Muruga shree case update: ಮುರುಘಾ ಶರಣರ ವಿರುದ್ಧ ಇನ್ನಷ್ಟು ಕೇಸ್; ಅಡುಗೆ ಸಹಾಯಕಿಯಿಂದ ದೂರು
Muruga shree case update: ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೈಲು ಸೇರಿದ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ಇನ್ನೂ ಒಂದು ದೂರು ನಿನ್ನೆ ತಡರಾತ್ರಿ ದಾಖಲಾಗಿದೆ. ಇದರೊಂದಿಗೆ ಕೇಸ್ ಇನ್ನಷ್ಟು ಬಿಗಿಯಾಗ ತೊಡಗಿದೆ.
ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಸಂಕಷ್ಟ ಹೆಚ್ಚಾಗುತ್ತಲೇ ಇದೆ. ಅವರ ವಿರುದ್ಧ ಇನ್ನಷ್ಟು ಲೈಂಗಿಕ ಕಿರುಕುಳ ದೂರುಗಳು ದಾಖಲಾಗುತ್ತಿವೆ.
ಮುರುಘಾ ಮಠದಲ್ಲಿ ಅಡುಗೆ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ನಿನ್ನೆ ತಡರಾತ್ರಿ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಆಕೆ ತನ್ನ ಓರ್ವ ಮಗಳನ್ನು ಠಾಣೆ ಕರೆದೊಯ್ದು ದೂರು ದಾಖಲಿಸಿದ್ದು, ತನ್ನ ಇಬ್ಬರು ಹೆಣ್ಮಕ್ಕಳಲ್ಲದೆ ಇನ್ನೂ ಇಬ್ಬರು ಹೆಣ್ಮಕ್ಕಳ ಮೇಲೆ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನಂತೆ ಶರಣರು ಸೇರಿ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ನಜರಾಬಾದ್ ಪೊಲೀಸರು ತಿಳಿಸಿದ್ದಾರೆ.
ಅಡುಗೆ ಸಹಾಯಕಿ ಕೊಟ್ಟ ದೂರಿನಲ್ಲಿ ಏನಿದೆ?
ಚಿತ್ರದುರ್ಗ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯರಾಗುವವರೆಗೂ ಶಿವಮೂರ್ತಿ ಮುರುಘಾ ಶರಣರು ಸತತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ದೌರ್ಜನ್ಯ ನಡೆಸುವುದಕ್ಕಾಗಿ ಅವರು, ಮಹಿಳಾ ವಾರ್ಡನ್ ಮೂಲಕ ಹೆಣ್ಮಕ್ಕಳನ್ನು ತಮ್ಮ ಖಾಸಗಿ ಕೊಠಡಿಗೆ ಕರೆಯಿಸಿಕೊಳ್ಳುತ್ತಿದ್ದರು. ತನ್ನ ಇಬ್ಬರು ಮಕ್ಕಳನ್ನಷ್ಟೇ ಅಲ್ಲದೆ, ಇನ್ನಿಬ್ಬರ ಮಕ್ಕಳ ಮೇಲೂ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಡುಗೆ ಸಹಾಯಕಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೊಸ ಎಫ್‌ಐಆರ್‌ನಲ್ಲೇನಿದೆ?
ಅಡುಗೆ ಸಹಾಯಕಿ ನೀಡಿದ ದೂರಿನ ಪ್ರಕಾರ, ಶರಣರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ವಾರ್ಡನ್ ರಶ್ಮಿ, ಬಸವಾದಿತ್ಯ, ಮೈಸೂರಿನ ಭಕ್ತರಾದ ಪರಮಶಿವಯ್ಯ ಮತ್ತು ಗಂಗಾಧರಯ್ಯ, ಮುರುಘಾ ಮಠದ ಬಸವಲಿಂಗ ಮತ್ತು ಕರಿಬಸಪ್ಪ ಅವರು ಸಹ ಆರೋಪಿಗಳು. ಇದೇ ರೀತಿ, 14 ವರ್ಷದ ಇಬ್ಬರು, 15 ವರ್ಷ ಹಾಗೂ 12 ವರ್ಷದ ಒಬ್ಬರು ಸೇರಿ ನಾಲ್ವರು ಬಾಲಕಿಯರನ್ನು ಸಂತ್ರಸ್ತರು ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.
ಅಡುಗೆ ಸಹಾಯಕಿ ಏನು ಹೇಳಿದ್ದಾರೆ?
ಬಡತನದ ಕಾರಣ ಮಠದಲ್ಲೇ ಕೆಲಸ ಮಾಡಿಕೊಂಡು ಅಲ್ಲೇ ವಾಸವಿದ್ದೆ. ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಮಕ್ಕಳನ್ನೂ ಮಠದ ಶಾಲೆ, ವಸತಿ ನಿಲಯಕ್ಕೆ ಸೇರಿಸಿದ್ದೆ. ಮಧ್ಯಾಹ್ನ ಊಟಕ್ಕೆ ಹೋದಾಗ, ವಸತಿ ನಿಲಯದ ಕಡೆಗೆ ಹೋದರಷ್ಟೆ ಮಕ್ಕಳು ಸಿಗುತ್ತಿದ್ದರು.
ಆರು ವರ್ಷದ ಇಬ್ಬರು ಮಕ್ಕಳನ್ನು ಕ್ರಮವಾಗಿ 3ನೇ ಮತ್ತು 1ನೇ ತರಗತಿಗೆ ಸೇರಿಸಿದ್ದೆ. ಒಬ್ಬ ಮಗಳನ್ನು 2019ರಲ್ಲಿ ಮತ್ತು ಇನ್ನೊಬ್ಬ ಮಗಳನ್ನು 2020ರ ಕೋವಿಡ್ ಅವಧಿಯಲ್ಲಿ ಶರಣರು ಮೊದಲಿಗೆ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದರು. ಋತುಮತಿಯರಾಗುವವರೆಗೂ ಶರಣರು ದೌರ್ಜನ್ಯ ಎಸಗಿದ್ದರು ಎಂದು ಮಕ್ಕಳು ತಿಳಿಸಿದ್ದಾಗಿ ಅಡುಗೆ ಸಹಾಯಕಿ ಆರೋಪಿಸಿದ್ದಾರೆ. ಅಲ್ಲದೆ, ವಸತಿ ನಿಲಯದಲ್ಲಿದ್ದ 14 ಮತ್ತು 15 ವರ್ಷ ವಯಸ್ಸಿನ ಇನ್ನಿಬ್ಬರು ಬಾಲಕಿಯರು ಶರಣರಿಂದ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಸಹ ಆರೋಪಿಗಳೇನು ಮಾಡ್ತಾ ಇದ್ದರು? ಅವರ ಪಾತ್ರ ಏನು?
ಮುರುಘಾ ಶರಣರ ಬಳಿಗೆ ಹೋಗಲು ನಿರಾಕರಿಸುವ ಮಕ್ಕಳನ್ನು ಸಹ ಆರೋಪಿಗಳು ಬೆದರಿಸುತ್ತಿದ್ದರು. ವಿಶೇಷವಾಗಿ ಪರಮಶಿವಯ್ಯ, ಗಂಗಾಧರಯ್ಯ ಈ ಕೆಲಸ ಮಾಡುತ್ತಿದ್ದರು. ಶರಣರ ಸಹಾಯಕ ಮಹಾಲಿಂಗ ಮತ್ತು ಅಡುಗೆಭಟ್ಟ ಕರಿಬಸಪ್ಪ ಬಾಲಕಿಯರನ್ನು ಶರಣರ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿಬಿಡುವುದು, ಕೊಠಡಿಗೆ ಬೇರೆ ಯಾರೂ ಹೋಗದಂತೆ ಕಾವಲು ಇರುತ್ತಿದ್ದರು. ಇದನ್ನು ನೋಡಿದ್ದೇನೆ ಎಂದು ಅಡುಗೆ ಸಹಾಯಕಿ ಪೊಲೀಸ್ ಠಾಣೆಯಲ್ಲಿ ಹೇಳಿದ್ದಾರೆ.
ತಡವಾಗಿ ದೂರು ಯಾಕೆ?
ರಾಜ್ಯದಲ್ಲಿ ಶರಣರು ಪ್ರಸಿದ್ಧರು. ನನ್ನ ಮಕ್ಕಳು ಹದಿಹರೆಯದವರು. ಮಠದಲ್ಲೇ ಕೆಲಸ, ವಸತಿ. ಆರ್ಥಿಕವಾಗಿ ದುರ್ಬಲಳಾಗಿದ್ದೆ. ಆದರೆ, ಹೆಣ್ಣುಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ದೂರು ದಾಖಲಿಸಿದ್ದರಿಂದ ಧೈರ್ಯ ಬಂತು. ಹಾಗೆ ದೂರು ನೀಡಲು ಮುಂದಾದೆ ಎಂದು ಅಡುಗೆ ಸಹಾಯಕಿ ಹೇಳಿಕೊಂಡಿದ್ದಾರೆ.