ನಂದಿನಿ ಮೊಸರು ಮಜ್ಜಿಗೆ ಲಸ್ಸಿ ನಾಳೆಯಿಂದ ದುಬಾರಿ, ಬೇಕಾದ್ದಷ್ಟು ಇಂದೇ ಕೊಂಡೊಯ್ಯಿರಿ!
ಮೊಸರು, ಮಜ್ಜಿಗೆ ಮತ್ತು ಸಿಹಿಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವುದರಿಂದ ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ಪಟ್ಟಣಗಳ ದರವನ್ನು ಪರಿಷ್ಕರಿಸಲಾಗಿದೆ ಎಂದು ಹಾಲು ಉತ್ಪಾದಕರ ಮಹಾಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು ನಂದಿನಿ ಮೊಸರು, ನಂದಿನಿ ಮಜ್ಜಿಗೆ ಮತ್ತು ನಂದಿನಿ ಲಸ್ಸಿ ದರಗಳನ್ನು ನಾಳೆಯಿಂದ ಹೆಚ್ಚಿಸಲು ನಿರ್ಧರಿಸಿದೆ. ಕೇಂದ್ರ ಸರಕಾರದ ವಿತ್ತ ಸಚಿವಾಲಯವು ಮೊಸರು, ಮಜ್ಜಿಗೆ ಮತ್ತು ಸಿಹಿಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವುದರಿಂದ ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ಪಟ್ಟಣಗಳ ದರವನ್ನು ಪರಿಷ್ಕರಿಸಲಾಗಿದೆ ಎಂದು ಹಾಲು ಉತ್ಪಾದಕರ ಮಹಾಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ನಂದಿನಿ ಮೊಸರು ನಾಳೆಯಿಂದ ಎಷ್ಟು ದುಬಾರಿ?
ಮೊಸರು ಸ್ಯಾಚೆ 200 ಗ್ರಾಂ ದರವು ಈ ಹಿಂದೆ 10 ರೂ ಇತ್ತು. ಇನ್ನು ಮುಂದೆ ಇದರ ದರ 12 ರೂ. ಆಗಲಿದೆ. ಮೊಸರು ಸ್ಯಾಚೆ 500 ಗ್ರಾಂ ದರವು 22 ರೂ.ನಿಂದ 24 ರೂ.ಗೆ ಏರಿಕೆಯಾಗಲಿದೆ. ಇದೇ ರೀತಿ 1000 ಗ್ರಾಂ ಮೊಸರಿನ ಸ್ಯಾಚೆ ದರವನ್ನು 43 ರೂ.ನಿಂದ 46 ದರಕ್ಕೆ ಏರಿಸಲಾಗಿದೆ.
ನಂದಿನಿ ಮಜ್ಜಿಗೆ ಎಷ್ಟು ದುಬಾರಿ?
ನಂದಿನಿ ಮಜ್ಜಿಗೆ ಸ್ಯಾಚೆ ೨೦೦ ಮಿ.ಲೀ. ದರವು ಈಗಿನ 7 ರೂ.ನಿಂದ 8 ರೂ.ಗೆ, ಟೆಟ್ರಾ ಪ್ಯಾಕ್ ದರವು ೨೦೦ ಮಿ.ಲೀ.ಗೆ 10 ರೂ.ನಿಂದ 11 ರೂ.ಗೆ ಮತ್ತು ಪೆಟ್ ಬಾಟಲ್ ದರವು 12 ರೂ.ನಿಂದ 13 ರೂ.ಗೆ ಏರಿಕೆಯಾಗಿದೆ.
ನಂದಿನಿ ಲಸ್ಸಿ ಎಷ್ಟು ದುಬಾರಿ
ನಂದಿನಿ ೨೦೦ ಮಿ.ಲೀ. ಸ್ಯಾಚೆ ದರವು 10 ರೂ.ನಿಂದ 11 ರೂ.ಗೆ, ಟೆಟ್ರಾ ಪ್ಯಾಕ್ ಸಾದ 20 ರೂ.ನಿಂದ 21 ರೂ.ಗೆ, ಟೆಟ್ರಾ ಪ್ಯಾಕ್ ಮ್ಯಾಂಗೊ ದರವು 25 ರೂ.ನಿಂದ 27 ರೂ.ಗೆ ಏರಿಕೆ ಕಾಣಲಿದೆ. ಪೆಟ್ ಬಾಟಲ್ ಸಾದ ದರವು ೧೫ ರೂ.ನಿಂದ ೧೬ ರೂ.ಗೆ ಮತ್ತು ಪೆಟ್ ಬಾಟಲ್ ಮ್ಯಾಂಗೋ ದರವು ೨೦ ರೂ.ನಿಂದ ೨೧ ರೂ.ಗೆ ಏರಿಕೆ ಕಾಣಲಿದೆ.
ಪ್ಯಾಕೆಟ್‌ನಲ್ಲಿ ಹಳೆ ದರ, ಗ್ರಾಹಕರು ನೀಡಬೇಕು ಹೊಸ ದರ
ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೆ ದರವೇ ಮುಂದುವರೆಯಲಿದೆ. ಮುದ್ರಿತ ಪ್ಯಾಕ್‌ಗಳು ಮುಗಿಯುವವರೆಗೆ ಇದೇ ದರವೇ ಕಾಣಿಸಲಿದೆ. ಹೊಸ ಪ್ಯಾಕೇಟ್‌ಗಳಲ್ಲಿ ಹೊಸ ದರ ಇರಲಿದೆ. ಹೀಗಾಗಿ, ಹಾಲಿನ ಬೂತ್‌ನಲ್ಲಿ ಹೆಚ್ಚು ದರ ಕೇಳಿದರೆ ಹೆಚ್ಚು ಹಣ ನೀಡುವುದು ಅನಿವಾರ್ಯ.
ಈ ಹಿಂದೆ ಕೇಂದ್ರ ಸರಕಾರವು ಹಾಲಿನ ಉತ್ಪನ್ನಗಳು ಮತ್ತು ಆಹಾರ ಧಾನ್ಯಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಿತ್ತು. ಇತ್ತೀಚೆಗೆ ಇವುಗಳ ಮೇಲೆ ವಿಧಿಸಲಾದ ಜಿಎಸ್‌ಟಿ ವಿನಾಯಿತಿಯನ್ನು ಹಿಂಪಡೆದಿದೆ. ಇದರಿಂದ ನಂದಿನಿಯ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬಂದಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ನಾಳೆಯಿಂದ ನಂದಿನಿಯ ಮೊಸರು, ಲಸ್ಸಿ, ಮಜ್ಜಿಗೆ ಕುಡಿಯಬೇಕಿದ್ದರೆ ಹೆಚ್ಚುವರಿ ಮೊತ್ತ ಪಾವತಿಸುವುದು ಅನಿವಾರ್ಯವಾಗಿದೆ. ಲಭ್ಯವಿದ್ದರೆ ನಾಳೆಗೆ ಸಾಕಾಗುವಷ್ಟು ಮೊಸರು ಅಥವಾ ಮಜ್ಜಿಗೆ ಇಂದೇ ಕೊಂಡೊಯ್ಯಿರಿ.
ವಿಭಾಗ