ್ಲಿ ಶಾಲಾ ಬ್ಯಾಗ್ ತೇಲುತ್ತಿರುವುದನ್ನು ಯಾರೋ ಕಂಡು ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಗರುಡಪಾತಾಳ ಬಳಸಿ, ವಿದ್ಯಾರ್ಥಿಯ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ವಿಡಿಯೋ ಕಾಲ್ ಚಾಳಿ, ಆಕ್ಷೇಪಿಸಿದ ತಾಯಿಗೆ ಶಾಕ್ ನೀಡಿದ ಮಗಳು

ಪದೇ ಪದೇ ಮೊಬೈಲ್‌ನಲ್ಲಿ ವಿಡಿಯೋ ಕರೆ ಮಾಡಿ ಮಾತನಾಡುವುದನ್ನು ಆಕ್ಷೇಪಿಸಿದ ತಾಯಿಯ ಮೇಲೆ ಮುನಿಸಿಕೊಂಡ ಬಾಲಕಿ, ತಾಯಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಆಘಾತಕ್ಕೊಳಪಡಿಸಿದ್ದಾಳೆ. 14 ವರ್ಷದ ಈ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದಾಳೆ. ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.

ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾರ್ಖಂಡ್ ರಾಜ್ಯದ ಕುಟುಂಬದ ಬಾಲಕಿ ನೀಲಮ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಂಡ್‌ನ ಲಾತೆಹಾರ್ ಜಿಲ್ಲೆಯ ಜಲ್ತಾ ಪರ್ಸಾರಿ ಲೆಡ್‌ನ ನಿವಾಸಿಯಾಗಿರುವ ಸರ್ಜು ಬುಯ್ಯಾನ್ ಎಂಬವರು ತನ್ನ ಪತ್ನಿ, ಮಗಳೊಂದಿಗೆ ವಾರದ ಹಿಂದೆ ಕರಾಯದ ಕೊಂಬೆಟ್ಟಿ ಮಾರು ಎಂಬಲ್ಲಿ ಜಗದೀಶ್ ಸರಳಾಯ ಎಂಬವರ ತೋಟದ ಕೆಲಸಕ್ಕೆ ಆಗಮಿಸಿದ್ದರು.

ಭಾನುವಾರ ರಾತ್ರಿ 7.30ರ ಸುಮಾರಿಗೆ ತೋಟದ ಮಾಲೀಕರು ಒದಗಿಸಿದ ವಾಸ್ತವ್ಯದ ಕೋಣೆಯಲ್ಲಿ ನೀಲಮ್ ಮೊಬೈಲ್‌ನಲ್ಲಿ ಸಂಬಂಧಿಕಳೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದಳು. ಇದಕ್ಕೆ ತಾಯಿ ಆಕ್ಷೇಪಿಸಿ, ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಸಿಟ್ಟಾದ ಬಾಲಕಿ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಪ್ರಜ್ಞಾ ಸಲಹಾ ಕೇಂದ್ರ, ಮಂಗಳೂರು ದೂರವಾಣಿ: +91-824-2432682, ಡಾ. ಎ.ವಿ.ಬಾಳಿಗಾ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ. ದೂರವಾಣಿ: 9242821215/ 9243352909, ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)