ಕನ್ನಡ ಸುದ್ದಿ  /  ಕರ್ನಾಟಕ  /  Mysore News: ನಾಗರಹೊಳೆಯಲ್ಲಿ ಇಬ್ಬರು ವನ್ಯಜೀವಿ ಬೇಟೆಗಾರರ ಬಂಧನ; ಮೂವರು ಪರಾರಿ, ಶಸ್ತ್ರಾಸ್ತ್ರ ವಶ

Mysore News: ನಾಗರಹೊಳೆಯಲ್ಲಿ ಇಬ್ಬರು ವನ್ಯಜೀವಿ ಬೇಟೆಗಾರರ ಬಂಧನ; ಮೂವರು ಪರಾರಿ, ಶಸ್ತ್ರಾಸ್ತ್ರ ವಶ

ಕರ್ನಾಟಕದ ನಾಗರಹೊಳೆ ಪ್ರದೇಶದಲ್ಲಿ ಇಬ್ಬರು ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದ್ದು, ಇತರ ಮೂವರು ಪರಾರಿಯಾಗಿದ್ದಾರೆ. ಅರಣ್ಯ ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ, ಕೆಲ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ.

ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಬೇಟೆಗೆ ಯತ್ನಿಸುತ್ತಿದ್ದ ಇಬ್ಬರು ವನ್ಯಜೀವಿ ಬೇಟೆಗಾರರನ್ನು ಬಂಧಿಸಲಾಗಿದೆ. ಮೂವರು ಪರಾರಿಯಾಗಿದ್ದಾರೆ. (HT)
ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಬೇಟೆಗೆ ಯತ್ನಿಸುತ್ತಿದ್ದ ಇಬ್ಬರು ವನ್ಯಜೀವಿ ಬೇಟೆಗಾರರನ್ನು ಬಂಧಿಸಲಾಗಿದೆ. ಮೂವರು ಪರಾರಿಯಾಗಿದ್ದಾರೆ. (HT)

ಮೈಸೂರು: ಕರ್ನಾಟಕದ ಪ್ರಮುಖ ಅರಣ್ಯ ಪ್ರದೇಶವಾಗಿರುವ ನಾಗರಹೊಳೆಯಲ್ಲಿ (Nagarahole Forest Area) ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವನ್ಯಜೀವಿ ಬೇಟೆಗಾರರನ್ನು ಬಂಧಿಸಿದ್ದಾರೆ. ಮೂವರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹುಣಸೂರು ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಕಚುವಿನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬುಧವಾರ (ಏಪ್ರಿಲ್ 10) ರಾತ್ರಿ ಈ ಘಟನೆ ನಡೆದಿದೆ ಎಂದು ವನ್ಯಜೀವಿ ಅಭಯಾರಣ್ಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ನೆರೆಯ ಕೊಡಗು ಜಿಲ್ಲೆಯ ಐವರು ವನ್ಯಜೀವಿ ಬೇಟೆಗಾರರ ಗುಂಪು ಜಿಂಕೆ ಮತ್ತು ಕಾಡುಹಂದಿಗಳನ್ನು ಬೇಟೆಯಾಡಲು ಪ್ರಯತ್ನಿಸುತ್ತಿತ್ತು. ಆ ವೇಳೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅರಣ್ಯಾಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಮೂರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಬಂಧಿತರನ್ನು ಕೊಡಗು ಜಿಲ್ಲೆಯ ಎಂ.ಕಾವೇರಪ್ಪ (45) ಮತ್ತು ವಿ.ಆರ್.ಆಕರ್ಷ (36) ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕ ನರಗುಂದ, ಬಂಧಿತ ಆರೋಪಿಗಳಿಂದ ಓಮ್ನಿ ಕಾರು, ಎಸ್ಬಿಬಿಎಲ್ ಸಿಂಗಲ್ ಬ್ಯಾರೆಲ್ ಗನ್, ಚಾಕು, ಖಡ್ಗ ಮತ್ತು ಮೊಬೈಲ್ ಸಿಮ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

ಸಿಂಗಲ್ ಬ್ಯಾರೆಲ್ ಗನ್, ಕಾರ್ಟ್ರಿಜ್ ಸಹಿತ ಮೂವರು ಆರೋಪಿಗಳು ಪರಾರಿ

ಕೊಡಗು ಜಿಲ್ಲೆಯ ನಿವಾಸಿಗಳಾದ ಬೋಪಣ್ಣ ರಾಜ್, ಅಭಿರಾಮ್ ಮತ್ತು ರಂಜು ಕುಮಾರ್ ಎಂಬ ಮೂವರು ಶಂಕಿತರು ಸಿಂಗಲ್ ಬ್ಯಾರೆಲ್ ಗನ್ ಮತ್ತು ಕಾರ್ಟ್ರಿಜ್ ಗಳೊಂದಿಗೆ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹರ್ಷಕುಮಾರ್ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯ ತಂಡವು ಬುಧವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ ಹುಣಸೂರು-ಗೋಣಿಕೊಪ್ಪ ಮುಖ್ಯರಸ್ತೆಯ ಜಡೆ ಆಲದ ಗೇಟ್ ಬಳಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಉಪಸ್ಥಿತಿಯನ್ನು ಗ್ರಹಿಸಿದ ಕಳ್ಳ ಬೇಟೆಗಾರರು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅರಣ್ಯ ಅಧಿಕಾರಿಗಳು ಕೂಡಲೇ ಬೆನ್ನಟ್ಟಲು ಶುರು ಮಾಡಿದ್ದಾರೆ. ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

"ಕೊಡಗಿನ ವನ್ಯಜೀವಿ ಬೇಟೆಗಾರರ ಗುಂಪು ಅಭಯಾರಣ್ಯವನ್ನು ಪ್ರವೇಶಿಸಲು ರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿ ಬೇಟೆಗೆ ಕಾಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳಿಂದ ಅರಣ್ಯ ಅಧಿಕಾರಿಗಳಿಗೆ ಸುಳಿವು ಸಿಕ್ಕಿತ್ತು" ಎಂದು ನಿರ್ದೇಶಕ ನರಗುಂದ ಹೇಳಿದ್ದಾರೆ. "ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅಧಿಕಾರಿಗಳನ್ನು ನೋಡಿದ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದರು. ಆರೋಪಿಗಳನ್ನು 25 ಕಿಲೋಮೀಟರ್ ಗಿಂತಲೂ ಹೆಚ್ಚು ದೂರ ಬೆನ್ನಟ್ಟಿ ಹಿಡಿದಿದ್ದಾರೆ. ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇಬ್ಬರನ್ನು ಬಂಧಿಸಿದರೆ, ಕಾರ್ಯಾಚರಣೆಯ ಸಮಯದಲ್ಲಿ ಕತ್ತಲೆಯಾಗಿದ್ದರಿಂದ ಮೂವರು ಆರೋಪಿಗಳು ಓಡಿ ಹೋಗಿದ್ದಾರೆ. ಶೀಘ್ರದಲ್ಲೇ ಅವರನ್ನೂ ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹುಣಸೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಿದ ಬಳಿಕ ನ್ಯಾಯಾಲಯ ಇವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

IPL_Entry_Point