Tirupati Laddu:ತಿರುಪತಿ ಲಡ್ಡು ನಂದಿನಿ ತುಪ್ಪ: ಟೆಂಡರ್‌ ಕೈ ತಪ್ಪಿದ್ದಕ್ಕೆ ನಷ್ಟವಿಲ್ಲ, ಕೆಎಂಎಫ್ ಬೆಂಬಲಕ್ಕೆ ನಿಂತ ಕಾಂಗ್ರೆಸ್‌
ಕನ್ನಡ ಸುದ್ದಿ  /  ಕರ್ನಾಟಕ  /  Tirupati Laddu:ತಿರುಪತಿ ಲಡ್ಡು ನಂದಿನಿ ತುಪ್ಪ: ಟೆಂಡರ್‌ ಕೈ ತಪ್ಪಿದ್ದಕ್ಕೆ ನಷ್ಟವಿಲ್ಲ, ಕೆಎಂಎಫ್ ಬೆಂಬಲಕ್ಕೆ ನಿಂತ ಕಾಂಗ್ರೆಸ್‌

Tirupati Laddu:ತಿರುಪತಿ ಲಡ್ಡು ನಂದಿನಿ ತುಪ್ಪ: ಟೆಂಡರ್‌ ಕೈ ತಪ್ಪಿದ್ದಕ್ಕೆ ನಷ್ಟವಿಲ್ಲ, ಕೆಎಂಎಫ್ ಬೆಂಬಲಕ್ಕೆ ನಿಂತ ಕಾಂಗ್ರೆಸ್‌

KMF Nandini Ghee ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ( TTD) ದರ ಹೆಚ್ಚಳ ಕಾರಣಕ್ಕೆ ಲಡ್ಡುಗೆ( Tirupati Laddu) ಬಳಸುವ ನಂದಿನಿ ತುಪ್ಪ ಖರೀದಿ ಟೆಂಡರ್‌ ರದ್ದುಪಡಿಸಿದೆ. ಈ ವಿಚಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ( KPCC) ಕರ್ನಾಟಕ ಹಾಲು ಮಹಾಮಂಡಳ ಒಕ್ಕೂಟ( KMF) ಪರವಾಗಿ ನಿಂತಿದೆ. ಕೆಪಿಸಿಸಿ ಮಾಡಿದ ಟ್ವೀಟ್‌ನಲ್ಲಿ ಏನಿದೆ. ಇಲ್ಲಿದೆ ವಿವರ

ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಲಡ್ಡುಗೆ  ನಂದಿನಿ ತುಪ್ಪ ಖರೀದಿ ಟೆಂಡರ್‌ ರದ್ದು ಮಾಡಿದ್ದರೆ, ಕೆಪಿಸಿಸಿಯು ಕೆಎಂಎಫ್‌ ಬೆಂಬಲಕ್ಕೆ ನಿಂತಿದೆ.
ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಲಡ್ಡುಗೆ ನಂದಿನಿ ತುಪ್ಪ ಖರೀದಿ ಟೆಂಡರ್‌ ರದ್ದು ಮಾಡಿದ್ದರೆ, ಕೆಪಿಸಿಸಿಯು ಕೆಎಂಎಫ್‌ ಬೆಂಬಲಕ್ಕೆ ನಿಂತಿದೆ.

ಬೆಂಗಳೂರು: ತಿರುಪತಿಯಲ್ಲಿ ತಯಾರಿಸುವ ಲಡ್ಡುಗೆ ನಂದಿನಿ ತುಪ್ಪ ಸರಬರಾಜು ಮಾಡುವ ವಿಚಾರದಲ್ಲಿ ಕರ್ನಾಟಕ ಹಾಲು ಮಹಾಮಂಡಳಕ್ಕೆ ಟೆಂಡರ್‌ ಕೈ ತಪ್ಪಿದ್ದಕ್ಕೆ ನಷ್ಟವಿಲ್ಲ ಎಂದು ಕರ್ನಾಟ ಪ್ರದೇಶ ಕಾಂಗ್ರೆಸ್‌ ಸಮಿತಿ ಹೇಳಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕೆಪಿಸಿಸಿ, ನಮ್ಮ ಹೆಮ್ಮೆಯ “ನಂದಿನಿ“ಗೆ ಮಾರುಕಟ್ಟೆಯಲ್ಲಿತನ್ನದೇ ಆದ ಸ್ಥಾನವಿದೆ, ಉತ್ತಮ ಹೆಸರಿದೆ. ಗುಣಮಟ್ಟದಲ್ಲೂ ರಾಜಿಯಾಗುವುದಿಲ್ಲ, ಬೆಲೆಯಲ್ಲೂ ರಾಜಿಯಾಗುವುದಿಲ್ಲ. ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕಾಗಿ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟಕ್ಕೆ ಗುರಿಯಾಗುವ ಅಗತ್ಯವಿಲ್ಲ.ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಯಾವ ಟೆಂಡರ್ ಕೈತಪ್ಪಿದರೂ ನಷ್ಟವಾಗುವುದಿಲ್ಲ ಎಂದು ಹೇಳಿದೆ.

ಭೀಮಾ ನಾಯಕ್‌ ಹೇಳಿದ್ದೇನು

ತಿರುಪತಿ ತಿಮ್ಮನ ದರ್ಶನ ಪಡೆದ ನಂತರ ಪಡೆಯುತ್ತಿದ್ದ ಲಡ್ಡುವಿನಲ್ಲಿ ಇನ್ನು ಕರ್ನಾಟಕದ ನಂದಿನಿ ತುಪ್ಪದ ರುಚಿ ಇರುವುದಿಲ್ಲ. ಏಕೆಂದರೆ ತಿರುಪತಿ ತಿರುಮಲ ದೇವಸ್ಥಾನಂ( TTD) ಆಡಳಿತ ಮಂಡಳಿ ಆಗಸ್ಟ್‌ 1ರಿಂದ ನಂದಿನಿ ತುಪ್ಪ ಖರೀದಿ ಟೆಂಡರ್‌ ಅನ್ನು ರದ್ದುಪಡಿಸಿದೆ. ಇನಬೇರೆ ಕಂಪೆನಿಯ ತುಪ್ಪವನ್ನು ತಿರುಪತಿ ಆಡಳಿತ ಮಂಡಳಿ ಲಡ್ಡುಗೆ ಬಳಸಲಿದೆ.

ಈಗಾಗಲೇ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರವನ್ನು ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ಕರ್ನಾಟಕ ಹಾಲು ಮಹಾಮಂಡಳ( Karnataka Milk Federation) ಹೆಚ್ಚಳ ಮಾಡಿದೆ. ದರ ಹೆಚ್ಚಳದ ಕಾರಣದಿಂದಲೇ ನಂದಿನಿ ತುಪ್ಪವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕರ್ನಾಟಕ ನಂದಿನಿಯ ತುಪ್ಪವನ್ನು ತಿರುಪತಿಯಲ್ಲಿ ಲಡ್ಡು ತಯಾರಿಸಲು ಬಹುತೇಕ ಐವತ್ತು ವರ್ಷಗಳಿಂದ ಬಳಸಲಾಗುತ್ತಿದೆ. ಇದರಿಂದ ಹಳೆಯ ಒಡಬಂಡಿಕೆ ರದ್ದಾಗಲಿದೆ. ನಂದಿನಿ ಉತ್ಪನ್ನಗಳ ದರ ಏರಿಕೆ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ. ದರ ಏರಿಕೆ ಕಾರಣ ನೀಡಿ ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಲಿ ನಂದಿನಿ ತುಪ್ಪದ ಖರೀದಿ ಟೆಂಡರ್‌ ಅನ್ನು ರದ್ದುಪಡಿಸಿದೆ ಎಂದು ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಭೀಮಾನಾಯಕ್‌ ಹೇಳಿದ್ದರು.

ನಂದಿನಿಗಿಂತ ಕಡಿಮೆ ದರದಲ್ಲಿ ತುಪ್ಪ ನೀಡುವ ಹಲವು ಸಂಸ್ಥೆಗಳು ಮುಂದೆ ಬಂದಿವೆ. ಅದರಲ್ಲಿ ಹೊಸ ಸಂಸ್ಥೆಯನ್ನು ಹುಡುಕಿಕೊಂಡಿರುವುದರಿಂದ ನಾವು ಸಹಜವಾಗಿ ತುಪ್ಪದ ಸರಬರಾಜು ನಿಲ್ಲಿಸಬೇಕಾಗುತ್ತದೆ. ನಂದಿನಿ ತುಪ್ಪವನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಗುಣಮಟ್ಟವನ್ನು ಬೇರೆ ಕಂಪೆನಿಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಮುಂದೆ ತಿರುಪತಿ ಲಡ್ಡುಗಳು ಈಗಿನಂತೆಯೇ ಇರುತ್ತವೆ ಎಂದು ಹೇಳಲಾಗದು. ಕೆಎಂಎಫ್‌ ಅತ್ಯುತ್ತಮ ದರ್ಜೆಯ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಬೇಡ. ನಮ್ಮ ಬೆಲೆಗಿಂತ ಕಡಿಮೆ ದರಕ್ಕೆ ಬೇರೆ ಸಂಸ್ಥೆ ತುಪ್ಪ ಸರಬರಾಜು ಮಾಡುತ್ತದೆ ಎಂದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಂತೆ ಎನ್ನುವುದು ನನ್ನ ಖಚಿತ ನಿಲುವು ಎಂದು ತಿಳಿಸಿದ್ದರು.

ನಿರಂತರ ಪ್ರಕ್ರಿಯೆ: ಕೆಎಂಎಫ್‌ ವಿವರಣೆ

ಈ ನಡುವೆ ತಿರುಪತಿ ಲಡ್ಡು ತಯಾರಿಕೆಗೆ ನಿರಂತರವಾಗಿ ತುಪ್ಪ ಸರಬರಾಜು ಮಾಡುತ್ತಿರುವ ಕರ್ನಾಟಕ ಹಾಲು ಮಹಾಮಂಡಳ ಮಧ್ಯ ಹಲವು ಬಾರಿ ದರದ ಕಾರಣಕ್ಕೆ ಟೆಂಡರ್‌ ತಪ್ಪಿಸಿಕೊಂಡಿದೆ. ಎರಡು ವರ್ಷದ ಹಿಂದೆಯೂ ಒಮ್ಮೆ ಇದೇ ರೀತಿ ಟೆಂಡರ್‌ ತಪ್ಪಿತ್ತು.

ಆರು ತಿಂಗಳಿಗೊಮ್ಮೆ ತಿರುಪತಿ ಲಡ್ಡುಗೆ ತುಪ್ಪ ಖರೀದಿ ಟೆಂಡರ್‌ ನಡೆಯುತ್ತದೆ. ಹಲವು ಸಂಸ್ಥೆಗಳು ಟೆಂಡರ್‌ ಪ್ರಕ್ರಿಯೆಯನ್ನು ಭಾಗವಹಿಸುತ್ತವೆ. ಕೆಎಂಎಫ್‌ ಕೂಡ ಭಾಗಿಯಾಗಿದೆ. ಕೆಲವೊಮ್ಮೆ ದರದ ವಿಚಾರದಲ್ಲಿ ಟೆಂಡರ್‌ ಪಡೆದವರ ಒಪ್ಪಂದವನ್ನು ತಿರುಪತಿ ಆಡಳಿತ ಮಂಡಳಿ ರದ್ದುಪಡಿಸಿ ಮತ್ತೆ ಕೆಎಂಎಫ್‌ಗೆ ನೀಡಿದ ಉದಾಹರಣೆಗಳೂ ಇವೆ. ಇದೊಂದು ನಿರಂತರ ಹಾಗೂ ಸಜಜ ಪ್ರಕ್ರಿಯೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

ಆರು ತಿಂಗಳಿಗೆ ಎರಡು ಸಾವಿರ ಟನ್‌ ತುಪ್ಪವನ್ನು ತಿರುಪತಿ ಆಡಳಿತ ಮಂಡಳಿ ಲಡ್ಡು ಖರೀದಿಸುತ್ತದೆ. ವರ್ಷಕ್ಕೆ ನಾಲ್ಕರಿಂದ ಐದು ಸಾವಿರ ಟನ್‌ ತುಪ್ಪದ ವಹಿವಾಟು ತಿರುಪತಿಯೊಂದಿಗೆ ನಡೆಯಲಿದೆ. ಇದರ ಮೊತ್ತ ವಾರ್ಷಿಕ 70 ಕೋಟಿ ರೂ.ವರೆಗೂ ಆಗಲಿದೆ.

ಭಾರತದಲ್ಲಿ ತುಪ್ಪ ಉತ್ಪಾದನೆಯಲ್ಲಿ ಅಮುಲ್‌ ಮುಂದೆ ಇದೆ. ವಾರ್ಷಿಕ 60 ಸಾವಿರ ಮೆಟ್ರಿಕ್‌ ಟನ್‌ ತುಪ್ಪವನ್ನು ಅಮುಲ್‌ ಉತ್ಪಾದಿಸಿದರೆ, ನಂದಿನಿ 30 ಸಾವಿರ ಮೆಟ್ರಿಕ್‌ ಟನ್‌ ತುಪ್ಪವನ್ನು ಉತ್ಪಾದಿಸುತ್ತದೆ. ಕರ್ನಾಟಕದ 14 ಹಾಲು ಒಕ್ಕೂಟಗಳಲ್ಲಿ ತುಪ್ಪದ ಉತ್ಪಾದನೆ ಹಾಗೂ ಮಾರಾಟ ನಡೆಯುತ್ತಿದೆ.

Whats_app_banner