ರಿವರ್ಸ್ ಸೈಕಾಲಜಿಗೆ ಸೋಲಿಲ್ಲ, ಜನರ ಬಳಿ ಅದನೆಲ್ಲ ಯೋಚಿಸಲು ಟೈಮ್ ಇಲ್ಲ; UI ಸಿನಿಮಾ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ಮನರಂಜನೆ  /  ರಿವರ್ಸ್ ಸೈಕಾಲಜಿಗೆ ಸೋಲಿಲ್ಲ, ಜನರ ಬಳಿ ಅದನೆಲ್ಲ ಯೋಚಿಸಲು ಟೈಮ್ ಇಲ್ಲ; Ui ಸಿನಿಮಾ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ

ರಿವರ್ಸ್ ಸೈಕಾಲಜಿಗೆ ಸೋಲಿಲ್ಲ, ಜನರ ಬಳಿ ಅದನೆಲ್ಲ ಯೋಚಿಸಲು ಟೈಮ್ ಇಲ್ಲ; UI ಸಿನಿಮಾ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ

ಅಂದಿಗೂ, ಇಂದಿಗೂ ನಮ್ಮ ಸಮಾಜ ಮಾತ್ರ ಇಂಚೂ ಬದಲಾಗಿಲ್ಲ. ಅಂದಿಗೂ ಇದೆ ಹಳಸಲು ಫಾರ್ಮುಲಾ ಹಿಟ್ ಆಗಿತ್ತು . ಇವತ್ತಿಗೂ ಅದೇ ಫಾರ್ಮುಲಾ ಹಿಟ್! ದೃಶ್ಯ, ಮೇಕಿಂಗ್ ಬದಲಾಗಿರಬಹುದು ಆದರೆ ಕಥೆಯ ಎಳೆ ಮಾತ್ರ ಸೇಮ್! ಏಕೆಂದರೆ ರಿವರ್ಸ್ ಸೈಕಾಲಜಿಗೆ ಸೋಲಿಲ್ಲ. ಮತ್ತು ಜನರ ಬಳಿ ಅದನೆಲ್ಲಾ ಯೋಚಿಸಲು ಟೈಮ್ ಇಲ್ಲ.

UI ಸಿನಿಮಾ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ
UI ಸಿನಿಮಾ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ

Rangaswamy Mookanahalli Reviews UI Movie: ರಿವರ್ಸ್ ಸೈಕಾಲಜಿ ಯಾವತ್ತಿಗೂ ವರ್ಕ್ ಆಗುತ್ತೆ. ಇಷ್ಟು ವರ್ಷದ ನನ್ನ ಜೀವನದಲ್ಲಿ ನಾನು ಕಂಡು ಕೊಂಡ ಸತ್ಯವಿದು. ಏನಿದು ರಿವರ್ಸ್ ಸೈಕಾಲಜಿ? ಮಕ್ಕಳನ್ನು ಗಮನಿಸಿ ನೋಡಿ ನೀವು ಯಾವುದನ್ನು ಮಾಡಬೇಡ ಎಂದು ಹೇಳುತ್ತೀರಿ ಅವರು ಅದನ್ನು ಖಂಡಿತ ಮಾಡುತ್ತಾರೆ. ದೊಡ್ಡವರ ಕಥೆ ಕೂಡ ಸೇಮ್ ಕಣ್ರೀ. ಏಕೆಂದರೆ ಅವರು ದೈಹಿಕವಾಗಿ ಬೆಳೆದು ದೊಡ್ಡವರು ಎನ್ನಿಸಿಕೊಂಡಿರುತ್ತಾರೆ ಅಷ್ಟೆ. ನೀವು ಯಾವುದನ್ನು ಅತ್ಯಂತ ಸ್ಪಷ್ಟ ಧ್ವನಿಯಲ್ಲಿ ಇದು ಸರಿ ಹೀಗಾಗಿ ಇದನ್ನು ಮಾಡಿ, ಅಥವಾ ಇದು ತಪ್ಪು ಹೀಗಾಗಿ ಇದನ್ನು ಮಾಡಬೇಡಿ ಎಂದು ಹೇಳಿ ನೋಡಿ. ಅದ್ಯಾರೇ ಇರಲಿ ಅವರು ನೀವೇಳಿದಕ್ಕೆ ತದ್ವಿರುದ್ಧ ಮಾಡುತ್ತಾರೆ. ಹೀಗೇಕೆ? ಮನುಷ್ಯನ ಮಿದುಳು ವರ್ಕ್ ಆಗುವುದು ಹೀಗೆ. ಇದಕ್ಕೆ ದೊಡ್ಡ ಬುದ್ದಿವಂತರು ಎನ್ನಿಸಿಕೊಂಡವರು ಕೂಡ ಹೊರತಲ್ಲ. ಹೀಗಾಗಿ ನಿಮಗೇನು ಬೇಕು ಅಥವಾ ನೀವು ಬೇರೆಯವರು ಏನು ಮಾಡಲಿ ಎಂದು ಬಯಸುತ್ತೀರಿ ಅದಕ್ಕೆ ವಿರುದ್ಧವಾದ ವಾದವನ್ನು ತೇಲಿಬಿಡಿ ಸಾಕು! ನಿಮಗೆ ಬೇಕಾದ ಫಲಿತಾಂಶ ಸಿಗುತ್ತದೆ. ಇದಕ್ಕೆ ರಿವರ್ಸ್ ಸೈಕಾಲಜಿ ಎನ್ನಲಾಗುತ್ತದೆ.

ಬುದ್ದಿವಂತರಿಗೆ ಮಾತ್ರ ಎಂದು ಹಾಕಿದಾಗ ಫಿಲಂ ಹಿಟ್ ಆಗುತ್ತದೆ. ಅದೇ ರೀತಿ ನೀವು ಬುದ್ದಿವಂತರಾಗಿದ್ದರೆ ಈ ಫಿಲಂ ನೋಡಬೇಡಿ ಎದ್ದು ಹೋಗಿ ಎನ್ನುವ ದಾಷ್ಟಿಕತೆ ಕೂಡ ಕೆಲಸ ಮಾಡುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಯಶ್ವಸಿ ವ್ಯಕ್ತಿಗಳನ್ನು ನೋಡಿ ಅವರು ಮಹತ್ತರವಾದ ಬದಲಾವಣೆಯೇನು ಮಾಡುವುದಿಲ್ಲ. ಒನ್ ಪರ್ಸೆಂಟ್ ಚೇಂಜ್ ಎನ್ನುವ ಸ್ಟ್ರಾಟರ್ಜಿ ಉಪಯೋಗಿಸುತ್ತಾರೆ. ಸಮಾಜದಲ್ಲಿ ಸದಾ ಚಾಲನೆಯಲ್ಲಿರುವ ಟ್ರೆಂಡ್ ಉಪಯೋಗಿಸಿಕೊಂಡು ಪ್ಯಾಟ್ರನ್ ಬದಲಿಸುತ್ತಾರೆ. ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಿದರೆ ಜನ ಒಪ್ಪುವುದಿಲ್ಲ. ತಿರುಗಿ ಬೀಳುವ ಚಾನ್ಸ್ ಜಾಸ್ತಿಯಿರುತ್ತದೆ. ಹೀಗಾಗಿ ಅವರು ಒಪ್ಪದಿರುವಷ್ಟು ಬದಲಾವಣೆ ಮಾಡಲು ಎಂದಿಗೂ ಹೋಗಬಾರದು.

ಇಂದಿನ ಕಾಲಕ್ಕೆ ಈ ವಿಚಾರ ಶುದ್ಧ ಸುಳ್ಳು

ಸರಳವಾಗಿ ಹೇಳಬೇಕೆಂದರೆ ಮಾಸ್ ಕನೆಕ್ಟ್ ಆಗುವಂತೆ ಇದ್ದರೆ ಅಲ್ಲಿಗೆ ಜಯ. ಜಗತ್ತಿನ ಯಾವ ದೇಶವೇ ಇರಲಿ 10 ರಿಂದ 15 ಪ್ರತಿಶತ ಜನ ಮಾತ್ರ ಯೋಚಿಸುವ , ಮುಂದಿನದನ್ನು ಮನಗಾಣುವ ಶಕ್ತಿ ಹೊಂದಿರುತ್ತಾರೆ. ಉಳಿದ 85 ಪ್ರತಿಶತ ಜನ ಡಮ್ಮಿ. ಈ ಮಾತನ್ನು ನೀವು ಉದ್ದಟತನ ಎಂದು ಕೊಂಡರು ಪರವಾಗಿಲ್ಲ. ಸತ್ಯ ಹೇಳದೆ ಬೇರೆ ದಾರಿಯಿಲ್ಲ. ಉದಾಹರಣೆಗೆ ಇವತ್ತು ಮೊಬೈಲ್ ಬಂದಿದೆ ಹೀಗಾಗಿ ಯುವ ಜನತೆ ಫೋಕಸ್ ಕಳೆದುಕೊಂಡಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಮೊಬೈಲ್ ಇಲ್ಲದ ಕಾಲದಲ್ಲಿ ಅದೇಕೆ ಎಲ್ಲರೂ ಐನ್ಸ್ಟೀನ್ ಆಗಲಿಲ್ಲ? ಅದೇಕೆ ಎಲ್ಲರೂ ರಿಚ್ ಅಂಡ್ ಫೇಮಸ್ ಆಗಲಿಲ್ಲ? ಅದೆಲ್ಲಾ ಬಿಟ್ಟಾಕಿ ಅದೇಕೆ ಅವರು ಒಂದು ಸುಂದರ ಬದುಕನ್ನು ಬಾಳಲು ಸಾಧ್ಯವಾಗಲಿಲ್ಲ? ಅದೇಕೆ ಸದಾ ವ್ಯವಸ್ಥೆಯ ದೂಷಿಸುತ್ತಾ, ತಮ್ಮ ಹಣೆಬರಹವನ್ನು ಹಳಿಯುತ್ತ ಜೀವನ ಸವೆಸಿದರು? ನೀವು ಶತಮಾನಗಳ ಚರಿತ್ರೆ ತೆಗೆದು ನೋಡಿ, ಇಂದು ಅಂತಲ್ಲ ಎಂದಿನಿಂದಲೂ ಜಗತ್ತಿನ 85/90 ಪ್ರತಿಶತ ಜನರಲ್ಲಿ ಫೋಕಸ್ ಇರುವುದಿಲ್ಲ.

ಮೊಬೈಲ್ ಬೇಡ ಕಣ್ರೀ , ಒಂದು ಕಾಲದಲ್ಲಿ ಜನ ಪುಸ್ತಕ ಓದುವ ಹುಚ್ಚಿಗೆ ಬಿದ್ದಿದ್ದರು! ಏನೂ ಇಲ್ಲದಿದ್ದರೆ ತಮ್ಮ ಕೈ ಬೆರಳ ಉಗುರು ನೋಡುತ್ತಾ ಜನ ಟೈಮ್ ಪಾಸ್ ಮಾಡುತ್ತಾರೆ. ನಾನು ಚಿಕ್ಕವನಿದ್ದಾಗ ನನ್ನ ಹೆತ್ತವರಿಗೆ ಬೊಂಬೆ ತಂದು ಕೊಡುವ ಆರ್ಥಿಕ ಶಕ್ತಿಯಿರಲಿಲ್ಲ. ನನಗೆ ಅದರ ಬಗ್ಗೆ ಬೇಸರವಿಲ್ಲ. ನನ್ನ ಎಡಗೈ ಮತ್ತು ಬಲಗೈ ಹೊಡೆದಾಟಕ್ಕೆ ಬಳಸುತ್ತಿದ್ದೆ. ಒಂದನ್ನು ಹೀರೋ ಎಂದು ಇನ್ನೊಂದು ಕೈಯನ್ನು ವಿಲನ್ ಎಂದು ಊಹಿಸಿಕೊಂಡು ನನ್ನದೇ ಎರಡು ಕೈಗಳ ನಡುವೆ ಹೊಡೆದಾಟ ಏರ್ಪಡಿಸಿ ಮಜಾ ತೆಗೆದುಕೊಂಡು ಟೈಮ್ ಪಾಸ್ ಮಾಡುತ್ತಿದ್ದೆ! ಟೈಮ್ ಪಾಸ್ ಮಾಡೋಕೆ ಮೊಬೈಲ್ ಬೇಕಿಲ್ಲ. ಫೋಕಸ್ ಮಾಡೋಕೆ ಮೊಬೈಲ್ ಅಡ್ಡಿಯಲ್ಲ. ಈ ಎರಡರ ನಡುವೆ ಸಮಾಜದ ಸ್ವಾಸ್ಥ್ಯ ಅಡಗಿದೆ.

ಸಿನೆಮಾವನ್ನು ಖುಷಿಗೆ ನೋಡಬೇಕು ಅಷ್ಟೆ

ಮೀನಿಗೆ ಇದು ಗಾಳ ಎನ್ನುವುದು ಅರಿವಾಗುವುದಿಲ್ಲ. ಆಹಾರ ಎನ್ನುವ ಭ್ರಮೆಯಲ್ಲಿರುತ್ತದೆ! ಥೇಟ್ ಹಾಗೆ ನಮ್ಮ ಜನ ಮತ್ತು ಸಮಾಜ ಕಣ್ರೀ. ಜಗತ್ತಿನಲ್ಲಿ ಅತಿ ಹೆಚ್ಚು ಬೆಲೆ ಬಾಳುವುದು ಸಮಯ! ತಮ್ಮ ಸಮಯವನ್ನು ನಯಾಪೈಸೆ ಬದಲಾವಣೆ ತರಲಾಗದ ಚಿತ್ರದ ಸೀನ್ ಡಿಕೋಡ್ ಮಾಡುವುದರಲ್ಲಿ ಕಳೆಯುತ್ತಾರೆ. ಅದೂ ತಮ್ಮ ವೇಳೆ ವ್ಯಯಿಸಿ! ಅಂದಿಗೂ, ಇಂದಿಗೂ ಮತ್ತು ಎಂದೆಂದಿಗೂ ನನ್ನದು ಸರಳ ಮಂತ್ರ. ಸಿನೆಮಾವನ್ನು ಖುಷಿಗೆ ನೋಡಬೇಕು ಅಷ್ಟೆ. ಅದು ಇಷ್ಟವಿದ್ದಲ್ಲಿ ಮಾತ್ರ.

ರಿವರ್ಸ್ ಸೈಕಾಲಜಿಗೆ ಸೋಲಿಲ್ಲ

ಅಂದಿಗೂ, ಇಂದಿಗೂ ನಮ್ಮ ಸಮಾಜ ಮಾತ್ರ ಇಂಚೂ ಬದಲಾಗಿಲ್ಲ. ಅಂದಿಗೂ ಇದೆ ಹಳಸಲು ಫಾರ್ಮುಲಾ ಹಿಟ್ ಆಗಿತ್ತು . ಇವತ್ತಿಗೂ ಅದೇ ಫಾರ್ಮುಲಾ ಹಿಟ್! ದೃಶ್ಯ, ಮೇಕಿಂಗ್ ಬದಲಾಗಿರಬಹುದು ಆದರೆ ಕಥೆಯ ಎಳೆ ಮಾತ್ರ ಸೇಮ್! ಏಕೆಂದರೆ ರಿವರ್ಸ್ ಸೈಕಾಲಜಿಗೆ ಸೋಲಿಲ್ಲ. ಮತ್ತು ಜನರ ಬಳಿ ಅದನೆಲ್ಲಾ ಯೋಚಿಸಲು ಟೈಮ್ ಇಲ್ಲ, ಬಟ್ ಟೈಮ್ ಪಾಸ್ ಮಾಡುವುದು ಕಷ್ಟ ಎನ್ನುವಷ್ಟು ಟೈಮ್ ಇದೆ.

ಇನ್ನು ನೂರು ವರ್ಷದ ನಂತರ ಕೂಡ ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆಗಳಾಗಿ ಅದನ್ನು ಬಳಸಿಕೊಂಡು ಅದ್ಬುತ ಸಿನಿಮಾ ಬರುತ್ತೆ ಅಂದಿಗೂ ಚಿತ್ರದ ಮೂಲ ಎಳೆ ಇದೆ ಆಗಿರುತ್ತದೆ ಅದರಲ್ಲಿ ಸಂದೇಹ ಬೇಡ. ವಿರಮಿಸುವೆ . ಸಮಾಜವಾಗಿ ನಾವು ಉದ್ದಾರವಾಗುವುದು ಎಂದು?

Whats_app_banner