ಯಶಸ್ವಿ ಜೈಸ್ವಾಲ್ ಇನ್, ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಔಟ್; 2024ರ ವಿಶ್ವದ ಅತ್ಯುತ್ತಮ ಟೆಸ್ಟ್​ ಪ್ಲೇಯಿಂಗ್ 11
ಕನ್ನಡ ಸುದ್ದಿ  /  ಕ್ರಿಕೆಟ್  /  ಯಶಸ್ವಿ ಜೈಸ್ವಾಲ್ ಇನ್, ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಔಟ್; 2024ರ ವಿಶ್ವದ ಅತ್ಯುತ್ತಮ ಟೆಸ್ಟ್​ ಪ್ಲೇಯಿಂಗ್ 11

ಯಶಸ್ವಿ ಜೈಸ್ವಾಲ್ ಇನ್, ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಔಟ್; 2024ರ ವಿಶ್ವದ ಅತ್ಯುತ್ತಮ ಟೆಸ್ಟ್​ ಪ್ಲೇಯಿಂಗ್ 11

Best Test Playing XI Of 2024: ನಾವು 2024 ಕ್ಯಾಲೆಂಡರ್ ವರ್ಷದಲ್ಲಿ ಅತ್ಯುತ್ತಮ ಟೆಸ್ಟ್​​ ಕ್ರಿಕೆಟ್​​ ಆಡಿದ ಆಟಗಾರರ ಪ್ಲೇಯಿಂಗ್​ 11 ಅನ್ನು ಕಟ್ಟಿದ್ದೇವೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಅವಕಾಶ ಸಿಕ್ಕಿದೆ. ಆದರೆ, ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಅವರಂತಹ ಆಟಗಾರರು ಅವಕಾಶ ವಂಚಿತರಾಗಿದ್ದಾರೆ.

ಯಶಸ್ವಿ ಜೈಸ್ವಾಲ್ ಇನ್, ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಔಟ್; 2024ರ ವಿಶ್ವದ ಅತ್ಯುತ್ತಮ ಟೆಸ್ಟ್​ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್ ಇನ್, ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಔಟ್; 2024ರ ವಿಶ್ವದ ಅತ್ಯುತ್ತಮ ಟೆಸ್ಟ್​ ಪ್ಲೇಯಿಂಗ್ 11

2024ರ ಕ್ಯಾಲೆಂಡರ್ ವರ್ಷವು ಕೊನೆಗೊಳ್ಳುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ವರ್ಷ ಪೂರ್ತಿ ಟೆಸ್ಟ್​ ಕ್ರಿಕೆಟ್​, ಕ್ರೀಡಾ ಪ್ರೇಮಿಗಳನ್ನು ದೊಡ್ಡ ಮಟ್ಟದಲ್ಲಿ ಸೆಳೆಯಿತು. ಹಾಗೆಯೇ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​​​​ಗೆ ಅರ್ಹತೆ ಪಡೆಯಲು ತಂಡಗಳ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿದೆ. ಅದೇ ರೀತಿ ಆಟಗಾರರು ಪಂದ್ಯದಿಂದ ಪಂದ್ಯಕ್ಕೆ ತಮ್ಮ ಆಟವನ್ನು ಸುಧಾರಿಸಿಕೊಂಡು ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅನೇಕ ಯುವ ಆಟಗಾರರು ಬೆಳಕಿಗೆ ಬಂದರು. ಈಗ 2024ರ ಕ್ಯಾಲೆಂಡರ್​ ವರ್ಷದಲ್ಲಿ ಅಸಾಧಾರಣ ಪ್ರದರ್ಶನದ ಮೂಲಕ ಆಕರ್ಷಿಸಿದ ವಿಶ್ವದ ಅತ್ಯುತ್ತಮ ಆಟಗಾರರ ಪ್ಲೇಯಿಂಗ್ XI ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ. ಈ ಪೈಕಿ ನಾಲ್ವರು ಭಾರತೀಯರು ಇರುವುದು ವಿಶೇಷ.

2024ರ ವಿಶ್ವದ ಬೆಸ್ಟ್​ ಟೆಸ್ಟ್​ ಪ್ಲೇಯಿಂಗ್​ 11ಗೆ ಭಾರತದ ಆಟಗಾರನೇ ನಾಯಕನಾಗಿರುವುದು ಸಹ ವಿಶೇಷ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ರಿಷಭ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರೇ ಈ ತಂಡದಲ್ಲಿ ಅವಕಾಶ ಪಡೆದಿಲ್ಲ ಎನ್ನುವುದು ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ​​ ದಿಗ್ಗಜ ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್, ನ್ಯೂಜಿಲೆಂಡ್ ಸೂಪರ್​ಸ್ಟಾರ್​ ಕೇನ್ ವಿಲಿಯಮ್ಸನ್​, ಟೀಮ್ ಸೌಥಿ ಸಹ ಈ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಆಟಗಾರರು ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಸ್ಥಾನ ಪಡೆದಿಲ್ಲ. 2024ರ ವಿಶ್ವದ ಅತ್ಯುತ್ತಮ ಟೆಸ್ಟ್​ ಆಡುವ 11ರ ಬಳಗವನ್ನು ನಾವು ಪ್ರಕಟಿಸಿದ್ದು, ಈ ವರ್ಷ ಒಂದು ಟೆಸ್ಟ್​​ಗೆ​ ನಾಯಕನಾಗಿ ಕಣಕ್ಕಿಳಿದ ಆಟಗಾರನಿಗೆ ಈ ತಂಡದ ಜವಾಬ್ದಾರಿ ವಹಿಸಲಾಗಿದೆ.

ಯಶಸ್ವಿ ಜೈಸ್ವಾಲ್-ಬೆನ್ ಡಕೆಟ್ ಆರಂಭಿಕರು

ಯಶಸ್ವಿ ಜೈಸ್ವಾಲ್ 2024ರ ಸೆನ್​ಸೇಷನಲ್​ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಅವರು 3 ಶತಕ, 7 ಅರ್ಧಶತಕ ಸಹಿತ 1312 ರನ್‌ ಸಿಡಿಸಿದ್ದು, 2024ರಲ್ಲಿ 2ನೇ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರಲ್ಲಿ ಎರಡು ದ್ವಿಶತಕಗಳೂ ಸೇರಿವೆ. ವಾಸ್ತವವಾಗಿ, ಜೈಸ್ವಾಲ್ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ (35) ದಾಖಲೆ ಹೊಂದಿದ್ದಾರೆ. ಇನ್ನು ಇಂಗ್ಲೆಂಡ್‌ನ ಬೆನ್ ಡಕೆಟ್ ಅವರು ಜೈಸ್ವಾಲ್ ಅವರ ಆರಂಭಿಕ ಪಾಲುದಾರರಾಗಿರುತ್ತಾರೆ. ಏಕೆಂದರೆ ಇವರು ಈ ವರ್ಷ 1149 ರನ್​ಗಳೊಂದಿಗೆ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇವರಿಬ್ಬರು ಸ್ಫೋಟಕ ಆರಂಭಿಕ ಜೋಡಿಯನ್ನು ರೂಪಿಸಲಿದ್ದಾರೆ. ಹಾಗಾಗಿ ಈ ವರ್ಷದ ಬೆಸ್ಟ್ ಪ್ಲೇಯಿಂಗ್​​ 11ನಲ್ಲಿ ಬೆಸ್ಟ್​ ಓಪನರ್ಸ್​. ಅಲ್ಲದೆ, ಡಕೆಟ್ ವಿಕೆಟ್ ಕೀಪರ್​ ಸ್ಥಾನವನ್ನೂ ನಿಭಾಯಿಸಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ರೂಟ್, ಹೆಡ್, ಬ್ರೂಕ್, ಕಮಿಂದು

ಮಧ್ಯಮ ಕ್ರಮಾಂಕದಲ್ಲಿ ಘಟಾನುಘಟಿಗಳೇ ಸ್ಥಾನ ಪಡೆದಿದ್ದಾರೆ. ಆದರೆ ಭಾರತೀಯರು ಇಲ್ಲದಿರುವುದು ತೀವ್ರ ನಿರಾಸೆ ಮೂಡಿಸಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್​ ಜೋ ರೂಟ್ 3ನೇ ಸ್ಲಾಟ್​​ನಲ್ಲಿ ಬ್ಯಾಟಿಂಗ್‌ಗೆ ಬರಲಿದ್ದಾರೆ. ಅವರು ಈ ವರ್ಷ ಆರು ಶತಕ, 5 ಅರ್ಧಶತಕ ಸಹಿತ 1556 ರನ್‌ ಗಳಿಸುವ ಮೂಲಕ ಈ ವರ್ಷ (2024) ಟೆಸ್ಟ್​​​ನಲ್ಲಿ ಟಾಪ್ ಸ್ಕೋರರ್​ ಆಗಿದ್ದಾರೆ. ಮತ್ತೊಬ್ಬ ಇಂಗ್ಲೆಂಡ್ ಸ್ಟಾರ್ ಹ್ಯಾರಿ ಬ್ರೂಕ್ 2024ರಲ್ಲಿ ಏಕೈಕ ತ್ರಿಶಕ ಸಿಡಿಸಿದ ಬ್ಯಾಟರ್​. ಒಟ್ಟು 1107 ರನ್​ಗಳೊಂದಿಗೆ ಅಸಾಧಾರಣ ವರ್ಷವನ್ನು ಹೊಂದಿದ್ದಾರೆ. ಇವರು 4ನೇ ಕ್ರಮಾಂಕಕ್ಕೆ ಸೂಕ್ತ. ಶ್ರೀಲಂಕಾದ ಕಮಿಂದು ಮೆಂಡಿಸ್ ಕೂಡ ಅದ್ಭುತ ವರ್ಷವನ್ನು ಹೊಂದಿದ್ದು, 9 ಪಂದ್ಯಗಳಲ್ಲಿ 1049 ರನ್ ಗಳಿಸಿದ್ದಾರೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇನ್ನು ಭಾರತಕ್ಕೆ ಸಿಕ್ಕಾಪಟ್ಟೆ ಕಾಡುತ್ತಿರುವ ಟ್ರಾವಿಸ್ ಹೆಡ್ 6ನೇ ಸ್ಥಾನದಲ್ಲಿ ಆಡಲಿದ್ದು, ಸ್ಫೋಟಕ ಬ್ಯಾಟಿಂಗ್ ನಡೆಸಲಿದ್ದಾರೆ. ಈ ವರ್ಷ ಅವರು 607 ರನ್ ಸಿಡಿಸಿದ್ದಾರೆ. ವರ್ಷದ ಕೊನೆಯಲ್ಲಿ ಮತ್ತೊಂದು ಪಂದ್ಯ ಆಡಲಿರುವ ಅವರು ತಮ್ಮ ಸ್ಕೋರ್​ ಅನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.

ಭಾರತೀಯರೇ ಆಲ್​ರೌಂಡರ್ಸ್

ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ಈ ವರ್ಷದ ಬೆಸ್ಟ್​ ಪ್ಲೇಯಿಂಗ್​ 11 ತಂಡದಲ್ಲಿ ಆಲ್​ರೌಂಡರ್​​ಗಳಾಗಿದ್ದಾರೆ. ಜಡೇಜಾ 44 ವಿಕೆಟ್‌ಗಳ ಜೊತೆಗೆ 1 ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 508 ರನ್ ಗಳಿಸಿದ್ದಾರೆ. ಅಶ್ವಿನ್ 2024 ರಲ್ಲಿ 47 ವಿಕೆಟ್ ಪಡೆದಿರುವ ಜೊತೆಗೆ ಬ್ಯಾಟ್‌ನೊಂದಿಗೆ 310 ರನ್ ಗಳಿಸಿದ್ದಾರೆ. ಅಶ್ವಿನ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಬುಮ್ರಾ, ಆಟ್ಕಿನ್ಸನ್, ಹೆನ್ರಿ ಬೌಲರ್‌ಗಳು

2024 ವರ್ಷದ ಉತ್ತಮ ಪ್ಲೇಯಿಂಗ್ 11ನಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ಮುನ್ನಡೆಸುವುದರ ಜೊತೆಗೆ ಈ ತಂಡದ ನಾಯಕತ್ವವನ್ನೂ ವಹಿಸಲಿದ್ದಾರೆ. 2024ರಲ್ಲಿ 62 ವಿಕೆಟ್‌ ಕಬಳಿಸಿದ್ದು, ಈ ವರ್ಷ ಅತ್ಯಧಿಕ ಟೆಸ್ಟ್‌ ವಿಕೆಟ್​ ಪಡೆದ ಬೌಲರ್ ಎನಿಸಿದ್ದಾರೆ. ಬುಮ್ರಾ ಈ ವರ್ಷ ಒಂದೇ ಒಂದು ಪಂದ್ಯವನ್ನು ಮುನ್ನಡೆಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು ಭವಿಷ್ಯದ ನಾಯಕನೂ ಹೌದು. ಇದೇ ಕಾರಣಕ್ಕೆ 2024ರ ಪ್ಲೇಯಿಂಗ್​ 11ರ ನಾಯಕತ್ವ ವಹಿಸಿದ್ದಾರೆ. ಇವರಂತೆ ವೇಗದ ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್‌ನ ಗಸ್ ಅಟ್ಕಿನ್ಸನ್ ಮತ್ತು ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಕ್ರಮವಾಗಿ 52 ಮತ್ತು 49 ವಿಕೆಟ್‌ ಪಡೆದಿದ್ದು, ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

2024ರ ಅತ್ಯುತ್ತಮ ಟೆಸ್ಟ್ ಪ್ಲೇಯಿಂಗ್ XI

ಯಶಸ್ವಿ ಜೈಸ್ವಾಲ್, ಬೆನ್ ಡಕೆಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಟ್ರಾವಿಸ್ ಹೆಡ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಗಸ್ ಅಟ್ಕಿನ್ಸನ್, ಜಸ್ಪ್ರೀತ್ ಬುಮ್ರಾ (ನಾಯಕ), ಮ್ಯಾಟ್ ಹೆನ್ರಿ.

Whats_app_banner